ADVERTISEMENT

ಇವರು ಹೀಗಂತಾರೆ...

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST
ಇವರು ಹೀಗಂತಾರೆ...
ಇವರು ಹೀಗಂತಾರೆ...   

ಪ್ರೀತಿಯಿಂದ ಮಾಡುವ ಕೆಲಸವನ್ನು ಹಣದಿಂದ ಅಳೆಯುವುದು ಸುತಾರಾಂ ಸಲ್ಲ. ಇಡೀ ಸಂಬಳವನ್ನೇ ಹೆಂಡತಿಯ ಕೈಗೆ ಇಡುವ ಗಂಡಸರ ಕತೆ ಏನಾಗಬೇಕು? ವೇತನವೆಂದ ಮೇಲೆ ವಾರದ ರಜೆ ನೀಡಬೇಕು, ಸೇವೆ ಸರಿಯಿಲ್ಲ ಎಂದು ಹೆಂಡತಿಯನ್ನು ಬದಲಾಯಿಸಲು ಸಾಧ್ಯವೇ? ವೇತನ ನೀಡಿಕೆಯಿಂದ ಗಂಡ ಪ್ರೀತಿಯಿಂದ ಹೆಂಡತಿಗೆ ನೀಡುವ ವಸ್ತುಗಳಿಗೆ ಕತ್ತರಿ ಬೀಳುತ್ತದೆ. ಸಂಬಳ ಕೊಡುತ್ತಿಲ್ಲವೇ ಎಂಬ ದರ್ಪ ಮನೆಮಾಡುತ್ತದೆ. ಕೆಟ್ಟಿರುವ ಸಂಬಂಧಗಳನ್ನು ಸಂಬಳದಿಂದ ಸರಿ ಮಾಡಲು ಸಾಧ್ಯವಿಲ್ಲ. 
-ಜಯಂತಿ ಮನೋಹರ್, ಲೇಖಕಿ

ಪುರುಷನ ಚಟುವಟಿಕೆಗಳಿಗೆ ಆರ್ಥಿಕ ಮೌಲ್ಯ ಇರುವಂತೆ ಗೃಹ ಕೆಲಸಕ್ಕೂ ಆರ್ಥಿಕ ಮತ್ತು ಸಾಮಾಜಿಕ ಮನ್ನಣೆ ದೊರೆಯಲಿರುವುದು ಸಂತಸದ ವಿಚಾರ. ಮಹಿಳೆಯರಿಗೆ ಆಸ್ತಿಹಕ್ಕು ದೊರಕಿದೆ ಅಂದ ಮಾತ್ರಕ್ಕೆ ಕುಟುಂಬ ಮತ್ತು ಭಾವನಾತ್ಮಕ ಸಂಬಂಧಗಳಿಗೆ ತೊಂದರೆಯಾಗಿದೆಯೇ?
- ಕೆ.ಎಸ್.ಲಕ್ಷ್ಮಿ, ಜನವಾದಿ ಮಹಿಳಾ ಸಂಘಟನೆ ಕಾರ್ಯದರ್ಶಿ

ಬಸವಣ್ಣನವರು ಗೃಹಿಣಿಯರಿಗೂ ಸಾಮಾಜಿಕ ಮನ್ನಣೆ ದೊರೆಯಬೇಕೆಂದು ವಾದಿಸಿದ್ದರು. ಇದು ಸಾಕಾರಗೊಳ್ಳುತ್ತಿರುವುದು ಸ್ವಾಗತಾರ್ಹವೇ. ಆದರೆ ಸರ್ಕಾರಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡೇ ಈ ಮಸೂದೆಯನ್ನು ರಚಿಸಿದಂತಿದೆ.

ಕೆಳ ವರ್ಗದ ಗಂಡಸಿಗೆ ನಿಗದಿತ ಸಂಬಳವೇ ಇರುವುದಿಲ್ಲವೆಂದ ಮೇಲೆ ಆತ ತನ್ನ ಪತ್ನಿಗೆ ಯಾವ ರೀತಿ ಹಣ ನೀಡಬಲ್ಲ ಎಂಬುದನ್ನು ಯೋಚಿಸಬೇಕು. ವಯಸ್ಸಾದ ಮೇಲೆ, ಗಂಡ ಮತ್ತು ಮಕ್ಕಳು ನೋಡಿಕೊಳ್ಳದೇ ಇರುವ ಸಂದರ್ಭದಲ್ಲಿ ಈ ಮಸೂದೆ ನೆರವಿಗೆ ಬರುತ್ತದೆ.
-ಮಲ್ಲಿಕಾ ಘಂಟಿ, ಲೇಖಕಿ

ADVERTISEMENT

ಈ ಮಸೂದೆಯಿಂದ ಪುರುಷರಿಗೆ ನಿಜವಾಗಿಯೂ ಅನ್ಯಾಯವಾಗುತ್ತದೆ. ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮಹಿಳೆಗೆ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಇದರೊಂದಿಗೆ ಗೃಹಿಣಿಯರಿಗೆ ಮಾಸಿಕ ಭತ್ಯೆ ನೀಡುವುದು ಕೂಡ ಗಂಡಸರ ದೌರ್ಜನ್ಯಕ್ಕೆ ಮತ್ತೊಂದು ದಾರಿಯಾಗುತ್ತದೆ. ಭಾರತೀಯ ಸಂಸ್ಕೃತಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಈ ಮಸೂದೆ ಎಂದಿಗೂ ಜಾರಿಯಾಗಬಾರದು.
-ಬಿ.ಎಸ್.ಗೌಡ, ಪುರುಷ ರಕ್ಷಣಾ ವೇದಿಕೆ ಅಧ್ಯಕ್ಷ

ಎಷ್ಟೋ ಬಾರಿ ಹೆಂಡತಿಯನ್ನು ಗಂಡ ಸರಿಯಾಗಿ ನೋಡಿಕೊಳ್ಳುತ್ತಿರುವುದಿಲ್ಲ. ಮನೆಗೆ ಅಗತ್ಯವಾದ ಸಾಮಾನುಗಳನ್ನು ತಂದು ಹಾಕುವುದಿಲ್ಲ. ಕೆಲವು ಮಹಿಳೆಯರಿಗೆ ಹೊರಗೆ ದುಡಿಯಲು ಅವಕಾಶ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಗೃಹಿಣಿಗೂ ಮಾಸಿಕ ವೇತನ ಕಾನೂನು ಜಾರಿಯಾಗಿ ಬಿಟ್ಟರೆ ಖಂಡಿತವಾಗಿಯೂ ಆಕೆಗೆ ಆಧಾರವಾಗುತ್ತದೆ.
-ಪ್ರಭಾ ಮೂರ್ತಿ, ಹೈಕೋರ್ಟ್ ವಕೀಲೆ

ಗಂಡನೇ ಸರ್ವಸ್ವ ಎಂದು ನಂಬಿಕೊಳ್ಳುವ ಕೆಳವರ್ಗದ ಮಹಿಳೆಯ ದಾಂಪತ್ಯ ಜೀವನದಲ್ಲಿ ವಿರಸ ಉಂಟಾದರೆ, ಕುಟುಂಬದ ಸದಸ್ಯರು ಕಿರುಕುಳ ನೀಡಿದರೆ ಈ ಮಸೂದೆ ಆಕೆಯ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಮಹಿಳೆ ಮಾಡುವ ಮನೆಗೆಲಸವನ್ನು ಹಣದಿಂದ ಅಳೆಯಬೇಕೇ ಎಂಬ ಪ್ರಶ್ನೆ ಭಾವನಾತ್ಮಕ ನೆಲೆಯದ್ದು. ಆದರೆ, ಅಶಕ್ತ ಮತ್ತು ಪರಿತ್ಯಕ್ತ ಮಹಿಳೆಯರಿಗೆ ಈ ಮಸೂದೆಯಿಂದ ಹೆಚ್ಚಿನ ಉಪಯೋಗವಿದೆ.
-ಶೋಭಾ ಕರಂದ್ಲಾಜೆ, ಇಂಧನ ಸಚಿವೆ

ಉದ್ಯೋಗದಾತ ಮತ್ತು ಉದ್ಯೋಗಿಯಂತೆ ಗಂಡ- ಹೆಂಡತಿ ಇರಲು ಸಾಧ್ಯವೇ? ಮಾಸಿಕ ವೇತನ ನೀಡಿದರೆ ಗುಣಮಟ್ಟದ ಬಗ್ಗೆಯೂ ಚರ್ಚೆ ನಡೆಸಬೇಕಾಗುತ್ತದೆ. ಇನ್ನು ಹೆಣ್ಣು ಮಕ್ಕಳಿಂದಲೇ  ಸಂಸಾರದ ಬೇರು ಗಟ್ಟಿಯಾಗಿದೆ. ಹಣದ ಆಮಿಷಕ್ಕೆ ಒಳಗಾಗುವ ಮಹಿಳೆಯರು ಈ ಮಸೂದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಇದನ್ನು ವಿರೋಧಿಸಿ ಕಾನೂನು ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ.
-ಕುಮಾರ್ ಜಾಗೀರ‌್ದಾರ್, ಕ್ರಿಸ್ಪ್ ಸಂಘಟನೆಯ ಅಧ್ಯಕ್ಷ

ಹೊರಗಿನ ಪ್ರಪಂಚಕ್ಕೆ ಅಷ್ಟೇನೂ ತೆರೆದುಕೊಳ್ಳದ ಮಧ್ಯಮ, ಕೆಳವರ್ಗದ  ಮಹಿಳೆಯರ ದಾಂಪತ್ಯ ಸರಿ ಇಲ್ಲದೇ ಹೋದ ಸಂದರ್ಭದಲ್ಲಿ ಮಸೂದೆ ನೆರವಿಗೆ ಬರುತ್ತದೆ. ಆದರೆ, ಭಾರತೀಯ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಮತ್ತು ಬಡ ಹೆಣ್ಣಿನ ಶೋಷಣೆಗೆ ಕಡಿವಾಣ ಹಾಕುವ ದಿಸೆಯಲ್ಲಿ ಮಸೂದೆ ಜಾರಿಯಾಗಬೇಕು.
-ತಾರಾ ಅನುರಾಧ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.