ADVERTISEMENT

ಟೆಕ್ನೋ ಕಾನ್‌ಕ್ಲೇವ್ 2020 | ಬದಲಾದ ಯುಗಕ್ಕೆ ಅಣಿಯಾದರಷ್ಟೇ ಭವಿಷ್ಯ: ನಾಗನಗೌಡ

ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಲಿಮಿಟೆಡ್‌ ಸಂಸ್ಥೆಯ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 8:56 IST
Last Updated 22 ಫೆಬ್ರುವರಿ 2020, 8:56 IST

ಹುಬ್ಬಳ್ಳಿ: ‘ಆಧುನಿಕ ತಂತ್ರಜ್ಞಾನದಿಂದಾಗಿ ಜಗತ್ತು ಶೀಘ್ರಗತಿಯಲ್ಲಿ ಬದಲಾಗುತ್ತಿದೆ. ಈ ಪರಿವರ್ತನೆಗೆ ವಿದ್ಯಾರ್ಥಿಗಳು ಅಣಿಯಾದರೆ ಮಾತ್ರ, ಭವಿಷ್ಯ ಉತ್ತಮವಾಗಿರುತ್ತದೆ’ ಎಂದು ಬೆಂಗಳೂರಿನ ಗ್ಲೋಬಲ್ ಎಡ್ಜ್ ಸಾಫ್ಟ್‌ವೇರ್ ಲಿಮಿಟೆಡ್‌ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ನಾಗನಗೌಡ ಎಸ್‌.ಜೆ ಅಭಿಪ್ರಾಯಪಟ್ಟರು.

ನಗರದ ಪಿ.ಸಿ. ಜಾಬಿನ ಕಾಲೇಜು ಶನಿವಾರ ಆಯೋಜಿಸಿದ್ದ ‘ಟೆಕ್ನೋ ಕಾನ್‌ಕ್ಲೇವ್–2020’ ವಿಚಾರ ಸಂಕಿರಣ ಉದ್ಘಾಟಿಸಿ, ‘ಫ್ಯೂಚರ್ ಆಫ್ ವರ್ಕ್ ಅಂಡ್ ರೋಲ್ ಆಫ್ ಯಂಗ್ ಇಂಡಿಯಾ’ ವಿಷಯ ಕುರಿತು ಅವರು ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ನಾಲ್ವರು ಪದವೀಧರರ ಪೈಕಿ, ಒಬ್ಬರು ಭಾರತೀಯರಿದ್ದಾರೆ. ಸಂಶೋಧನಾ ಕ್ಷೇತ್ರದ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಭಾರತವೂ ಒಂದು. ವಿಶ್ವದ 200 ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಭಾರತದ 25 ವಿ.ವಿ.ಗಳಿವೆ. ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿಯೊಂದಿಗೆ ಹೊರ ಬರುತ್ತಿದ್ದಾರೆ’ ಎಂದರು.

ADVERTISEMENT

‘ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಪ್ರಕಾರ, ದೇಶದ ಉದ್ಯೋಗಿಗಳ ಪೈಕಿ ಶೇ 40ರಷ್ಟು ಮಂದಿ ಕೌಶಲದ ಕೊರತೆ ಎದುರಿಸುತ್ತಿದ್ದಾರೆ. ಅಂದರೆ, ದಿನದಿಂದ ದಿನಕ್ಕೆ ನಡೆಯುತ್ತಿರುವ ತಂತ್ರಜ್ಞಾನದ ಆವಿಷ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅದರ ಅಳವಡಿಕೆಗೆ ನಾವಿನ್ನೂ ಹೊಂದಿಕೊಂಡಿಲ್ಲ’ ಎಂದರು.

‘ತಂತ್ರಜ್ಞಾನ ಉದ್ಯೋಗ ಕಿತ್ತುಕೊಳ್ಳುತ್ತಿಲ್ಲ. ಬದಲಿಗೆ ಕೆಲಸದ ಗತಿಯನ್ನು ಬದಲಿಸುತ್ತಿದೆ. ಹೊಸ ಸವಾಲುಗಳನ್ನು ಮುಂದಿಡುತ್ತಿದೆ. ಮನುಷ್ಯನ ಕೆಲಸ ಮಾಡುವ ಕೃತಕ ಬುದ್ಧಿಮತ್ತೆಯ ರೊಬೊ ಸೇರಿದಂತೆ, ತಂತ್ರಜ್ಞಾನದ ಹಲವು ಚಮತ್ಕಾರಗಳು ನಮ್ಮ ಮುಂದಿವೆ. ಮುಂದೆ 5ಜಿ ಬಂದರೆ, ತಂತ್ರಜ್ಞಾನದ ಗತಿ ಇನ್ನೂ ಬದಲಾಗಲಿದೆ’ ಎಂದು ಗಮನ ಸೆಳೆದರು.

‘ಸ್ವ ಅರಿವಿನ ಜತೆಗೆ, ಸಂವಹನ, ಕ್ರಿಟಿಕಲ್ ಥಿಂಕಿಂಗ್, ಉದ್ಯೋಗ ಕೌಶಲ, ಹೊಂದಾಣಿಕೆ, ನಾಯಕತ್ವ ಕೌಶಲ, ಸಾಮಾಜಿಕ ಹಾಗೂ ಜೀವನ ಕೌಶಲವನ್ನು ಯುವಜನರು ಬೆಳೆಸಿಕೊಳ್ಳಬೇಕು. ಆಗ ಮಾತ್ರ, ಬದಲಾದ ಜಗತ್ತಿಗೆ ತಕ್ಕಂತೆ ಭವಿಷ್ಯ ರೂಪಿಸಿಕೊಳ್ಳಬಹುದು’ ಎಂದು ಹೇಳಿದರು.

ಕೇಂಬ್ರಿಜ್ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಡಾ.ಡಿ.ಎಚ್. ರಾವ್ ‘ಡಿಜಿಟಲ್ ಕ್ಲಿನಿಕ್’ ಕುರಿತು, ಮೊ ಎಂಗೇಜ್ ಕಂಪನಿ ವ್ಯವಸ್ಥಾಪಕ ಜೀತೆಂದ್ರ ಪನಿಹಾರ ‘ಎಂಪ್ಲಾಯೆಬಿಲಿಟಿ ಸ್ಕಿಲ್ಸ್’, ಆಕ್ಸೆಂಚರ್ ಕಂಪನಿಯ ಮಹೇಶ ನಾರಾಯಣ ಅವರು ‘ಕೃತಕ ಬುದ್ಧಿಮತ್ತೆ’, ವಿಪ್ರೊ ಕಂಪನಿಯ ಟ್ಯಾಲೆಂಟ್ ಪಾರ್ಟ್‌ನರ್ ಭವೇಶ ಪಟೇಲ್ ‘ಎಂಪ್ಲಾಯೆಬಿಲಿಟಿ ಇನ್ ಟೈಮ್ಸ್ ಆಫ್ ಡಿಸ್ರಪ್ಷನ್’ ಹಾಗೂ ಐಸಿಟಿ ಅಕಾಡೆಮಿಯ ಕರ್ನಾಟಕದ ಮುಖ್ಯಸ್ಥ ವಿಷ್ಣುಪ್ರಸಾದ ಡಿ. ‘ಇಂಡಸ್ಟ್ರಿ 4.0’ ಕುರಿತು ಮಾತನಾಡಿದರು.

ಪ್ರಾಚಾರ್ಯೆ ಜ್ಯೋತಿ ಮಾನೇದ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ. ಸಿದ್ದೇಶ್ವರ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.