ADVERTISEMENT

ಬಳಸದ ಖಾತೆ ಡಿಲೀಟ್ ಮಾಡಿ

ಪೃಥ್ವಿರಾಜ್ ಎಂ ಎಚ್
Published 18 ಡಿಸೆಂಬರ್ 2018, 19:31 IST
Last Updated 18 ಡಿಸೆಂಬರ್ 2018, 19:31 IST
ಫೇಸ್‌ಬುಕ್‌
ಫೇಸ್‌ಬುಕ್‌   

ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟೇ ಚುರುಕಾಗಿದ್ದರೂ ಒಮ್ಮೆಮ್ಮೆ ಕೆಲವು ಖಾತೆಗಳನ್ನು ಡಿಲೀಟ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದ್ದರಿಂದ ಬಳಸುತ್ತಿರುವ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ... ಹೀಗೆ ಯಾವುದೇ ಖಾತೆ ಇದ್ದರೂ ಡಿಲೀಟ್‌ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಬಳಸದೇ ಇರುವ ಖಾತೆಗಳನ್ನು ಡಿಲೀಟ್ ಮಾಡುವುದು ಒಳ್ಳೆಯದು ಎಂಬುದು ಸೈಬರ್ ತಜ್ಞರ ಸಲಹೆ. ಖಾತೆಗಳನ್ನು ಡಿಲೀಟ್ ಮಾಡುವ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಫೇಸ್‌ಬುಕ್‌

ಫೇಸ್‌ಬುಕ್‌ ಬಳಸುವವರು ಕೆಲವು ದಿನಗಳವರೆಗೆ ಖಾತೆ ನಿಷ್ಕ್ರಿಯಗೊಳಿಸಬೇಕು ಎಂದರೆ, ಸೆಟ್ಟಿಂಗ್ಸ್‌ ಹೋಗಿ ‘ಮ್ಯಾನೇಜ್‌ ಅಕೌಂಟ್‌’ ಆಯ್ಕೆ ಮಾಡಿಕೊಂಡರೆ ಅದರಲ್ಲಿ ಡಿ ಆ್ಯಕ್ಟಿವೇಟ್‌ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು. ಆದರೆ, ಇದು ತಾತ್ಕಾಲಿಕ. ಶಾಶ್ವತವಾಗಿ ನಿಷ್ಕ್ರಿಯಗೊಳಿಸಬೇಕು ಎಂದರೆ, ಸೆಟ್ಟಿಂಗ್ಸ್‌ನಲ್ಲಿ ಕಾಣಿಸುವ ‘ಯುವರ್‌ ಫೇಸ್‌ಬುಕ್‌ ಇನ್ಫರ್ಮೇಷನ್‌’ ಆಯ್ಕೆ ಕ್ಲಿಕ್‌ ಮಾಡಿ. ಅಲ್ಲಿ ಡಿಲೀಟ್ ಯುವರ್ ಅಕೌಂಟ್ ಆ್ಯಂಡ್ ಇನ್ಫರ್ಮೇಷನ್‌ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿದರೆ ನಿಮ್ಮ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಬಹುದು.

ADVERTISEMENT

ಟ್ವಿಟರ್‌

ಟ್ವಿಟರ್‌ ಖಾತೆಯನ್ನು ನಿಷ್ಕ್ರಿಯಗೊಳಿಸಲು ಸೆಟ್ಟಿಂಗ್ಸ್‌ಗೆ ಹೋಗಿ ಮೆನುವಿನಲ್ಲಿ ಕಾಣಿಸುವ ‘ಅಕೌಂಟ್‌’ ಆಯ್ಕೆ ಕ್ಲಿಕ್‌ ಮಾಡಿದರೆ ಡಿಯಾಕ್ಟಿವೇಟ್ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಖಾತೆ ಡಿಲೀಟ್ ಮಾಡಬಹುದು. ಆದರೆ, ಖಾತೆ ಡಿಲೀಟ್ ಮಾಡಿದ ನಂತರ 30 ದಿನಗಳ ವರೆಗೆ ಹೆಚ್ಚುವರಿ ಅವಧಿ ಇರುತ್ತದೆ. ಈ ಅವಧಿಯಲ್ಲಿ, ಖಾತೆ ಬೇಕು ಎನಿಸಿದರೆ, ಮತ್ತೆ ಆ್ಯಕ್ವಿವೇಟ್‌ ಮಾಡಿಕೊಳ್ಳಬಹುದು. 30 ದಿನಗಳ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ.

ಇನ್‌ಸ್ಟಾಗ್ರಾಂ

ಫೋಟೊಗಳನ್ನು ಹಂಚಿಕೊಳ್ಳಲು ಇನ್‌ಸ್ಟಾಗ್ರಾಂ ಉತ್ತಮ ಆಯ್ಕೆ. ಇನ್‌ಸ್ಟಾಗ್ರಾಂ ಬಳಸಲು ಸಮಯ ಇಲ್ಲದೇ ಇರುವಾಗ ನಿಷ್ಕ್ರಿಯಗೊಳಿಸುವುದೇ ಉತ್ತಮ. ಆದರೆ, ಇದನ್ನು ಆ್ಯಪ್‌ನಲ್ಲಿ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ವೆಬ್‌ ಬ್ರೌಸರ್‌ನಲ್ಲಿ ಲಾಗಿನ್ ಆಗಬೇಕು. ಬ್ರೌಸರ್‌ನಲ್ಲಿ ಲಾಗಿನ್ ಆದಾಗ ಸೆಟ್ಟಿಂಗ್ಸ್‌ಗೆ ಹೋದರೆ, ಎಡಿಟ್ ಪ್ರೊಫೈಲ್ ಆಯ್ಕೆ ಕಾಣಿಸುತ್ತದೆ. ಅದರಲ್ಲಿರುವ ಆಯ್ಕೆ ಮೂಲಕ ತಾತ್ಕಾಲಿಕವಾಗಿ ಖಾತೆ ನಿಷ್ಕ್ರಿಯಗೊಳಿಸಬಹುದು. ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು ಹೆಲ್ಪ್ ಸೆಂಟರ್‌ಗೆ ಹೋಗಿ ಅಲ್ಲಿ ಕಾಣಿಸುವ ಡಿಲೀಟ್ ಆಯ್ಕೆಯನ್ನು ಒತ್ತಿದರೆ ಖಾತೆ ನಿಷ್ಕ್ರಿಯಗೊಳ್ಳುತ್ತದೆ.

ಸ್ನ್ಯಾಪ್ ಚಾಟ್‌

ಫೋನ್ ಕ್ಯಾಮೆರಾಗಳಿಗೆ ಮತ್ತಷ್ಟು ರಂಗು ತುಂಬುವ ಸ್ನ್ಯಾಪ್‌ಚಾಟ್‌ ತೊಲಗಿಸಬೇಕಾದ ಅವಶ್ಯಕತೆ ಎದುರಾದರೆ, ಆ್ಯಪ್‌ನಲ್ಲಿ ಡಿಲೀಟ್ ಮಾಡಲು ಆಗುವುದಿಲ್ಲ. ಬ್ರೌಸರ್‌ನಲ್ಲಿ ಲಾಗಿನ್ ಆದರೆ ಮಾತ್ರ ಡಿಲೀಟ್ ಮಾಡಲು ಸಾಧ್ಯ. ಜಾಲತಾಣಕ್ಕೆ ಭೇಟಿ ನೀಡಿದ ನಂತರ, ಸಪೋರ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ, ಮೈ ಅಕೌಂಟ್ ಆ್ಯಂಡ್ ಸೆಕ್ಯುರಿಟೀಸ್‌ಗೆ ಹೋಗಿ ಅಲ್ಲಿರುವ ಅಕೌಂಟ್ ಇನ್ಫರ್ಮೇಷನ್ ಆಯ್ಕೆ ಮೇಲ್ ಕ್ಲಿಕ್ಕಿಸಿದರೆ, ಡಿಲೀಟಿ ಮೈ ಅಕೌಂಟ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಲಾಗಿನ್ ವಿವರಗಳನ್ನು ನೀಡಿ ಖಾತೆ ನಿಷ್ಕ್ರಿಯಗೊಳಿಸಬಹುದು. 30 ದಿನಗಳವರೆಗೆ ಖಾತೆ ಡಿಸೇಬಲ್ ಮೋಡ್‌ನಲ್ಲಿ ಇರುತ್ತದೆ. ಈ ಅವಧಿಯಲ್ಲಿ ಬೇಕೆಂದರೆ ಮತ್ತೆ ಸಕ್ರಿಯಗೊಳಿಸಬಹುದು. 30 ದಿನಗಳ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.