ADVERTISEMENT

ಆಯಮ್ಮ

ಮಿನಿಕಥೆ

ಪ್ರಜಾವಾಣಿ ವಿಶೇಷ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST
ಆಯಮ್ಮ
ಆಯಮ್ಮ   

ಅಪ್ಪ ತೀರಿಕೊಂಡ ವಿಷಯ ನಮಗೆ ತಿಳಿದದ್ದು ಒಬ್ಬ ಕ್ಷೌರಿಕನಿಂದ. ಅಪ್ಪ ನಮ್ಮನ್ನೆಲ್ಲ ಬಿಟ್ಟು ಮೂರು ವರ್ಷಗಳಿಂದ ಒಬ್ಬ ಯುವತಿಯೊಂದಿಗೆ ಇರತೊಡಗಿದ್ದರು. ಆದರೂ ಅಪ್ಪ ಸತ್ತ ಸುದ್ದಿ ತಿಳಿಯುತ್ತಿದ್ದಂತೆ ತಾಯಿಗೆ ತಲೆ ಸುತ್ತು ಬಂದಂತಾಗಿ ಹಿಂದಕ್ಕೆ ಮಗುಚಿ ಬಿದ್ದರು.

ಅಮ್ಮನಿಗೆ ಪ್ರಜ್ಞೆ ಮರಳಿದ ಕೂಡಲೇ ನಾನು ಅಪ್ಪ ವಾಸಿಸುತ್ತಿದ್ದ ಸ್ಥಳಕ್ಕೆ ಹೊರಟೆ. ಆಯಮ್ಮ ನನ್ನ ತಂದೆಯಿಂದ ಉಯಿಲು ಬರೆಸಿಕೊಂಡಿದ್ದರೆ ಅದನ್ನು ನಾಜೂಕಾಗಿ ಪಡೆಯಬೇಕೆಂದು ದೃಢಸಂಕಲ್ಪ ಮಾಡಿದೆ.

ಅಪ್ಪ ಮತ್ತು ಆಯಮ್ಮ ವಾಸಿಸುತ್ತಿದ್ದ ಜಾಗ ತಲುಪಿದಾಗ ಅವಳು ಅಪ್ಪನ ಮೃತದೇಹದ ಕಾಲಬುಡದಲ್ಲಿ ತಲೆಯಿಟ್ಟು ಗೊಳೋ ಎಂದು ಅಳುತ್ತಿದ್ದಳು.

`ಅಪ್ಪನಿಂದ ಹೊಸ ಉಯಿಲನ್ನೇನಾದರೂ ಬರೆಸಿದ್ದೀರಾ?' ನಾನು ಆಕೆಯನ್ನು ಕೇಳಿದೆ. ಅತ್ತು ಅತ್ತು ಕೆಂಪಾದ ತನ್ನ ಕಣ್ಣುಗಳನ್ನು ಆಕೆ ನನ್ನತ್ತ ತಿರುಗಿಸಿದಳು. ಆದರೆ ಮಾತನಾಡಲಿಲ್ಲ. ನನಗೆ ಯಾವುದೇ ರೀತಿಯ ಅನುಕಂಪವೂ ಅವಳ ಮೇಲೆ ಉಂಟಾಗಲಿಲ್ಲ.
`ಅಪ್ಪನ ಆಸ್ತಿಯ ಮೇಲೆ ನಿಮಗೆ ಯಾವುದೇ ರೀತಿಯ ಹಕ್ಕಿಲ್ಲವೆಂದು ನಿಮಗೆ ಗೊತ್ತಿದೆ ತಾನೇ?' ನಾನು ಕೇಳಿದೆ. ಆಗಲೂ ಅವಳು ಮೌನವಾಗಿದ್ದಳು.

`ನಮಗೆ ತೊಂದರೆ ಕೊಡಬೇಕೆಂಬ ಉದ್ದೇಶವೇನಾದರೂ ನಿಮಗೆ ಇದೆಯೇ?'

`ನನ್ನಿಂದ ಯಾರಿಗೂ ತೊಂದರೆಯಾಗುವುದಿಲ್ಲ' ಅವಳು ಬಾಯಿ ಬಿಟ್ಟಳು. `ಹಾಗಾದರೆ ನೀವು ಆದಷ್ಟು ಬೇಗನೇ ಇಲ್ಲಿಂದ ಹೊರಡಿ. ಶವ ತೆಗೆಯಬೇಕೆಂದರೆ ಇನ್ನು ಅರ್ಧ ಗಂಟೆಯಾದರೂ ಬೇಕು. ನಮ್ಮ ಸಂಬಂಧಿಕರು ಬಂದಾಗ ನೀವು ಇಲ್ಲಿರುವುದು ಸರಿಯಾಗಲಾರದು' ನಾನು ಹೇಳಿದೆ.

`ನಾನು ಎಲ್ಲಿಗೆ ಹೋಗಲಿ?' ಅವಳು ತುಂಬಾ ಮೆದು ಧ್ವನಿಯಲ್ಲಿ ಕೇಳಿದಳು. ಆ ಪ್ರಶ್ನೆ ಅಪ್ಪನ ಮೃತದೇಹದೊಂದಿಗೆ ಕೇಳಿದಂತೆನಿಸಿತು.

ಅವಳ ಕಣ್ಣುಗಳು ತುಂಬಿ ಹರಿಯತೊಡಗಿದವು. ನಾನು ಮತ್ತೂ ಆತುರದಿಂದ ಹೇಳಿದೆ, `ನೋಡಿ, ನೀವು ನಿಮ್ಮ ಪೆಟ್ಟಿಗೆ, ಬಟ್ಟೆ ಬರೆಗಳನ್ನು ತೆಗೆದುಕೊಂಡು ಹೊರಡಿ. ನಿಮ್ಮದೂಂತ ಯಾವುದನ್ನೂ ಇಲ್ಲಿಟ್ಟು ಹೋಗಬೇಡಿ'.

ಅವಳು ಬಾಗಿ ಅಪ್ಪನ ಪಾದಗಳಿಗೆ ಲೊಚ ಲೊಚನೆ ಮುತ್ತಿಟ್ಟಳು. ಅನಂತರ ಅವಸರ ಅವಸರವಾಗಿ ಬಾಗಿಲಿನತ್ತ ನಡೆದಳು. ಏನೋ ಮರೆತವಳಂತೆ ಕ್ಷಣ ಕಾಲ ಬಾಗಿಲ ಬಳಿ ನಿಂತು ಸುತ್ತಲೂ ಕಣ್ಣಾಡಿಸಿದಳು.

`ಇಲ್ಲ, ಇನ್ನು ಇಲ್ಲಿ ನನ್ನದೆಂಬುದು ಏನೂ ಇಲ್ಲ' ಎಂದು ಹೇಳುತ್ತಾ ಮೆಟ್ಟಿಲುಗಳನ್ನಿಳಿದು ಬೀದಿ ಸೇರಿಕೊಂಡಳು. ಕೊಳೆಯಾದ ಸೀರೆಯೊಂದು ಅವಳ ಮೈಯನ್ನು ಸುತ್ತಿತ್ತು. ಒಮ್ಮೆಯೂ ಅವಳು ಹಿಂತಿರುಗಿ ನೋಡದೆ ತರಾತುರಿಯಿಂದ ಮುಂದೆ ಮುಂದೆ ನಡೆದು ಹೋದಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.