ADVERTISEMENT

ಒಪ್ಪಿಗೆ ಇಲ್ಲದೆ ಇತರರ ಖಾಸಗಿ ಚಿತ್ರ ಹಂಚಿಕೊಳ್ಳುವುದಕ್ಕೆ ಟ್ವಿಟರ್‌ನಿಂದ ನಿಷೇಧ

ಏಜೆನ್ಸೀಸ್
Published 1 ಡಿಸೆಂಬರ್ 2021, 4:14 IST
Last Updated 1 ಡಿಸೆಂಬರ್ 2021, 4:14 IST
ಟ್ವಿಟರ್
ಟ್ವಿಟರ್   

ಸ್ಯಾನ್ ಫ್ರಾನ್ಸಿಸ್ಕೊ: ಪ್ರಸಿದ್ಧ ಜಾಲತಾಣ ಟ್ವಿಟರ್ ಮಂಗಳವಾರ ಹೊಸ ನಿಯಮಗಳನ್ನು ಪರಿಚಯಿಸಿದ್ದು, ಒಪ್ಪಿಗೆ ಇಲ್ಲದೆ ಇತರರ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳದಂತೆ ನಿರ್ಬಂಧಿಸಲಾಗಿದೆ. ಸಿಇಒ ಬದಲಾವಣೆಯಾದ ಒಂದು ದಿನದಲ್ಲೇ ಟ್ವಿಟರ್ ತನ್ನ ನೀತಿಯನ್ನು ಬಿಗಿಗೊಳಿಸಿದೆ.

ಹೊಸ ನಿಯಮಗಳ ಅಡಿಯಲ್ಲಿ, ಸಾರ್ವಜನಿಕವಾಗಿ ಪ್ರಸಿದ್ಧವಲ್ಲದ ಜನರು, ಅನುಮತಿ ಇಲ್ಲದೆ ಪೋಸ್ಟ್ ಮಾಡಲಾಗಿರುವ ತಮ್ಮ ಚಿತ್ರಗಳು ಅಥವಾ ವಿಡಿಯೊಗಳನ್ನು ತೆಗೆದುಹಾಕಲು ಟ್ವಿಟರ್‌ಗೆ ಮನವಿ ಸಲ್ಲಿಸಬಹುದು.

ಈ ನೀತಿಯು ‘ಖ್ಯಾತನಾಮರು ಅಥವಾ ಮಾಧ್ಯಮದ ಪೋಸ್ಟ್‌ಗಳು, ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಹಂಚಿಕೊಂಡ ಟ್ವೀಟ್ ಪಠ್ಯ ಅಥವಾ ಸಾರ್ವಜನಿಕ ಚರ್ಚೆಗೆ ಮೌಲ್ಯವನ್ನು ಸೇರಿಸುವ ಕಂಟೆಂಟ್‌ಗಳಿಗೆ ಅನ್ವಯಿಸುವುದಿಲ್ಲ’ ಎಂದು ಟ್ವಿಟರ್ ಹೇಳಿದೆ.

ADVERTISEMENT

ಬಳಕೆದಾರರು ಯಾವುದೇ ಕಂಟೆಂಟ್ ಹಂಚಿಕೊಂಡಾಗಲೂ ನಾವು ಆ ಸಂದರ್ಭದ ಪರಿಶೀಲನೆ ನಡೆಸಲು ಪ್ರಯತ್ನಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ, ನಾವು ಚಿತ್ರಗಳು ಅಥವಾ ವಿಡಿಯೊಗಳನ್ನು ಉಳಿಸಲು ಅನುಮತಿಸುತ್ತೇವೆ ಎಂದು ಕಂಪನಿ ತಿಳಿಸಿದೆ.

ವಿಶೇಷವಾಗಿ ದುರುದ್ದೇಶಪೂರಿತ ಉದ್ದೇಶಗಳಿಂದ ಮೂರನೇ ವ್ಯಕ್ತಿ ಪೋಸ್ಟ್ ಮಾಡಿದ ಚಿತ್ರಗಳು ಅಥವಾ ಡೇಟಾಗಳ ಬಗ್ಗೆ ಸಾಮಾಜಿಕ ಜಾಲತಾಣಗಳಿಗೆ ಮೇಲ್ಮನವಿ ಸಲ್ಲಿಸುವ ಇಂಟರ್ನೆಟ್ ಬಳಕೆದಾರರ ಹಕ್ಕಿನ ಕುರಿತಂತೆ ವರ್ಷಗಳಿಂದ ಚರ್ಚೆ ನಡೆಯುತ್ತಿದೆ.

ವ್ಯಕ್ತಿಯ ಫೋನ್ ಸಂಖ್ಯೆ ಅಥವಾ ವಿಳಾಸದಂತಹ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನು ಟ್ವಿಟರ್ ಈಗಾಗಲೇ ನಿಷೇಧಿಸಿದೆ. ಆದರೆ, ಕಿರುಕುಳ, ಬೆದರಿಕೆ ಮತ್ತು ವ್ಯಕ್ತಿಗಳ ಗುರುತುಗಳನ್ನು ಬಹಿರಂಗಪಡಿಸುವ ವಿಷಯದ ಬಳಕೆಯ ಬಗ್ಗೆ ಕಳವಳ ಹೆಚ್ಚಿದೆ ಎಂದು ಟ್ವಿಟರ್ ಹೇಳಿದೆ.

‘ಮಹಿಳೆಯರು, ಕಾರ್ಯಕರ್ತರು, ಭಿನ್ನಮತೀಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರ ಮೇಲೆ ಅನುಚಿತ ಟ್ವಿಟರ್‌ಗಳ ಪರಿಣಾಮ’ಇದೆ ಎಂದು ಕಂಪನಿಯು ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.