ADVERTISEMENT

ಇದು ಕನ್ನಡಿಗರ ‘ಆಟಿಕೆ’

ರಶ್ಮಿ ಕಾಸರಗೋಡು
Published 28 ಆಗಸ್ಟ್ 2019, 19:30 IST
Last Updated 28 ಆಗಸ್ಟ್ 2019, 19:30 IST
...
...   

ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದ ವಿದ್ಯೆ ಬೇಗ ಅರ್ಥವಾಗುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಟ್ಟ ಕಲಿಕೆ ಸದಾ ನೆನಪಿರುತ್ತದೆ. ಮಕ್ಕಳು ಆಟವಾಡುತ್ತಾ ಕಲಿಯಬೇಕು ಎಂಬುದು ಹೆಚ್ಚಿನ ಪೋಷಕರ ಆಸೆಯಾಗಿರುತ್ತದೆ. ಹಳ್ಳಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಈ ರೀತಿಯ ಅವಕಾಶ ಸಿಕ್ಕಿದರೂ ನಗರದಲ್ಲಿರುವವರಿಗೆ ಈ ರೀತಿಯ ಅವಕಾಶಗಳು ಸಿಗುವುದು ತುಂಬಾ ಕಡಿಮೆ.

ಈಗಿನ ಕಾಲದ ಮಕ್ಕಳು ಶಾಲೆಯಲ್ಲಿನ ಕಲಿಕೆಯೊಂದಿಗೆ ಕಂಪ್ಯೂಟರ್, ಮೊಬೈಲ್‌ನಲ್ಲಿ ಕಲಿಯುವುದೇ ಜಾಸ್ತಿ. ಮಕ್ಕಳ ಆಟ ಪಾಠಗಳೆಲ್ಲವೂ ಬೆರಳ ತುದಿಯಲ್ಲಿ ಲಭ್ಯವಾಗುತ್ತಿರುವ ಕಾಲದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಓದಿ ತಿಳಿ ಆಡಿ ಕಲಿ ಎಂಬ ಉದ್ದೇಶದೊಂದಿಗೆ ರೂಪುಗೊಂಡ ವೆಬ್‌ಸೈಟ್ ‘ಆಟಿಕೆ’.

http://atike.nadoja.com/ ಎಂಬ ಲಿಂಕ್ ಕ್ಲಿಕ್ ಮಾಡಿದರೆ ಗಡಿಯಾರ ಮತ್ತು ಸೌರಮಂಡಲ ಎಂಬ ಎರಡು ವಿಷಯಗಳು ಕಾಣಿಸಿಕೊಳ್ಳುತ್ತವೆ. ಗಡಿಯಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು ಗಡಿಯಾರ ಲಿಂಕ್ ಕ್ಲಿಕ್ ಮಾಡಿದರೆ ಸಾಕು.

ADVERTISEMENT

‘ಹೊತ್ತು ನೋಡುವುದನ್ನು ಕಲಿ’ ಎಂಬ ಪುಟದಲ್ಲಿ ಇಂದಿನ ದಿನಾಂಕ ಮತ್ತು ಗಡಿಯಾರ ಕಾಣಿಸುತ್ತದೆ. ವೇಳೆಯ ಮಾದರಿ ಕ್ಲಿಕ್ಕಿಸಿದರೆ 12 ತಾಸು ಅಥವಾ 24 ತಾಸು - ಆಯ್ಕೆ ಮಾಡಬಹುದು. ‘ನನ್ನ ಮೆಚ್ಚಿನ ಬಣ್ಣ’ – ಮೆನು ಕ್ಲಿಕ್ಕಿಸಿ ಗಡಿಯಾರದ ಬಣ್ಣವನ್ನು ಬದಲಿಸಬಹುದು.

‘ಗಡಿಯಾರದೊಡನೆ ಆಟವಾಡು’ ಎಂದು ಕ್ಲಿಕ್ ಮಾಡಿ ಗಡಿಯಾರದ ಮುಳ್ಳುಗಳನ್ನು ಎಳೆದಾಡಬಹುದು. ಹೀಗೆ ಮುಳ್ಳುಗಳನ್ನು ತಿರುಗಿಸುವಾಗ ಬಲಭಾಗದಲ್ಲಿ ಸಮಯ ಎಷ್ಟಾಯಿತು ಎಂಬುದು ಕಾಣಿಸುತ್ತದೆ.

ಅದೇ ರೀತಿ ಸೌರಮಂಡಲ ಕ್ಲಿಕ್ಕಿಸಿದರೆ ಸೂರ್ಯ ಮತ್ತು ಎಂಟು ಗ್ರಹಗಳ ಚಲನೆಯ ವೇಗ, ದೂರ ಮತ್ತು ಅಳತೆಯನ್ನು ಸುಲಭವಾಗಿ ವಿವರಿಸಿರುವುದನ್ನು ನಾವಿಲ್ಲಿ ಕಾಣಬಹುದು. 2ಡಿ ಮತ್ತು 3ಡಿ ಯಲ್ಲಿ ಸೌರಮಂಡಲದ ಚಟುವಟಿಕೆಯನ್ನು ವೀಕ್ಷಿಸುವ ಅವಕಾಶವೂ ಇಲ್ಲಿದೆ. ಹಾಗಾಗಿ ಮಕ್ಕಳಿಗೆ ಇದು ’ನೋಡಿ ಕಲಿ’ ಅನುಭವ ನೀಡುತ್ತದೆ.

‘ಆಟಿಕೆ’ ಕೊಟ್ಟವರು ಶ್ರೀಹರ್ಷ ಸಾಲಿಮಠ

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶ್ರೀಹರ್ಷ ಸಾಲಿಮಠ ಈ ಆಟಿಕೆ ವೆಬ್‌ಸೈಟ್‌ನ ರೂವಾರಿ.ಮಕ್ಕಳ ಜತೆ

ಶ್ರೀಹರ್ಷ ಸಾಲಿಮಠ

ಕುಳಿತುಕೊಂಡು ಅವರಿಗೆ ಕಲಿಸಲು ಈಗಿನ ಪೋಷಕರಿಗೆ ಸಮಯವಿರುವುದಿಲ್ಲ. ಹಾಗಾಗಿ ಆಟಿಕೆ ಸ್ವಯಂ ಕಲಿಕೆಗೆ ಅನುಕೂಲವಾಗಲಿದೆ. ಮಕ್ಕಳಿಗೆ ಮನರಂಜನೆಯ ಜೊತೆ ಕಲಿಕೆಗೆ ಅನುಕೂಲವಾಗುವಂತಹ ತಾಣವನ್ನು ರೂಪಿಸುವುದು ಇದರ ಉದ್ದೇಶ. ಅದರಲ್ಲೂ ಕನ್ನಡದಲ್ಲಿ ಇಂತಹ ತಾಣವೊಂದು ಇಲ್ಲವೇ ಇಲ್ಲವೆನ್ನಬಹುದು. ಈಗ ಮೊಬೈಲ್‌ಗಳಲ್ಲಿಯೇ ಹೆಚ್ಚು ಸಮಯವನ್ನು ಮಕ್ಕಳು ಕಳೆಯುವುದರಿಂದ ಸಾಧ್ಯವಾದಷ್ಟು ಅಲ್ಲಿಯೇ ಕಲಿಕೆಗೆ ಅನುಕೂಲವಾದಂತಹ ವಾತಾವರಣವನ್ನು ಕಲ್ಪಿಸುವುದು ಇದರ ಉದ್ದೇಶ.

ಇಂತಹ ಕಲಿಕೆಯ ಆ್ಯಪ್‌ಗಳು ವಿವಿಧ ದೇಶಗಳಲ್ಲಿ ಜನಪ್ರಿಯವಾಗಿವೆ. ಈ ರೀತಿಯ ಅಪ್ಲಿಕೇಷನ್‌ಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಾಯಕವಾಗಲಿವೆ. ‘ಥಿಂಕ್ ಗ್ಲೋಬಲಿ ಆಕ್ಟ್ ಲೋಕಲಿ’ ಎನ್ನುವ ಹಾಗೆ, ವಿಶ್ವದಾದ್ಯಂತ ನಡೆಯುವ ವಿದ್ಯಮಾನಗಳಿಗೆ ಕನ್ನಡವು ಸರಿಸಮನಾಗಿ ನಡೆಯಬೇಕು. ಕನ್ನಡದ ಮಕ್ಕಳು ಯಾವುದೇ ತಾಂತ್ರಿಕ ವ್ಯವಸ್ಥೆಯಿಂದ ವಂಚಿತರಾಗಬಾರದು. ಆದ್ದರಿಂದ ಆಟಿಕೆ ಎನ್ನುವ ಅಪ್ಪಟ ಕನ್ನಡ ಹೆಸರಿನ ಕಲಿಕೆಯ ಆಟಗಳ ಬ್ರಾಂಡ್ ಹುಟ್ಟು ಹಾಕಲಾಗಿದೆ.

‘ಮುಂದೆ ಸಾಕಷ್ಟು ಈ ರೀತಿಯ ಆಟಗಳನ್ನು ತರಲಾಗುವುದು, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ, ರಸಾಯನ ಶಾಸ್ತ್ರಗಳ ಆಟಗಳನ್ನು ಅಳವಡಿಸಲಾಗುವುದು. ಸದ್ಯ, ಆಟಿಕೆ ರೂಪಿಸಿದ್ದು ನಾನೊಬ್ಬನೆ. ಮುಂದೆ ಇದಕ್ಕಾಗಿ ತಂಡವೊಂದನ್ನು ಕಟ್ಟುವ ಆಲೋಚನೆಯಿದೆ. ಆಸಕ್ತರು ನಮ್ಮ ಜೊತೆ ಕೈಜೋಡಿಸಬಹುದು’ ಎನ್ನುತ್ತಾರೆ ಶ್ರೀಹರ್ಷ. ಈ ಆಟಿಕೆ ವೆಬ್‌ಸೈಟ್‌ ಕುರಿತ ಮಾಹಿತಿಗಾಗಿ ಶ್ರೀಹರ್ಷ ಅವರ ಇಮೇಲ್:thesalimath@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.