ADVERTISEMENT

13ರ ಒಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ: ಅರ್ಜಿ ವಿಚಾರಣೆಗೆ SC ನಕಾರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 14:44 IST
Last Updated 4 ಏಪ್ರಿಲ್ 2025, 14:44 IST
   

ನವದೆಹಲಿ: 13 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧಿಸಬೇಕೇ ಅಥವಾ ಬೇಡವೇ ಎಂಬುದು ನೀತಿ ನಿರೂಪಣೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ನಿರಾಕರಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ಆರ್. ಗವಾಯಿ ಹಾಗೂ ನ್ಯಾ. ಅಗಸ್ಟಿನ್‌ ಜಾರ್ಜ್‌ ಮಾಸಿ ಅವರಿದ್ದ ಪೀಠವು, ಸಂಬಂಧಿತ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಅರ್ಜಿದಾರರಿಗೆ ನೀಡಿತು.

ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಪರಿಣಾಮಗಳನ್ನು ಬೀರುವ ಸಾಮಾಜಿಕ ಮಾಧ್ಯಮಗಳ ವೀಕ್ಷಣೆಯಿಂದ 13 ವರ್ಷದೊಳಗಿನವರನ್ನು ದೂರವಿಡಲು ಬೆರಳಚ್ಚು ಪಡೆಯುವುದು ಅಥವಾ ಬೇರೆ ಯಾವುದೇ ತಾಂತ್ರಿಕ ವ್ಯವಸ್ಥೆ ಅಳವಡಿಸಿಕೊಳ್ಳುವ ಕುರಿತು ಅರ್ಜಿಯಲ್ಲಿ ಕೋರಲಾಗಿತ್ತು.

ADVERTISEMENT

‘ಇದು ನೀತಿಯ ವಿಷಯವಾಗಿರುವುದರಿಂದ ಸಂಸತ್ತಿಗೆ ಕಾನೂನು ರಚಿಸುವಂತೆ ಕೋರಿ ಅರ್ಜಿ ಸಲ್ಲಿಸಬಹುದು. ಈ ಕಾರಣದಿಂದ ಅರ್ಜಿಯನ್ನು ವಿಲೇವಾರಿ ಮಾಡುತ್ತಿದ್ದೇವೆ. ಒಂದೊಮ್ಮೆ ಅರ್ಜಿದಾರರು ಸಂಸತ್ತಿಗೆ ಮನವಿ ಸಲ್ಲಿಸಿದರೆ, ಅದಕ್ಕೆ ಎಂಟು ವಾರಗಳ ಗಡುವು ಎಂದು ಪರಿಗಣಿಸಬೇಕು’ ಎಂದು ಅರ್ಜಿದಾರರ ಪರ ವಕೀಲರಿಗೆ ಪೀಠ ಸಲಹೆ ನೀಡಿತು.

ಝೆಪ್ ಎಂಬ ಪ್ರತಿಷ್ಠಾನವು ಈ ಕುರಿತಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಅರ್ಜಿ ಸಲ್ಲಿಸಿತ್ತು. ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣೆ ಕಾನೂನಿನಡಿ 13ರಿಂದ 18ರ ವಯೋಮಾನದ ಮಕ್ಕಳು ಸಾಮಾಜಿಕ ಮಾಧ್ಯಮ ವೀಕ್ಷಿಸಲು ರಿಯಲ್ ಟೈಂ ನಿಗಾ ಇಡುವ ಸಲಕರಣೆಗಳು, ವಯೋಮಾನ ದೃಢಪಡಿಸುವ ಕಠಿಣ ಕ್ರಮ, ಪಾಲಕರ ನಿಯಂತ್ರಣ ಇರಬೇಕು ಎಂದು ಕೋರಲಾಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ಭಾರತದ 46.2 ಕೋಟಿ ಜನರು ಇದ್ದಾರೆ. ಇದು ಇಡೀ ದೇಶದ ಶೇ 32.2 ರಷ್ಟು ಜನಸಂಖ್ಯೆಯಾಗಿದೆ. ಮೊಬೈಲ್ ಸಂಪರ್ಕವು ದೇಶದಲ್ಲಿ ಶೇ 78ರಷ್ಟಿದೆ. ಇದರಲ್ಲಿ ಶೇ 30ರಷ್ಟು ಬಳಕೆದಾರರು 18 ವರ್ಷಕ್ಕಿಂತ ಕೆಳಗಿನವರು. ಶೇ 17ರಷ್ಟು ಬಳಕೆದಾರರು 9ರಿಂದ 17 ವಯೋಮಾನದವರಾಗಿದ್ದು ಇವರು ನಿತ್ಯ ಸರಾಸರಿ ಆರು ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮ ಅಥವಾ ಗೇಮಿಂಗ್‌ಗಳಲ್ಲಿ ತೊಡಗಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಅರ್ಜಿಯಲ್ಲಿರುವ ಪ್ರಮುಖ ಅಂಶಗಳು

  • ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳು ಪರಿಣಾಮ ಬೀರುತ್ತವೆ. ಹೀಗಾಗಿ ಇವುಗಳನ್ನು ಬಳಸುವವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು

  • ಮಕ್ಕಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದನ್ನು ನಿಯಂತ್ರಿಸಬೇಕು

  • ಮಕ್ಕಳ ರಕ್ಷಣಾ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗುವ ಸಾಮಾಜಿಕ ಮಾಧ್ಯಮಗಳಿಗೆ ದಂಡ ವಿಧಿಸುವ ಅವಕಾಶ ಇರಬೇಕು

  • ದೇಶದಲ್ಲಿ ಮಕ್ಕಳಲ್ಲಿ ಖಿನ್ನತೆ ಆತಂಕ ಹೆಚ್ಚುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಹಾಗೂ ಕುಸಿಯುತ್ತಿರುವ ಮಾನಸಿಕ ಆರೋಗ್ಯದ ನಡುವೆ ಇರುವ ನಂಟು ಕುರಿತು ಈ ವಿದ್ಯಮಾನಗಳು ಹೇಳುತ್ತವೆ

  • ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪಾಲಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ದೇಶವ್ಯಾಪಿ ಡಿಜಿಟಲ್ ಸಾಕ್ಷರತಾ ಅಭಿಯಾನ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.