ADVERTISEMENT

ಅಮೆರಿಕದ ಗಗನನೌಕೆಗೆ ಕಲ್ಪನಾ ಚಾವ್ಲಾ ಹೆಸರು

ಪಿಟಿಐ
Published 10 ಸೆಪ್ಟೆಂಬರ್ 2020, 6:26 IST
Last Updated 10 ಸೆಪ್ಟೆಂಬರ್ 2020, 6:26 IST
ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ   

ವಾಷಿಂಗ್ಟನ್‌:ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಉಡ್ಡಯನ ಮಾಡಲಿರುವ ಅಮೆರಿಕದ ಗಗನನೌಕೆಯೊಂದಕ್ಕೆ ಭಾರತ ಮೂಲದ ಅಮೆರಿಕನ್‌ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ.

‘ಎನ್‌ಜಿ–14 ಸಿಗ್ನಸ್‌’ ಎಂಬ ಗಗನನೌಕೆಗೆ ಚಾವ್ಲಾ ಹೆಸರಿಡಲಾಗಿದೆ. ವರ್ಜಿನಿಯಾದಲ್ಲಿ ನಾಸಾಕ್ಕೆ ಸೇರಿದ ವಾಲಪ್ಸ್‌ ಫ್ಲೈಟ್‌ ಫೆಸಿಲಿಟಿಯಿಂದ ಸೆಪ್ಟೆಂಬರ್‌ 29ರಂದು ಈ ಗಗನನೌಕೆಯನ್ನು ಉಡ್ಡಯನ ಮಾಡಲಾಗುತ್ತದೆ. ಎರಡು ದಿನಗಳ ನಂತರ ಈ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಲಿದೆ.

ಬಾಹ್ಯಾಕಾಶ ಅನ್ವೇಷಣೆ, ಸಂಶೋಧನೆಗೆ ಅಗತ್ಯವಿರುವ ಒಟ್ಟು 3,629 ಕೆ.ಜಿ ತೂಕದ ಸಾಮಗ್ರಿಗಳನ್ನು ಈ ಗಗನನೌಕೆ ಹೊತ್ತೊಯ್ಯಲಿದೆ.

ADVERTISEMENT

ಅಮೆರಿಕದ ಪ್ರತಿಷ್ಠಿತ, ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿ ನಾರ್ಥ್‌ರಾಪ್‌ ಗ್ರುಮ್ಯಾನ್‌, ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಕಲ್ಪನಾ ಚಾವ್ಲಾಗೆ ಈ ಗೌರವ ನೀಡಿದೆ.

ಕಲ್ಪನಾ ಚಾವ್ಲಾ, ನಾಸಾ ಉಡ್ಡಯನ ಮಾಡಿದ್ದ ಕೊಲಂಬಿಯಾ ಗಗನನೌಕೆಯ ತಜ್ಞರ ತಂಡದ ಸದಸ್ಯೆಯಾಗಿದ್ದರು. 2003ರಲ್ಲಿ ಈ ಗಗನನೌಕೆ ಭೂಮಿಗೆ ಮರಳವಾಗ ವಿಫಲಗೊಂಡು ಚಾವ್ಲಾ ಸೇರಿದಂತೆ ಏಳು ಜನರು ಸಾವನ್ನಪ್ಪಿದರು.

1962ರ ಮಾರ್ಚ್‌ 17ರಂದು ಹರಿಯಾಣದ ಕರ್ನಾಲ್‌ನಲ್ಲಿ ಜನಿಸಿದ್ದ ಕಲ್ಪನಾ ಚಾವ್ಲಾ, ಪಂಜಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. 1984ರಲ್ಲಿ ಅಮೆರಿಕಕ್ಕೆ ತೆರಳಿ, ಯೂನಿವರ್ಸಿಟಿ ಆಫ್‌ ಟೆಕ್ಸಾಸ್‌ನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ, 1988ರಲ್ಲಿ ಕೊಲರಾಡೊ ಯೂನಿವರ್ಸಿಟಿಯಿಂದ ಇದೇ ವಿಷಯದಲ್ಲಿ ಪಿಎಚ್‌.ಡಿ ಪಡೆದಿದ್ದರು.

ನಂತರ ಅವರು ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಅಮೇಸ್‌ ರಿಸರ್ಚ್‌ ಸೆಂಟರ್‌ನಲ್ಲಿ ಸಂಶೋಧಕಿಯಾಗಿ ಸೇರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.