ADVERTISEMENT

ಮೋದಿಜೀ ಬುಲೆಟ್ ರೈಲು ವಿಷಯ ಬಿಡಿ, ಈಗ ಸಂಚರಿಸುತ್ತಿರುವ ರೈಲುಗಳತ್ತ ಗಮನ ಹರಿಸಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 13:04 IST
Last Updated 26 ಡಿಸೆಂಬರ್ 2018, 13:04 IST
   

ನವದೆಹಲಿ: ಮೋದಿ ಜೀ, ಬುಲೆಟ್ ರೈಲಿನ ವಿಷಯ ಬಿಡಿ. ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಬಗ್ಗೆ ಗಮನ ಹರಿಸಿ ಎಂದು ಹಿರಿಯ ಮಹಿಳೆಯೊಬ್ಬರು ರೈಲಿನಲ್ಲಿ ಕುಳಿತು ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ರೀತಿ ರೈಲು ಪ್ರಯಾಣದ ಕಷ್ಟಗಳನ್ನು ಹೇಳಿ, ಮೋದಿಯನ್ನು ತರಾಟೆಗೆ ತೆಗೆದುಕೊಂಡವರು ಬೇರೆ ಯಾರೂ ಅಲ್ಲ.ಅಮೃತಸರದ ಬಿಜೆಪಿ ನಾಯಕಿ ಲಕ್ಷ್ಮಿ ಕಾಂತ ಚಾವ್ಲಾ.

ಪಂಜಾಬ್‍ನ ಮಾಜಿ ಸಚಿವೆ ಚಾವ್ಲಾ ಅವರು ಡಿಸೆಂಬರ್ 22ರಂದು ಸರಯೂ- ಯಮುನಾ ರೈಲಿನ ಎಸಿ -3 ಬೋಗಿಯಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ 10 ಗಂಟೆಗಳ ಕಾಲ ರೈಲು ವಿಳಂಬವಾಗಿದ್ದು ಚಾವ್ಲಾ ಅವರ ಮಾತನ್ನುಮೊಬೈಲ್ ಫೋನ್‍ನಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗಿದೆ.ಆ ದಿನ ಅಮೃತಸರದಿಂದ ಅಯೋಧ್ಯೆಗೆ ಬರುತ್ತಿದ್ದ ರೈಲು ಹಲವಾರು ಗಂಟೆ ವಿಳಂಬವಾಗಿತ್ತು ಎಂದು ವರದಿಗಳಲ್ಲಿ ಹೇಳಲಾಗಿದೆ.

ADVERTISEMENT

ವಿಡಿಯೊದಲ್ಲಿ ಏನಿದೆ?
ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನನ್ನ ಒಂದೇ ಒಂದು ವಿನಂತಿ ಏನೆಂದರೆ ಸಾಮಾನ್ಯ ಮನುಷ್ಯರ ಮೇಲೆ ಕರುಣೆ ಇರಲಿ.ಈ ರೈಲುಗಳು ಹಾಳಾಗಿವೆ.ಕಳೆದ 24 ಗಂಟೆಗಳಲ್ಲಿ ನಾವು ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ರೈಲು ದಿಶೆ ಬದಲಿಸಿ ವಿಳಂಬವಾಗಿ ಸಂಚರಿಸುತ್ತಿದೆ.ಆದರೆ ಯಾರೂ ನಮಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.ಹೆಚ್ಚುವರಿ 10 ಗಂಟೆಗಳ ಕಾಲ ಇಲ್ಲಿ ಬಾಕಿಯಾಗಿರುವವರಿಗೆಆಹಾರದ ವ್ಯವಸ್ಥೆಯೂ ಇಲ್ಲ.

ಗಂಟೆಗೆ 120 ಕಿಮೀ ಅಥವಾ 200 ಕಿಮೀ ಸಂಚರಿಸುವ ರೈಲುಗಳ ವಿಷಯ ಬಿಡಿ, ಜನರು ಫುಟ್ ಪಾತ್‍ನಲ್ಲಿದ್ದಾರೆ. ಕಾಯುವಜನರಿಗೆ ವೇಟಿಂಗ್ ರೂಂ ಇಲ್ಲ. ನಡುಗುವ ಚಳಿಯಲ್ಲಿ ಜನರು ತೆರೆದ ಜಾಗದಲ್ಲಿ ಮಲಗುತ್ತಾರೆ.ಮೋದಿ ಜೀ ಮತ್ತು ಪೀಯೂಷ್‍ ಜೀ ಸಾಮಾನ್ಯ ಜನರತ್ತ ಗಮನ ಹರಿಸಿ. ರೈಲ್ವೆ ಅಧಿಕಾರಿಗಳು ಲಂಚ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ.

ರೈಲ್ವೆಯಲ್ಲಿ ನೀಡಿರುವ ಸಹಾಯವಾಣಿಗೆ ಕರೆ ಮಾಡಿದರೂ, ಸಚಿವರಿಗೆ ಇಮೇಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸಹಾಯವಾಣಿಯ ಜಾಹೀರಾತು ಇರುವುದು ಸುದ್ದಿ ಪತ್ರಿಕೆಗಳಿಗೆ ಮಾತ್ರವೇ?

ಶತಾಬ್ದಿ ಮತ್ತು ರಾಜಧಾನಿ ರೈಲುಗಳಿರುವುದು ಧನಿಕರಿಗೆ ಮಾತ್ರ. ಬಡವರು, ಶ್ರಮಿಕ ವರ್ಗ ಮತ್ತು ಸೈನಿಕರು ಬಳಸುವ ಇತರ ರೈಲುಗಳ ಗತಿಯೇನು? ರೈಲ್ವೇ ಸಚಿವರು ಈ ರೀತಿಯ ರೈಲುಗಳಲ್ಲಿ ಪ್ರಯಾಣ ಮಾಡಿ ನೋಡಲಿ.ಮೋದಿಜೀ, ಜನರು ಬೇಜಾರಾಗಿದ್ದಾರೆ. ಯಾರಿಗೆ ಅಚ್ಛೇದಿನ್ ಬಂದಿದೆ ಎಂಬುದು ನನಗೆ ಗೊತ್ತಿಲ್ಲ, ಸಾಮಾನ್ಯ ಜನರ ಪಾಲಿಗಂತೂ ಅಚ್ಛೇ ದಿನ್ ಬಂದಿಲ್ಲ ಎಂದಿದ್ದಾರೆ ಚಾವ್ಲಾ.
ಕಾಲೇಜು ಪ್ರಾಧ್ಯಾಪಕಿಯಾಗಿದ್ದ ಚಾವ್ಲಾ, ಪಂಜಾಬ್ ಸರ್ಕಾರದ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.