ADVERTISEMENT

ಫೇಸ್‌ಬುಕ್‌ ಜಾಹಿರಾತುಗಳ ಕಡಿವಾಣಕ್ಕೆ ಶೀಘ್ರದಲ್ಲೇ ಬರಲಿದೆ ಹೊಸ ಆಯ್ಕೆ

ಏಜೆನ್ಸೀಸ್
Published 21 ಆಗಸ್ಟ್ 2019, 14:14 IST
Last Updated 21 ಆಗಸ್ಟ್ 2019, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಯಾನ್‌ಫ್ರಾನ್ಸಿಸ್ಕೋ: ನಿಮ್ಮಫೇಸ್‌ಬುಕ್‌ ಪುಟದಲ್ಲಿ ಇನ್ನು ಮುಂದೆ ಅನಗತ್ಯವಾದ ಜಾಹಿರಾತುಗಳ ಕಿರಿಕಿರಿ ಇರುವುದಿಲ್ಲ.

ಇಂತಹ ಜಾಹಿರಾತುಗಳ ಕಡಿವಾಣಕ್ಕೆ ಹೊಸ ಆಯ್ಕೆಯೊಂದು ಶೀಘ್ರ ಸೇರ್ಪಡೆಗೊಳ್ಳಲಿದೆ. ಈ ಕುರಿತು ಮಂಗಳವಾರ ಪ್ರಕಟಣೆ ಹೊರಡಿಸಿರುವ ಕಂಪನಿ, ‘ಫೇಸ್‌ಬುಕ್‌ ಪುಟದಲ್ಲಿ ಬರುವಂತಹ ಸುದ್ದಿ, ವಿಡಿಯೊ, ಚಿತ್ರಗಳನ್ನು ಲೈಕ್‌ ಮಾಡಿದಾಗ ಆ ವಿಷಯಕ್ಕೆ ಸಂಬಂಧಿಸದಂತಹ ಜಾಹಿರಾತುಗಳು ಪುಟದಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಮುಂದೆ ಇಂತಹ ಟ್ರ್ಯಾಕಿಂಗ್‌ ಅನ್ನು ನಿಷೇಧಿಸುವ ಆಯ್ಕೆ ಸೇರ್ಪಡೆಗೊಳಿಸುತ್ತೇವೆ. ‘ಕ್ಲಿಯರ್‌ ಹಿಸ್ಟರಿ’ ಬದಲಾಗಿ ‘ಆಫ್‌–ಫೇಸ್‌ಬುಕ್‌ ಆಕ್ಟಿವಿಟಿ’ ಎಂಬ ಆಯ್ಕೆ ದೊರೆಯಲಿದೆ.

ಉತ್ತರ ಕೊರಿಯಾ, ಐರ್ಲಾಂಡ್‌ ಮತ್ತು ಸ್ಪೇನ್‌ನಲ್ಲಿ ಮಂಗಳವಾರ ಇದನ್ನು ಸೇರ್ಪಡೆಗೊಳಿಸಲಾಗಿದ್ದು, ಉಳಿದ ದೇಶಗಳಲ್ಲಿ ಮುಂದಿನ ತಿಂಗಳಿಂದ ಲಭ್ಯವಾಗಲಿದೆ ಎನ್ನಲಾಗಿದೆ. ಜನರು ಲೈಕ್‌ ಮಾಡುವ ವಿಷಯವನ್ನಾಧರಿಸಿಯೇ ಫೇಸ್‌ಬುಕ್‌, ಆ ವ್ಯಕ್ತಿಗೆ ತೋರಿಸಬೇಕಾದಂತಹ ಜಾಹಿರಾತುಗಳನ್ನು ನಿರ್ಧರಿಸುತ್ತದೆ. ಹೊಸ ಆಯ್ಕೆಯಿಂದಾಗಿ ಜಾಹಿರಾತುಗಳೇ ಇರುವುದಿಲ್ಲ ಎನ್ನುವುದು ಸಾಧ್ಯವಿಲ್ಲ. ‘ಆಫ್–ಫೇಸ್‌ಬುಕ್‌ ಆಕ್ಟಿವಿಟಿ’ ಎನ್ನುವುದನ್ನು ಆಯ್ಕೆ ಮಾಡಿದ ನಂತರ, ವ್ಯಕ್ತಿಯೊಬ್ಬ ಯಾವುದಾದರೂ ಜಾಹಿರಾತನ್ನು ವೀಕ್ಷಿಸಿದರೆ ಯಾರು ವೀಕ್ಷಿಸಿದರು ಎನ್ನುವುದನ್ನು ತಿಳಿಯಲು ಸಾಧ್ಯವಿಲ್ಲ. ಆದರೆ ಒಬ್ಬರು ಈ ಜಾಹಿರಾತು ವೀಕ್ಷಿಸಿದ್ದಾರೆ ಎನ್ನುವುದು ತಿಳಿಯಲಿದೆ’ ಎಂದು ಕಂಪನಿ ತಿಳಿಸಿದೆ.

ADVERTISEMENT

ಫೇಸ್‌ಬುಕ್‌ ಸೆಟ್ಟಿಂಗ್ಸ್‌ನಲ್ಲಿ ಯುವರ್‌ ಫೇಸ್‌ಬುಕ್‌ ಇನ್ಫಾರ್ಮೇಷನ್‌ ಎಂಬ ಆಯ್ಕೆಯಡಿ ‘ಆಫ್‌–ಫೇಸ್‌ಬುಕ್‌ ಆಕ್ಟಿವಿಟಿ’ ಲಭ್ಯವಿದೆ.

ಫೇಸ್‌ಬುಕ್‌ ಮೇಲೆ ನಿಗಾ: ಇತ್ತೀಚೆಗೆ ಹಲವುಸರ್ಕಾರಗಳು ಫೇಸ್‌ಬುಕ್‌ ಮೇಲೆ ನಿಗಾ ಇರಿಸಿವೆ.ಖಾಸಗಿತನ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೇಸ್‌ಬುಕ್‌ಗೆ ಅಂದಾಜು₹34 ಸಾವಿರ ಕೋಟಿ ದಂಡವನ್ನು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ)ವಿಧಿಸಿತ್ತು. ಖಾಸಗಿತನಕ್ಕೆ ಧಕ್ಕೆಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ,ಮುಂದೆ ಇಂತಹ ಶಿಕ್ಷೆಯಿಂದ ಪಾರಾಗಬಹುದು ಎನ್ನುವುದು ಫೇಸ್‌ಬುಕ್‌ ಯೋಚನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.