ಮೊಬೈಲ್ ಫೋನ್ ಹೆಚ್ಚು ಸ್ಮಾರ್ಟ್ ಆಗಿದೆ. ಅದೀಗ ನಮ್ಮನ್ನು ಹಿಂಬಾಲಿಸುತ್ತದಷ್ಟೇ ಅಲ್ಲದೆ, ಬೇಕಿದ್ದವರಿಗೆ, ಬೇಡವಾದವರಿಗೂ ನಾವು ಯಾವಾಗ ಎಲ್ಲೆಲ್ಲಾ ಓಡಾಡಿದೆವು, ಎಲ್ಲಿದ್ದೇವೆ ಎಂಬಿತ್ಯಾದಿಯಾಗಿ ನಮ್ಮ ಚಲನವಲನದ ಮಾಹಿತಿಯನ್ನು ತಿಳಿಸಿಬಿಡುತ್ತದೆ ಎಂಬುದು ಎಷ್ಟು ಮಂದಿಗೆ ತಿಳಿದಿದೆ?
ದೈನಂದಿನ ಬದುಕಿನಲ್ಲಿ ಸ್ಮಾರ್ಟ್‌ಫೋನ್ ಒಂದು ಉಪಯುಕ್ತವಾದ ಟೂಲ್ ಆಗಿದ್ದರೂ, ಅದು ನೀವಿರುವ ಸ್ಥಳವೂ (ಲೊಕೇಶನ್) ಸೇರಿದಂತೆ ಹೆಚ್ಚು ಕಡಿಮೆ ನಮ್ಮ ಬಗೆಗಿನ ಎಲ್ಲ ಮಾಹಿತಿಯನ್ನೂ ನಮಗೆ ಗೊತ್ತಿದ್ದು ಮತ್ತು ಗೊತ್ತಾಗದೆಯೂ ಸಂಗ್ರಹಿಸಿಟ್ಟುಕೊಳ್ಳಬಲ್ಲುದು. ಇದಕ್ಕೆ ಕಾರಣ, ನಮ್ಮಲ್ಲಿನ ಅರಿವಿನ ಕೊರತೆ. ಹೊಸ ಫೋನ್ ಖರೀದಿಸಿದಾಗ ಅಥವಾ ಹೊಸ ಆ್ಯಪ್ ಅಳವಡಿಸಿಕೊಳ್ಳುವಾಗ, ನಾವು ಅದು ಕೇಳುವ ಎಲ್ಲ ಮಾಹಿತಿಗೂ, ಸರಿಯಾಗಿ ಓದುವ ಪುರುಸೊತ್ತು ಮಾಡಿಕೊಳ್ಳದೆ, ‘ಯಸ್ ಯಸ್’ ಎಂದು ಕ್ಲಿಕ್ ಮಾಡುತ್ತಾ ಹೋಗಿರುತ್ತೇವೆ. ಹೀಗೆ ಮಾಡುವಾಗ, ನಮ್ಮ ಇಮೇಲ್ ಐಡಿ, ನಮ್ಮ ಮೊಬೈಲ್ ಫೋನ್ ನಂಬರ್, ನಮ್ಮ ಲೊಕೇಶನ್, ನಮ್ಮ ಫೋನ್‌ನಲ್ಲಿರುವ ಇತರ ಸಂಪರ್ಕ ಸಂಖ್ಯೆಗಳು, ನಮ್ಮ ಫೋಟೊ, ನಮ್ಮ ಬ್ಯಾಂಕಿಂಗ್ ವಿವರ ಹಾಗೂ ಇತರ ಮಾಹಿತಿಗಳನ್ನು ಕೂಡ ಧಾರಾಳವಾಗಿ ಹಂಚಿಕೊಳ್ಳಲು ನಮಗೆ ತಿಳಿದೋ, ತಿಳಿಯದೆಯೋ ಅನುಮತಿ ಕೊಟ್ಟಿರುತ್ತೇವೆ. ಯಾವುದಕ್ಕೆ ಒಪ್ಪಿಗೆ ಕೊಡುತ್ತೇವೆ ಎಂಬ ಬಗ್ಗೆ ನೋಡುವ ವ್ಯವಧಾನ ತೋರದಿದ್ದರೆ ಹೀಗೆಲ್ಲ ಆಗುತ್ತದೆ ಮತ್ತು ಮುಂದಕ್ಕೆ ಅಪಾಯಗಳಿಗೂ ಕಾರಣವಾಗುತ್ತದೆ.
ಈ ಕಾರಣದಿಂದ, ಬಹು ಮುಖ್ಯವಾಗಿ ನಾವು ಹೋದಲ್ಲೆಲ್ಲಾ ನಮ್ಮ ಜಾಡುಹಿಡಿಯುವ ಮೊಬೈಲ್ ಫೋನ್‌ಗೆ ಅಗತ್ಯವಿದ್ದಷ್ಟೇ ಅನುಮತಿ ನೀಡುವುದು ಜಾಣತನ.
ನಾವಿರುವ ಸ್ಥಳದ ಬಗ್ಗೆ ಮಾಹಿತಿ ಯಾರಿಗೆ ಅಥವಾ ಯಾವ ಆ್ಯಪ್‌ಗೆ ಬೇಕಾಗುತ್ತದೆ? ಪ್ರಮುಖವಾಗಿ ಮ್ಯಾಪ್ ನೋಡಲು, ಫಿಟ್ನೆಸ್ ಟ್ರ್ಯಾಕಿಂಗ್ (ನಾವು ನಡೆಯುವ ದೂರ, ಹೆಜ್ಜೆ ತಿಳಿಯಲು), ನಮ್ಮ ಯಾತ್ರಿ, ಓಲಾ, ಉಬರ್‌ನಂತಹಾ ಕ್ಯಾಬ್ ಬುಕ್ ಮಾಡುವ ಆ್ಯಪ್‌ಗಳಿಗೆ ಹಾಗೂ ನಮ್ಮ ಸಾಧನವು ಎಲ್ಲಾದರೂ ಕಳೆದುಹೋದರೆ ಅದರ ಜಾಡುಹಿಡಿಯಲು ಅತ್ಯಗತ್ಯವಾಗಿ ಈ ಲೊಕೇಶನ್ ಮಾಹಿತಿ ಬೇಕಾಗುತ್ತದೆ. ಇದಲ್ಲದೆ, ತೀರಾ ಅಗತ್ಯ ಸಂದರ್ಭಗಳಲ್ಲಿ, ಫೋಟೊ ಅಥವಾ ವಿಡಿಯೊವನ್ನು ಎಲ್ಲಿ ಸೆರೆಹಿಡಿದೆವು ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಬೇಕಾಗಬಹುದು.
ಆದರೆ, ಬಹುತೇಕ ಆ್ಯಪ್‌ಗಳು ತಮಗೆ ಅಗತ್ಯವಿಲ್ಲದಿದ್ದರೂ ಲೊಕೇಶನ್ ಆ್ಯಕ್ಸೆಸ್ (ಪ್ರವೇಶಾನುಮತಿ) ಕೇಳುತ್ತವೆ. ಹೀಗಾಗಿ, ಅಗತ್ಯವಿದ್ದಾಗ ಮಾತ್ರ ಅಥವಾ ಸಂಬಂಧಿತ ಆ್ಯಪ್ ಉಪಯೋಗ ಮಾಡುವಾಗ ಮಾತ್ರವೇ ಸ್ಥಳದ ಮಾಹಿತಿಯನ್ನು ಅದಕ್ಕೆ ಅನುಮತಿಸುವ ಆಯ್ಕೆ ಇದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಯಾವುದೇ ಆ್ಯಪ್ ಮೊದಲ ಬಾರಿಗೆ ತೆರೆದಾಗ ಅದು ಸ್ಥಳ ತಿಳಿಯುವ ಅನುಮತಿ ಕೇಳಿದಾಗ, "Allow Only While Using the App" ಎಂಬ ಆಯ್ಕೆಯನ್ನು ನಾವು ನೋಡಿ ಕ್ಲಿಕ್ ಮಾಡಬೇಕು.
ಈಗಾಗಲೇ ನೀಡಲಾದ ಅನುಮತಿಯನ್ನು ವಾಪಸ್ ಪಡೆಯಲು ಇಲ್ಲಿವೆ ಕೆಲವೊಂದು ವಿಧಾನಗಳು:
ನಮ್ಮ ಫೋನ್‌ನ ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಸ್ವಲ್ಪ ಕೆಳಗೆ ನೋಡಿದರೆ, ಆ್ಯಪ್‌ಗಳಿರುವ ಪಟ್ಟಿ ಕಾಣಿಸುತ್ತದೆ. ಒಂದೊಂದಾಗಿ ಆ್ಯಪ್‌ನ ವಿವರ ನೋಡಿದಾಗ ಕಾಣಿಸುವ "Permissions" ಎಂಬಲ್ಲಿ ಆ್ಯಪ್‌ಗೆ ನಾವು ನೀಡಿರುವ ಅನುಮತಿಗಳನ್ನು ನೋಡಬಹುದು. ಆ್ಯಪ್ ಬಳಸುವಾಗ ಮಾತ್ರ ಅನುಮತಿಸುವ, ಪ್ರತಿ ಬಾರಿ ಕೇಳುವ ಅಥವಾ ಅನುಮತಿ ನಿರಾಕರಿಸುವ ಆಯ್ಕೆಗಳು ಅಲ್ಲೇ ಇರುತ್ತವೆ. ನೋಡಿಕೊಂಡು ಅನುಮತಿ ಕೊಟ್ಟರಾಯಿತು. ಆ್ಯಂಡ್ರಾಯ್ಡ್ ಮತ್ತು ಐಒಎಸ್ - ಎರಡರಲ್ಲೂ ಈ ವಿಧಾನ ಬಹುತೇಕ ಇದೇ ರೀತಿ ಇರುತ್ತದೆ.
ಇದಲ್ಲದೆ, ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ, ಪರ್ಮಿಶನ್ ಮ್ಯಾನೇಜರ್ ಎಂಬುದನ್ನು ಹುಡುಕಿದರೆ, ಯಾವೆಲ್ಲ ಅನುಮತಿಗಳನ್ನು ಯಾವ್ಯಾವ ಆ್ಯಪ್‌ಗಳಿಗೆ ನೀಡಿದ್ದೇವೆ ಎಂಬುದನ್ನು ತಿಳಿಯಬಹುದು ಮತ್ತು ಅಲ್ಲಿಂದಲೇ ತಿದ್ದುಪಡಿ ಮಾಡಬಹುದು.
ಐಒಎಸ್ ಇರುವ ಆ್ಯಪಲ್ ಸಾಧನಗಳಲ್ಲಾದರೆ, ಪ್ರೈವೆಸಿ ಮತ್ತು ಸೆಕ್ಯುರಿಟಿ ಎಂಬ ವಿಭಾಗದಲ್ಲಿ 'ಲೊಕೇಶನ್ ಸರ್ವಿಸಸ್' ವಿಭಾಗ ನೋಡಿದರೆ, ಎಷ್ಟೆಲ್ಲ ಆ್ಯಪ್‌ಗಳಿಗೆ ನಾವು ಅನುಮತಿ ನೀಡಿದ್ದೇವೆ ಎಂಬುದು ಕಾಣಿಸುತ್ತದೆ. ಇದರ ಜೊತೆಗೆ, ಟ್ರ್ಯಾಕಿಂಗ್ ಎಂಬ ಟ್ಯಾಬ್ ಕ್ಲಿಕ್ ಮಾಡಿದರೆ, ಯಾವೆಲ್ಲ ಆ್ಯಪ್‌ಗಳು ನಮ್ಮನ್ನು ಟ್ರ್ಯಾಕ್ ಮಾಡುತ್ತಿವೆ ಎಂಬುದನ್ನು ತಿಳಿದುಕೊಂಡು, ಸೂಕ್ತವಾಗಿ ತಿದ್ದುಪಡಿ ಮಾಡಿಕೊಳ್ಳಬಹುದು.
ನಾವು ಬಳಸುವ ಸೆಲ್ಯುಲಾರ್ ನೆಟ್‌ವರ್ಕ್, ಬ್ಲೂಟೂತ್, ವೈಫೈ ಮುಂತಾದವುಗಳ ಮೂಲಕವೂ, ಅವುಗಳ ಸಿಗ್ನಲ್ ಆಧರಿಸಿ ಅದಕ್ಕೆ ಸಂಪರ್ಕಿಸಿರುವ ಸಾಧನಗಳ ಸ್ಥಳ (ಲೊಕೇಶನ್) ತಿಳಿದುಕೊಳ್ಳಬಹುದಾಗಿದೆ ಎಂಬುದೂ ನೆನಪಿರಲಿ. ಆದರೆ, ನಮ್ಮ ಜಾಡು ಹಿಡಿಯುವ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್) ವ್ಯವಸ್ಥೆಯು, ನಮ್ಮ ಫೋನ್ ಕಳೆದುಹೋದಾಗ, ಅಥವಾ ನಾವೇ ಚಾರಣಕ್ಕೆ, ಪ್ರವಾಸ, ಪ್ರಯಾಣ ತೆರಳಿದಾಗ ದಾರಿ ತಪ್ಪಿದರೆ, ನಮ್ಮ ಇರುವಿಕೆಯನ್ನು ಪತ್ತೆ ಮಾಡುವುದಕ್ಕೂ ನೆರವು ನೀಡುತ್ತದೆ ಎಂಬುದು ಗಮನದಲ್ಲಿರಲಿ.
ತಂತ್ರಜ್ಞಾನದಿಂದ ಪ್ರಯೋಜನ ಹೆಚ್ಚು ಇದೆಯಾದರೂ, ಅದಕ್ಕಿಂತಲೂ ಹೆಚ್ಚು ಅಪಾಯವೂ ಇದೆ. ಹೀಗಾಗಿ, ಈ ಸೈಬರ್-ಅಪರಾಧಗಳ ಕಾಲದಲ್ಲಿ ಹೊಣೆಯರಿತು, ಬೇಕಾದಾಗ ಮತ್ತು ಬೇಕಾದಷ್ಟೇ ತಂತ್ರಜ್ಞಾನವನ್ನು ಬಳಸುವುದೇ ಅತ್ಯಂತ ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.