ADVERTISEMENT

ಇತಿಹಾಸ ಕಲಿಕೆಗೆ ಕಿರುತಂತ್ರಾಂಶಗಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 7:20 IST
Last Updated 29 ಆಗಸ್ಟ್ 2019, 7:20 IST
google earth
google earth   

ಇತಿಹಾಸವು ಮಾನವ ಬದುಕಿನೊಂದಿಗೆ ಹಾಸುಹೊಕ್ಕಾದ ಗತಕಾಲದ ಘಟನೆಗಳ ದಾಖಲೆ. ಗತಕಾಲದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ. ಕ್ರಮಬದ್ಧವಾದ ಸಂಶೋಧನಾ ವಿಚಾರ, ಅಧ್ಯಯನ ವಿಷಯ ಮತ್ತು ಇಡೀ ಸಮಾಜವನ್ನು ಅರ್ಥೈಸುವ ಮಾಧ್ಯಮ ಎಂದೂ ಹೇಳಬಹುದು. ಹೆರೋಡೊಟಸ್ ಮತ್ತು ಥೂಸಿಡೈಡ್ಸರು ಚರಿತ್ರೆಯ ದಾಖಲೀಕರಣದ ಪ್ರಕ್ರಿಯೆಗೆ ಹೊಸ ದೃಷ್ಟಿಕೋನವನ್ನು ತಂದುಕೊಟ್ಟರು. ಇವರಲ್ಲಿ ಹೆರೋಡೊಟಸ್ ಮೊದಲಿಗನಾಗಿದ್ದರಿಂದ ಅವನನ್ನು ಇತಿಹಾಸದ ಪಿತಾಮಹಾ ಎಂದು ಗುರುತಿಸಲಾಗುತ್ತದೆ.

ಇತಿಹಾಸದ ವಿದ್ಯಾರ್ಥಿಗಳಿಗೆ ರಾಜರ ಆಳ್ವಿಕೆ, ಅವರ ಸಾಮ್ರಾಜ್ಯದ ಗಡಿಗಳು, ನಕ್ಷೆಗಳು, ದೇಶಗಳ ಗಡಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮತ್ತು ಪ್ರಾಚೀನಕಾಲದಿಂದ ಆಧುನಿಕ ಕಾಲದವರೆಗಿನ ಇತಿಹಾಸಕ್ಕೆ ಸಂಬಂಧಪಟ್ಟಂತೆ ಕಿರುತಂತ್ರಾಂಶಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿಕಂಡುಬರುತ್ತವೆ. ಅವುಗಳಲ್ಲಿ ಕೆಲವು ಕಿರುತಂತ್ರಾಂಶಗಳ ಬಗ್ಗೆ ನೋಡೋಣ.

History in Kannada: ಕರ್ನಾಟಕದ ಇತಿಹಾಸವನ್ನು ಒಳಗೊಂಡ ಆ್ಯಪ್. ಕನ್ನಡ ಭಾಷೆಯಲ್ಲಿ ಕರ್ನಾಟಕದ ಇತಿಹಾಸ, ಪ್ರಮುಖ ರಾಜರು, ವಂಶ, ಪ್ರಮುಖ ಘಟನೆಗಳು, ಯುದ್ಧಗಳು, ಆಡಳಿತ, ಭಾಷೆ, ಸಾಮಾಜಿಕ ಬದಲವಾಣೆ, ಐತಿಹಾಸಿಕ ಕ್ರಾಂತಿಗಳು ಮತ್ತು ಮುಂತಾದ ಮಾಹಿತಿಯನ್ನು ಒಳಗೊಂಡಿದೆ. ಕರ್ನಾಟಕದ ಇತಿಹಾಸದ ಜೊತೆಗೆ ಪ್ರಾಚೀನ ಭಾರತದ ಇತಿಹಾಸ, ಧರ್ಮಗಳು, ಗುಪ್ತರು, ಮೌರ್ಯರು, ಕುಶಾಣರು ಹೀಗೆ ಹಲವಾರು ವಂಶಗಳ ಆಡಳಿತ ಕಾಲದ ಇತಿಹಾಸವನ್ನು ತಿಳಿಯಬಹುದು. KAS, IAS, SDA, FDA, UPSC, KPSC ಮತ್ತು ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ರಚಿಸಲಾಗಿದೆ. Team Ekalavya ಎಂಬ ಸಂಸ್ಥೆ ಇದನ್ನು ರಚಿಸಿದೆ.

ADVERTISEMENT

History Timeline: ಪ್ರಪಂಚದ ಇತಿಹಾಸವನ್ನು ಕಾಲಮಾನ ಪ್ರಕಾರ ತಿಳಿಸಿಕೊಡುವ ಆ್ಯಪ್. ಪ್ರಾಚೀನ ಕಾಲದಿಂದ ಹಿಡಿದು 21ನೇ ಶತಮಾನದವರೆಗೆ ಕಾಲಾನೂಕ್ರಮದಲ್ಲಿ ಪ್ರಪಂಚದ ಇತಿಹಾಸ, ಪ್ರಮುಖ ಘಟನೆಗಳು, ದೇಶ, ಪ್ರಸಿದ್ಧ ಯುದ್ಧಗಳು, ಪ್ರಮುಖ ನಾಯಕರ ಮಾಹಿತಿಯನ್ನು ನೀಡುತ್ತದೆ. ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ತತ್ವಶಾಸ್ತ್ರ, ಮಾನವಶಾಸ್ತ್ರ ವಿಷಯಗಳ ಮಾಹಿತಿಯೂ ಲಭ್ಯ. TIMLEG ಎಂಬ ಸಂಸ್ಥೆ ಇದನ್ನು ರಚಿಸಿದೆ.

World History Offline: ಪ್ರಪಂಚ ಇತಿಹಾಸವನ್ನು ತಿಳಿಸಿಕೊಡುವ ಪುಸ್ತಕ ರೂಪದ ಆ್ಯಪ್. ಪ್ರಾಚೀನ ಇತಿಹಾಸದಿಂದ ಹಿಡಿದು ಈವರೆಗಿನ ಇತಿಹಾಸ ಕಲಿಕೆಗೆ ಅಗತ್ಯವಾಗಿರುವ ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು ಎಂಟು ವಿಭಾಗವಿದ್ದು, ಪ್ರಾಚೀನ ಇತಿಹಾಸ, ಮಧ್ಯಕಾಲೀನ ಇತಿಹಾಸ ಮತ್ತು ಆಧುನಿಕ ಇತಿಹಾಸವನ್ನು ಕುರಿತು ಕಲಿಯಬಹುದು. ಪ್ರಸ್ತುತ ಚರಿತ್ರೆಯ ಘಟನೆಯ ಜೊತೆಗೆ ದೈನಂದಿನ ಇತಿಹಾಸದ ಪ್ರಮುಖ ಸಂಗತಿಗಳನ್ನು ತಿಳಿಸುತ್ತದೆ. ಆಫ್‌ಲೈನ್‌ ನಲ್ಲಿ ಕಾರ್ಯನಿರ್ವಹಿಸುವ ಈ ಆ್ಯಪ್ ಅನ್ನು VD ಎಂಬ ಸಂಸ್ಥೆ ರಚಿಸಿದೆ.

Indian History in English: ಭಾರತದ ಸಮಗ್ರ ಇತಿಹಾಸ, ಪ್ರಮುಖ ಘಟನೆಗಳು, ಯುದ್ಧಗಳು, ಕ್ರಾಂತಿಗಳು, ರಾಜವಂಶಗಳು, ಪ್ರಮುಖ ರಾಜರ ಆಡಳಿತ ಹಾಗೂ ಅವರ ಕೊಡುಗೆಗಳು, ಸ್ವತಂತ್ರ ಹೋರಾಟ ಸೇರಿ ಇನ್ನೂ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಉಪಯುಕ್ತವಾದ ಆ್ಯಪ್ ಪುಸ್ತಕ. ಜೊತೆಗೆ ಭೌಗೋಳಿಕ, ಭಾರತದ ವೇದ ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಮುಖ ವ್ಯಕ್ತಿಗಳು, ಸಂಸ್ಕೃತಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮುಂತಾದ ಸಂಗತಿಗಳ ಸಂಪನ್ಮೂಲಗಳನ್ನು ಒಳಗೊಂಡಿದೆ. ಭಾರತದ ಇತಿಹಾಸವನ್ನು ತಿಳಿಸುವ ವಿಶ್ವಕೋಶದಂತಿರುವ ಈ ಆ್ಯಪ್ ಬಳಕೆದಾರರಸ್ನೇಹಿಯಾಗಿದೆ. ಕಲಿಕೆಗೆ ನೆರವಾಗುವ ಪುಟಗಳನ್ನು ಬುಕ್ ಮಾರ್ಕ್ ಮಾಡಿಕೊಳ್ಳುವ ಮತ್ತು ಆಫ್ ಲೈನ್ ನಲ್ಲಿ ಉಪಯೋಗಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. Sudhakar_Kanakaraj ಎಂಬುವವರು ಇದನ್ನು ರಚಿಸಿದ್ದಾರೆ.

Historical Calendar - Events and Quizzes: ಕಾಲಾನುಕ್ರಮದಲ್ಲಿ ಇತಿಹಾಸದ ಘಟನೆಗಳನ್ನು ಮತ್ತು ಇತಿಹಾಸ ಕ್ವಿಜ್‌ಗಳನ್ನು ಒಳಗೊಂಡ ಆ್ಯಪ್. ಪ್ರಪಂಚದ ಇತಿಹಾಸ, ಪ್ರಾಚೀನ ಹಾಗೂ ಆಧುನಿಕ ಪ್ರಮುಖ ಘಟನೆಗಳು, ಇತಿಹಾಸದ ವಿಷಯಗಳನ್ನು ಒಳಗೊಂಡಿದೆ. ವಿಕಿಪೀಡಿಯ ಮತ್ತು ಗೂಗಲ್ ಕ್ಯಾಲೆಂಡರ್ ಸಂಯೋಜನೆಯೊಂದಿಗೆ ಇತಿಹಾಸದ ಪ್ರಮುಖ ಘಟನೆಗಳ ಮಾಹಿತಿಯನ್ನು ನೀಡುತ್ತದೆ. ಕಾಲಾನುಕ್ರಮದಲ್ಲಿ ಇತಿಹಾಸದ ಮಾಹಿತಿಯನ್ನು ಪಡೆಯುವುದರ ಜೊತೆಗೆ ಹಲವು ಕ್ವಿಜ್‌ಗಳನ್ನು ಎದುರಿಸಬಹುದು. ಹುಡುಕುವ ವ್ಯವಸ್ಥೆ, ಆಫ್ ಲೈನ್ ಬಳಕೆ, ತ್ವರಿತವಾಗಿ ಐತಿಹಾಸಿಕ ಘಟನೆಗಳನ್ನು ವೀಕ್ಷಿಸುವ ಸೌಲಭ್ಯ, ಅಗತ್ಯವಾಗಿರುವ ಇತಿಹಾಸದ ಸಂಗತಿಗಳನ್ನು ಸಂಗ್ರಹಿಸುವ ಮತ್ತು ಇತ್ಯಾದಿ ಸೌಲಭ್ಯವನ್ನು ನೀಡಲಾಗಿದೆ. 50ಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಲಭ್ಯವಿರುವ ಈ ಆ್ಯಪ್ ಅನ್ನು Alexandru C. Ene ಎಂಬುವವರು ರಚಿಸಿದ್ದಾರೆ.

Google Earth: ಗೂಗಲ್ ಅರ್ಥ್ ಪ್ರಸಿದ್ಧ ಗೂಗಲ್ ಸಂಸ್ಥೆಯ ಆ್ಯಪ್. ಈ ಗೂಗಲ್ ಅರ್ಥ್ ಮೂಲಕ ವಿಶ್ವದ ಗೋಳ, ನಕಾಶೆ ಮತ್ತು ಭೌಗೋಳಿಕ ಮಾಹಿತಿಯನ್ನು ಪಡೆಯಬಹುದು. ಜತೆಗೆ ಖಂಡ ಮತ್ತು ದೇಶಗಳ ಮಾಹಿತಿ, ದೇಶಗಳ ನಕಾಶೆ, ಗಡಿ, ದೇಶಗಳ ಪ್ರಸಿದ್ಧ ಸ್ಮಾರಕಗಳು, ಐತಿಹಾಸಿಕ ಸ್ಮಾರಕಗಳು, ಪ್ರಸಿದ್ಧ ಕಟ್ಟಡಗಳು ಮತ್ತು ಭೌಗೋಳಿಕ ಪ್ರದೇಶಗಳ ಮಾಹಿತಿಯನ್ನು ನೀಡುತ್ತದೆ. ಇದು ಇತಿಹಾಸ ಕಲಿಕೆಗೆ ಹೆಚ್ಚಿನ ಮಾಹಿತಿಗೆ https://www.google.com/earth/ ನೋಡಿ.
ಇತಿಹಾಸ ಕಲಿಕೆಗೆ ಕೆಲವು ಉಪಯುಕ್ತ ಕಿರುತಂತ್ರಾಂಶಗಳು ಗೂಗಲ್ ಪ್ಲೇಸ್ಟೋರ್ ನಲ್ಲಿ ಕಂಡುಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.