ADVERTISEMENT

ಇಳಿಜಾರಿನ ವಯಸ್ಸು, ಇರಲಿ ಹುಮ್ಮಸ್ಸು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಇಳಿಜಾರಿನ ವಯಸ್ಸು, ಇರಲಿ ಹುಮ್ಮಸ್ಸು
ಇಳಿಜಾರಿನ ವಯಸ್ಸು, ಇರಲಿ ಹುಮ್ಮಸ್ಸು   

ಬಾಲ್ಯ, ಯೌವನ, ಮುಪ್ಪು ಇವು ಪ್ರಕೃತಿದತ್ತವಾದ ಕೊಡುಗೆ. ವಯಸ್ಸು ಎನ್ನುವುದು ಹರಿಯುವ ನೀರಿನಂತೆ ನಿರಂತರವಾಗಿ ಚಲಿಸುವ ಪ್ರಕ್ರೀಯೆ. ಅದರಲ್ಲೂ ಇಳಿಜಾರಿನ ವಯಸ್ಸಿನ ಹಜ್ಜೆಯನ್ನು ಹಿಂದೂಡಲಂತೂ ಸಾಧ್ಯವಿಲ್ಲ.ಆದರೆ ಮುನ್ನಡೆಯಲೇ ಬೇಕು. ಇದರಲ್ಲಿ ಹೆಣ್ಣು, ಗಂಡು ಎಂಬ ಭೇದವಿಲ್ಲ. ಅದರಲ್ಲೂ ಹೆಚ್ಚಾಗಿ ಮಹಿಳೆಯರು ಬಹಳ ಬೇಗ ವಯಸ್ಸಾದಂತೆ ನಿಶ್ಯಕ್ತರಾಗುತ್ತಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ಬಿ.ಪಿ, ಶುಗರ್,ಥೈರಾಯ್ಡ್, ಮೆನೋಪಾಸ್ ಎಂಬ ಕಾಯಿಲೆಗಳು ವಯಸ್ಸನ್ನು ನೆನೆಪಿಸುವ ಹಾಗೂ ಟೇಕ್ ಕೇರ್ ಎನ್ನುವ ಮಹತ್ವವನ್ನು ತಿಳಿಯ ಪಡಿಸುವ ಸಹಪಾಠಿಗಳೆಂದೇ ಹೇಳ ಬಹುದು. ಸಾಧಾರಣವಾಗಿ ೪೦, ೪೫ರ ವಯಸ್ಸಿನಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ.

ವಯಸ್ಸಾಗಿದೆ ಎಂದ ಮಾತ್ರಕ್ಕೆ ಮುಪ್ಪು ಆವರಿಸಿದೆ ಎಂದು ಅರ್ಥವಲ್ಲ, ಆದರೆ ಇಪ್ಪತೈದರ ಯುವತಿಯಂತೂ ಅಲ್ಲ! ಒಂದೆಡೆ ಹೆರಿಗೆ, ಮಕ್ಕಳ ಪೋಷಣೆ, ಉದ್ಯೋಗ, ಒತ್ತಡ, ಮನೆಯ ಜವಾಬ್ದಾರಿ, ಸಮಯದ ಅಭಾವ, ವಿಶ್ರಾಂತಿಯ ಕೊರತೆ ಹೀಗೆ ನಾನಾ ಸಮಸ್ಯೆಗಳಿಂದ ಬಳಲುವವರೇ ಹೆಚ್ವು.ಅನಾವಶ್ಯಕ ಭಯ, ಉದ್ವೇಗ, ಸಾವಿನ ಹೆದರಿಕೆ ಸಾಮಾನ್ಯವಾಗಿ ಹೆಚ್ಚಾಗಿಯೇ ಕಾಣ ಬರುತ್ತವೆ. ಮನೆ ಮಂದಿ ಚೆನ್ನಾಗಿರ ಬೇಕೆಂದು ಕಷ್ಟವಾದರೂ ತನ್ನ ಆರೋಗ್ಯದ ಕಡೆ ಗಮನ ಕೊಡದೆ ಕೆಲಸ ಕಾರ್ಯ ದಲ್ಲಿ ತೊಡಗಿ ಕೊಳ್ಳುವುದು ಹೆಣ್ಣಿನ ಹುಟ್ಟು ಗುಣ. ಆದರೆ ಮುಂದೊಂದು ದಿನ ಅದೇ ತನಗೆ ಮಾರಕವಾಗುವುದು ಎನ್ನುವ ಸೂಕ್ಷ್ಮ ಅರಿವು ಇರ ಬೇಕಾದದ್ದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

ಮಾನಸಿಕವಾಗಿಯೂ ದೈಹಿಕವಾಗಿಯೂ ಆರೋಗ್ಯದಿಂದಿರಲು ಕೆಲವು ಸೂಚನೆಗಳನ್ನು ಪಾಲಿಸಲೇ ಬೇಕಾಗುತ್ತದೆ. ಜೀವನ ಶೈಲಿಯಲ್ಲಿ ಆರೋಗ್ಯಕರ ಆಯ್ಕೆಯನ್ನು ಮಾಡಿ ಕೊಳ್ಳುವುದು ಸೂಕ್ತ.

ADVERTISEMENT

* ಮನೆಯ ಸದಸ್ಯರ ಪಾತ್ರ: ಶ್ರಮದಾಯಕ ಕೆಲಸಗಳಿಗೆ ಪತಿ,ಮಕ್ಕಳ ಹಾಗೂ ಮನೆಯ ಸದಸ್ಯರ ಸಹಾಯ ಪಡೆದುಕೊಳ್ಳುವುದು.ಇದರಿಂದ ಸಮಯ ನಿರ್ವಹಣೆ ಸಾದ್ಯ.

* ಸಕಾರಾತ್ಮಕ ಆಲೋಚನೆ: ಸಕಾರಾತ್ಮಕ ಚಿಂತನೆಯಿಂದ ವ್ಯರ್ಥವೆನಿಸುವ ಆಲೋಚನೆಗಳಿಂದ ದೂರ ಸರಿದು ದಿನವಿಡೀ ಲವಲವಿಕೆಯಿಂದ ಇರ ಬಹುದು.

* ಸ್ನೇಹಿತರ,ಕುಟುಂಬದ ಸಹಾಯ: ಒತ್ತಡ ಉಂಟು ಮಾಡುತ್ತಿರುವ ವಿಚಾರಗಳನ್ನು ,ಸಮಸ್ಯೆಗಳನ್ನು ಬಗೆ ಹರಿಸಿ ಕೊಳ್ಳಲು ನಿಮ್ಮ ಆತ್ಮೀಯ ಗೆಳೆಯರ, ಕುಟುಂಬದ ಸಹಾಯ ಪಡೆದು ಕೊಳ್ಳುವುದು ಉತ್ತಮ.

* ಮನಸ್ಸಿಗೆ ಆಹಾರ: ಸವಾಲು ಎದುರಿಸುವ ಎದೆಗಾರಿಕೆ ನಿಮ್ಮ ಮಾನಸಿಕ ಸಾಮರ್ಥ್ಯವನ್ನು ಉತ್ತಮ ಪಡಿಸುತ್ತದೆ.ಓದುವ ಹವ್ಯಾಸ, ಬರವಣಿಗೆ,ಸಂಗೀತ ಆಲಿಸುವಿಕೆ ಇತ್ಯಾದಿಗಳು ಮನಸ್ಸನ್ನು ಸ್ಥಿಮಿತದಲ್ಲಿ ಇರಿಸುತ್ತವೆ.

* ದಿನಚರಿ ಬರೆಯುವ ಹವ್ಯಾಸ: ದಿನ ನಿತ್ಯದ ಅನುಭವ ಬರೆದು ನಿರಾಳವಾಗುವುದರ ಜೊತೆಗೆ ಮುಂದಿನ ದಿನಚರಿ, ಯೋಜನೆಗಳನ್ನು ರೂಪಿಸ ಬಹುದು. ಹೊಸತೇನಾದರೂ ಬರೆಯಿರಿ. ಕ್ರಿಯಾತ್ಮಕತೆ, ಕಲ್ಪನೆಗಳಿಗೆ ಹೊಸ ಕಲಿಕೆ ಮನಸ್ಸಿಗೆ ಕೆಲಸ ಕೊಡುತ್ತದೆ ಜೊತೆಗೆ ಒತ್ತಡದಿಂದ ಮುಕ್ತವಾಗಲು ಸುಲಭದ ದಾರಿ.

* ದೈಹಿಕ ಚಟುವಟಿಕೆಗಳು: ದೇಹ ಮತ್ತು ಮನಸ್ಸನ್ನು ಉಲ್ಲಸಿತವಾಗಿ ಇರಿಸುತ್ತವೆ.ಖಿನ್ನತೆ ಯಿಂದ ಹೊರ ಬರಲು ಸಹಾಯ ಮಾಡುತ್ತವೆ.

* ಧ್ಯಾನ, ಪ್ರಾಣಾಯಾಮ: ಮನಸ್ಸನ್ನು ಏಕಾಗ್ರತೆ ಹಾಗೂ ದೃಢತೆಯತ್ತ ಕೊಂಡೊಯ್ಯುವಲ್ಲಿ ಸಹಕಾರಿ. ಅರ್ಥವಿಲ್ಲದ ಆಲೋಚನೆಗಳಿಂದ ಹೊರ ಬರ ಬಹುದು.

* ವ್ಯಾಯಾಮ/ವಾಕಿಂಗ್: ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳುವುದರ ಜೊತೆಗೆ ಸದಾ ಉಲ್ಲಸಿತರಾಗಿ ಕ್ರಿಯಾ ಶೀಲರಾಗಿರ ಬಹುದು.

* ಶರೀರದ ತಪಾಸಣೆ: ವರ್ಷಕ್ಕೊಮ್ಮೆ ಶರೀರದ ಆರೋಗ್ಯದ ಬಗ್ಗೆ ವೈದ್ಯರಿಂದ ತಪಾಸಣೆ ಮಾಡಿಸಿ ಕೊಂಡು ಅವರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.