ತಂತ್ರಜ್ಞಾನ: Nano LED– ನ್ಯಾನೊ.. ಇದು ಚುಕ್ಕಿಚಿತ್ರಗಳ ಪರದೆ!
ನ್ಯಾನೊ ಚುಕ್ಕಿಗಳಲ್ಲಿ ಚಿತ್ರಗಳನ್ನು ತೋರಿಸುವ ನ್ಯಾನೊ ಎಲ್‌ಇಡಿಗಳು ಬರಲಿವೆ. ವೈರಸ್‌ಗಿಂತಲೂ ಸೂಕ್ಷ್ಮವಾದ ಎಲ್‌ಇಡಿ ಬಲ್ಬುಗಳನ್ನು ಚೀನಾದ ಜೀಜಾಂಗ್ ವಿಶ್ವವಿದ್ಯಾನಿಲಯದ ತಂತ್ರಜ್ಞರು ತಯಾರಿಸಿದ್ದಾರೆ. ನ್ಯಾನೋತಂತ್ರಜ್ಞ ದಾವೇ ಡೀ ಮತ್ತು ಸಂಗಡಿಗರು ವೈರಸ್ಸುಗಳಿಗಿಂತಲೂ ಪುಟ್ಟದಾದ, ಕಣ್ಣಿಗೆ ಕಾಣದಂತಹ ಎಲ್‌ಇಡಿ ಬಲ್ಬುಗಳಿರುವ ಪರದೆಗಳನ್ನು ತಯಾರಿಸಿದ್ದಾರೆ. ಇದು ಇನ್ನಷ್ಟು ಸ್ಪಷ್ಟ ಚಿತ್ರಗಳನ್ನು ಮೂಡಿಸುವ ಎಲ್‌ಇಡಿ ಪರದೆಗಳ ತಯಾರಿಕೆಗೆ ಹಾದಿ ಮಾಡಿಕೊಡಲಿದೆ.
ಎಲ್‌ಇಡಿ ಪರದೆಗಳು ಎಂದರೆ ಬೆಳಕಿನ ಬಲ್ಬುಗಳನ್ನೇ ಚುಕ್ಕಿಗಳಂತೆ ಜೋಡಿಸಿ ಚಿತ್ರಗಳನ್ನು ಬರೆಯುವ ಸಾಧನಗಳು. ಚುಕ್ಕಿಚಿತ್ರಗಳು ಗೊತ್ತಲ್ಲ? ಒಂದರ ಪಕ್ಕ ಇನ್ನೊಂದು ಚುಕ್ಕಿಯನ್ನು ಜೋಡಿಸಿ, ದೂರದಿಂದ ನೋಡಿದರೆ ಚಿತ್ರವಾಗಿ ಕಾಣುತ್ತದೆಯಷ್ಟೆ. ಟೆಲಿವಿಷನ್ ಪರದೆಗಳಂತಹ ಇಲೆಕ್ಟ್ರಾನಿಕ್ ಚಿತ್ರದರ್ಶಕಗಳೂ ಇದೇ ಬಗೆಯಲ್ಲಿ ಚಿತ್ರಗಳನ್ನು ಮೂಡಿಸುತ್ತವೆ. ಡಿಜಿಟಲ್ ಕ್ಯಾಮೆರಾ, ಎಲ್‌ಇಡಿ ಟೆಲಿವಿಷನ್, ಕಂಪ್ಯೂಟರು ಪರದೆಗಳೆಲ್ಲವೂ ಹೊಳೆಯುವ ಚುಕ್ಕೆಗಳನ್ನು ಜೋಡಿಸಿಯೇ ಚಿತ್ರವನ್ನು ರಚಿಸುವ ಸಾಧನಗಳು. .
ಟೀವಿ ಪರದೆಯಲ್ಲಿ ಕೆಂಪು, ಹಸಿರು ಹಾಗೂ ನೀಲಿಬಣ್ಣದ ಮೂರು ಸೂಕ್ಷ್ಮವಾದ ಎಲ್‌ಇಡಿ ಬಲ್ಬುಗಳ ಗುಂಪುಗಳನ್ನು ಸಾಲಾಗಿ ಜೋಡಿಸಿರುತ್ತಾರೆ. ಮೂರೂ ಬಲ್ಬುಗಳೂ ಹೊಳೆದರೆ ಬಿಳಿಬಣ್ಣ, ಒಂದೋ ಎರಡೋ ಹೊಳೆದರೆ ಬೇರೆ ಬೇರೆ ಬಣ್ಣಗಳು ಕಾಣಿಸುತ್ತವೆ. ಬೇಕಿರುವ ಬಲ್ಬನ್ನು ಹೊಳೆಯಿಸಿ, ಬಣ್ಣ, ಬಣ್ಣದ ಚುಕ್ಕಿ ಚಿತ್ರಗಳನ್ನು ಸೃಷ್ಟಿಸುತ್ತಾರೆ. ಟೆಲಿವಿಷನ್ ಜೀವಂತವಾಗುತ್ತದೆ. ಚಿತ್ರ ಹೆಚ್ಚು ಸ್ಪಷ್ಟವಾಗಿ ಇರಬೇಕೆಂದರೆ, ಹೆಚ್ಚೆಚ್ಚು ಚುಕ್ಕಿಗಳನ್ನು ಜೋಡಿಸಬೇಕು. ಈ ಎಲ್‌ಇಡಿ ಚುಕ್ಕೆಗಳನ್ನು ಸಾಮಾನ್ಯವಾಗಿ ‘ಪಿಕ್ಸೆಲುಗಳು’ ಎಂದು ಹೇಳುವುದುಂಟು.
ಪಿಕ್ಸೆಲುಗಳ ಗಾತ್ರ ಕಿರಿದಾದಷ್ಟೂ, ಹೆಚ್ಚೆಚ್ಚು ಸಂಖ್ಯೆಯ ಚುಕ್ಕಿಗಳನ್ನು ಬಳಸಬಹುದು. ಚಿತ್ರವನ್ನು ಇನ್ನಷ್ಟು ಸ್ಪಷ್ಟವಾಗಿ, ಚುಕ್ಕಿಗಳೇ ಕಾಣದಂತೆ ತೋರಿಸಬಹುದು. ಕ್ಯಾಮೆರಾದಲ್ಲಿ ನೀವು ಯಾವುದೇ ಚಿತ್ರವನ್ನು ಜೂಮ್ ಮಾಡಿದರೆ, ಒಂದು ಮಿತಿಯ ನಂತರ ಅದು ಚಚ್ಚೌಕದ ಅಸ್ಪಷ್ಟ ತುಣುಕುಗಳ ಜೋಡಣೆಯಂತೆ ತೋರುತ್ತದೆ. ಪಿಕ್ಸೆಲುಗಳ ಗಾತ್ರ ಎಷ್ಟು ಕಡಿಮೆ ಇರುತ್ತದೆಯೋ, ಅಷ್ಟೂ ಹೆಚ್ಚು ಜೂಮ್ ಮಾಡಬಹುದು. ಆದರೆ ಎಲ್‌ಇಡಿ ಪರದೆಗಳನ್ನು ತಯಾರಿಸುವ ತಂತ್ರಜ್ಞಾನಗಳು ಇದುವರೆವಿಗೂ ಎಲ್‌ಇಡಿ ಚುಕ್ಕೆಗಳ ಗಾತ್ರಕ್ಕೊಂದು ಮಿತಿಯನ್ನು ಒಡ್ಡಿದ್ದುವು. ಅತಿ ಹೆಚ್ಚು ಎಂದರೆ ಸುಮಾರು ನೂರು ಮೈಕ್ರೊಮೀಟರು, ಅಂದರೆ ಮಿಲಿಮೀಟರಿನಲ್ಲಿ ಹತ್ತು ಚುಕ್ಕೆಗಳನ್ನು, ಸೆಂಟಿಮೀಟರಿನಲ್ಲಿ ನೂರು ಚುಕ್ಕೆಗಳನ್ನು ಇಡಬಹುದಿತ್ತು. ಒಂದು ಅಂಗುಲಕ್ಕೆ ಸುಮಾರು ಮುನ್ನೂರು ಚುಕ್ಕೆಗಳನ್ನು ಇಡಬಹುದಿತ್ತು. ಅವು ನಮ್ಮ ಕಣ್ಣಿಗೆ ಬಿಡಿ, ಬಿಡಿಯಾಗಿ ಕಾಣುತ್ತಿರಲಿಲ್ಲ. ಹಾಗಿದ್ದರೂ, ಈ ಪಿಕ್ಸೆಲುಗಳ ಅಂಚಿನಿಂದ ಬೆಳಕು ಸೋರಿ ಹೋಗಿ, ಚಿತ್ರ ಸ್ವಲ್ಪ ಅಸ್ಪಷ್ಟವಾಗುತ್ತಿತ್ತು.
ಇದೀಗ ಹೊಸ ವಸ್ತುಗಳು ಹಾಗೂ ಹೊಸ ತಯಾರಿಕೆಯ ವಿಧಾನವನ್ನು ಬಳಸಿಕೊಂಡು ಸುಮಾರು ತೊಂಬತ್ತು ನ್ಯಾನೊಮೀಟರಿನಿಂದ, ನಾಲ್ಕುನೂರು ನ್ಯಾನೊಮೀಟರು ಗಾತ್ರದ ಎಲ್‌ಇಡಿ ಪಿಕ್ಸೆಲುಗಳನ್ನು ತಯಾರಿಸಬಹುದು ಎಂದು ದಾವೆ ಡೀ ತಂಡ ನಿರೂಪಿಸಿದೆ. ಒಂದು ಮಿಲಿಮೀಟರು ಎಂದರೆ ಹತ್ತು ಸಾವಿರ ನ್ಯಾನೊಮೀಟರುಗಳಾಗುತ್ತವೆ. ಪ್ರತಿ ಅಂಗುಲದಲ್ಲಿ ಹನ್ನೆರಡು ಸಾವಿರದಿಂದ, ಒಂದು ಲಕ್ಷದ ಇಪ್ಪತ್ತೇಳು ಸಾವಿರ ಬಲ್ಬುಗಳನ್ನು ಜೋಡಿಸಬಹುದು.
ದಾವೆ ಡೀ ತಂಡದವರು ಪೆರೋವ್‌ಸ್ಕೈಟುಗಳೆಂಬ ವಸ್ತುಗಳನ್ನು ಇದಕ್ಕಾಗಿ ಬಳಸಿದ್ದಾರೆ. ವಿದ್ಯುತ್ತು ಹರಿದಾಗ ಇವು ಹೊಳೆಯುತ್ತವೆ. ನ್ಯಾನೊ ಗಾತ್ರದಲ್ಲಿ ಈ ಪೆರೋವ್‌ಸ್ಕೈಟು ಚುಕ್ಕೆಗಳನ್ನು ಜೋಡಿಸಿ, ಅವಕ್ಕೆ ವಿದ್ಯುತ್ ಹರಿಸಿದಾಗ ಎಲ್‌ಇಡಿಯಂತೆ ಅವು ಬೆಳಗುತ್ತವೆ. ಅತಿ ಸೂಕ್ಷ್ಮವಾದ ಎಲ್‌ಇಡಿಗಳನ್ನು ತಯಾರಿಸಲು ದಾವೇ ಡೀ ತಂಡ ರಾಸಾಯನಿಕವಾಗಿ ಸರಳವೆನ್ನಿಸುವ ತಂತ್ರಗಳನ್ನು ಬಳಸಿತು.
ಇವರು ರಚಿಸಿದ ನ್ಯಾನೊಎಲ್‌ಇಡಿ ಪರದೆಯಲ್ಲಿ ಹಲವು ಪದರಗಳಿವೆ. ತಳಭಾಗದಲ್ಲಿ ನಿರ್ದಿಷ್ಟವಾದ ವಿದ್ಯುತ್ ಸರ್ಕೀಟು ಇರುತ್ತದೆ. ಅದರ ಮೇಲೊಂದು ತೆಳುವಾದ ಸಿಲಿಕಾನ್ ಆಕ್ಸೈಡ್‌ನ ಪದರ ಇರುತ್ತದೆ. ಸರ್ಕೀಟಿನಲ್ಲಿ ವಿದ್ಯುತ್ ಹರಿದಾಗ, ಸಿಲಿಕಾನ್ ಪದರದಿಂದ ಇಲೆಕ್ಟ್ರಾನುಗಳು ಹೊಮ್ಮುತ್ತವೆ. ಈ ಇಲೆಕ್ಟ್ರಾನುಗಳು ತಾಕಿದಾಗ ಬೆಳಕು ಹೊಮ್ಮಿಸುವ ಎಲ್‌ಇಡಿಗಳನ್ನು ಸಿಲಿಕಾನ್ ಆಕ್ಸೈಡಿನ ಪದರದ ಮೇಲೆ ಹರಡಿರುತ್ತಾರೆ. ಎಲ್‌ಇಡಿಗಳನ್ನು ಹರಡುವುದು ಸುಲಭವಲ್ಲ. ಅತಿ ಸಣ್ಣದಾದಷ್ಟೂ ಅದನ್ನು ಎತ್ತಿ ನಿರ್ದಿಷ್ಟ ಜಾಗದಲ್ಲಿ ಜೋಡಿಸುವುದು ಕಷ್ಟ. ಇದರಿಂದಾಗಿಯೇ ಅತಿ ಸ್ಪಷ್ಟವಾದ, ಅಂದರೆ ಸಣ್ಣ ಪಿಕ್ಸೆಲುಗಳು ಹೆಚ್ಚಿರುವ ಪರದೆಗಳನ್ನು ತಯಾರಿಸುವುದು ದುಬಾರಿ ಕೆಲಸ.
ಈ ಹಂತವನ್ನು ದಾವೇ ದೀ ತಂಡ ಸರಳವಾಗಿಸಿದೆ. ಬೆಳಕು ಬಿದ್ದಾಗ ಗಟ್ಟಿಯಾಗುವ ಫೋಟೋರೆಸಿಸ್ಟ್ ಗುಣವಿರುವ ವಸ್ತುವನ್ನು ಸಿಲಿಕಾನ್ ಪದರದ ಮೇಲೆ ಹಚ್ಚಿದ್ದಾರೆ. ಇದರಲ್ಲಿ ತಮಗೆ ಬೇಕಾದ ಚಿತ್ರದ, ಅಥವಾ ರಂಧ್ರಗಳ ಜೋಡಣೆಯ ಚಿತ್ರವನ್ನು ಮೂಡಿಸಬಹುದು. ಅನಂತರ ಅಲ್ಟ್ರಾವಯಲೆಟ್ ಕಿರಣಗಳನ್ನು ಹರಿಸಿ, ಪದರವನ್ನು ಗಟ್ಟಿಯಾಗಿಬಹುದು. ಹೀಗೆ ರಂಧ್ರಗಳಿರುವ ಪರದೆಯನ್ನು ಸೃಷ್ಟಿಸಿದ್ದಾರೆ. ಇದರ ಮೇಲೆ ‘ಪೆರೋವ್‌ಸ್ಕೈಟ್’ ವಸ್ತುವನ್ನು ಲೇಪಿಸಿದ್ದಾರೆ. ಅನಂತರ ಅಳಿದುಳಿದ ಫೋಟೋರೆಸಿಸ್ಟು ಪದರವನ್ನು ತೊಳೆದು ತೆಗೆದಿದ್ದಾರೆ.
ಈ ತಂತ್ರದಿಂದ ಅಂಚುಗಳು ಸ್ಪಷ್ಟವಾಗಿರುವಂತಹ ಅತಿ ಸೂಕ್ಷ್ಮವಾದ ಎಲ್‌ಇಡಿಗಳನ್ನು ರೂಪಿಸಿದ್ದಾರೆ, ದಾವೇ ಡೀ. ಸದ್ಯಕ್ಕೆ ಕೇವಲ ಹಸಿರುಬಣ್ಣದ ಎಲ್‌ಇಡಿಯನ್ನು ಮಾತ್ರ ಬಳಸಿ ಕೆಲವೇ ಸೆಂಟಿಮೀಟರು ಅಗಲದ ಪರದೆಯೊಂದನ್ನು ತಯಾರಿಸಿದ್ದಾರೆ. ಸಾಧಾರಣ ಟೆಲಿವಿಷನ್ನಿನಲ್ಲಿ ಬಳಸುವ ಸರ್ಕೀಟನ್ನೇ ಬಳಸಿಕೊಂಡು ಈ ಪರದೆಯಲ್ಲಿ ಇಡೀ ಭೂಗೋಲದ ಚಿತ್ರವನ್ನು ಸ್ಪಷ್ಟವಾಗಿ ಮೂಡಿಸಿ ತೋರಿಸಿದ್ದಾರೆ. ಇದರಲ್ಲಿರುವ ಒಂದೊಂದು ಎಲ್‌ಇಡಿ ಬಲ್ಬನ್ನು ನೋಡಲೂ ಸೂಕ್ಷ್ಮದರ್ಶಕವೇ ಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.