ADVERTISEMENT

ಬಿರಿಯಾನಿ ಜನಪ್ರಿಯ ಖಾದ್ಯ: ಟ್ವಿಟರ್‌ನಲ್ಲಿ ಬಿಸಿಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಭಾರತೀಯರಿಗೆ ಬಿರಿಯಾನಿ ಹೆಚ್ಚು ಇಷ್ಟವಾದ ಖಾದ್ಯವಾಗಿದೆ. ಆನ್‌ಲೈನ್‌ನಲ್ಲಿ ಹೆಚ್ಚಿನ ಗ್ರಾಹಕರಿಂದ ಆರ್ಡರ್‌ ಪಡೆದ ಆಹಾರವನ್ನು ವರ್ಷದಿಂದ ವರ್ಷಕ್ಕೆ ದೃಢೀಕರಿಸಲಾಗುತ್ತದೆ. ಆದರೆ, ದೇಶದಲ್ಲಿ ಅತ್ಯುತ್ತಮವಾದ ಬಿರಿಯಾನಿ ಯಾವುದು ಎಂಬ ವಿವಾದಕ್ಕೆ ಕೊನೆಯಿಲ್ಲದಾಗಿದೆ.

ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಮತ್ತು ತೆಲಂಗಾಣದ ಐಟಿ ಹಾಗೂ ಕೈಗಾರಿಕಾ ಸಚಿವ ಕೆ.ಟಿ.ರಾಮಾರಾವ್‌ (ಕೆಟಿಆರ್‌) ಅವರು ತಮ್ಮ ಆಯ್ಕೆಯನ್ನು ಟ್ವಿಟರ್‌ನಲ್ಲಿ ತಿಳಿಸುವ ಮೂಲಕ, ಬಗೆಹರಿಸಲಾಗದ ಸಮರಕ್ಕೆ ಹೊಸದಾಗಿ ಕಿಚ್ಚು ಹಚ್ಚಿದ್ದಾರೆ.

ಆಲೂಗಡ್ಡೆ ಜೊತೆಗೆ ಕೋಲ್ಕತ್ತ ಬಿರಿಯಾನಿಯನ್ನು 2 ಜಿ ನಂತರದ ಅತಿದೊಡ್ಡ ಹಗರಣ ಎಂದು ಹೇಳುವ ಟ್ವೀಟ್‌ವೊಂದು ಹೊರ ಬರುತ್ತಿದ್ದಂತೆ ಇತರೆ ಬಿರಿಯಾನಿಗಳ ಹೋಲಿಕೆ ಹಾಗೂ ಅವುಗಳ ಅಪಹಾಸ್ಯ ಮಾಡಲಾಗಿದೆ.ಕೋಲ್ಕತ್ತ ಬಿರಿಯಾನಿ ಕುರಿತ ಟ್ವೀಟ್‌ಗೆ ವ್ಯಕ್ತಿಯೊಬ್ಬರೂ ಖಾರವಾಗಿ ಪ್ರತಿಕ್ರಿಯಿಸಿ ಕಾಲೆಳದಿದ್ದಾರೆ.

ADVERTISEMENT

ಹೈದರಾಬಾದ್‌ ಮತ್ತು ಅವಾಧಿ (ಲಖನೌ) ಬಿರಿಯಾನಿ ಸಹ ಪ್ರಸ್ತಾಪಿಸಲಾಗಿದೆ.

‘ನಾನು ಎರಡು ತಿಂಗಳಿಗೊಮ್ಮೆ ಹೈದರಾಬಾದ್‌ ಬಿರಿಯಾನಿ ತಿನ್ನಬಹುದು. ತಿಂಗಳಿಗೊಮ್ಮೆ ಅವಾಧಿ, ವಾರಕ್ಕೊಮ್ಮೆ ಕೋಲ್ಕತ್ತ ಹಾಗೂ ಪ್ರತಿದಿನ ಕೇರಳ ಬಿರಿಯಾನಿ!’ ಎಂದು ಪತ್ರಕರ್ತ ವೀರ್‌ ಸಂಘ್ವಿ ಟ್ವೀಟ್‌ ಮಾಡಿದ್ದಾರೆ.

ಕೇರಳ ಬಿರಿಯಾನಿಯನ್ನು ತಲಶೇರಿ ಬಿರಿಯಾನಿ ಎಂದು ಸರಿಯಾಗಿ ಸೂಚಿಸಲು ವ್ಯಕ್ತಿಯೊಬ್ಬರು ಯತ್ನಿಸಿದರೆ, ಅಮಿತಾಭ್‌ ಕಾಂತ್‌ ಅವರು, ವಿಶ್ವದ ಅತ್ಯುತ್ತಮ ಬಿರಿಯಾನಿಯು ಪ್ಯಾರಿಸ್‌ ರೆಸ್ಟೋರಂಟ್‌ನ ತಲಶೇರಿ ಮೀನು ಬಿರಿಯಾನಿ ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ಕೆಟಿಆರ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವದ ಅತ್ಯುತ್ತಮ ಬಿರಿಯಾನಿಗಳ ಮೇಲಿನ ಹಕ್ಕು ಹೈದರಾಬಾದ್‌ಗೆ ಇದೆ. ಉಳಿದವುಗಳು ಕಳಪೆಯಾಗಿವೆ. ಯುನೆಸ್ಕೋ ಸಹ ಇತ್ತೀಚೆಗೆ ನಮ್ಮ ಸಂಸ್ಕೃತಿಯನ್ನು ಗುರುತಿಸಿದೆ ಮತ್ತು ಭೋಜನ ಕಲೆಯ ಸೃಜನಶೀಲ ನಗರ ಎಂದು ಹೇಳಿದೆ ಎಂದು ಮರು ಟ್ವೀಟ್‌ ಮಾಡಿದ್ದಾರೆ.

ಬಿರಿಯಾನಿಯು ಸತತ ಮೂರನೇ ವರ್ಷವು ಹೆಚ್ಚು ಆದ್ಯತೆಯ ಆಹಾರ ಎಂಬುವುದನ್ನು ತೋರಿಸಿದೆ. ಪ್ರತಿ ನಿಮಿಷಕ್ಕೆ 95 ಬಿರಿಯಾನಿಗಳು ಆನ್‌ಲೈನ್‌ನಲ್ಲಿ ಆರ್ಡರ್‌ ಆಗುತ್ತವೆ ಎಂದುಆಹಾರ ಪೊಟ್ಟಣ ಪೂರೈಸುವ ಸ್ವಿಗ್ಗಿ ಹೇಳಿದೆ.

ಹೈದರಾಬಾದ್‌ ಅನ್ನು ವಿಶ್ವದ ಬಿರಿಯಾನಿ ರಾಜಧಾನಿ ಎಂದು ಕರೆಯುವ ಬಾಣಸಿಗ ಸಂಜೀವ್‌ ಕಪೂರ್‌ ಅವರ ವಿಡಿಯೊ ಕ್ಲಿಪ್‌ ಅನ್ನು ಬೆಂಬಲಿಸಿ ಟ್ವಿಟರ್‌ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.