ADVERTISEMENT

ಸಮುದ್ರಜಲದ ಶುದ್ಧಿಗೆ ಗ್ರಾಫೀನ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 23:45 IST
Last Updated 11 ಅಕ್ಟೋಬರ್ 2022, 23:45 IST
   

ವಿಶ್ವದಾದ್ಯಂತ ಶುದ್ಧ ಕುಡಿಯುವ ನೀರಿನ ಕೊರತೆ ಹೆಚ್ಚುತ್ತಿದೆ. ಜೊತೆಗೆ ಅನಾವೃಷ್ಟಿ ಮತ್ತು ಜಲಮೂಲಗಳ ಮಾಲಿನ್ಯಗಳೂ ಹೆಚ್ಚುತ್ತಿವೆ. ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ನೂರಾರು ಕೋಟಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ವಿಜ್ಞಾನಿಗಳು ಗ್ರಾಫೀನ್ ಆಕ್ಸೈಡ್‍ನಿಂದ ತಯಾರಿಸಲಾಗಿರುವ ವಿಶೇಷ ಜರಡಿಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಸಮುದ್ರ ನೀರಿನ್ನು ಈ ಜರಡಿಯಲ್ಲಿ ಶೋಧಿಸಿದಾಗ ಶುದ್ಧ ಕುಡಿಯುವ ನೀರು ದೊರೆಯುವುದನ್ನು ವಿಜ್ಞಾನಿಗಳು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದಾರೆ. ಒಂದು ನ್ಯಾನೋಮೀಟರ್‌ಗಿಂತ ಕಡಿಮೆ ವ್ಯಾಸದ ರಂಧ್ರಗಳಿರುವ ಈ ಜರಡಿ, ಸಮುದ್ರದ ನೀರಿನಲ್ಲಿ ನಿರಂತರವಾಗಿ ತನ್ನ ಕೆಲಸ ಮಾಡಲು ಸಾಧ್ಯವಾಗುವಂತೆ, ಈ ಜರಡಿಗೆ ‘ಎಫಾಕ್ಸಿ ರೆಸಿನ್’ ಲೇಪನವನ್ನು ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ಗ್ರಾಫೀನ್ ಆಕ್ಸೈಡ್ ತಯಾರಿಸುವ ವಿಧಾನವನ್ನೂ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನವನ್ನು ಬಳಸಿ ಜರಡಿಯನ್ನು ತಯಾರಿಸಿದರೆ ಖರ್ಚು ಕಡಿಮೆಯಾಗುತ್ತದೆ ಎನ್ನುತ್ತಿದ್ದಾರೆ, ವಿಜ್ಞಾನಿಗಳು. ಸಮುದ್ರದ ನೀರಿನಿಂದ ಕುಡಿಯುವ ನೀರನ್ನು ಪಡೆಯಲು ಹಲವಾರು ವಿಧಾನಗಳು ಬಳಕೆಯಲ್ಲಿವೆ. ಆದರೆ ಇಂತಹ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಹೆಚ್ಚು ಹಣ ಬೇಕಾಗುತ್ತದೆ. ಹೀಗಾಗಿ ಇಂತಹ ಶುದ್ಧೀಕರಣಗೊಂಡ ನೀರಿನ ಬೆಲೆ ದುಬಾರಿಯಾಗುತ್ತದೆ. ಸಮುದ್ರದ ನೀರನ್ನು ಗ್ರಾಫೀನ್ ಆಕ್ಸೈಡ್ ಜರಡಿಯನ್ನು ಬಳಸಿ ಶುದ್ಧ ಕುಡಿಯುವ ನೀರನ್ನಾಗಿಸುವ ಈ ವಿಧಾನದಲ್ಲಿ ದೊರೆಯುವ ಕುಡಿಯುವ ನೀರಿನ ಬೆಲೆ ಕಡಿಮೆ ಇರುತ್ತದೆ ಎಂಬುದು ವಿಜ್ಞಾನಿಗಳ ಭರವಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT