ADVERTISEMENT

ಫೇಸ್‌ಬುಕ್‌, ಇನ್‌ಸ್ಟಾ ಇಲ್ಲದ ಈ ಎಂಟು ಗಂಟೆಗಳು...

ಟ್ವಿಟರ್‌ನಲ್ಲಿ ಅಳಲು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 2:28 IST
Last Updated 14 ಮಾರ್ಚ್ 2019, 2:28 IST
   

ಬೆಂಗಳೂರು: ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಸಂಪರ್ಕ ಸ್ಥಗಿತಗೊಂಡಿದ್ದು, ನೆಚ್ಚಿನ ಸಾಮಾಜಿಕ ಮಾಧ್ಯಮಗಳನ್ನು ಜಾಲಾಡಲು ಸಾಧ್ಯವಾಗದೆ ಟ್ವಿಟರ್‌ನಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ಡೆಸ್ಕ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ ಎರಡರಲ್ಲಿಯೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ತೆರೆದುಕೊಳ್ಳುತ್ತಿಲ್ಲ. ಕೆಲ ಬಳಕೆದಾರರಿಗೆ ಮೆಸೆಂಜರ್‌ ಮೂಲಕ ಸಂದೇಶ ರವಾನಿಸುವುದೂ ಅಸಾಧ್ಯವಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ವರೆಗೂ ಈ ಸಾಮಾಜಿಕ ಮಾಧ್ಯಮಗಳ ಸಂಪರ್ಕ ಸ್ಥಗಿತ ಮುಂದುವರಿದಿದ್ದು, ಟ್ವಿಟರ್‌ನಲ್ಲಿ ಫೇಸ್‌ಬುಕ್‌ ಡೌನ್‌ (#FacebookDown) ಮತ್ತು ಇನ್‌ಸ್ಟಾಗ್ರಾಮ್‌ ಡೌನ್‌(#instagramdown) ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್‌ ಆಗಿವೆ.

ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆಗಲೂ ಸಹ ಸಾಧ್ಯವಾಗುತ್ತಿಲ್ಲ. 'ಶೀಘ್ರದಲ್ಲಿಯೇ ಹಿಂದಿರುಗಲಿದ್ದೇವೆ’ ಎಂಬ ಒಕ್ಕಣೆಯನ್ನು ಫೇಸ್‌ಬುಕ್‌ ತೋರಿಸುತ್ತಿದೆ. ’ನಿರ್ವಹಣಾ ಕಾರ್ಯಗಳಿಗಾಗಿ ಫೇಸ್‌ಬುಕ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ’ ಎಂಬ ಪ್ರಕಟಣೆ ಕಾಣುತ್ತಿದೆ. ಕೆಲವು ಬಳಕೆದಾರರು ಲಾಗಿನ್‌ ಆಗಲು ಸಾಧ್ಯವಾಗಿದ್ದು, ಯಾವುದೇ ಹೊಸ ಫೀಡ್‌ ಪಡೆಯಲು ಸಾಧ್ಯವಾಗಿಲ್ಲ. ವಾಟ್ಸ್‌ಆ್ಯಪ್‌ನಲ್ಲಿಯೂ ವಾಯ್ಸ್‌ ನೋಟ್ಸ್‌ನಂತಹ ಕೆಲವು ಆಯ್ಕೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಕುಪಿತರಾಗಿದ್ದಾರೆ.

ADVERTISEMENT

ಸಮಸ್ಯೆಯ ಅರಿವಿದೆ ಎಂದು ಹೇಳಿರುವ ಫೇಸ್‌ಬುಕ್‌, 'ಇದು ಸಂಪರ್ಕ ಸೇವೆ ಸ್ಥಗಿತಗೊಳಿಸಲು ನಡೆದಿರುವ ದಾಳಿ(DDoS)ಗೆ ಸಂಬಂಧಿಸಿದಲ್ಲ ಎಂದು ಸ್ಪಷ್ಟಪಡಿಸಿದೆ. ಶೀಘ್ರದಲ್ಲಿಯೇ ಸಮಸ್ಯೆ ಪರಿಹರಿಸಲಾಗುತ್ತದೆ’ ಎಂದಿದೆ.

ಕೆಲವು ವೆಬ್‌ಸೈಟ್‌ ವರದಿಗಳ ಪ್ರಕಾರ, ಬುಧವಾರ ರಾತ್ರಿ 10 ಗಂಟೆಯಿಂದ ಫೇಸ್‌ಬುಕ್‌ ಸಂಪರ್ಕದಲ್ಲಿ ತೊಡುಕು ಎದುರಾಗಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಈ ಸಮಸ್ಯೆ ಉಂಟಾಗಿದೆ.

ಇತ್ತೀಚೆಗೆ ಗೂಗಲ್‌ ಮ್ಯಾಪ್‌ ಮತ್ತು ಡ್ರೈವ್‌ ಸೇವೆಗಳಲ್ಲಿಯೂ ಇಂಥದ್ದೇ ಸಮಸ್ಯೆ ಎದುರಾಗಿತ್ತು. ಸೇವೆಗಳಲ್ಲಿ ಉಂಟಾದ ಸಮಸ್ಯೆಗಳನ್ನು ಬಗೆಹರಿಸಿದ್ದ ಗೂಗಲ್‌ ಬಳಕೆದಾರರಲ್ಲಿ ಕ್ಷಮೆಯಾಚಿಸಿತ್ತು. ಆದರೆ, ಫೇಸ್‌ಬುಕ್‌ ಸಂಪರ್ಕ ಸ್ಥಗಿತಗೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ಸುಮಾರು 40 ನಿಮಿಷಗಳ ವರೆಗೂ ಫೇಸ್‌ಬುಕ್‌ ಸ್ಥಗಿತಗೊಂಡು ಬಳಕೆದಾರರಿಗೆ ಕೆಲ ಗಂಟೆಗಳ ವರೆಗೂ ಬಳಕೆ ಸಾಧ್ಯವಾಗಿರಲಿಲ್ಲ.

ಬುಧವಾರ ರಾತ್ರಿಯಿಂದ ಕಾಣಿಸಿಕೊಂಡಿರುವ ಸಮಸ್ಯೆ ಎಂಟು ಗಂಟೆಗೂ ಹೆಚ್ಚು ಸಮಯ ಮೀರಿದೆ. ಇದೇ ಮೊದಲ ಬಾರಿಗೆ ಜನಪ್ರಿಯ ಸಾಮಾಜಿಕ ಮಾಧ್ಯಮ ದೀರ್ಘಕಾಲದ ವರೆಗೂ ಸಂಪರ್ಕ ಕಡಿತಗೊಂಡಿದೆ. ಫೋಟೊಗಳನ್ನು ಅಪ್‌ಲೋಡ್‌ ಮಾಡಲಾಗದೆ, ಪ್ರಯಾಣದ ಹಾಗೂ ಮಾಡುತ್ತಿರುವ ಕಾರ್ಯಗಳ ಬಗ್ಗೆ ಪ್ರಕಟಿಸಿಕೊಳ್ಳಲಾಗದೆ ಬಳಕೆದಾರರು ಪರಿತಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.