ADVERTISEMENT

ಭಾರತದ ಬಾಹ್ಯಾಕಾಶ ಆರ್ಥಿಕತೆ 2025ರ ವೇಳೆಗೆ  ₹1.04 ಲಕ್ಷ ಕೋಟಿ ನಿರೀಕ್ಷೆ: ವರದಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 16:19 IST
Last Updated 10 ಅಕ್ಟೋಬರ್ 2022, 16:19 IST
.
.   

ನವದೆಹಲಿ (ಪಿಟಿಐ): ಉಪಗ್ರಹ ಉಡಾವಣೆ ಸೇವಾ ವಲಯದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಿಸುವ ಮೂಲಕ ಭಾರತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, 2025ರ ವೇಳೆಗೆ ಭಾರತದ ಬಾಹ್ಯಾಕಾಶ ಆರ್ಥಿಕತೆ ₹ 1.04 ಲಕ್ಷ ಕೋಟಿ (12.8 ಬಿಲಿಯನ್‌ ಡಾಲರ್‌) ತಲುಪುವ ನಿರೀಕ್ಷೆ ಇದೆ ಎಂದು ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಸಣ್ಣ ಉಪಗ್ರಹಗಳ ಬೇಡಿಕೆಯು ದೇಶದಲ್ಲಿ ಉಪಗ್ರಹ ನಿರ್ಮಾಣ ಹೆಚ್ಚಿಸಲು ಉತ್ತೇಜನಕಾರಿಯಾಗಿ ಪರಿಣಮಿಸಿದೆ ಮತ್ತು ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಜಾಗತಿಕ ಬಾಹ್ಯಾಕಾಶ ತಂತ್ರಜ್ಞಾನ ಉತ್ಪಾದನಾ ಕಂಪನಿಗಳನ್ನು ಆಕರ್ಷಿಸುವಂತೆ ಮಾಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಐಎಸ್‌ಪಿಎ) ಮತ್ತು ಅರ್ನ್ಸ್ಟ್ ಮತ್ತು ಯಂಗ್ ಬಿಡುಗಡೆ ಮಾಡಿದ‘ಡೆವಲಪಿಂಗ್‌ ದ ಸ್ಪೇಸ್‌ ಇಕೊಸಿಸ್ಟಮ್‌ ಇನ್‌ ಇಂಡಿಯಾ: ಫೋಕಸಿಂಗ್‌ ಆನ್ ಇನ್‌ಕ್ಲೂಸಿವ್‌ ಗ್ರೋಥ್‌‘ ವರದಿಯಲ್ಲಿ ತಿಳಿಸಲಾಗಿದೆ.

2020ರಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆ ₹79 ಸಾವಿರ ಕೋಟಿಯಷ್ಟಿತ್ತು. ಅದು 2025ರ ವೇಳೆಗೆ ₹ 1.04 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ADVERTISEMENT

2025 ರ ವೇಳೆಗೆ ಉಪಗ್ರಹ ಸೇವೆ ಮತ್ತು ಅಪ್ಲಿಕೇಶನ್‌ ವಿಭಾಗ 4.6 ಬಿಲಿಯನ್‌ ಡಾಲರ್‌ನಷ್ಟು ವಹಿವಾಟು ನಡೆಸಲಿದ್ದು, ಗ್ರೌಂಡ್‌ ಸೆಗ್ಮೆಂಟ್ 4 ಬಿಲಿಯನ್‌ ಡಾಲರ್‌, ಉಪಗ್ರಹ ಉತ್ಪಾದನೆ 3.2 ಬಿಲಿಯನ್‌ ಡಾಲರ್‌ ಹಾಗೂ ಉಡಾವಣಾ ಸೇವೆಗಳು 1 ಬಿಲಿಯನ್ ಡಾಲರ್‌ ವಹಿವಾಟು ನಡೆಸಲಿದೆ ಎಂದು ತಿಳಿಸಲಾಗಿದೆ.

ಕಡಿಮೆ ವೆಚ್ಚದ ಪ್ರಯೋಜನ:ಕಡಿಮೆ ವೆಚ್ಚದ ಉಪಗ್ರಹ ಉಡಾವಣಾ ವಾಹನಗಳ ಲಭ್ಯತೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಜಾಗತಿಕ ಸ್ಟಾರ್ಟ್‌ಅಪ್‌ಗಳು ಭಾರತದೊಂದಿಗೆ ಕೈಜೋಡಿಸುವುದರಿಂದಲೇ ವಹಿವಾಟು ವೃದ್ಧಿಯಾಗುವುದು ಸಾಧ್ಯವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.