ADVERTISEMENT

ಬ್ಯಾಕ್ಟೀರಿಯಾಲಜಿ ಅರಿವಿಗೆ ಹಲವು ತಂತ್ರಾಂಶಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 19:31 IST
Last Updated 18 ಸೆಪ್ಟೆಂಬರ್ 2019, 19:31 IST
   

ಸುತ್ತಲಿನ ಪರಿಸರದಲ್ಲಿ ಎಲ್ಲ ಬಗೆಯ ಬ್ಯಾಕ್ಟೀರಿಯಾಗಳು ಇರುತ್ತವೆ. ಮಣ್ಣು, ಗಾಳಿ, ನೀರು ಅಷ್ಟೇ ಅಲ್ಲ ಮನುಷ್ಯರ ದೇಹದಲ್ಲಿಯೂ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಕೆಲವು ಆರೋಗ್ಯದ ದೃಷ್ಟಿಯಿಂದ ಪೂರಕವಾದರೆ, ಹಲವು ರೋಗಗಳನ್ನು ತಂದೊಡ್ಡುವಷ್ಟು ಮಾರಕವಾಗಿರುತ್ತವೆ.

ಪತ್ರಹರಿತುಇರದ, ಸರಳ ನ್ಯೂಕ್ಲಿಯಸ್ ಇರುವ, ಸುಲಭ ವಿದಳನೆಯ ಮೂಲಕ ಕ್ಷಿಪ್ರವಾಗಿ ವೃದ್ಧಿಸುವ, ಚಲನಶೀಲವಾಗಿರುವ, ಮತ್ತು ಕೆಲವು ಲೈಂಗಿಕವಾಗಿ ಸಂತಾನೋತ್ಮತ್ತಿ ಮಾಡುವ ಏಕ/ಬಹುಕೋಶಿಕಾ ಜೀವಿಗಳ ಸಮುದಾಯವನ್ನು ಏಕಾಣುಜೀವಿ ಎನ್ನಲಾಗುತ್ತದೆ. ಇದನ್ನು ಅಧ್ಯಯನ ಮಾಡುವ ವಿಜ್ಞಾನಕ್ಕೆಬ್ಯಾಕ್ಟೀರಿಯಾಲಜಿ (ಏಕಾಣುಜೀವಿ ವಿಜ್ಞಾನ) ಎಂದು ಕರೆಯಲಾಗುತ್ತದೆ.

ಬ್ಯಾಕ್ಟೀರಿಯಾಗಳ ಶಾಸ್ತ್ರೀಯ ಅಧ್ಯಯನವನ್ನು ಮೊದಲ ಬಾರಿಗೆ ನಡೆಸಿದ ವಿಜ್ಞಾನಿ ಆಂಟನ್ ವಾನ್ ಲೀವನ್‌ ಹಾಕ್. ಬ್ಯಾಕ್ಟೀರಿಯಾ ಎಂಬ ಪದವನ್ನು ಬಳಕೆಗೆ ತಂದವರು ಎರೆನ್ ಬರ್ಗ್ ಎಂಬ ವಿಜ್ಞಾನಿ. ಫರ್ಡಿನ್ಯಾಂಡ್ ಕೋನ್, ರಾಬರ್ಟ್ ಕೋಚ್ ಮತ್ತು ಲೂಯಿಸ್ ಪಾಶ್ಚರ್ ಈ ‌ ವಿಜ್ಞಾನವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದರು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಬಳಕೆಗೆ ತಂದರು.

ADVERTISEMENT

ಬ್ಯಾಕ್ಟೀರಿಯಾಲಜಿ ಕಲಿಕೆಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ಕೆಲವು ಉಪಯುಕ್ತ ಕಿರುತಂತ್ರಾಂಶಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವುದರ ಬಗ್ಗೆ ತಿಳಿದುಕೊಳ್ಳೋಣ.

Bacteriology: ಬ್ಯಾಕ್ಟೀರಿಯಾಲಜಿ ಕಲಿಕೆಗೆ ಬೇಕಾದ ಅನೇಕ ಕಲಿಕಾ ಸಂಪನ್ಮೂಲಗಳನ್ನು ಒಳಗೊಂಡ ಆ್ಯಪ್. ಬ್ಯಾಕ್ಟೀರಿಯ ಕೋಶ, ಬ್ಯಾಕ್ಟೀರಿಯಗಳ ಉತ್ಪತ್ತಿ, ಅವುಗಳ ವಿಧಗಳು, ಆಕಾರ, ಅವುಗಳ ಜೀವನಕ್ರಮ, ಸೂಕ್ಷ್ಮಜೀವಿ ಮತ್ತು ಜೀವಿಗಳ ನಿಯಂತ್ರಣ, ಅವುಗಳ ನಿಯಂತ್ರಣಕ್ಕೆ ಭೌತಿಕ ಮತ್ತು ರಾಸಾಯನಿಕ ವಿಧಾನಗಳನ್ನು ಸಂವಾದಾತ್ಮಕವಾಗಿ ತಿಳಿಸುತ್ತದೆ. ಇದನ್ನು Mobile Seva ಎಂಬ ಕಂಪನಿ ರಚಿಸಿದೆ.

Bacteriology Mnemonics: ಬ್ಯಾಕ್ಟೀರಿಯಾಲಜಿ ಕುರಿತು ಉಪಯುಕ್ತ ಮಾಹಿತಿಯನ್ನು ತಿಳಿಸುವುದಲ್ಲದೇ, ಸದಾ ನೆನಪಿನಲ್ಲಿಟ್ಟುಕೊಳ್ಳಲು ಸಹಕರಿಸುವ ಆ್ಯಪ್. ಇಂಗ್ಲಿಷ್ ವರ್ಣಮಾಲೆಯ ಪ್ರಕಾರ ಬ್ಯಾಕ್ಟೀರಿಯಾಲಜಿಗೆ ಸಂಬಂಧಿಸಿದ ವಿಷಯಗಳನ್ನು ಮತ್ತು ಕೆಲವು ಉಪಯುಕ್ತ ಚಿತ್ರಗಳನ್ನು ಅಳವಡಿಸಿದ್ದಾರೆ. motiveapps ಎಂಬ ಸಂಸ್ಥೆ ರಚಿಸಿದೆ.

Fundamentals of Bacteriology:ಚಾರ್ಲ್ಸ್ ಬ್ರಾಡ್ಫೀಲ್ಡ್ ಮೊರೆ ಅವರು ರಚಿಸಿದ ಮೂಲಭೂತ ಬ್ಯಾಕ್ಟೀರಿಯಾಲಜಿ ಎಂಬ ಪುಸ್ತಕವನ್ನು ಆಧಾರಿಸಿ ರಚಿಸಲಾಗಿದ್ದು, ಬ್ಯಾಕ್ಟೀರಿಯಾಲಜಿಯ ಬಹುತೇಕ ಕಲಿಕಾ ಸಂಪನ್ಮೂಲಗಳನ್ನು ಒಳಗೊಂಡಿದೆ. ಆಂಟನ್ ವಾನ್ ಲೀವನ್ಹೋಕ್ ಅವರ ಜೀವನ ಚರಿತ್ರೆ ಹಾಗೂ ಅವರ ಸಂಶೋಧನೆ ಕುರಿತು ತಿಳಿಯಬಹುದು. ಈ ಆ್ಯಪ್ ಅನ್ನು Komakuro ಎಂಬ ಸಂಸ್ಥೆ ರಚಿಸಿದೆ.

Bacteria Identification Made Easy | Free & Offline: ಬ್ಯಾಕ್ಟೀರಿಯಾ ಎಂದರೇನು, ಅವುಗಳಲ್ಲಿನ ವಿಧಗಳು, ರಚನೆ, ಅವುಗಳ ಪ್ರಭಾವ ಮತ್ತು ಪರಿಣಾಮಗಳು ಹಾಗೂ ಅವುಗಳನ್ನು ಹೇಗೆ ಗುರುತಿಸಬೇಕು ಎಂಬುವುದನ್ನು ತಿಳಿಸುವ ಆ್ಯಪ್. ಧನಾತ್ಮಕ ಮತ್ತು ನಕಾರಾತ್ಮಕ ಬ್ಯಾಕ್ಟೀರಿಯಾಗಳ ಮಾಹಿತಿ, ವೈದ್ಯಕೀಯವಾಗಿ ಪ್ರಮುಖವಾದ ಬ್ಯಾಕ್ಟೀರಿಯಾಗಳ ಮಾಹಿತಿ, ಬ್ಯಾಕ್ಟೀರಿಯಾಗಳನ್ನು ಗುರುತಿಸಲು ಹಾಗೂ ಪ್ರತ್ಯೇಕಿಸಲು ನಡೆಸುವ ಪ್ರಯೋಗ ಮತ್ತು ಜೀವರಾಸಾಯನಿಕ ಪರೀಕ್ಷೆಗಳ ಮಾಹಿತಿಯನ್ನು ಸಹ ಒಳಗೊಂಡಿದೆ. Rishikeshav Acharya ಎಂಬುವವರು ಇದನ್ನು ರಚಿಸಿದ್ದಾರೆ.

Story of Louis Pasteur: ವಿವಿಧ ರೂಪದ ಸೂಕ್ಷ್ಮಜೀವಿಗಳನ್ನು ಕಂಡುಹಿಡಿದು ಅವುಗಳ ಉಪಯೋಗ ಮತ್ತು ಪರಿಣಾಮಗಳನ್ನು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅವುಗಳ ಉಪಯುಕ್ತತೆಯನ್ನು ಜಗತ್ತಿಗೆ ತಿಳಿಸುವುದರ ಮೂಲಕ ಅದ್ಭುತ ಕೊಡುಗೆ ನೀಡಿದ ಲೂಯಿಸ್ ಪಾಶ್ಚರ್ ಅವರ ಜೀವನ ಮತ್ತು ಸಂಶೋಧನೆಯನ್ನು ಕುರಿತು ಮಾಹಿತಿ ನೀಡುವ ಆ್ಯಪ್. ವ್ಯಾಕ್ಸಿನೇಷನ್, ಸೂಕ್ಷ್ಮಜೀವಿಗಳ ಹುದುಗುವಿಕೆ ಮತ್ತು ಪಾಶ್ಚರೀಕರಣದ ತತ್ವಗಳನ್ನು ಆವಿಷ್ಕಾರಿಸಿದ ಬಗೆಯನ್ನು ತಿಳಿಸುತ್ತದೆ. Programming Is Fun ಎಂಬ ಸಂಸ್ಥೆ ರಚಿಸಿದ ಆ್ಯಪ್ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.