ADVERTISEMENT

ಪ್ರಧಾನಿ ಮೋದಿ ಪ್ರಕಟಿಸಿದ ಮಾತು 2019ರ 'ಗೋಲ್ಡನ್‌ ಟ್ವೀಟ್‌'

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 13:13 IST
Last Updated 10 ಡಿಸೆಂಬರ್ 2019, 13:13 IST
ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ –ಸಂಗ್ರಹ ಚಿತ್ರ
ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ –ಸಂಗ್ರಹ ಚಿತ್ರ   

ನವದೆಹಲಿ:ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿಕೊಂಡಿದ್ದ 'ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌' ಟ್ವೀಟ್‌ ಭಾರತದ 'ಗೋಲ್ಡನ್‌ ಟ್ವೀಟ್‌ ಆಫ್‌ 2019' ಎಂದು ಟ್ವಿಟರ್‌ ಘೋಷಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ, 'ಭಾರತ ಮತ್ತೆ ಗೆದ್ದಿದೆ. ಜತೆಯಾಗಿ ನಾವು ಬಲಿಷ್ಠ ಮತ್ತು ಒಗ್ಗಟಿನ ಭಾರತ ಕಟ್ಟೋಣ' ಎಂದು ಟ್ವೀಟಿಸಿದ್ದರು. ಆ ಟ್ವೀಟ್‌ 4,20,000 ಸಾವಿರಕ್ಕೂ ಅಧಿಕ ಲೈಕ್‌ಗಳು ಹಾಗೂ 1,17,100ಕ್ಕೂ ಹೆಚ್ಚು ಬಾರಿ ಮರುಹಂಚಿಕೆಯಾಗಿದೆ. 2019ರ ಮೇ 23ರಂದು ಮಧ್ಯಾಹ್ನ 2.42ಕ್ಕೆ ಟ್ವೀಟ್‌ ಪ್ರಕಟಗೊಂಡಿತ್ತು. ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿರುವ ಸಮಯದಲ್ಲಿ ಪ್ರಧಾನಿ ಮೋದಿ ಅವರ ಹಿಂದಿನ ಟ್ವೀಟ್‌ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.‌

ADVERTISEMENT

2019ರ ಲೋಕಸಭಾ ಚುನಾವಣೆ (#loksabhaelections2019) ಟ್ಯಾಗ್‌ ಮೂಲಕ ಅತಿ ಹೆಚ್ಚು ಟ್ವೀಟ್‌ಗಳು ಪ್ರಕಟಗೊಂಡಿವೆ. ಕ್ರೀಡಾ ವಲಯದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮಾಡಿದ್ದ ಟ್ವೀಟ್‌ ಅತಿ ಹೆಚ್ಚು ಮರುಹಂಚಿಕೆಯಾಗಿರುವ ಟ್ವೀಟ್‌ ಆಗಿದೆ. ಮಹೇಂದ್ರ ಸಿಂಗ್‌ ಧೋನಿ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿದ್ದ ಕೊಹ್ಲಿ, '...ನೀವು ನಮ್ಮೆಲ್ಲರಿಗೂ ದೊಡ್ಡಣ್ಣನಂತೆ, ಯಾವತ್ತಿಗೂ ನೀವೇ ನನ್ನ ಕ್ಯಾಪ್ಟನ್‌..' ಎಂದು ಬರೆದುಕೊಂಡಿದ್ದರು. ಈ ಟ್ವೀಟ್‌ ಕ್ರೀಡಾಭಿಮಾನಿಗಳು ಹಾಗೂ ಧೋನಿ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿತ್ತು.

ಭಾರತದಲ್ಲಿ ಟ್ವೀಟ್‌ಗಳ ಮೂಲಕ ಚರ್ಚೆಯಾದ ಮತ್ತೊಂದು ಮಹತ್ತರ ಕಾರ್ಯಕ್ರಮ 'ಚಂದ್ರಯಾನ2'. ಇಸ್ರೊದ ಚಂದ್ರಯಾನ2 (#chandrayaan2) ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರೀ ಟ್ವೀಟ್‌ಗಳು ಪ್ರಕಟಗೊಂಡಿದ್ದವು.

ಮನರಂಜನಾ ಕ್ಷೇತ್ರದಲ್ಲಿ ತಮಿಳು ನಟ ವಿಜಯ್‌ ಅವರ ಬಿಗಿಲ್‌ (#bigil) ಸಿನಿಮಾ ಪೋಸ್ಟರ್‌ ಅತಿ ಹೆಚ್ಚು ಹಂಚಿಕೆಯಾಗಿತ್ತು. ಅದಕ್ಕೆ ಅತಿ ಹೆಚ್ಚು ಪ್ರತಿಕ್ರಿಯೆಗಳು ಹಾಗೂ ಪೋಸ್ಟ್‌ಗಳು ಮರುಹಂಚಿಕೆ ಆಗಿದ್ದವು.

ಮಹಿಳಾ ರಾಜಕಾರಣಿಗಳ ಪೈಕಿ ಸ್ಮೃತಿ ಇರಾನಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ದಿ.ಸುಷ್ಮಾ ಸ್ವರಾಜ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಟ್ವಿಟರ್‌ನಲ್ಲಿ ಹೆಚ್ಚು ಗಮನ ಸೆಳೆದವರಾಗಿದ್ದಾರೆ.

ಈ ವರ್ಷ ಟ್ವಿಟರ್‌ನ 10 ಪ್ರಮುಖ ಹ್ಯಾಷ್‌ಟ್ಯಾಗ್‌ಗಳು;#loksabhaelections2019, #chandrayaan2, #cwc19, #pulwama, #article370, #bigil, #diwali, #avengersendgame, #ayodhyaverdict, #eidmubarak.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.