ADVERTISEMENT

₹10,000 ಪಡೆಯಲು ಬಂದವರಿಗೆ 50 ಸಾವಿರ ಕೊಟ್ಟ ಎಟಿಎಂ: ಮುಗಿಬಿದ್ದ ಗ್ರಾಹಕರು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 10:39 IST
Last Updated 16 ಜೂನ್ 2022, 10:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಾಗಪುರ:₹500 ಪಡೆಯಲು ಹೋದವರಿಗೆ ₹2,500, ₹10,000 ಪಡೆಯಲು ಬಂದವರಿಗೆ ₹50,000 ಹಣವನ್ನು ಎಟಿಎಂ ನೀಡಿದೆ.

ಅಚ್ಚರಿಯಾದರೂ ಇದು ನಿಜ. ಮಹಾರಾಷ್ಟ್ರದ ನಾಗಪುರ ಜಿಲ್ಲೆಯಿಂದ 30 ಕಿ.ಮೀಟರ್‌ ದೂರದಲ್ಲಿರುವಖಾಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಎಟಿಎಂ ಕೇಂದ್ರದಿಂದ ಹಣ ಪಡೆಯಲು ಹೋದವರಿಗೆ ಈ ಅಚ್ಚರಿ ಕಾದಿತ್ತು.

ವ್ಯಕ್ತಿಯೊಬ್ಬರು ₹500 ವಿತ್‌ಡ್ರಾ ಮಾಡಲು ಹೋಗಿದ್ದರು. ಅವರಿಗೆ ₹2,500 ಹಣ ಬಂದಿತ್ತು. ₹1,000 ಡ್ರಾ ಮಾಡಲು ಹೋದ ಮತ್ತೊಬ್ಬರಿಗೆ ₹5,000 ಸಿಕ್ಕಿತ್ತು. ಈ ಸುದ್ದಿ ಕೆಲವೇ ಕ್ಷಣಗಳಲ್ಲಿಕಾಳ್ಗಿಚ್ಚಿನಂತೆ ಪಟ್ಟಣದ ತುಂಬಾ ಹರಡಿದ್ದು ಸಾವಿರಾರು ಜನರು ಎಟಿಎಂ ಇರುವ ಸ್ಥಳಕ್ಕೆ ಬಂದು ಹಣ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ADVERTISEMENT

ಈ ಘಟನೆಯನ್ನು ನೋಡಿ ಬ್ಯಾಂಕ್‌ ನೌಕರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷವೇ ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಕೇಂದ್ರಕ್ಕೆ ಬೀಗ ಹಾಕಿ ಜನರನ್ನು ಚದುರಿಸಿದ್ದಾರೆ ಎಂದು ಮಹಾರಾಷ್ಟ್ರದಮಾಧ್ಯಮಗಳು ವರದಿ ಮಾಡಿವೆ.

ಒಂದಕ್ಕೆ ಐದು ಪಟ್ಟು ಹಣ ನೀಡುವ ಮಾಹಿತಿ ತಿಳಿದು ನೂರಾರು ಜನರು ಎಟಿಎಂನಲ್ಲಿ ಹಣ ಬಿಡಿಸಿಕೊಂಡಿದ್ದಾರೆ. ಗ್ರಾಹಕರು ಬಿಡಿಸಿಕೊಂಡ ಹಣ ಅವರ ಖಾತೆಯಿಂದಲೇ ಬಂತೋ ಅಥವಾ ಎಟಿಎಂ ಕೊಟ್ಟಿತೋ ಗೊತ್ತಿಲ್ಲ ಎಂದು ಸ್ಥಳೀಯ ಗುರುಶಾಹಿನ್‌ ಎಂಬುವರು ಹೇಳಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದಾಗಿ ಎಟಿಎಂ ಹೆಚ್ಚುವರಿ ಹಣವನ್ನು ನೀಡುತ್ತಿತ್ತು. ಎಟಿಎಂ ಯಂತ್ರದಲ್ಲಿ ₹ 100 ಮುಖಬೆಲೆಯ ನೋಟುಗಳನ್ನು ಇರಿಸುವ ಜಾಗದಲ್ಲಿ ಸಿಬ್ಬಂದಿ ತಪ್ಪಾಗಿ ₹ 500 ಮುಖಬೆಲೆಯ ನೋಟುಗಳನ್ನು ಇರಿಸಿದ್ದಾರೆ ಎಂದುಬ್ಯಾಂಕ್‌ ಅಧಿಕಾರಿ ಹೇಳಿದ್ದಾರೆ.

ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.