ADVERTISEMENT

ಗ್ರಾಮೀಣ ಭಾಗಗಳಿಗೆ ಸ್ಮಾರ್ಟ್‌ಫೋನ್‌ ತಲುಪಿಸಲು ಎಂಐ ವ್ಯಾನ್‌ ಸಂಚಾರ

ಏಜೆನ್ಸೀಸ್
Published 21 ಸೆಪ್ಟೆಂಬರ್ 2020, 14:49 IST
Last Updated 21 ಸೆಪ್ಟೆಂಬರ್ 2020, 14:49 IST
ಎಂಐ ಸ್ಟೋರ್‌ ವಾಹನ
ಎಂಐ ಸ್ಟೋರ್‌ ವಾಹನ   

ಬೆಂಗಳೂರು: ಭಾರತದ ಗ್ರಾಮೀಣ ಭಾಗದ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಶವೊಮಿ ಕಾರ್ಪೊರೇಷನ್‌ ಎಂಐ ಸ್ಟೋರ್‌ ವಾಹನಗಳಿಗೆ ಚಾಲನೆ ನೀಡಿದೆ. ಹಳ್ಳಿ ಪ್ರದೇಶಗಳಲ್ಲಿ ಈ ವಾಹನಗಳ ಮೂಲಕ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಿದೆ.

ಚೀನಾ ಮೂಲದ ಸಾಧನಗಳಿಗೆ ದೇಶದಾದ್ಯಂತ ಆಕ್ರೋಶ ಎದುರಾಗುತ್ತಿರುವ ಸಮಯದಲ್ಲಿಯೇ ಶವೊಮಿ ದೇಶದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಪ್ರಯತ್ನ ನಡೆಸಿದೆ. ದೇಶದ ಗ್ರಾಮೀಣ ಭಾಗಗಳಲ್ಲಿ ನಿರ್ದಿಷ್ಟ ಮಾರ್ಗಗಳಲ್ಲಿ ಎಂಐ ವ್ಯಾನ್‌ ಸಂಚರಿಸಲಿದ್ದು, ಸಂತೆಗಳು ಅಥವಾ ಜಾತ್ರೆಗಳು ಸೇರಿದಂತೆ ಜನರು ಸೇರುವ ಪ್ರದೇಶಗಳಲ್ಲಿ ಸಂಚಾರಿ ವಾಹನ ನಿಲ್ಲಲಿದೆ. ಮೊಬೈಲ್‌ ಫೋನ್‌ಗಳ ಜೊತೆಗೆ ಸ್ಮಾರ್ಟ್‌ ಟಿವಿಗಳು, ಸಿಸಿಟಿವಿ ಕ್ಯಾಮೆರಾಗಳು, ಇಯರ್‌ಫೋನ್‌ಗಳು, ಸನ್‌ಗ್ಲಾಸ್‌ಗಳು ಹಾಗೂ ಪವರ್ ಬ್ಯಾಂಕ್‌ಗಳನ್ನೂ ಮಾರಾಟ ಮಾಡುವುದಾಗಿ ಶವೊಮಿ ಹೇಳಿದೆ.

ಸ್ಮಾರ್ಟ್‌ಫೋನ್‌ ಬಿಡಿ ಭಾಗಗಳ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿ, ಭಾರತ–ಚೀನಾ ನಡುವೆ ಸಂಘರ್ಷದ ವಾತಾವರಣದ ನಡುವೆಯೂ ಜೂನ್‌ ತ್ರೈಮಾಸಿಕದಲ್ಲಿ ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಶವೊಮಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.

ADVERTISEMENT

ಗ್ರಾಹಕರ ಅಗತ್ಯಗಳನ್ನು ಪೂರೈಸಲು ಹಾಗೂ ದೂರದ ಹಳ್ಳಿಯವರೆಗೂ ತಲುಪಲು ಪ್ರಯತ್ನಿಸುತ್ತಿರುವುದಾಗಿ ಎಂಐ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಳಿಕೃಷ್ಣನ್‌ ಬಿ ಹೇಳಿರುವುದಾಗಿ ದಿ ಪ್ರಿಂಟ್‌ ವರದಿ ಮಾಡಿದೆ.

ಎಂಐ ಇಂಡಿಯಾ ದೇಶದಲ್ಲಿ 3,000 ಎಂಐ ಸ್ಟೋರ್‌ಗಳು, 4,000 ರಿಟೇಲ್‌ ಪಾಲುದಾರು ಹಾಗೂ 8,000 ಎಂಐ ಮಾರಾಟ ಪಾಲುದಾರರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.