ADVERTISEMENT

ಭಾರತದಲ್ಲಿ ಮೊದಲ 5ಜಿ ವಾಟ್ಸ್‌ಆ್ಯಪ್‌ ಕಾಲ್‌ ಮಾಡಿದ ಒಪ್ಪೊ: ಪರೀಕ್ಷೆ ಯಶಸ್ವಿ 

ಏಜೆನ್ಸೀಸ್
Published 5 ಮಾರ್ಚ್ 2020, 6:35 IST
Last Updated 5 ಮಾರ್ಚ್ 2020, 6:35 IST
5ಜಿ ತಂತ್ರಜ್ಞಾನ ಪರೀಕ್ಷೆ
5ಜಿ ತಂತ್ರಜ್ಞಾನ ಪರೀಕ್ಷೆ   

ಹೈದರಾಬಾದ್‌: ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ 'ಒಪ್ಪೊ' ಹೈದರಾಬಾದ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಮೊದಲ 5ಜಿ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ ಪರೀಕ್ಷೆ ಬುಧವಾರ ಯಶಸ್ವಿಯಾಗಿ ನಡೆಸಿರುವುದಾಗಿ ತಿಳಿಸಿದೆ.

5ಜಿ ಬ್ಯಾಂಡ್‌ ಮತ್ತು ವೇಗ ಬಳಸಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌, ವೇಗವಾಗಿ ಸಿನಿಮಾ ಡೌನ್‌ಲೋಡ್‌ ಹಾಗೂ ಕ್ಲೌಡ್‌ ಗೇಮಿಂಗ್‌ ಆಯ್ಕೆಗಳನ್ನು ಪರೀಕ್ಷಿಸಿದೆ. 'ಈ ಯಶಸ್ವಿ ಪರೀಕ್ಷೆಯುವ ಭವಿಷ್ಯದ ಯೋಜನೆಗಳಿಗೆ ಮತ್ತಷ್ಟು ಬಲ ನೀಡಿದೆ. ತಂತ್ರಜ್ಞಾನ ಗ್ರಾಹಕರ ನಿತ್ಯ ಕಾರ್ಯಗಳನ್ನು ಮತ್ತಷ್ಟು ಸರಳಗೊಳಿಸಲಿದೆ' ಎಂದು ಒಪ್ಪೊ ಇಂಡಿಯಾ ಸಂಶೋಧನೆ ಮತ್ತು ಅಭಿವೃದ್ಧಿ ಉಪಾಧ್ಯಕ್ಷೆ ತಸ್ಲೀಮ್‌ ಆರಿಫ್‌ ಹೇಳಿದ್ದಾರೆ.

ಒಪ್ಪೊ 'FindX2' ಬ್ರ್ಯಾಂಡ್‌ ಮೂಲಕ 5ಜಿ ಸ್ಮಾರ್ಟ್‌ಫೋನ್‌ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿದೆ. ಹೈದರಾಬಾದ್‌ನಲ್ಲಿ ಇತ್ತೀಚೆಗಷ್ಟೇ ಆರಂಭಿಸಲಾಗಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ 5ಜಿ ತಂತ್ರಜ್ಞಾನ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ಒಪ್ಪೊ ಜಾಗತಿಕವಾಗಿ ಆರು ಸಂಶೋಧನಾ ಸಂಸ್ಥೆಗಳು, ನಾಲ್ಕು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ ಲಂಡನ್‌ನಲ್ಲಿ ಅಂತರರಾಷ್ಟ್ರೀಯ ವಿನ್ಯಾಸ ಕೇಂದ್ರ ಹೊಂದಿದೆ.

ADVERTISEMENT

ಒಪ್ಪೊ ದೇಶದಲ್ಲಿ ₹2,200 ಕೋಟಿ ಹೂಡಿಕೆ ಮಾಡಿದ್ದು, ಗ್ರೇಟರ್‌ ನೋಯ್ಡದಲ್ಲಿರುವ ತಯಾರಿಕಾ ಘಟಕದಲ್ಲಿ ವಾರ್ಷಿಕ 5 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಸಿದ್ಧಪಡಿಸುತ್ತಿದೆ.

ಇತ್ತೀಚೆಗಷ್ಟೇ ಕಂಪನಿ ಭಾರತದಲ್ಲಿ 'ರೆನೊ9 ಪ್ರೊ' ಬಿಡುಗಡೆ ಮಾಡಿತು. 44ಎಂಪಿ+2ಎಂಪಿ ಡ್ಯೂಯಲ್‌ ಪಂಚ್‌ ಹೋಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಫೋನ್‌ಗೆ ₹29,990 ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.