ADVERTISEMENT

ಜುಲೈ 1 ರಿಂದ ನಗರದಲ್ಲಿ ವಿಜ್ಞಾನೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:07 IST
Last Updated 27 ಜೂನ್ 2019, 16:07 IST
ಎಚ್‌.ನರಸಿಂಹಯ್ಯ
ಎಚ್‌.ನರಸಿಂಹಯ್ಯ   

ಮಾನವ ಸಹಿತ ಗಗನಯಾಮಿ ನೌಕೆಯನ್ನು ನಭಕ್ಕೆ 2022ರಲ್ಲಿ ಕಳಿಸುವ 10 ಸಾವಿರ ಕೋಟಿ ವೆಚ್ಚದ ಬೃಹತ್ ಯೋಜನೆಯನ್ನು ದೇಶ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಇದನ್ನು ಪ್ರಕಟಿಸಿದ್ದಾಗಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸುವ ಹೊಣೆಗಾರಿಕೆಯನ್ನು ಹೆಣ್ಣು ಮಗಳೊಬ್ಬರ ಹೆಗಲಿಗೆ ದೇಶ ಏರಿಸಿದೆ ಎನ್ನುವುದು ಇದರ ವಿಶೇಷ.

ಈ ಹೊಣೆ ಹೊತ್ತು ಆ ನಿಟ್ಟಿನಲ್ಲಿ ಹಗಲಿರುಳೂ ದುಡಿಯುತ್ತಿರುವ ಡಾ. ವಿ.ಆರ್. ಲಲಿತಾಂಬಿಕಾ, ಬಾಹ್ಯಾಕಾಶ ಸಂಶೋಧನೆ ಒಳಗೊಂಡಿರುವ ಸವಾಲುಗಳ ವಿವಿಧ ಮಜಲುಗಳನ್ನು ಬೆಂಗಳೂರಿನ ನಾಗರಿಕರೊಂದಿಗೆ ಜುಲೈ 12ರಂದು ಶನಿವಾರ ಹಂಚಿಕೊಳ್ಳಲಿದ್ದಾರೆ. ಬೆಂಗಳೂರು ವಿಜ್ಞಾನೋತ್ಸವದಲ್ಲಿ ಅವರು ಪಾಲ್ಗೊಂಡು ಈ ಉಪನ್ಯಾಸ ನೀಡಲಿದ್ದಾರೆ.

ಲಭ್ಯವಿರುವ ಮಾಹಿತಿ ಅನುಸಾರ ಬೆಂಗಳೂರು ಕರಗಕ್ಕೆ ಐದು ನೂರು ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಬೆಂಗಳೂರು ಎಂದಾಕ್ಷಣ ಕರಗ ಉತ್ಸವ ಕೂಡಲೇ ನೆನಪಾಗುತ್ತದೆ. ಅಂಥದೇ ಉತ್ಸವ ‘ಬೆಂಗಳೂರು ವಿಜ್ಞಾನೋತ್ಸವ’ ಕೂಡ ಹೌದು.

ADVERTISEMENT

ಪ್ರತಿ ವರ್ಷದ ಜುಲೈ ತಿಂಗಳಿನಲ್ಲಿ ನಡೆಯುವ ವಿಜ್ಞಾನೋತ್ಸವಕ್ಕೆ ಈಗ 42ರ ಪ್ರಾಯ. ಪ್ರಖರ ವಿಚಾರವಾದಿಯೂ ಶಿಕ್ಷಣ ತಜ್ಞರೂ ಆಗಿದ್ದ ಡಾ.ಎಚ್. ನರಸಿಂಹಯ್ಯನವರು ಹುಟ್ಟು ಹಾಕಿದ ಬೆಂಗಳೂರು ವಿಜ್ಞಾನ ವೇದಿಕೆ (ಸೈನ್ಸ್ ಫೋರಂ) ಆಶ್ರಯದಲ್ಲಿ ನಡೆದುಕೊಂಡು ಬಂದಿರುವ ವಿಜ್ಞಾನೋತ್ಸವ ಬೆಂಗಳೂರಿಗರ ಮಟ್ಟಿಗೆ ಅರಿವು, ಜ್ಞಾನ, ವಿಜ್ಞಾನದ ಬೆಳಕಿಂಡಿಯಾಗಿರುವುದು ವಿಶೇಷ. ವರ್ಷದಿಂದ ವರ್ಷಕ್ಕೆ ಏರುತ್ತಿರುವ ಅದರ ಜನಪ್ರಿಯತೆ ಈ ನಾಲ್ಕು ದಶಕಾವಧಿಯಲ್ಲಿ ಒಂದೇ ಒಂದು ಉಪನ್ಯಾಸವೂ ಮುಗ್ಗರಿಸದಂತೆ ನೋಡಿಕೊಂಡಿದೆ.

ಎಚ್‌.ಎನ್‌. ಬೆಳೆಸಿದ ನ್ಯಾಷನಲ್ ಎಜುಕೇಷನ್ ಸೊಸೈಟಿ ಇದೀಗ ತಾನೇ ಶತಮಾನೋತ್ಸವ (1917) ಪೂರೈಸಿದೆ.

ಜುಲೈ 1 ರಂದು ಇಸ್ರೊದ ಮಾಜಿ ಅಧ್ಯಕ್ಷ ಡಾ.ಎ.ಎಸ್. ಕಿರಣ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ‌ಡಾ.ಎ.ಎಚ್. ರಾಮರಾವ್. ಡಾ. ಅಮಿತಾಭ್‌ ಜೋಷಿ (ವೈ ರೆವೆಲ್ಯೂಷನ್ ಈಸ್ ಇಂಪಾರ್ಟೆಂಟ್); ಡಾ.ಪಿ. ಬಲರಾಂ (ಸೈನ್ಸ್ ಅಂಡ್ ಕಲ್ಚರ್); ಪ್ರಧಾನ ಮಂತ್ರಿ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ವಿಜಯರಾಘವನ್ (ಡೆವೆಲಪ್‌ಮೆಂಟ್ ಆಫ್ ಬ್ರೈನ್‌ ಅಂಡ್ ಇಟ್ಸ್ ಫಂಕ್ಷನ್ಸ್); ಡಾ.ಸದಾನಂದ ಮಯ್ಯ (ನ್ಯಾನೊ ಸೈನ್ಸ್ ‌ಟೆಕ್ನಾಲಜಿ); ಡಾ.ವಿವೇಕ್ ಜವಳಿ (ಹಾರ್ಟ್ ‌‌: ದಿ ಫ್ಯಾಸಿನೇಟಿಂಗ್ ಇಂಡಿಯನ್ ಸ್ಟೋರಿ) ಮುಂತಾದವರ ಉಪನ್ಯಾಸ ವಿಜ್ಞಾನೋತ್ಸವದ ವಿಶೇಷತೆಗಳಾಗಿವೆ. ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಈ ಉತ್ಸವದಲ್ಲಿ ಜುಲೈ 23ರಂದು ‘ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ’ ಎಂಬ ವಿಚಾರ ಮಾತನಾಡಲಿದ್ದಾರೆ.

ಇದುವರೆಗಿನ ವಿಜ್ಞಾನೋತ್ಸವದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರೇ ಅಲ್ಲದೆ ದೇಶ ವಿದೇಶಗಳ ವಿಜ್ಞಾನಿಗಳು, ಶಿಕ್ಷಣವೇತ್ರರು, ಅರ್ಥ ತಜ್ಞರು, ಸಮಾಜ ವಿಜ್ಞಾನಿಗಳು 2884 ಉಪನ್ಯಾಸಗಳನ್ನು ನೀಡಿ ವಿಜ್ಞಾನದ ಹೊಳಹುಗಳನ್ನು ಸಭಿಕರೊಂದಿಗೆ ಹಂಚಿಕೊಂಡಿದ್ದಾರೆ. ಈ ಬಾರಿಯೂ 31 ಅಮೂಲ್ಯ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.

ಸ್ಥಳ: ಡಾ.ಎಚ್‌.ಎನ್ ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ. ಸಮಯ ಪ್ರತಿದಿನ ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.