ADVERTISEMENT

ಚಿಕಿತ್ಸೆಗಳಿಗೆ ತಂತ್ರಜ್ಞಾನದ ಬಲ

ಪ್ರಜಾವಾಣಿ ವಿಶೇಷ
Published 9 ಆಗಸ್ಟ್ 2023, 0:17 IST
Last Updated 9 ಆಗಸ್ಟ್ 2023, 0:17 IST
   

–ಡಾ. ಸಿದ್ಧೇಶ್ವರ ಬಿ. ಕಟಕೋಳ

ಈಗ ಸಾಲು ಸಾಲು ತಂತ್ರಜ್ಞಾನಗಳು ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಕಾಣಿಸಿಕೊಳ್ಳುತ್ತಿವೆ. ಬದುಕುವ ಬಗೆಯನ್ನೇ ಬದಲಾಯಿಸುತ್ತಿರುವ ಕೆಲವು‌ ಹೊಸ ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.

ವೈದ್ಯಕೀಯ ಟ್ರೈಕಾರ್ಡರ್

ADVERTISEMENT

‘ಟ್ರೈಕಾರ್ಡರ್’ ಎಂಬ ವೈಜ್ಞಾನಿಕ ಕಲ್ಪನೆ ಈಗ ನಿಜಗೊಳ್ಳುತ್ತಿದೆ. ಅದೀಗ ವೈದ್ಯಕೀಯ ಕ್ಷೇತ್ರಕ್ಕೆ ದಾಪುಗಾಲಿಟ್ಟಿದೆ! ಈ ‘ಟ್ರೈಕಾರ್ಡರ್’ ಪದಬಳಕೆ ಆರಂಭವಾದದ್ದು ಅಮೆರಿಕದ ಜನಪ್ರಿಯ ‘ಸೈನ್ಸ್‌ ಫಿಕ್ಷನ್‌’ ಟಿವಿ ಧಾರಾವಾಹಿ ‘ಸ್ಟಾರ್ ಟ್ರೆಕ್ನ’ಲ್ಲಿ. ಇಲ್ಲಿ ಇದು ಬಹುಕ್ರಿಯಾತ್ಮಕ ಕೈಸಾಧನವಾಗಿ (‘ಹ್ಯಾಂಡ್ ಹೆಲ್ಡ್ ಡಿವೈಸ್’) ಮಾಯಾಕನ್ನಡಿಯಂತೆ ಬಿಂಬಿತಗೊಳ್ಳುತ್ತದೆ. ಇದು ಮುಖ್ಯವಾಗಿ ಮೂರು ಬಗೆಯ ಕೆಲಸ ಮಾಡುತ್ತದೆ. ಪರಿಸರ ಸ್ಕ್ಯಾನಿಂಗ್, ಮಾಹಿತಿ ರೆಕಾರ್ಡಿಂಗ್, ಮತ್ತು ಮಾಹಿತಿ ವಿಶ್ಲೇಷಣಾ ಕಂಪ್ಯೂಟಿಂಗ್. ಹೀಗಾಗಿ ‘ಟ್ರೈಕಾರ್ಡರ್’ ಎಂದು ಹೆಸರು.

ಬಹು ವರ್ಷಗಳ ಕಾಲ ಈ ಪುಟ್ಟ ಕೈಸಾಧನದ ಪರಿಕಲ್ಪನೆ ಕೇವಲ ವೈಜ್ಞಾನಿಕ ಕಲ್ಪನೆಯಾಗಿಯೇ ಉಳಿದು, ಟಿವಿ ಧಾರಾವಾಹಿ ಪರದೆಯ ಮೇಲೆ ಅದ್ಭುತ ರಮ್ಯ ಗ್ಯಾಜೆಟ್ ಬಗೆಯಲ್ಲಿ ಕಾಣುತ್ತಿತ್ತು. ಪಾತ್ರಧಾರಿ ಡಾಕ್ಟರ್ ಮೆಕಾಯ್ ಈ ಟ್ರೈಕಾರ್ಡರ್‌ನ ಕಿರಣಾವಳಿಗಳನ್ನು ರೋಗಿಯ ಮೇಲೆ ಹಾಯಿಸಿದಾಗ, ಒಳ ಮೂಳೆಮುರಿತ, ರಕ್ತಸ್ರಾವ, ರಕ್ತದೊತ್ತಡ, ಹೃದಯಬಡಿತದ ವಿವರಗಳಂತಹ ಬಹುಬಗೆಯ ವೈದ್ಯಕೀಯ ಮಾಹಿತಿಗಳು ತಕ್ಷಣವೇ ಸಾಧನದ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದವು. ಟಿವಿಯಲ್ಲಿ ಕಾಣಿಸಿಕೊಳ್ಳುವ ಕಾಲ್ಪನಿಕವು ನಮ್ಮ ಬಳಿ ಮತ್ತು ನಮ್ಮ ವೈದ್ಯರ ಬಳಿ ಇರಲಿ; ಇಂಥದೊಂದು ಸರ್ವಶಕ್ತವೆನಿಸುವ ಸಾಧನ ಸಾಕಾರಗೊಳ್ಳಲಿ ಎಂಬ ಜನಸಾಮಾನ್ಯರ ಸಹಜ ಬಯಕೆ ಬಹುವರ್ಷಗಳಿಂದ ಕನಸಿನಂತೆ ಸಾಗುತ್ತಿತ್ತು.

ಈಗ ಆರೋಗ್ಯವಿಜ್ಞಾನಗಳಲ್ಲಿ ಆಗಿರುವ ಅದ್ಭುತ ಪ್ರಗತಿಯ ದಿನಗಳಲ್ಲಿ, ಇದು ನಿಜರೂಪವಾಗಿ ವಿಶಿಷ್ಟ ಅವತಾರಗಳನ್ನು ಪಡೆದುಕೊಂಡಿದೆ. ಮುಂಚೂಣಿಯಲ್ಲಿರುವ ಮೂರು ಸಾಧನಗಳನ್ನು ಹೆಸರಿಸಬಹುದು: ‘ವಯೋಟಾಮ್ ಚೆಕ್ಮಿ ಪ್ರೋ’, ‘ಮೆಡ್-ವ್ಯಾಂಡ್’ ಮತ್ತು ‘ಬಯೋಸ್ಟಿಕ್ಕರ್’. ಇವೆಲ್ಲ ಮನೆಯಲ್ಲೂ ಬಳಸಬಹುದಾದ ಸಾಧನೆಗಳಾಗಿದ್ದು, ‘ರಿಮೋಟ್ ಮೆಡಿಸಿನ್’ ಸಾಧ್ಯತೆಗಳೂ ಆಗಿವೆ. ‘ದೂರ ಶಿಕ್ಷಣ’ದಂತೆ ದೂರದಲ್ಲಿರುವ ರೋಗಿಗಳಿಗೆ ಈ ‘ದೂರ ವೈದ್ಯಕೀಯವು ಹೊಸ ಸೇವಾ ಪರಿಕಲ್ಪನೆಯಾಗಿದೆ.

‘ವಯೋಟಾಮ್ ಚೆಕ್ಮಿ ಪ್ರೋ’ ಒಂದು ಅಂಗೈ ಗಾತ್ರದ ಗ್ಯಾಜೆಟ್; ಇದು ರೋಗಿಯ ‘ಇಸಿಜಿ’ (‘ಎಲೆಕ್ಟ್ರೋ ಕಾರ್ಡಿಯೋಗ್ರಾಮ್’), ಹೃದಯಬಡಿತ, ಆಮ್ಲಜನಕ ಶುದ್ಧತ್ವ, ದೈಹಿಕ ತಾಪಮಾನ, ರಕ್ತದೊತ್ತಡ ಮುಂತಾದವುಗಳನ್ನು ಅಳೆಯಬಹುದು. ಇದರಲ್ಲಿ ರೋಗಿಸ್ನೇಹಿ ಬೆಲ್ಟ್ ಕೂಡ ಲಭ್ಯವಿದ್ದು, ಇದನ್ನು ಎದೆ ಸುತ್ತ ಪಟ್ಟಿಯಾಗಿ ಕಟ್ಟಿಕೊಂಡರೆ ಸತತವಾಗಿ ವೈದ್ಯಕೀಯ ಗುಣಲಕ್ಷಣಗಳು ದಾಖಲುಗೊಳ್ಳುತ್ತಿರುತ್ತವೆ. ‘ಮೆಡ್-ವ್ಯಾಂಡ್’ ಸಾಧನ ಬಹುಬಗೆಯ ಜೈವಿಕ ಗುಣಲಕ್ಷಣಗಳನ್ನು ದಾಖಲಿಸಿಕೊಳ್ಳುವುದರೊಂದಿಗೆ, ‘ಟೆಲಿ ಮೆಡಿಸಿನ್‌’ಗಾಗಿ ಕ್ಯಾಮೆರಾ ಸೌಲಭ್ಯವನ್ನೂ ಅಳವಡಿಸಿಕೊಂಡಿದೆ. ತಜ್ಞವೈದ್ಯರು ದೂರದಲ್ಲಿದ್ದರೂ, ನೈಜಸಮಯದ ರೋಗಿಯ ಮಾಹಿತಿಗಳೊಂದಿಗೆ ವೈದ್ಯಕೀಯ ಸಮಾಲೋಚನೆ ಸಾಧ್ಯವಾಗುತ್ತದೆ. ಮಾನ್ಯತೆ ಪಡೆದಿರುವ ‘ಬಯೋಸ್ಟಿಕರ್’ ಎಂಬ ದೇಹಕ್ಕೆ ಅಂಟಿಕೊಳ್ಳುವ ಪುಟ್ಟ ತೆಳುಪರದೆಯು, ಉಸಿರಾಟದ ಗತಿ, ಹೃದಯದ ಬಡಿತ, ಚಟುವಟಿಕೆಯ ಮಟ್ಟ, ನಿದ್ರೆಯ ಸ್ಥಿತಿ, ನಡಿಗೆಯ ರೀತಿಗಳಂತಹ ಹಲವು ಗುಣಲಕ್ಷಣಗಳನ್ನು ಅಳೆಯುತ್ತದೆ.

ಮೆದುಳನ್ನು ಓದುವ ರೋಬೋಟ್‌ಗಳು

ಇದು ಕಪೋಲಕಲ್ಪಿತ ಕಥಾನಕವಲ್ಲ, ಸಾಕಾರಗೊಳ್ಳುತ್ತಿರುವ ವಾಸ್ತವ! ‘ಸ್ವಿಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಲೌಸೇನ್‌’ನ (ಇಪಿಎಫ್ಎಲ್) ಸಂಶೋಧಕರು ತಂತ್ರಜ್ಞಾನದ ಬಳಕೆಯನ್ನು, ಅಂಗಸ್ವಾಧೀನತೆ ತಪ್ಪಿಸಿಕೊಂಡಿರುವ ಟೆಟ್ರಾಪ್ಲೆಜಿಕ್ ರೋಗಿಗಳಲ್ಲಿ ಅನ್ವಯಿಸಿ ಕಾರ್ಯರೂಪಕ್ಕಿಳಿಸುವಲ್ಲಿ ವಿಶಿಷ್ಟ ಪ್ರಗತಿ ಸಾಧಿಸಿದ್ದಾರೆ.

‘ಟೆಟ್ರಾಪ್ಲೆಜಿಯಾ’ (ಅಥವಾ ‘ಕ್ವಾಡ್ರಿಪ್ಲೇಜಿಯಾ’) ಎಂದರೆ, ರೋಗಿಗೆ ಕೈಕಾಲುಗಳಲ್ಲಿ - ಎಂದರೆ ನಾಲ್ಕೂ ಚಲನಭಾಗಗಳಲ್ಲಿ- ಯಾವುದೇ ಸ್ವಾಧೀನತೆ ಇರದೆ ಅಂಗನ್ಯೂನತೆ ಉಂಟಾಗಿರುತ್ತದೆ. ಸಾಮಾನ್ಯವಾಗಿ ಟೆಟ್ರಾಪ್ಲೆಜಿಯಾ ಆಗುವುದು ಮನುಷ್ಯನ ಕುತ್ತಿಗೆ ಭಾಗಕ್ಕೆ ದೊಡ್ಡ ಪೆಟ್ಟು ಬಿದ್ದಾಗ. ಒಳಗಿನ ಮೆದುಳುಬಳ್ಳಿಗೆ ಧಕ್ಕೆಯಾಗಿ ಕೆಳಭಾಗದಲ್ಲಿ ನರಸಂವಹನ ನಿಂತುಹೋಗುತ್ತದೆ. ಇದರಿಂದ ಕುತ್ತಿಗೆಯ ಕೆಳಭಾಗದಲ್ಲಿ ಯಾವುದೇ ಚಲನೆ ಸಾಧ್ಯವಾಗದೆ ಹಾಸಿಗೆ ಹಿಡಿದು ಸಂಪೂರ್ಣ ಅವಲಂಬಿತಗೊಳ್ಳುವ ಸ್ಥಿತಿಯಾಗುತ್ತದೆ. ಇಂತಹ ರೋಗಿಗಳಿಗೆ ಮೆದುಳನ್ನು ಓದಬಲ್ಲ ರೋಬೋಟ್‌ಗಳು ವರದಾನವಾಗಲಿವೆ.

ಮೂರು ಮುಖ್ಯಾಂಶಗಳನ್ನು ಬಳಸಿಕೊಂಡು ತಂತ್ರಜ್ಞಾನದ ಅನ್ವಯಕ್ಕೆ ಪ್ರಯತ್ನಿಸಲಾಗಿದೆ. ಮೊದಲನೆಯದು ಯಂತ್ರಕಲಿಕೆಯ ಗಣನಾವಿಧಾನ (‘ಮಶೀನ್ ಲರ್ನಿಂಗ್ ಅಲ್ಗೊರಿದಮ್’), ಎರಡನೆಯದು ರೋಬೋಟಿಕ್ ತೋಳು ಕಾಲುಗಳಂತಹ ಅಂಗಗಳು, ಮತ್ತು ಮೂರನೆಯದು ಮೆದುಳು-ಕಂಪ್ಯೂಟರ್ ಅಂತರ್ಸಂವಹನ (‘ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್’). ಇವುಗಳ ಸಂಯೋಜನಾವಿಧಾನಗಳಿಂದ ಸಂಪರ್ಕ ಮತ್ತು ಚಲನೆಗಳನ್ನು ಸಾಧಿಸಲು ಟೆಟ್ರಾಪ್ಲೆಜಿಕ್ ರೋಗಿಗಳಿಗೆ ಸಾಧ್ಯವಾಗಲಿದೆ.

ಪ್ರಾಯೋಗಿಕ ಪರೀಕ್ಷೆಗಳಲ್ಲಿ ರೋಬೋಟಿಕ್ ತೋಳು, ಬಂಡೆಯಂತಹ ಒಂದು ಅಡಚಣೆಯ ಸುತ್ತ ಚಲಿಸುವ ಸರಳ ಕಾರ್ಯಗಳನ್ನು ಮಾಡುತ್ತಾ ಹೋಗುತ್ತದೆ; ಜೊತೆಗೆ ದಾಖಲುಗೊಳ್ಳುತ್ತಿರುವ ಮೆದುಳಿನ ಇಇಜಿ ಎಲೆಕ್ಟ್ರಿಕಲ್ ಸಂಕೇತಗಳಿಂದ ಯಾವ ಚಲನೆಗಳನ್ನು ಒಪ್ಪಬಹುದು, ಯಾವುದು ಸುರಕ್ಷಿತವಲ್ಲ ಎಂಬ ಕಲಿಕೆ ಸದಾ ಉತ್ತಮಗೊಳ್ಳುತ್ತಹೋಗುತ್ತದೆ.

ಕಾಲಾಂತರದಲ್ಲಿ ವ್ಯಕ್ತಿಗಳ ವೈಯಕ್ತಿಕ ಆದ್ಯತೆ ಮತ್ತು ಮೆದುಳಿನ ಸಂಕೇತಗಳನ್ನು, ಗ್ರಹಿಸುತ್ತಾ ಈ ಗಣನಾವಿಧಾನವನ್ನು (‘ಅಲ್ಗೊರಿದಮ್’) ಸರಿಹೊಂದಿಸುತ್ತ ಸಾಗಬಹುದಾಗಿದೆ. ಈ ವಿಧಾನದಿಂದ ವ್ಯಕ್ತಿಯ ಮೆದುಳಿನಿಂದ ನಿಯಂತ್ರಿಸಲ್ಪಡುವ ಗಾಲಿಕುರ್ಚಿಗಳನ್ನು (‘ವೀಲ್ ಚೇರ್’) ನಿರ್ಮಿಸುವುದು ಸಾಧ್ಯವಾಗುತ್ತದೆ. ಇವು ಟೆಟ್ರಾಪ್ಲೆಜಿಕ್ ರೋಗಿಗಳಿಗೆ ತುಂಬ ನೆರವಾಗುತ್ತವೆ.

ಡಿಜಿಟಲ್ ಅವಳಿ ಪ್ರತಿರೂಪ!

ಆರೋಗ್ಯದ ಹೆಜ್ಜೆಗುರುತುಗಳನ್ನು ಗ್ರಹಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದದ್ದನ್ನು ಸಾಧ್ಯವಾಗಿಸಲು ‘ಡಿಜಿಟಲ್ ಅವಳಿ 3ಡಿ ಪ್ರತಿರೂಪ’ ತಂತ್ರಜ್ಞಾನ ಅರಳಲಾರಂಭಿಸಿದೆ. ನಮ್ಮ ದೇಹಗಳ ಪ್ರತಿರೂಪ ಮಾದರಿಗಳಿಂದ ಔಷಧ ಬಳಕೆಯ ಪರಿಣಾಮ, ಪೂರ್ವಭಾವಿ ಶಸ್ತ್ರಚಿಕಿತ್ಸೆಗಳಂತಹವುಗಳನ್ನು ಅಭ್ಯಸಿಸುವುದು ಸಾಧ್ಯವಾಗುತ್ತಲಿದೆ.

‘ಡಿಜಿಟಲ್ ಅವಳಿ’ ಎಂಬುದು ‘ಅನುಕರಣಾ ತಂತ್ರಾಂಶ’ದ (‘ಸಿಮುಲೇಶನ್ ಸಾಫ್ಟ್‌ವೇರ್‌’) ಸುಧಾರಿತ ರೂಪವಾಗಿದೆ. ಒಳಹುದುಗಿರುವ ಯಂತ್ರಗಳಿಂದ (‘ಎಂಬೆಡ್ಡೆಡ್ ಮಷೀನ್ಸ್’) ಸಂವೇದಕ ಮಾಹಿತಿಗಳನ್ನು ಸಂಗ್ರಹಿಸಿ ನಿಖರ ನೈಜ ಸಮಯದ ಪ್ರತಿರೂಪ ಮಾದರಿಗಳನ್ನು ಸೃಷ್ಟಿಸಲು ಈ ಅನುಕರಣಾ ತಂತ್ರಾಂಶದಿಂದ ಸಾಧ್ಯವಾಗುತ್ತಿದೆ. ಈ ಪ್ರತಿರೂಪ ಮಾದರಿಗಳಿಂದ ರಚನಾತ್ಮಕ ವಿಶ್ಲೇಷಣೆ ಮತ್ತು ಮೌಲ್ಯಮಾಪನಗಳನ್ನು ಪಡೆಯಬಹುದಾಗಿದೆ. ಇವೆಲ್ಲವುಗಳಿಂದ ಯಂತ್ರಗಳ ಕಾರ್ಯಕ್ಷಮತೆ ಮತ್ತು ನಿರ್ವಹಣೆಗಳ ಕುರಿತು ಉಪಯುಕ್ತ ಒಳನೋಟಗಳು ಸಾಧ್ಯವಾಗುತ್ತವೆ.

ಈ ಪರಿಕಲ್ಪನೆಯನ್ನು ಪರಿಚಯಿಸಿದವರು ಮಿಚಿಗನ್ ವಿಶ್ವವಿದ್ಯಾಲಯದ ಮೈಕೆಲ್ ಗ್ರೀವ್ಸ್. ಇವರು ತಂತ್ರಾಂಶ ಮತ್ತು ತಂತ್ರಜ್ಞಾನದ ಅನ್ವಯವನ್ನು ಉತ್ಪಾದನಾ ಕ್ಷೇತ್ರದಲ್ಲಿ ಬಳಸಿ ತೋರಿಸಿಕೊಟ್ಟರು. 2010ರಲ್ಲಿ ನಾಸಾದ ಜಾನ್ ವಿಕರ್ಸ್, ‘ಡಿಜಿಟಲ್ ಟ್ವಿನ್’ (ಡಿಜಿಟಲ್ ಅವಳಿ) ಎಂಬ ಹೊಸ ಪದಬಳಕೆಯನ್ನು ಆರಂಭಿಸಿದರು. ನಂತರ ಈ ತಂತ್ರಜ್ಞಾನದ ಬಳಕೆ ಸಾರಿಗೆ ಕ್ಷೇತ್ರದಲ್ಲೂ ಆರಂಭವಾಯಿತು. ರಸ್ತೆ, ಸೇತುವೆ, ರೈಲುಗಳಂತಹ ಡಿಜಿಟಲ್ ಅವಳಿ ಪ್ರತಿರೂಪ ಮಾದರಿಗಳನ್ನು ರಚಿಸಿ ಸಂಚಾರ ದಟ್ಟಣೆ, ಹವಾಮಾನ ವೈಪರೀತ್ಯ, ಅವಘಡ, ನಿರ್ವಹಣಾ ಘಟನೆಗಳಂತಹ ಸವಾಲಿನ ಸನ್ನಿವೇಶಗಳಲ್ಲಿ ವ್ಯವಸ್ಥೆಗಳನ್ನು ಪೂರ್ವಭಾವಿಯಾಗಿ ಅಭ್ಯಸಿಸುವುದು ಸಾಧ್ಯವಾಗಲಾರಂಭಿಸಿತು.

ಈ ತಂತ್ರಜ್ಞಾನದ ಪರಿಕಲ್ಪನೆಯಲ್ಲಿ ಮೂರು ಮುಖ್ಯ ಭಾಗಗಳಿವೆ. ಮೊದಲನೆಯದು ಭೌತಿಕ ವಸ್ತು, ಪ್ರಕ್ರಿಯೆ, ಅಥವಾ ಭೌತಿಕ ಪರಿಸರ. ಇದನ್ನು ‘ನಿಜಭೌತಿಕ’ ಅಥವಾ ‘ಭೌತಿಕ ಪ್ರಾತಿನಿಧ್ಯ’ ಎನ್ನೋಣ. ಎರಡನೆಯದು ಈ ನಿಜಭೌತಿಕದ ‘ಡಿಜಿಟಲ್ ಪ್ರಾತಿನಿಧ್ಯ’ ಅಥವಾ ‘ವರ್ಚುವಲ್ ಪ್ರಾತಿನಿಧ್ಯ’. ಇದು ಅವಾಸ್ತವಿಕ ಪರೋಕ್ಷರೂಪ ಅಥವಾ ‘ಗಣಕೀಕೃತ ಪ್ರಾತಿನಿಧ್ಯ’. ಇದನ್ನು ‘ಸೃಷ್ಟಿಸಿದ ಪ್ರಾತಿನಿಧಿಕ ಪ್ರತಿರೂಪ’ ಎಂದೂ ತಿಳಿಯಬಹುದು. ಮೂರನೆಯದು ಭೌತಿಕ ಪ್ರಾತಿನಿಧ್ಯ ಮತ್ತು ವರ್ಚುವಲ್ ಪ್ರಾತಿನಿಧ್ಯಗಳ ನಡುವಿನ ಸಂವಹನದ ಚಾನೆಲ್.

ಈಗ ಈ ತಂತ್ರಜ್ಞಾನ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲೂ ದಾಪುಗಾಲಿಟ್ಟಿದೆ. ಉದಾಹರಣೆಗೆ, ಮಾನವ ಮೆದುಳಿಗೆ ಸಂಬಂಧಪಟ್ಟ ಔಷಧವೊಂದನ್ನು ವಿಶಿಷ್ಟ ಔಷಧವನ್ನು ನೇರವಾಗಿ ರೋಗಿಯ ದೇಹದಲ್ಲಿ ಬಳಸುವ ಮೊದಲು, ಆತನ ‘ಡಿಜಿಟಲ್ ಅವಳಿ’ಯ ಮೇಲೆ ಪ್ರಾಯೋಗಿಕವಾಗಿ ಪೂರ್ವಭಾವಿಯಾಗಿ ಬಳಸಿ ಪರಿಣಾಮಗಳನ್ನು ಪರೀಕ್ಷಿಸಿ ದೃಢೀಕರಿಸಿಕೊಳ್ಳಬಹುದಾಗಿದೆ. ಸೂಕ್ಷ್ಮ ಅಪಾಯಕಾರಿ ಔಷಧಗಳ ನೇರ ಉಪಯೋಗದ ಸಂಭಾವ್ಯ ದುಷ್ಪರಿಣಾಮ ಮತ್ತು ಗಂಡಾಂತರಗಳನ್ನು ಇದರಿಂದ ತಪ್ಪಿಸಬಹುದಾಗಿದೆ. ಇದೇ ತರಹ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನೂ ಪೂರ್ವಭಾವಿಯಾಗಿ ‘ಡಿಜಿಟಲ್ ಅವಳಿ’ಯ ಮೇಲೆ ಪ್ರಾಯೋಗಿಕವಾಗಿ ಪ್ರಯತ್ನಿಸಿ ಪರಿಣಾಮಗಳನ್ನು ಅಭ್ಯಸಿಸಿ ಖಚಿತಪಡಿಸಿಕೊಂಡು, ನಂತರವೇ ಪೂರ್ವಸಿದ್ಧತೆಗಳಿಂದ ದಕ್ಷವಾಗಿ ರೋಗಿಯ ನಿಜದೇಹವನ್ನು ಶಸ್ತ್ರಕ್ರಿಯೆಗೆ ಒಳಪಡಿಸುತ್ತ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದಾಗಿದೆ.

‘ಡಿಜಿಟಲ್ ಅವಳಿ’ ತಂತ್ರಜ್ಞಾನ ಅಳವಡಿಸಿಕೊಂಡಿರುವ ‘ಕ್ಯೂಬಯೋ’ ಎನ್ನುವ ಅಮೆರಿಕದ ಕಂಪನಿಯು ಒಂದು ಗಂಟೆಯಲ್ಲಿ ನೂರಾರು ‘ಬಯೋ ಮಾರ್ಕರ್‌‘ಗಳನ್ನು (‘ಜೈವಿಕ ಗುಣಲಕ್ಷಣ’ಗಳೆನ್ನಹುದು) ಮಾಪನ ಮಾಡುವ ಹೊಸ ಸ್ಕ್ಯಾನರ್ ನಿರ್ಮಿಸಿದೆ. ಈ ಬಯೋ ಮಾರ್ಕರ್‌ಗಳ ಕೆಲವು ಉದಾಹರಣೆಗಳನ್ನು ನೋಡೋಣ. ನಮ್ಮ ದೇಹದ ರಕ್ತದೊತ್ತಡ (ಬಿಪಿ), ದೇಹದ ತೂಕ, ವಿವಿಧ ಹಾರ್ಮೋನ್‌ಗಳ ಪ್ರಮಾಣಗಳು, ಉರಿಯೂತದ ಗುರುತುಗಳು (ಇನ್ಫ್ಲಾಮೇಟರಿ ಮಾರ್ಕರ್ಸ್), ಇನ್ಸುಲಿನ್ ಪ್ರಮಾಣ, ವಿಟಮಿನ್ ಡಿ. ಪ್ರಮಾಣ,

ವಿಭಿನ್ನ ಕ್ಯಾನ್ಸರ್‌ಗಳಲ್ಲಿ ಕಾಣುವ ರಾಸಾಯನಿಕ ಗುಣಲಕ್ಷಣಗಳು, ಔಷಧ ಪ್ರಮಾಣಗಳು, ಡಿ.ಎನ್ಎ., ಆರ್‌.ಎನ್.ಎ. ಮಾಹಿತಿಗಳು, ಹಿಸ್ಟೋಲಾಜಿಕ್ ಚಿತ್ರಣ, ವಿಭಿನ್ನ ವಿಕಿರಣಶಾಸ್ತ್ರದ ಚಿತ್ರಗಳು, ರೇಡಿಯೋಗ್ರಾಫಿಕ್ ಗುಣಲಕ್ಷಣಗಳು – ಇವುಗಳೆಲ್ಲ ನಮ್ಮ ದೇಹ ಆರೋಗ್ಯ ಸ್ಥಿತಿಯಲ್ಲಿ ಇರುವಾಗ ಮತ್ತು ವಿಭಿನ್ನ ಕಾಯಿಲೆಗಳಿಂದಾಗಿ ಅನಾರೋಗ್ಯಗೊಂಡಾಗ ಹೇಗಿರುತ್ತವೆ ಎಂಬ ಮಾಹಿತಿಯನ್ನು ಒದಗಿಸುತ್ತಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.