ಎ.ಕೆ. ಶರ್ಮಾ
ಬೆಂಗಳೂರು: ಜನರು ತಮ್ಮ ಸಮಸ್ಯೆ ಹೇಳಿಕೊಂಡು ಬಂದಾಗ ಅದಕ್ಕೆ ಸೂಕ್ತ ಸ್ಪಂದನೆ ನೀಡದೇ ‘‘ಜೈ ಶ್ರೀರಾಮ್, ಜೈ ಭಜರಂಗ ಬಲಿ’’ ಎಂದು ಘೋಷಣೆ ಕೂಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಇಂಧನ ಸಚಿವ ಎ.ಕೆ. ಶರ್ಮಾ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸ್ವಕ್ಷೇತ್ರ ಸುಲ್ತಾನಪುರದ ಹಳ್ಳಿಯೊಂದಕ್ಕೆ ಇತ್ತೀಚೆಗೆ ತೆರಳಿದ್ದ ಎ.ಕೆ ಶರ್ಮಾರ ಬಳಿ ಸ್ಥಳೀಯರು 24 ಗಂಟೆಯಲ್ಲಿ ನಮ್ಮ ಹಳ್ಳಿಗೆ ಮೂರು ಗಂಟೆಯೂ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ದಯವಿಟ್ಟು ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡುತ್ತಾರೆ. ಆಗ ಸ್ವಲ್ಪ ಹೊತ್ತು ಬಿಟ್ಟು ಎ.ಕೆ. ಶರ್ಮಾ, ರಾಜಕೀಯ ಪಕ್ಷದ ಹಿಂಬಾಲಕರು ಜೋರಾಗಿ ಘೋಷಣೆ ಕೂಗುವ ಹಾಗೇ ಜೈಶ್ರೀರಾಮ್, ಜೈ ಭಜರಂಗಬಲಿ ಎಂದು ಕೂಗಿ ಅಲ್ಲಿಂದ ಹೊರಟುಹೋಗುತ್ತಾರೆ ಎಂದು ಆರೋಪಿಸಲಾಗಿದೆ.
ಸಚಿವರು ಜೈಶ್ರೀರಾಮ್, ಜೈ ಭಜರಂಗಬಲಿ ಎಂದು ಘೋಷಣೆ ಕೂಗುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ.
ಸದ್ಯ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹರಿದಾಡುತ್ತಿದ್ದು ಸರ್ಕಾರದ ಒಬ್ಬ ಜವಾಬ್ದಾರಿಯುತ ಸಚಿವರು ಈ ರೀತಿ ನಡೆದುಕೊಳ್ಳಬಾರದು. ‘ಸಚಿವರಾದ ನೀವು ಯಾವುದೊ ಒಂದು ರಾಜಕೀಯ ಪಕ್ಷದ ಪುಡಾರಿಯಂತೆ ವರ್ತಿಸುವುದು ಎಷ್ಟು ಸರಿ’? ಎಂದು ಪ್ರಶ್ನಿಸಿದ್ದಾರೆ. ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶೇಷ ಎಂದರೆ ಎ.ಕೆ. ಶರ್ಮಾ ಅವರು ಮಾಜಿ ಐಎಎಸ್ ಅಧಿಕಾರಿ ಎನ್ನಲಾಗಿದೆ. ತಮ್ಮ ವಿರುದ್ಧ ಬಂದಿರುವ ಆರೋಪಗಳ ಕುರಿತು ಅವರು ಎಕ್ಸ್‌ನಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅಲ್ಲಿ ಜನ ಜೈಶ್ರೀರಾಮ್ ಎಂದು ಕೂಗಿದಾಗ ಅದಕ್ಕೆ ಪ್ರತಿಕ್ರಿಯಿಸಿದ್ದೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.