ADVERTISEMENT

ಪಬ್‌ಜಿ ಬದಲಿಗೆ ಬರುತ್ತಿದೆ ಬೆಂಗಳೂರು ಮೂಲದ ‘ಫೌಜಿ’: ಜ. 26ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 12:50 IST
Last Updated 4 ಜನವರಿ 2021, 12:50 IST
‘ಫೌಜಿ’ ಮೊಬೈಲ್ ಗೇಮ್
‘ಫೌಜಿ’ ಮೊಬೈಲ್ ಗೇಮ್   

ದೇಶದಲ್ಲಿ ಚೀನಾ ಮೂಲದ ಅ್ಯಪ್ ಮತ್ತು ಗೇಮ್ ನಿಷೇಧದ ಜತೆಗೇ ರದ್ದುಗೊಂಡಿದ್ದ ಜನಪ್ರಿಯ ‘ಪಬ್‌ಜಿ ಗೇಮ್’ ಬದಲಿಗೆ ಇದೀಗ ದೇಶೀಯ ಗೇಮ್ ‘ಫೌಜಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಗಣರಾಜ್ಯೋತ್ಸವದಂದು ಹೊಸ ದೇಶೀಯ ಗೇಮ್ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುತ್ತದೆ ಮತ್ತು ದೇಶದ ಸಾರ್ವಭೌಮತೆ, ಭದ್ರತೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕಾಗಿ ಚೀನಾ ಮೂಲದ 200ಕ್ಕೂ ಅಧಿಕ ಅ್ಯಪ್‌ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಅದರ ಜತೆಗೇ ಚೀನಾ ಮೂಲದ ಟೆನ್ಸೆಂಟ್ ಸಂಸ್ಥೆಯ ಸರ್ವರ್ ನಿರ್ವಹಣೆ ಹೊಂದಿದ್ದ ಜನಪ್ರಿಯ ‘ಪಬ್‌ಜಿ’ ಗೇಮ್ ಕೂಡ ದೇಶದಲ್ಲಿ ನಿಷೇಧವಾಗಿದೆ. ಈ ಮಧ್ಯೆ ‘ಪಬ್‌ಜಿ’ ಬದಲಾಗಿ, ದೇಶದಲ್ಲಿ ಬೆಂಗಳೂರು ಮೂಲದ ಎನ್‌ಕೋರ್ ಸಂಸ್ಥೆ ಅಭಿವೃದ್ಧಿಪಡಿಸಿರುವ FAU-G ವಿಡಿಯೊ ಗೇಮ್ ಗಣರಾಜ್ಯೋತ್ಸವದ ಅವಧಿಯಲ್ಲಿ ಬಿಡುಗಡೆಯಾಗುತ್ತಿದೆ.

ದೇಶೀಯ ಗೇಮ್!

ADVERTISEMENT

ಪಬ್‌ಜಿ ಗೇಮ್ ದೇಶದಲ್ಲಿ ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿತ್ತು. ಇದೀಗ ಅದರ ಜನಪ್ರಿಯತೆಯನ್ನು ಬಳಸಿಕೊಂಡು, ಪಬ್‌ಜಿ ಗೇಮ್ ಬದಲಾಗಿ ದೇಶದ ಆವೃತ್ತಿಯಾಗಿರುವ ‘ಫೌಜಿ’ಗೇಮ್ ಬಿಡುಗಡೆಗೆ ಸಜ್ಜಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದಸರಾ ಅವಧಿಯಲ್ಲಿ ಹೊಸ ಗೇಮ್ ಕುರಿತು ‘ಎನ್‌ಕೋರ್’ಗೇಮ್ಸ್ ಘೋಷಣೆ ಮಾಡಿತ್ತು.

ಬೆಂಗಳೂರಿನ ಕಂಪನಿ

ಎನ್‌ಕೋರ್ ಮೂಲತಃ ಬೆಂಗಳೂರಿನ ಕಂಪನಿಯಾಗಿದ್ದು, ನೂತನ ಗೇಮ್ ಅಭಿವೃದ್ಧಿಪಡಿಸುತ್ತಿದೆ. ಹೊಸ ‘ಫೌಜಿ’ ಗೇಮ್, ಫಿಯರ್‌ಲೆಸ್ ಆಂಡ್ ಯುನೈಟೆಡ್ ಗಾರ್ಡ್ಸ್ ಎಂಬ ಹೆಸರು ಹೊಂದಿದ್ದು, ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಕಂಪನಿ ಟ್ವಿಟರ್ ಮೂಲಕ ವಿವರ ನೀಡಿದೆ.

ಸೈನಿಕರ ಕುಟುಂಬಕ್ಕೆ ದೇಣಿಗೆ

ಹೊಸ ‘ಫೌಜಿ’ ಗೇಮ್ ಮೂಲಕ ಬರುವ ಆದಾಯದಲ್ಲಿ ಶೇ 20 ಪಾಲನ್ನು ಕೇಂದ್ರ ಗೃಹ ಸಚಿವಾಲಯ ನಡೆಸುವ 'ಭಾರತ್ ಕೆ ವೀರ್' ಫೌಂಡೇಶನ್‌ಗೆ ನೀಡಲಾಗುತ್ತದೆ. ಆ ಮೂಲಕ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಯೋಜನೆಯನ್ನು ‘ಫೌಜಿ’ ಗೇಮ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.