ADVERTISEMENT

ಅವಳಂತೆ ಯಾರೂ ಇಲ್ಲ!

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:30 IST
Last Updated 13 ಏಪ್ರಿಲ್ 2018, 19:30 IST
ಅವಳಂತೆ ಯಾರೂ ಇಲ್ಲ!
ಅವಳಂತೆ ಯಾರೂ ಇಲ್ಲ!   

ಸುಶೀಲಾ ಮಂಜುನಾಥ್

ನನಗೆ ತಿಳಿವಳಿಕೆ ಬಂದಾಗಿನಿಂದಾಗಿಲೂ ಅಮ್ಮ ಖುಷಿಯಿಂದ ಇದ್ದದ್ದನ್ನು ನಾನು ಕಂಡಿರಲಿಲ್ಲ; ಬದುಕಿನ ಬಂಡಿಯ ನೊಗ ಹೊತ್ತ ಎತ್ತಿನಂತೆ ದುಡಿಯುತ್ತಿದ್ದಳು. ಅಪ್ಪನ ಛಾಟಿ ಏಟು, ನಿಂದನೆ, ಬೈಗುಳಗಳ ಕೊಳದಲ್ಲಿ ಅವಳದು ಮುಳುಗೇಳುವ ಬದುಕಾಗಿತ್ತು! ಹೆಪ್ಪುಗಟ್ಟಿದ ನೀರವತೆಯ ನಡುವೆಯೂ, ಪ್ರೇಮಮಯ ಹೃದಯ ಅವಳದ್ದು. ಅದು ಮಿಡಿಯುತ್ತಿದ್ದುದು ಕೇವಲ ನನಗಾಗಿ, ನನ್ನ ಓದಿಗಾಗಿ ಮತ್ತು ಬದುಕಿಗಾಗಿ ಕಾಡು-ಮೇಡುಗಳಲ್ಲಿ ಅಲೆದಳು, ಕಾಲುಗಳಿಗೆ ಚುಚ್ಚಿದ ಮುಳ್ಳು ಕಿತ್ತೆಸೆದು ಮುನ್ನಡೆದಳು. ಚಳಿ, ಮಳೆ, ಬಿಸಿಲಿಗೆ, ಬಳಲಿದರೂ ಅರಳಿದಳು ಕಮಲದಂತೆ, ಕೆಸರಿನ ಕಮಲದಂತೆ. ‘ತನ್ನ ಮಗಳು ಈ ಮಾಮರದ ಕೋಗಿಲೆಯಂತೆ ಹಾಡಬೇಕು; ಈ ಅರಳಿದ ಹೂವಂತೆ ನಗುತಿರಬೇಕು; ಚೈತ್ರದ ವಸಂತನಂತೆ ಬರೆಯಬೇಕು, ಆಗಸದ ಚುಕ್ಕಿ-ಚಂದ್ರಮನಂತೆ ಹೊಳೆಯಬೇಕು; ಬೆಳಗಬೇಕು’ ಎಂದು ಕನಸು ಕಂಡವಳು.

ನನ್ನ ಅಮ್ಮನೆಂದರೆ ‘ಪ್ರೇಮಸಾಗರದಂತೆ’ ಎಷ್ಟು ಮೊಗೆದರೂ ಪ್ರೀತಿ ಕಡಿಮೆಯಾಗುತ್ತಿರಲಿಲ್ಲ. ಅವಳ ಮಾತು, ಸ್ಪರ್ಶ ನನಗೆ ಸ್ವರ್ಗದಿಂದ ಸುವರ್ಣ ಮಳೆಗೆರೆದಂತಾಗುತ್ತಿತ್ತು. ಪ್ರೀತಿ-ಮಮತೆಯಲ್ಲಿ ಅವಳು ಯಶೋಧರೆಯಾಗಿದ್ದಳು. ಹುಣ್ಣಿಮೆ ಚಂದ್ರನ ಬೆಳದಿಂಗಳಿನಲ್ಲಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಕೊಡುತ್ತಿದ್ದ ಕೈ ತುತ್ತು, ಮಾತೃವಾತ್ಸಲ್ಯದ ಮುತ್ತು ಯಾವ ದೇವರು ತಾನೇ ದಯಪಾಲಿಸಲು ಸಾಧ್ಯ!?

ADVERTISEMENT

ನಾನು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಅಮ್ಮ ತರಗತಿ ಕೊಠಡಿಗಳ ಕಿಟಕಿಯ ಬಳಿ ಬಂದು ನನ್ನ ಕರೆದು, ಮನೆಯ ಬೀಗದ ಕೈ ಕೊಡುತ್ತಿದ್ದಳು – ಮಗಳು ಉಪವಾಸವಿರದಿರಲೆಂದು‌. ಆಮೇಲೆ ಬಿಸಿಲೋ ಮಳೆಯೋ ಶೀತವೋ, ತನ್ನನ್ನೇ ನಂಬಿರುವ ಮೂಕ ಜೀವಿಗಳಿಗೆ ಹುಲ್ಲು ಮೇಯಿಸಲು ಹೋಗುತ್ತಿದ್ದಳು. ಅಪರೂಪಕ್ಕೊಮ್ಮೆ ಅಮ್ಮನ ಕೆಲಸಕ್ಕೆ ನನ್ನನ್ನು ಕಳಿಸುವಾಗ ನನಗೆ ಕಣ್ಣಂಚಲ್ಲಿ ಹನಿ ಮೂಡಿರುತ್ತಿತ್ತು. ಹಾಗೆ ಕಳುಹಿಸಿ ಕೆಲಸದೊಂದಿಗೆ, ಪರಿಸರವನ್ನು ಪ್ರೀತಿಸುವ ಪಾಠವನ್ನೂ, ಬದುಕಿನ ಪಾಠವನ್ನೂ ಕಲಿಸಿದ್ದಳು.

ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಲು ಸೀರೆ, ಬಳೆ, ಜಡೆಕುಚ್ಚು, ಪಾಪಡಿ ಬೊಟ್ಟು, ಸೊಂಟಪಟ್ಟಿ – ಹೀಗೆ ಎಲ್ಲವನ್ನು ಅಮ್ಮ ಅವರಿವರ ಬಳಿ ಕೇಳಿಯೋ, ಸಾಲಮಾಡಿಯೋ, ಹೊಂದಿಸಿಕೊಡುತ್ತಿದ್ದಳು. ಛಲದಿಂದ ಹಿಡಿದ ಕೆಲಸ ಸಾಧಿಸುವ ಪ್ರವೃತ್ತಿ ಅವಳದ್ದು. ಒಮ್ಮೊಮ್ಮೆ ಅಪ್ಪ ನನ್ನ ಹೊಡೆಯಲು ಬಂದಾಗ, ತಾನು ಉಟ್ಟಿದ್ದ ಸೀರೆಯ ನೆರಿಗೆಗಳಲ್ಲಿ ನನ್ನ ಬಚ್ಚಿಟ್ಟು ಅಪ್ಪನ ಏಟಿನಿಂದ ತಪ್ಪಿಸುತ್ತಿದ್ದಳು ನನ್ನಮ್ಮ.

ತ್ಯಾಗ, ಕರುಣೆ, ನಿಃಸ್ವಾರ್ಥ, ಶ್ರಮಗಳ ಜೊತೆಯಲ್ಲಿ ಹಾಡುಗಾರಿಕೆಯನ್ನೂ ಕಲಿಸಿದವಳು ಅಮ್ಮ; ನಡತೆಯನ್ನೂ ಕಲಿಸಿದಳು. ಪ್ರೀತಿ-ಸ್ನೇಹ–ಸಂಬಂಧಗಳನ್ನು ಉಳಿಸಿಕೊಳ್ಳುವುದು ಅಮ್ಮನ ಪ್ರಭಾವದಿಂದ ನನಗೆ ಬಂದ ಬಳುವಳಿಗಳು. ಅಮ್ಮ ಚೆಲ್ಲಿದ ಬೀಜ ಹೂವಾದವು. ಅಮ್ಮ ನನ್ನನ್ನು ನಿರ್ಮಿಸಿದ ‘ಶಿಲ್ಪಿ’. ಅಪ್ಪನಿಂದ ಎದುರಾಗುತ್ತಿದ್ದ ಶೋಷಣೆಯ ವಿರುದ್ಧ ಹೋರಾಡುತ್ತಲೇ, ಹರಿವ ನದಿಯಲ್ಲಿ ಹರಿದು ತೇಲಿಹೋಗುವ ಹೋಗುವ ತರಗೆಲೆಯಂತೆ, ನನ್ನಿಂದ ಬಹುದೂರ ನಡೆದುಹೋದಳು ಅಮ್ಮ! ಆದರೆ ಸಮಾನತೆಯ ಗುರಿಯನ್ನು ತಲುಪಬೇಕೆಂಬ ಸಂದೇಶವನ್ನು ನನಗೆ ಹೇಳಲು ಮರೆಯಲಿಲ್ಲ ಅವಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.