ADVERTISEMENT

ಉಗರು: ನಿಮ್ಮ ಆರೋಗ್ಯದ ಕನ್ನಡಿ

ಸ್ವಾಸ್ಥ್ಯ ಸೌಂದರ್ಯ

ಡಾ.ಚೈತ್ರ ವಿ.ಆನಂದ
Published 9 ಮೇ 2014, 19:30 IST
Last Updated 9 ಮೇ 2014, 19:30 IST

ಉಗುರಿನಿಂದಲೇ ನಿಮ್ಮ ಸೌಂದರ್ಯ ಅಳೆಯಬಹುದು. ಗುಲಾಬಿ ಬಣ್ಣದಂತೆ  ಕಾಣುವ ಚಿಗುರೆಲೆಯಾಕಾರದ ಉಗುರು ಸ್ವಾಸ್ಥ್ಯವನ್ನೂ ಸೌಂದರ್ಯವನ್ನೂ ಹೇಳಿಬಿಡುತ್ತವೆ. ನಿಮ್ಮ ಕೈಕಾಲಿನ ಉಗುರುಗಳನ್ನೊಮ್ಮೆ ನೋಡಿಕೊಳ್ಳಿ. ಸೀಳುಗಳಿರುವ ಉಗುರುಗಳಿವೆಯೇ? ತಿಳಿಗೆಂಪಾಗಿರದೆ, ಹಳದಿ ಬಣ್ಣಕ್ಕೆ ತಿರುಗಿವೆಯೇ? ಅಲ್ಲಲ್ಲಿ ಸೀಳುಗಳಿವೆಯೇ? ಬಿರುಸಾಗಿವೆಯೇ? ತೇವದಿಂದ ಕೂಡಿವೆಯೇ? ಇವೆಲ್ಲವೂ ಉಗುರಿನ ಆರೋಗ್ಯವನ್ನೂ ಜೊತೆಗೆ ನಿಮ್ಮ ಆರೋಗ್ಯವನ್ನೂ ಸೂಚಿಸುತ್ತವೆ. ಉಗುರಿನಲ್ಲಾಗುವ ಯಾವುದೇ ಬದಲಾವಣೆಗಳು ನಿಮ್ಮ ಆರೋಗ್ಯ ಸ್ಥಿತಿಯನ್ನೂ ಸೂಚಿಸುತ್ತವೆ.

ಉಗುರಿನ ಸಮಸ್ಯೆಗಳನ್ನು ಹೀಗೆ ವಿಂಗಡಿಸಬಹುದು. ಬಣ್ಣಗೆಡುವುದು, ಉಗುರಿನಂಚು ದಪ್ಪವಾಗಿ ಬೆಳೆಯುವುದು, ಉಬ್ಬುಗುರು, ಸೀಳುಗುರು, ಉಗುರು ಮೇಲೇಳುವುದು, ಬ್ಯಾಕ್ಟೀರಿಯಲ್‌ ಅಥವಾ, ಫಂಗಲ್‌ ಇನ್‌ಫೆಕ್ಷನ್‌ ಇರುವ ಉಗುರು ಎಂದು ವಿಂಗಡಿಸಬಹುದಾಗಿದೆ.

ಅಶಕ್ತ ಉಗುರುಗಳನ್ನು ಹೊಂದುವುದು ಉಗುರುಗಳ ಅನಾರೋಗ್ಯವನ್ನು ತಿಳಿಸುತ್ತದೆ. ಇದರಿಂದ ಉಗುರು ಸರಳವಾಗಿ ನಾಶವಾಗಬಹುದು. ಸಹಜವಾಗಿಯೇ ಸೀಳಬಹುದು. ಶಾಶ್ವತವಾಗಿ ಉಗುರು ಉದುರಬಹುದು. ಉಗುರಿನ ಬೆಳವಣಿಗೆಯ ಮೇಲೂ ಪರಿಣಾಮಬೀರಬಹುದು.

ರಕ್ತಹೀನರಾಗಿರುವವರ ಉಗುರು ಸೂಕ್ಷ್ಮವಾಗಿರುತ್ತವೆ ಮತ್ತು ತೆಳುವಾಗಿ ಬೆಳವಣಿಗೆಯಾಗುತ್ತದೆ. ಸುಲಭವಾಗಿ ಗಾಯಗೊಳ್ಳುತ್ತವೆ. ಥೈರಾಯ್ಡ್‌ ಸಮಸ್ಯೆ ಇರುವವರಲಿ, ಪೌಷ್ಟಿಕಾಂಶದ ಕೊರತೆ ಇರುವವರಲ್ಲಿಯೂ ಇಂಥ ಉಗುರುಗಳನ್ನು ಕಾಣಬಹುದಾಗಿದೆ. ಇದಲ್ಲದೇ ಉಗುರುಗಳ ಬಗ್ಗೆ ನಿಷ್ಕಾಳಜಿ ತೋರುವವರಲ್ಲಿಯೂ ಈ ಸಮಸ್ಯೆಯನ್ನು ಕಾಣಬಹುದಾಗಿದೆ. ಉಗುರು ಕ್ಷೀಣವಾಗುವುದು ಅಥವಾ ತೆಳು ಆಗುವ ಸಮಸ್ಯೆ ಯಾವುದೇ ವಯಸ್ಸಿನವರಿಗೂ ಕಾಡಬಹುದು. ಸದೃಢ ಉಗುರು ಹೊಂದಲು ಈ ಕೆಲವು ಸರಳ ಉಪಾಯಗಳನ್ನು ಅನುಸರಿಸಬಹುದು.

ಪೌಷ್ಠಿಕಾಂಶವುಳ್ಳ ಆಹಾರ ಸೇವನೆ: ಬಯೊಟಿನ್‌, ಪೈರೊಡಾಕ್ಸಿನ್‌ ಹಾಗೂ ಖನಿಜಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಉಗುರು ಶುಷ್ಕವಾಗುವುದನ್ನು ತಡೆದು ಸದೃಢವಾಗಿ ಬೆಳೆಯುವಂತೆ ಆಗುತ್ತದೆ. ಉಗುರು ತೀರ ತೆಳುವಾಗಿದ್ದರೆ ತಜ್ಞರ ಸಲಹೆಯ ಮೇರೆಗೆ ಬೈಯೊಟಿನ್‌ ಸಪ್ಲಿಮೆಂಟ್‌ ಸಹ ಸೇವಿಸಬಹುದು. ಆದರೆ ಪರಿಣಾಮ ಕಾಣಲು ಕನಿಷ್ಠ ಮೂರು ತಿಂಗಳು ಕಾಯಬೇಕು.

ಸೋಪಿನಿಂದ ಕೈ ತೊಳೆದಾಗಲೆಲ್ಲ ಮಾಯಿಶ್ಚರೈಸರ್‌ ಅನ್ನು ಮುಂಗೈಗೆ ಲೇಪಿಸುವುದನ್ನು ಮರೆಯದಿರಿ. ಇದು ಉಗುರಿನ ತೇವಾಂಶವನ್ನು ಕಾಪಿಡುತ್ತದೆ. ನಿಯಮಿತವಾಗಿ ಉಗುರನ್ನು ಕತ್ತರಿಸುತ್ತಿರಿ. ಉಗುರು ಉದ್ದವಿದ್ದಷ್ಟೂ ಹಾನಿಗೊಳಗಾಗುವ ಸಾಧ್ಯತೆಗಳು ಹೆಚ್ಚುತ್ತಲೇ ಹೋಗುತ್ತವೆ. ಆಗಾಗ ಉಗುರುಗಳನ್ನು ಟ್ರಿಮ್‌ ಮಾಡುವುದು ಮತ್ತು ಮೆನಿಕ್ಯೂರ್‌ ಮಾಡುವುದರಿಂದ ಉಗುರಿನ ಆರೈಕೆ ಮಾಡಬಹುದು. ಸ್ನಾನವಾದ ತಕ್ಷಣ ಉಗುರು ಕತ್ತರಿಸಬಾರದು. ಆಗ ಉಗುರು ಅತಿ ಮೃದುವಾಗಿದ್ದು, ಸೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಉಗುರಿಗೆ ಎಣ್ಣೆಯುಣಿಸಿ: ಬದಾಮಿ ಎಣ್ಣೆ ಅಥವಾ ಆಲಿವ್‌ ಆಯಿಲ್‌ನಲ್ಲಿ ಕೆಲ ಕ್ಷಣಗಳವರೆಗೆ ಕೈ ಇಟ್ಟುಕೊಂಡು ಕೂರಬೇಕು. ಬೆರಳಿನುಗುರು ಎಣ್ಣೆಯೊಳಗೆ ಮುಳುಗುವಂತಿರಬೇಕು. ಎರಡು ವಾರಗಳಿಗೆ ಒಮ್ಮೆಯಾದರೂ ಹೀಗೆ ಮಾಡಿ, ಆಗಾಗ ಈ ಎಣ್ಣೆಯಿಂದ ಉಗುರಿಗೆ ಮಸಾಜ್ ಮಾಡುವುದೂ ಒಳಿತು.

ಪಾತ್ರೆ ತೊಳೆಯುವಾಗ, ಬಟ್ಟೆ ಒಗೆಯುವಾಗ, ಕಠಿಣವಾದ ಸೋಪು, ಸೋಪಿನ ನೀರಿನಲ್ಲಿ ಕೆಲಸ ಮಾಡುವಾಗ ಕೈಗವಸು ಧರಿಸುವುದು ಒಳಿತು. ಇಲ್ಲದಿದ್ದಲ್ಲಿ ಕೆಲಸ ಮುಗಿದೊಡನೆ ಕೈ ತೊಳೆದು, ನೀರಿನಂಶ ಇಲ್ಲದಂತೆ ಒರೆಸಿ, ಮಾಯಿಶ್ಚರೈಸರ್‌ ಲೇಪಿಸಿಕೊಳ್ಳಬೇಕು.
(ಮಾಹಿತಿಗೆ: 7676757575)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT