ADVERTISEMENT

ರಾಷ್ಟ್ರಪತಿ ಅನಾವರಣ ಮಾಡಿದ ನೇತಾಜಿ ಭಾವಚಿತ್ರ: ಇದು ನಟನ ಪೋರ್ಟ್ರೇಟ್ ಎಂದ ಸಂಸದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜನವರಿ 2021, 11:48 IST
Last Updated 25 ಜನವರಿ 2021, 11:48 IST
 ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಚಿತ್ರ
ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಚಿತ್ರ   

ಬೆಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಇತ್ತೀಚೆಗಷ್ಟೇ ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಿರುವ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆದಿದೆ. ಆ ಚಿತ್ರವು ನೇತಾಜಿ ಅವರ ನಿಜವಾದ ಚಿತ್ರವೇ ಅಲ್ಲ, ಅವರ ಪಾತ್ರ ನಿರ್ವಹಿಸಿರುವ ಸಿನಿಮಾ ನಟನ ಚಿತ್ರ ಎಂದು ಟ್ವೀಟ್‌ ಮಾಡಲಾಗಿದೆ. 'ಭಾರತವನ್ನು ದೇವರೇ ಕಾಪಾಡಬೇಕು' ಎಂದು ಟಿಎಂಸಿ ಸಂಸದೆಯೊಬ್ಬರು ಪೋಸ್ಟ್‌ ಮಾಡಿದ್ದಾರೆ.

ಸುಭಾಷ್‌ ಚಂದ್ರ ಬೋಸರ ಚಿತ್ರಗಳನ್ನು ಅನಾವರಣ ಮಾಡಿರುವ ಫೋಟೊಗಳನ್ನು ಭಾರತದ ರಾಷ್ಟ್ರಪತಿ ಅವರ ಅಧಿಕೃತ ಟ್ವಿಟರ್‌ ಖಾತೆ ಹಂಚಿಕೊಂಡಿದ್ದು, ಆ ಚಿತ್ರದಲ್ಲಿರುವುದು ನೇತಾಜಿ ಅಲ್ಲವೇ ಅಲ್ಲ ಎಂದು ಹಲವು ಮಂದಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. 2019ರ 'ಗುಮನಾಮಿ' ಬೆಂಗಾಲಿ ಸಿನಿಮಾದಲ್ಲಿ ಸುಭಾಷ್‌ ಚಂದ್ರ ಬೋಸ್‌ ಪಾತ್ರದಲ್ಲಿ ನಟ ಪ್ರಸೆನ್‌ಜಿತ್‌ ಚಟರ್ಜಿ ಅಭಿನಯಿಸಿದ್ದರು. ಅದೇ ಸಿನಿಮಾದ ಚಿತ್ರವನ್ನೇ ಅನವಾರಣ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮ ದಿನದ ಪ್ರಯುಕ್ತ ಜನವರಿ 23ರಂದು ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಜನವರಿ 23 'ಪರಾಕ್ರಮ ದಿನ' ಆಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. 1897ರ ಜನವರಿ 23 ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ.

ADVERTISEMENT

ಈ ಚಿತ್ರಗಳ ಬಗ್ಗೆ ಟ್ವೀಟ್‌ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, 'ರಾಮ ಮಂದಿರಕ್ಕಾಗಿ ₹5 ಲಕ್ಷ ದೇಣಿಗೆ ನೀಡಿದ ಬಳಿಕ ರಾಷ್ಟ್ರಪತಿ ಅವರು ನಟ ಪ್ರಸೆನ್‌ಜಿತ್‌ ಚಿತ್ರವನ್ನು ಅನಾವರಣ ಮಾಡಿ ನೇತಾಜಿಗೆ ಗೌರವ ಸಲ್ಲಿಸಿದ್ದಾರೆ. ದೇವರೇ ಭಾರತವನ್ನು ರಕ್ಷಿಸಬೇಕು (ಏಕೆಂದರೆ ಈ ಸರ್ಕಾರದಿಂದ ಅದು ಸಾಧ್ಯವಾಗದು)' ಎಂದು ಪ್ರಕಟಿಸಿದ್ದಾರೆ.

'ಇದರ ಬಗ್ಗೆ ಕೇಳಿ ನಾನು ಗಾಬರಿಯಾದೆ. ಇದೊಂದು ಮುಜುಗರದ ಘಟನೆ' ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್‌ ಪೋಸ್ಟ್‌ ಮಾಡಿದ್ದಾರೆ.

ಇನ್ನೂ ಕೆಲವು ಟ್ವೀಟಿಗರು, 'ಬೆನ್‌ ಕಿಂಗ್‌ಸ್ಲೆ ಚಿತ್ರವನ್ನು ಮಹಾತ್ಮ ಗಾಂಧಿ ಎಂದು, ಅಜಯ್‌ ದೇವಗನ್‌ ಚಿತ್ರವನ್ನು ಭಗತ್‌ ಸಿಂಗ್‌' ಎಂದು ಹೇಳಬಹುದೇ ಎಂದು ವ್ಯಂಗ್ಯವಾಡಿದ್ದಾರೆ.

ಆದರೆ, 'ಅನಾವರಣ ಆಗಿರುವ ಚಿತ್ರವು ನೇತಾಜಿ ಅವರ ಮೂಲ ಚಿತ್ರವನ್ನು ಆಧರಿಸಿ ಪರೇಶ್‌ ಮೈತಿ ರಚಿಸಿರುವ ಚಿತ್ರವಾಗಿದೆ' ಎಂದು ಹಲವು ಮಾಧ್ಯಮಗಳು ಸರ್ಕಾರದ ಮೂಲಕಗಳಿಂದ ತಿಳಿದು ಬಂದಿರುವುದಾಗಿ ವರದಿ ಮಾಡಿದೆ.

ಗ್ರಹಿಕ ತಪ್ಪಾಗಿರುವುದು ತಿಳಿಯುತ್ತಿದ್ದಂತೆ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಮಂದಿ ತಮ್ಮ ಪೋಸ್ಟ್‌ಗಳನ್ನು ತೆಗೆದು ಹಾಕಿದ್ದಾರೆ. ಸಂಪೂರ್ಣ ಚರ್ಚೆಯೇ ಫೇಕ್‌, ಸರಿಯಾಗಿ ಸಂಶೋಧನೆ ನಡೆಸದೆಯೇ ಮಾಡಿರುವ ಅನಗತ್ಯ ಚರ್ಚೆ ಎಂದು ಟ್ವಿಟರ್‌ನಲ್ಲಿ ಮತ್ತೊಂದು ಟ್ರೆಂಡ್‌ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.