ADVERTISEMENT

‘ಚಂದ್ರಯಾನ 2’ ಕಣ್ಣಿನಲ್ಲಿ ಭೂಮಿ ಹೀಗೆ ಕಾಣುತ್ತೆ: ಇಸ್ರೋಗೆ ಅಭಿನಂದನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 9:00 IST
Last Updated 4 ಆಗಸ್ಟ್ 2019, 9:00 IST
ಚಂದ್ರಯಾನ–2 ಕಣ್ಣಿನಲ್ಲಿ ಭೂಮಿ (ಕೃಪೆ: twitter.com/isro)
ಚಂದ್ರಯಾನ–2 ಕಣ್ಣಿನಲ್ಲಿ ಭೂಮಿ (ಕೃಪೆ: twitter.com/isro)   

ಬೆಂಗಳೂರು: ಅಂತರಿಕ್ಷದಲ್ಲಿ ಚಂದ್ರನತ್ತ ಧಾವಿಸುತ್ತಿರುವ ‘ಚಂದ್ರಯಾನ 2’ ಗಗನನೌಕೆಯಿಂದ ತೆಗೆದ ಭೂಮಿಯ ಚಿತ್ರಗಳನ್ನು ಇಸ್ರೊ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ಚಿತ್ರಗಳನ್ನು ನೋಡಿದ ಜನರು ಇಸ್ರೊ ಸಾಹಸವನ್ನು ಅಭಿನಂದಿಸಿದ್ದಾರೆ. ‘ಚಂದ್ರಯಾನ–2’ ಚಂದ್ರನ ಮೇಲೆ ಇಳಿಯುವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ಟ್ವೀಟ್ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಈವರೆಗೆ ಇಸ್ರೊ ಒಟ್ಟು ಐದು ಚಿತ್ರಗಳನ್ನು ಟ್ವೀಟ್‌ ಮಾಡಿದೆ. ‘ಚಂದ್ರಯಾನ–2ರ ಎಲ್‌ಐ4 ಕ್ಯಾಮೆರಾದಲ್ಲಿ ಆಗಸ್ಟ್‌ 3ರಂದು ಭೂಮಿ ಇಷ್ಟು ಸುಂದರವಾಗಿ ಕಾಣಿಸಿತು’ ಎನ್ನುವ ಒಕ್ಕಣೆಯೊಂದಿಗೆ ಇಸ್ರೊ ಫೋಟೊಗಳನ್ನು ಟ್ವೀಟ್ ಮಾಡಿದೆ.

ADVERTISEMENT

ಚಿತ್ರಗಳನ್ನು ನೋಡಿದ ಹಲವರು ಮುಕ್ತವಾಗಿ ಪ್ರಶಂಸೆಗಳನ್ನು ಹರಿಬಿಟ್ಟಿದ್ದಾರೆ. ಕೆಲವರು ಹೆಮ್ಮೆ ಮತ್ತು ಅಭಿಮಾನದ ಮಾತುಗಳನ್ನು ಹಂಚಿಕೊಂಡಿದ್ದರೆ, ಹಲವರು ಭೂಮಿಯ ಸೌಂದರ್ಯವನ್ನು ಕೊಂಡಾಡಿದ್ದಾರೆ.

‘ಇಸ್ರೊದಿಂದ 130 ಕೋಟಿ ಜನರಿಗೆ ಅದ್ಭುತ ಕೊಡುಗೆ’ ಎಂದು ಒಬ್ಬರು ಉದ್ಗರಿಸಿದ್ದಾರೆ. ‘ಇದಂತೂ ತುಂಬಾ ಸುಂದರವಾಗಿದೆ’ ಎಂದು ಮತ್ತೊಬ್ಬರು ಖುಷಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಚಂದ್ರಯಾನ–2 ಗಗನನೌಕೆಯಿಂದ ಬಂದಿರುವುದು ಎನ್ನಲಾದ ಕೆಲವು ಚಿತ್ರಗಳು ವೈರಲ್ ಆಗಿದ್ದವು. ಆದರೆ ನಂತರ ಅವೆಲ್ಲಾ ಸುಳ್ಳುಸುದ್ದಿ ಎಂಬ ಸಂಗತಿ ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.