ADVERTISEMENT

ಕಂಪ್ಯೂಟರ್ ವೇಗವಾಗಿಸಲು ಟಿಪ್ಸ್: ಡೆಸ್ಕ್‌ಟಾಪ್ ಒಪ್ಪವಾಗಿಸಿಕೊಳ್ಳಿ

ಅವಿನಾಶ್ ಬಿ.
Published 27 ಅಕ್ಟೋಬರ್ 2020, 0:30 IST
Last Updated 27 ಅಕ್ಟೋಬರ್ 2020, 0:30 IST
ಕಂಪ್ಯೂಟರಿನ ಡೆಸ್ಕ್‌ಟಾಪ್‌ನಲ್ಲಿ ಕಡಿಮೆ ಫೈಲ್‌ಗಳಿರಲಿ
ಕಂಪ್ಯೂಟರಿನ ಡೆಸ್ಕ್‌ಟಾಪ್‌ನಲ್ಲಿ ಕಡಿಮೆ ಫೈಲ್‌ಗಳಿರಲಿ   

ಇಂಟರ್ನೆಟ್ ಬಳಕೆ ಹೆಚ್ಚಾಗಿರುವುದರಿಂದಸ್ಟೋರೇಜ್ ಸಮಸ್ಯೆಯಾಗಿದೆಯೇ? ಡೇಟಾ ಸ್ಟೋರೇಜ್ ಅಥವಾ ದತ್ತಾಂಶ ಸಂಗ್ರಹಣೆಯ ಸಮಸ್ಯೆ ಮೊಬೈಲ್ ಫೋನ್‌ಗಳಿಗಷ್ಟೇ ಅಲ್ಲದೆ ಪ್ರತಿನಿತ್ಯ ಬಳಸುವ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೂ ಇದೆ. ಡಿಸ್ಕ್ ತುಂಬುತ್ತಿರುವಂತೆಯೇ ಕಂಪ್ಯೂಟರ್ ಕಾರ್ಯನಿರ್ವಹಣೆ ನಿಧಾನವಾಗಿಬಿಡುತ್ತದೆ. 'ಸಿ' ಡ್ರೈವ್ ಅಥವಾ ಲೋಕಲ್ ಡಿಸ್ಕ್‌ನಲ್ಲಿರುವ ಅನಗತ್ಯ ಫೈಲ್‌ಗಳನ್ನು ಅಳಿಸಿ ಫೋಲ್ಡರ್‌ಗಳನ್ನು ವ್ಯವಸ್ಥಿತವಾಗಿರಿಸಿದರೆ ಸ್ಟೋರೇಜ್ ಸಮಸ್ಯೆಯನ್ನು ನಿವಾರಿಸಬಹುದು.

ವಿಂಡೋಸ್ 10 ಬಳಕೆದಾರರು Settings > System > Storage ಎಂಬಲ್ಲಿ ಹೋದರೆ ಯಾವ ಫೋಲ್ಡರ್‌ನಲ್ಲಿ ಎಷ್ಟು ಪ್ರಮಾಣದ ಫೈಲ್‌ಗಳಿವೆ ಎಂಬುದು ಕಾಣಿಸುತ್ತದೆ. ಸಿ ಡ್ರೈವ್‌ನಲ್ಲಿ ಫೈಲ್‌ಗಳು ಕಡಿಮೆಯಿದ್ದಷ್ಟೂ ಮತ್ತು ಖಾಲಿ ಸ್ಥಳಾವಕಾಶ ಹೆಚ್ಚಿದ್ದಷ್ಟೂ ಕಂಪ್ಯೂಟರ್ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ ನಾವು ತಿಳಿದಿರಬೇಕಾದುದೆಂದರೆ ಟೆಂಪ್ (ತಾತ್ಕಾಲಿಕ ಫೈಲ್‌ಗಳಿರುವ) ಫೋಲ್ಡರ್ ಮಾತ್ರವಲ್ಲದೆ, ನಾವು ಸಾಮಾನ್ಯವಾಗಿ ಫೈಲ್‌ಗಳನ್ನು ಸೇವ್ ಮಾಡಿಡುವ ಡೆಸ್ಕ್‌ಟಾಪ್ ಮತ್ತು ಡೌನ್‌ಲೋಡ್ ಎಂಬ ಎರಡು ಫೋಲ್ಡರ್‌ಗಳಿರುವುದೂ ಇದೇ ಸಿ ಡ್ರೈವ್‌ನಲ್ಲಿ.

ಅವಸರದಿಂದಾಗಿ ಫೈಲ್‌ಗಳನ್ನು ವ್ಯವಸ್ಥಿತವಾಗಿರಿಸುವ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಎಲ್ಲ ಫೋಟೋ, ವಿಡಿಯೊ, ಪಠ್ಯ, ಆಡಿಯೋ ಫೈಲ್‌ಗಳನ್ನು ಡೆಸ್ಕ್‌ಟಾಪ್‌ನಲ್ಲೇ ಸೇವ್ ಮಾಡುತ್ತೇವೆ. ಯಾಕೆಂದರೆ ಸುಲಭವಾಗಿ ಕೈಗೆಟಕುವುದೇ ಅದು. ಸಹಜವಾಗಿ ಸಿ ಡ್ರೈವ್ ಮೇಲೆ ಒತ್ತಡ ಬೀಳುತ್ತದೆ. ಇನ್ನು, ಬ್ರೌಸರ್‌ನಿಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಅದು ಮೂಲತಃ ಬಂದು ಕೂರುವುದು ಡೌನ್‌ಲೋಡ್ ಫೋಲ್ಡರ್‌ನಲ್ಲಿ. ಕೆಲವು ಸಮಯದ ನಂತರ ಈ ಎರಡೂ ಫೋಲ್ಡರ್‌ಗಳು ತುಂಬಿಬಿಡುತ್ತವೆ, ಆಗ ಕಂಪ್ಯೂಟರ್ ನಿಧಾನವಾಗಬಹುದು.

ADVERTISEMENT

ಏನು ಮಾಡಬೇಕು?

ಯಾವುದೋ ಒಂದು ಕಾರಣಕ್ಕೆ ಕಂಪ್ಯೂಟರ್ ಆನ್ ಆಗದೇ ಹೋದಾಗ ಅದನ್ನು ಫಾರ್ಮ್ಯಾಟ್ ಮಾಡಬೇಕಾಗಿ ಬಂದರೆ, ಸಿ ಡ್ರೈವ್‌ನಲ್ಲಿರುವ ಫೈಲ್‌ಗಳೆಲ್ಲವೂ ವಾಪಸ್ ಸಿಗುವುದು ಕಷ್ಟ. ಹೀಗಾಗಿ, ಯಾವತ್ತೂ ಡಿ, ಇ, ಎಫ್ ಮುಂತಾದ ಫೋಲ್ಡರ್‌ಗಳಲ್ಲಿ ಸೇವ್ ಮಾಡಿಕೊಳ್ಳುವ ಅಭ್ಯಾಸ ಮಾಡಬೇಕು. ಒಂದೊಮ್ಮೆ ಕಂಪ್ಯೂಟರ್ ಕೈಕೊಟ್ಟರೂ, ಸಿ ಡ್ರೈವ್‌ನ ಹೊರಗಿರುವ ಫೈಲ್‌ಗಳು ಹೆಚ್ಚು ಸುರಕ್ಷಿತ.

ಫೈಲ್‌ಗಳನ್ನು ಸೇವ್ ಮಾಡುವುದಕ್ಕಾಗಿ ಸಿ ಹೊರತಾದ ಬೇರೆ ಡ್ರೈವ್‌ನಲ್ಲಿ (ಡಿ, ಇ, ಎಫ್ ಇತ್ಯಾದಿ) ಒಂದು ಫೋಲ್ಡರ್ ರಚಿಸಬೇಕು. ಇದರ ಶಾರ್ಟ್‌ಕಟ್ ರೂಪವನ್ನು ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿಕೊಂಡರೆ ಸುಲಭವಾಗಿ ನಿಭಾಯಿಸಬಹುದು.

ಇದೇ ರೀತಿ, ಬ್ರೌಸರ್‌ನಿಂದ ಡೌನ್‌ಲೋಡ್ ಆಗುವ ಫೈಲ್‌ಗಳನ್ನು ಸೇವ್ ಮಾಡುವ ಸ್ಥಳವನ್ನು ಬದಲಾಯಿಸಬೇಕು. ಇದಕ್ಕಾಗಿ ಬ್ರೌಸರ್ ಸೆಟ್ಟಿಂಗ್‌ನಲ್ಲಿ ಲೊಕೇಶನ್ ಫೋಲ್ಡರ್ ಬದಲಿಸುವ ಆಯ್ಕೆಯಿರುತ್ತದೆ.

ಜೊತೆಗೆ, ಅನಗತ್ಯ ಫೈಲ್‌ಗಳನ್ನು, ಟೆಂಪ್ ಫೈಲ್‌ಗಳನ್ನು ಆಗಿಂದಾಗಲೇ ಡಿಲೀಟ್ ಮಾಡಿಕೊಳ್ಳುವುದು, ಅಗತ್ಯವಿರುವ ಫೈಲ್‌ಗಳನ್ನು ನಿರ್ದಿಷ್ಟ ಫೋಲ್ಡರ್‌ಗಳಿಗೆ ವರ್ಗಾಯಿಸಿದರೆ ಕಂಪ್ಯೂಟರ್ ಕ್ರ್ಯಾಶ್ ಆಗುವ ಸಾಧ್ಯತೆ ತಪ್ಪುತ್ತದೆ ಮತ್ತು ಕೈಕೊಟ್ಟರೂ ಫೈಲ್‌ಗಳು ಸುರಕ್ಷಿತವಾಗಿರಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.