ತುಮಕೂರಿನ ಬಳಿಯ ಗೊಲ್ಲರ ಹಟ್ಟಿಗಳಲ್ಲಿ ಹೆಣ್ಣು ಮಕ್ಕಳು ಅವೈಜ್ಞಾನಿಕ ಮತ್ತು ಅನಾರೋಗ್ಯಕರ ಮುಟ್ಟುಮೈಲಿಗೆ ಸಂಪ್ರದಾಯವನ್ನು ಈಗಲೂ ಅನುಸರಿಸುತ್ತಿದ್ದಾರೆ. ಅವರು ಬಾಣಂತಿ- ಮಗುವನ್ನು ಮಳೆ ಚಳಿ ಗಾಳಿಯೆನ್ನದೇ ಮನೆಯ ಹೊರಗಿನ ಗುಡಿಸಲುಗಳಲ್ಲಿ ಇರಿಸುತ್ತಿರುವ ಬಗೆಗೆ ಈಚೆಗೆ ಮಾಧ್ಯಮಗಳಲ್ಲಿ ವರದಿಯಾಯಿತು. 
ಕೂಡಲೇ ಪ್ರತಿಕ್ರಿಯಿಸಿದ ಸರ್ಕಾರ, ಗೊಲ್ಲರ ಹಟ್ಟಿಯಿರುವ ಕಡೆಗಳಲ್ಲಿ `ಕೃಷ್ಣ ಕುಟೀರ~ವನ್ನು ಸ್ಥಾಪಿಸಿ ಮೇಲ್ವಿಚಾರಕರನ್ನು ನೇಮಿಸುವುದಾಗಿಯೂ, ಅವು ಮೈಲಿಗೆಯಾದ ಹೆಂಗಸರ ತಾತ್ಕಾಲಿಕ ಆಶ್ರಯದಾಣವಾಗಿ ಕೆಲಸ ಮಾಡುತ್ತವೆಂದೂ ಹೇಳಿಕೆ ನೀಡಿತು.
ಈ ಘಟನೆಯಲ್ಲಿ ಮುಟ್ಟು ಮೈಲಿಗೆ ಹೆಣ್ಣಿನ ಅನರ್ಹತೆ ಎಂಬ ಭಾವನೆ ಇನ್ನೂ ಜನರಲ್ಲಿ ಬೇರೂರಿರುವುದಷ್ಟೇ ಆಶ್ಚರ್ಯಕರವಾಗಿ ಕಾಣುವುದಿಲ್ಲ. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕಾದ ಸರ್ಕಾರ ಗೊಲ್ಲರ ಹಟ್ಟಿ ಹೆಣ್ಣು ಮಕ್ಕಳಿಗೆ ಹೆಣ್ಣಿನ ದೈಹಿಕ ರಚನೆ, ಕಾರ್ಯ ವಿಶೇಷ, ನಿಸರ್ಗ ಸಹಜ ಬದಲಾವಣೆಗಳು, ಚಾಲ್ತಿಯಲ್ಲಿರುವ ಅನುಚಿತ ಆಚರಣೆಗಳ ಅಪಾಯದ ಬಗ್ಗೆ ಮನದಟ್ಟು ಮಾಡಿಕೊಡುವುದು ಬಿಟ್ಟು, ಮುಟ್ಟಿನ ಮಡಿಮೈಲಿಗೆ ಮುಂದುವರಿಸಿಕೊಂಡು ಹೋಗಿ ಎಂದು ವಿಶೇಷ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ದಿಗ್ಭ್ರಮೆ ಮೂಡಿಸುತ್ತದೆ. 
ಗೊಲ್ಲರ ಹಟ್ಟಿಗಳೆಂದರೆ ಅದರ ಹೊರಗೊಂದು ಮುಟ್ಟಿನ ಕೋಣೆ ಇರಲೇಬೇಕು, ಅದು ಹಾಗೇ ಮುಂದುವರಿದುಕೊಂಡು ಹೋಗಬೇಕು ಎಂಬ ಸನಾತನ ಧೋರಣೆ ಈ ನಿರ್ಧಾರದ ಹಿಂದೆ ಕಾಣುತ್ತದೆ. ಈ ಬಗೆಯ ಭಿನ್ನತೆಯೇ ನಂತರ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ. 
ಲಿಂಗಾನುಪಾತ ಅಪಾಯಕಾರಿ ಕೆಳಮಟ್ಟ ತಲುಪುತ್ತಿರುವಾಗ ಮಹಿಳಾ ಜಾಗೃತಿ ಕುರಿತು ಮಾತನಾಡುವ ಬದಲು, ಸನಾತನವಾದದ್ದೆಲ್ಲ ಪವಿತ್ರವಾದುದು ಎಂದುಕೊಳ್ಳುವ ಜಡ್ಡುಗಟ್ಟಿದ ಮನಸ್ಸುಗಳಷ್ಟೇ ಇಂಥ ನಿರ್ಧಾರ ತಳೆಯಲು ಸಾಧ್ಯ.
ಮುಟ್ಟುಮೈಲಿಗೆ ಆಚರಣೆಗಳ ಅತಿ ಮೌಢ್ಯದ ರೂಪವನ್ನು ಗೊಲ್ಲ ಸಮುದಾಯದ ಆಚರಣೆಯಲ್ಲಿ ಕಾಣಬಹುದು. ಆದರೆ ಗೊಲ್ಲರ ಹಟ್ಟಿಯಷ್ಟೇ ಅಲ್ಲ, ಪ್ರತಿ ಮನೆಯೂ ತನ್ನ ಹೆಣ್ಣು ಮಕ್ಕಳ ಮುಟ್ಟಿನ ವಿಷಯದಲ್ಲಿ ತನ್ನದೇ ಕಟ್ಟಳೆ ಪಾಲಿಸುತ್ತಾ ಬಂದಿದೆ. ಆಧುನಿಕ ಯುಗದಲ್ಲಿ ಮಹಿಳೆ ಮನೆಯಿಂದ ಹೊರಬಂದು ಎಲ್ಲ ಆಗುಹೋಗುಗಳಲ್ಲಿ ಭಾಗವಹಿಸುತ್ತಿದ್ದರೂ ತಿಂಗಳ ಮೂರು ದಿನ ತಾನು ಮೈಲಿಗೆ ಎಂಬ ಭಾವನೆ ಅವಳನ್ನು ಬಿಟ್ಟಿಲ್ಲ.
 
ಅದರಲ್ಲೂ ಧಾರ್ಮಿಕ ಕಾರ್ಯಗಳ ಸಂದರ್ಭಗಳಲ್ಲಿ ಮುಟ್ಟಿನ ದಿನ ನುಸುಳಿಬಿಟ್ಟರಂತೂ ಅದನ್ನು ಹಿಂದೆ ಮುಂದೆ ಹಾಕಲು ಅವರು ಪಡುವ ಪಡಿಪಾಟಲು ನೋಡಬೇಕು. ಯಾವುದೇ ಅಪಾಯ ಮೈಮೇಲೆ ಎಳೆದುಕೊಂಡಾದರೂ ಸರಿ, ಮುಟ್ಟಿನ ಮೈಲಿಗೆ ಕಳೆದುಕೊಳ್ಳಲು ಸಿದ್ಧರಾಗುವ ಹೆಣ್ಣು ಮಕ್ಕಳು ಮದುವೆಗಳ ಕಾಲ ಮತ್ತು ಹಬ್ಬದ ತಿಂಗಳಲ್ಲಿ ಗುಂಪುಗಳಲ್ಲಿ ವೈದ್ಯರ ಬಳಿ ಬರುತ್ತಾರೆ. 
ತಮ್ಮ ಇತ್ತೀಚಿನ ಮುಟ್ಟಿನ ಇತಿಹಾಸವನ್ನೇ ನಮ್ಮೆದುರು ಬಿಚ್ಚಿಟ್ಟು, ಈ ಮೊದಲು ಮಾತ್ರೆ ತೆಗೆದುಕೊಂಡಿದ್ದರೆ ಅದರಿಂದಾದ ಅನಾನುಕೂಲವನ್ನು ಸವಿಸ್ತಾರವಾಗಿ ಬಿಡಿಸಿ ಹೇಳಿ, ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದರಿಂದ ದೇಹಕ್ಕೆ ಅಪಾಯವಿಲ್ಲವೇ ಎಂದು ಪ್ರಶ್ನಿಸಿ, ಈಗ ಮಾತ್ರೆ ನುಂಗುವುದರಿಂದ ಖಂಡಿತವಾಗಿಯೂ ಮುಂದೆ ಹೋಗುವುದಲ್ಲವೇ ಎಂದು ಖಚಿತಪಡಿಸಿಕೊಂಡು... ಓಹೋಹೋ! ಅದೊಂದು ಸಣ್ಣ ವಿಷಯಕ್ಕೆ ಅವರು ವ್ಯರ್ಥ ಮಾಡುವ ಸಮಯ, ಶ್ರಮ, ಕಾಳಜಿಯನ್ನು ತಮ್ಮ ಆರೋಗ್ಯದ ಬಗ್ಗೆಯಾದರೂ ವಹಿಸಿದ್ದರೆ ಎಷ್ಟು ಒಳ್ಳೆಯದಿತ್ತಲ್ಲವೇ ಎನಿಸದೇ ಇರದು.
ಸರ್ವೇಸಾಮಾನ್ಯವಾಗಿ ಹೆಂಗಸರನ್ನು ಬಾಧಿಸುವ ರಕ್ತಹೀನತೆ ಮತ್ತಿತರ ಕಾಯಿಲೆಗಳ ಬಗ್ಗೆ, ಕುಟುಂಬ ಯೋಜನಾ ವಿಧಾನಗಳ ಬಗ್ಗೆ ಎಳ್ಳಷ್ಟೂ ಮುಂಜಾಗ್ರತೆ, ಕಾಳಜಿ ತೋರದ ಮಹಿಳೆಯರು ಮತ್ತವರ ಮನೆಯವರು, ಮುಟ್ಟು- ದೇವರುಗಳಿಗೆ ಸಂಬಂಧಿಸಿದ ವಿಷಯದಲ್ಲಿ ತೀರಾ ಮುತುವರ್ಜಿ ವಹಿಸುತ್ತಾರೆ. ಅದನ್ನು ತುರ್ತಾಗಿ ಎಚ್ಚರಿಕೆ ವಹಿಸಲೇಬೇಕಾದ ಸಂದರ್ಭ ಎಂದು ಪರಿಗಣಿಸುತ್ತಾರೆ. 
`ಮುಟ್ಟಾಗುವುದು ಮೈಲಿಗೆಯಲ್ಲ, ಇಷ್ಟೊಂದು ಕಸಿವಿಸಿಯ ಅಗತ್ಯವಿಲ್ಲ~ ಎಂದು ಕಲಿತದ್ದನ್ನೆಲ್ಲಾ  ಖರ್ಚು ಮಾಡಿ ಹೇಳಿದರೂ, ಹತ್ತಿಪ್ಪತ್ತು ಮಾತ್ರೆಯಾದರೂ ನುಂಗಿಯಾರು, ಹೊರಗಾದರೆ ಆಗಲಿ ಎಂಬ ಧೈರ್ಯ ಮಾತ್ರ ತಾಳುವುದಿಲ್ಲ.
ಇಲ್ಲಿ ನನ್ನ ಅನುಭವದ ಒಂದೆರಡು ಘಟನೆಗಳನ್ನು ಹಂಚಿಕೊಳ್ಳುತ್ತೇನೆ:
ಒಮ್ಮೆ ತಂಡತಂಡವಾಗಿ ಬಂದ ಒಂದೂರಿನ ಹೆಣ್ಣು ಮಕ್ಕಳು ಮುಟ್ಟು ಮುಂದೆ ಹೋಗುವ ಮಾತ್ರೆ ತೆಗೆದುಕೊಂಡು ಹೋದರು. ಏಕೆ ಎಂದು ಕೇಳಿದಾಗ ವಿಷಯ ಹೊರಬಂತು. ಆ ಊರುಕೇರಿಯ ಎಲ್ಲ ಮನೆಗಳಲ್ಲಿ ಒಂದಾದ ಮೇಲೊಂದು ತೊಂದರೆ ಬರತೊಡಗಿತಂತೆ. ಆಗ ಗ್ರಾಮದೇವತೆಯನ್ನು ಕೇಳಲಾಗಿ ಅದು `ಹೋದಸಲ ನೇಮ ಮಾಡುವಾಗ ಮುಟ್ಟುಚಟ್ಟಾಗಿದೆ, ಅದಕ್ಕೇ ಹೀಗೆ~ ಎಂದು ಹೇಳಿತಂತೆ. ಆಗ ಶುರುವಾಯಿತು ನೋಡಿ. 
ಆ ದಿನ ಯಾರ‌್ಯಾರು ಮುಟ್ಟಾಗಿದ್ದಿರಬಹುದೆಂಬ ಊಹೆಯ ಹುಡುಕಾಟ ಮತ್ತು ಪರಸ್ಪರ ಆರೋಪ- ಪ್ರತ್ಯಾರೋಪ. ಮುಟ್ಟಾಗಿಯೂ ಹೇಳದೇ ದೇವಳಕ್ಕೆ ಬಂದು ಘೋರ ಪಾಪ ಎಸಗಿದವಳು ಕೊನೆಗೂ ಸಿಗಲಿಲ್ಲ. ನಂತರ ಪರಿಹಾರಾರ್ಥವಾಗಿ ದೊಡ್ಡ ಪೂಜೆ, ಸಮಾರಾಧನೆ ಏರ್ಪಾಡಾಗಿ, ಆ ದಿನ ಕೇರಿಯ ಯಾವ ಹೆಣ್ಣು ಮಕ್ಕಳೂ ಮೈಲಿಗೆಯಾಗದಂತೆ ಎಚ್ಚರ ವಹಿಸಲು ಸೂಚಿಸಲಾಗಿತ್ತು. ಹಾಗಾಗಿ ಹೆಣ್ಣು ಮಕ್ಕಳೆಲ್ಲ ಸಾಮೂಹಿಕವಾಗಿ ಮಾತ್ರೆ ತೆಗೆದುಕೊಳ್ಳಲು ನಿರ್ಧರಿಸಿದ್ದರು! 
ಇನ್ನೊಮ್ಮೆ ಕ್ಲಿನಿಕ್‌ಗೆ ಬಂದ ಒಂದು ಜೋಡಿ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿತ್ತು. ಏನಾಯಿತೆಂದು ಕೇಳಿದರೆ ಬಾಯಿಬಿಡಲಿಕ್ಕೇ ಹತ್ತಾರು ನಿಮಿಷ ಹಿಡಿಯಿತು. ಮದುವೆಯಾಗಿ ಎಂಟ್ಹತ್ತು ದಿನ ಕಳೆದಿತ್ತು. ಹುಡುಗಿ ಗಂಡನ ಬಳಿ ಸೆಟೆದುಕೊಂಡಿದ್ದಳು ಎಂಬ ಕಾರಣಕ್ಕೆ ಅವಳಿಗೆ ಬುದ್ಧಿ ಹೇಳಿಸಲು  ಕರೆತಂದಿದ್ದರು. 
ಅವಳ ಮದುವೆ ತರಾತುರಿಯಲ್ಲಿ ನಿಶ್ಚಯವಾಗಿತ್ತು. ಅವಳ ಮುಟ್ಟಿನ ದಿನಗಳ ಆಸುಪಾಸೇ ಮದುವೆ ದಿನವೂ ಇತ್ತು. ಅಮ್ಮ ಮೊದಲೇ ಮುಟ್ಟಾಗಲಿ ಎಂದು ಏನೇನನ್ನೋ ಕುಡಿಯಲು, ತಿನ್ನಲು ಕೊಟ್ಟಳು. ಆದರೂ ಆಗಲಿಲ್ಲ. ಆ ಹಳ್ಳಿಯಲ್ಲಿ ಗಾಂವ್‌ಟಿ ಮದ್ದು ಕೊಟ್ಟು ಮುಟ್ಟು ಬರಿಸುವಾತನ ಬಳಿ ಕರೆದೊಯ್ದರು. ಅವನು ಯಾವ್ಯಾವುದೋ ಗಿಡದ ಎಲೆ, ರಸ, ಸುಣ್ಣ ಸೇರಿಸಿ ಉಂಡೆ ಮಾಡಿ ಯೋನಿಯ ಒಳಗೆ ಇಟ್ಟುಕೊಳ್ಳಲು ಹೇಳುತ್ತಿದ್ದ. ಇಟ್ಟುಕೊಂಡ ಐದಾರು ಗಂಟೆಗಳಲ್ಲಿ ಕೆಂಪು ಕಾಣಿಸಿ ಹೊರಗೆ ಕೂತ ಶಾಸ್ತ್ರ ಮುಗಿಸುತ್ತಿದ್ದರು. 
ಆತ ಕೊಡುವ ಮದ್ದಿನ ಉಂಡೆ ಸುಣ್ಣವನ್ನೊಳಗೊಂಡಿದ್ದರಿಂದ ಅದು ಒಳ ಅಂಗಾಂಗಗಳನ್ನು ಗಾಯಗೊಳಿಸಿ ರಕ್ತ ಒಸರುತ್ತಿತ್ತೇ ಹೊರತು ನಿಜವಾದ ಸ್ರಾವ ಆಗುತ್ತಿರಲಿಲ್ಲ. ಈ ಹುಡುಗಿಗೆ ದೇಹದ ಒಳಭಾಗದಲ್ಲಿ ಸುಣ್ಣದುಂಡೆ ಮಾಡಿದ ಗಾಯ ನೋವುಂಟು ಮಾಡುತ್ತಿದ್ದುದರಿಂದ ರಾತ್ರಿ ಗಂಡನಿಗೆ ಸಹಕರಿಸಲು ಕಷ್ಟವಾಗಿತ್ತು.
ಆ ಪ್ರಸಂಗದಲ್ಲಿ ಅವಳಿಗೆ ಬುದ್ಧಿ ಹೇಳುವಂತಹದ್ದೇನೂ ಇರಲಿಲ್ಲ, ಅವಳು ನೋವಿಗೆ ಅಂಜಿದ್ದಳು. ಅವಸರದಲ್ಲಿ ಮುಟ್ಟು ಬರಿಸಲು ಹೋದ ಅವಳ ಅಪ್ಪ ಅಮ್ಮನನ್ನೇ ಬೈಯ್ಯಬೇಕಾಯಿತು.
***
ವೈಜ್ಞಾನಿಕ ಗ್ರಹಿಕೆ ಇರಲಿ
ಹೆಣ್ಣಿನ ಮನದಲ್ಲಿ ಋತುಸ್ರಾವ ಮೈಲಿಗೆ ಎಂಬ ಭಾವ ಮನೆಮಾಡಿರುವುದರ ಹಿಂದೆ ಸಮಾಜ ಹೆಣ್ಣನ್ನು ಅಂಕೆಯಲ್ಲಿ ಇರಿಸಿಕೊಳ್ಳಲು ಮಾಡಿದ ಹುನ್ನಾರಗಳಿವೆ. ಮುಟ್ಟು ಮೈಲಿಗೆಯನ್ನೇ ನೆಪ ಮಾಡಿಕೊಂಡು ಎಷ್ಟೋ ಧಾರ್ಮಿಕ- ಕೌಟುಂಬಿಕ ಹಕ್ಕುಗಳನ್ನು ಆಕೆಗೆ ನಿರಾಕರಿಸಲಾಗಿದೆ. ಆದರೆ ಈ ಕಾಲದಲ್ಲೂ ಇದೆಲ್ಲಾ ಆಕೆಗೆ ಅರ್ಥವಾಗುತ್ತಿಲ್ಲ. ಹೆಣ್ಣಿನ ದೇಹದ ರಚನೆ, ಅಂಗಾಂಗಗಳ ಕಾರ್ಯವೈಖರಿಯ ಬಗ್ಗೆ ಕಲಿತವರಲ್ಲೂ ತಿಳಿವಳಿಕೆಯ ಕೊರತೆಯಿದೆ.
 
ಋತುಚಕ್ರದ ಬಗ್ಗೆ ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಂಡರೆ ತಪ್ಪು ಗ್ರಹಿಕೆಗಳು ದೂರಾಗಬಹುದು. ಈ ದೃಷ್ಟಿಯಿಂದ ಕೆಲ ಸರಳ ಮಾಹಿತಿಗಳು ಇಲ್ಲಿವೆ:
ಅಂಡವು ಫಲಿತಗೊಂಡು ಉತ್ಪತ್ತಿಯಾಗುವ ಭ್ರೂಣ ತನ್ನಲ್ಲಿ ಹುದುಗುವುದೇನೋ ಎಂಬ ನಿರೀಕ್ಷೆಯಿಂದ ಗರ್ಭಕೋಶದ ಒಳಪೊರೆ (ಎಂಡೋಮೆಟ್ರಿಯಂ) ಪ್ರತಿ ತಿಂಗಳೂ ಮೆತ್ತನೆಯ ಹಾಸಿಗೆಯಂತೆ ಬೆಳೆಯುತ್ತದೆ. ತಿಂಗಳ ಮೊದಲ ಹದಿನಾಲ್ಕು ದಿನ ಈ ಬೆಳವಣಿಗೆಯ ಕ್ರಿಯೆ ನಡೆಯುತ್ತದೆ. 
14ನೇ ದಿನದ ಸುತ್ತಮುತ್ತ ಅಂಡ ಬಿಡುಗಡೆಯಾಗಿ ಗರ್ಭ ಕಟ್ಟಿಲ್ಲವೆಂದು ಖಾತ್ರಿಯಾಗುತ್ತಿದ್ದಂತೆಯೇ ಒಳಪೊರೆಯ ಬೆಳವಣಿಗೆ ಸ್ಥಗಿತಗೊಳ್ಳುತ್ತದೆ. ಬೆಳವಣಿಗೆಯಾದ ಮೇಲೆ ಲೋಳ್ಪೊರೆ ಕುಗ್ಗತೊಡಗಿ, ಚಿರುಟಿ, ಮುಂದಿನ ಎರಡು ವಾರಗಳಲ್ಲಿ ಸ್ರಾವವಾಗಿ ಹೊರಹರಿಯುತ್ತದೆ. ಇದೇ ಋತುಸ್ರಾವ. 
ಸ್ರಾವವಾದ ಐದನೆಯ ದಿನದಿಂದ ಮುಂದಿನ ಋತುಚಕ್ರದಲ್ಲಿ ಫಲಿತಗೊಳ್ಳಬಹುದಾದ ಅಂಡದ ನಿರೀಕ್ಷೆಯಲ್ಲಿ ಮತ್ತೆ ಲೋಳ್ಪೊರೆ ಬೆಳೆಯಲಾರಂಭಿಸುತ್ತದೆ. ಹೆಚ್ಚು ಕಡಿಮೆ ಮುಟ್ಟು ಶುರುವಾದಾಗಿನಿಂದ ನಿಲ್ಲುವವರೆಗೆ ಹಾರ್ಮೋನುಗಳ ಪ್ರಭಾವದಿಂದ ನಡೆಯುವ ಅನನ್ಯ ಜೈವಿಕ ಕ್ರಿಯೆ ಇದು. ಹೆಣ್ಣಿನ ದೇಹದೊಳಗಿನ ಆಂತರಿಕ ಗಡಿಯಾರದ ವೇಳಾಪಟ್ಟಿಯಂತೆಯೇ ಇದು ಸಹ ನಡೆಯುತ್ತಿರುತ್ತದೆ. 
ಖಂಡಿತ, ತಿಂಗಳ ಗೆಳತಿ ನಾವು ಕರೆದಾಗ ಬರುವವಳಲ್ಲ. ಅವಳ ಬರುವಿಕೆ ಮೈಲಿಗೆಯೂ ಅಲ್ಲ. ಋತುಚಕ್ರ ಎಂಥ ಅನನ್ಯ, ಪವಿತ್ರ ಕ್ರಿಯೆ ಎಂದರೆ ಅದಿಲ್ಲದೇ ಹೋದಲ್ಲಿ ಮನುಷ್ಯ ಜೀವಿಯ ಸಂತತಿ ಮುಂದುವರಿಯಲು ಸಾಧ್ಯವೇ ಇಲ್ಲ. ವಾಸ್ತವವಾಗಿ ಆ ಮೂರು ದಿನಗಳು ಹೆಣ್ಣಿಗಷ್ಟೇ ಅಲ್ಲ, ಒಂದು ಹೆಣ್ಣಿರುವ ಕುಟುಂಬಕ್ಕೇ ಪವಿತ್ರವಾದ ದಿನಗಳು. 
ಸಂತತಿ ಮುಂದುವರಿಸುವ `ಶಕ್ತಿ~ಯ ಸಂಕೇತವಾದ ಅದು ಮೈಲಿಗೆ, ಅಪವಿತ್ರ ವಾಗುವುದಾದರೂ ಹೇಗೆ? ದೇವದೇವತೆಯರೇ ಈ ದೇಹವನ್ನೂ ಸೃಷ್ಟಿಸಿದ ಮೇಲೆ ಪಾಪದ ಪ್ರಶ್ನೆಯೆಲ್ಲಿ ಬಂತು? ಪ್ರಪಂಚದ ಬೇರಾವ ಭಾಗದ ಮಹಿಳೆಯೂ ಮುಟ್ಟು ಮೈಲಿಗೆ ಆಚರಿಸುವುದಿಲ್ಲ, ಆದರೂ ಅವರ ದೇವರು ಸಿಟ್ಟಾಗುವುದಿಲ್ಲವೇ? ಹೀಗೆ ಪ್ರಶ್ನೆಗಳನ್ನೆತ್ತದೇ ಪಾಲಿಸುತ್ತಿರುವ ಕಾರಣಕ್ಕೇ ಮನು ವಿಧಿಸಿದ ಕಟ್ಟಳೆಗಳ ಪಳೆಯುಳಿಕೆಗಳನ್ನು ಹೆಣ್ಣು ಮಕ್ಕಳು ಈ ಕಾಲಕ್ಕೂ ಒಪ್ಪಿ ಬದುಕಬೇಕಾಗಿದೆ.   
ಆಚರಣೆಗಳೆಲ್ಲ ಸಂಸ್ಕೃತಿಯಲ್ಲ, ರೂಢಿಯೆಲ್ಲ ಅನುಕರಣ ಯೋಗ್ಯವೂ ಅಲ್ಲ. ಎಲ್ಲವೂ ಆಯಾಯ ಕಾಲಕ್ಕೆ ತಕ್ಕ ಬದಲಾವಣೆ ಹೊಂದಬೇಕಾದ್ದು ಅವಶ್ಯ. ಸ್ರಾವದ ದಿನಗಳಲ್ಲಿ ಕೆಲವರಿಗೆ ಕೊಂಚ ಕಸಿವಿಸಿ, ಹೊಟ್ಟೆನೋವು, ವಾಂತಿ, ತಲೆಸುತ್ತು ಎಲ್ಲ ಇರುತ್ತದೆ. ಆ ಸಮಯದಲ್ಲಿ ದೈನಂದಿನ ಕೆಲಸಗಳಿಂದ, ಪತ್ನಿಯಾಗಿ ನಿಭಾಯಿಸಬೇಕಾದ ಕರ್ತವ್ಯದಿಂದ ವಿರಾಮ ನೀಡುವ ಸಲುವಾಗಿ ಈ ಆಚರಣೆಯಿದ್ದರೆ ಒಪ್ಪಬಹುದು. 
ಆದರೆ ತನ್ನ ಮೂಲ ಉದ್ದೇಶ ಮರೆತು ಕೆಲಸ ಕಾರ್ಯ, ತಿರುಗಾಟಕ್ಕೆಲ್ಲ ಅದು ಅಡ್ಡ ಬರುವುದಾದರೆ ಅದರ ಅಗತ್ಯವಿಲ್ಲ. ಋತುಚಕ್ರವನ್ನು ಹಿಂದೆ ಮುಂದೆ ಮಾಡುವುದು ಆಚರಣೆ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.
ಮೂಡಲಿ ಜಾಗೃತಿ 
ಇಂಥ ವಿಷಯಗಳ ಬಗ್ಗೆ ತಪ್ಪುಗ್ರಹಿಕೆ ಹೋಗಲಾಡಿಸಿ, ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆದರೆ ಸೀರೆ-ರವಿಕೆ ಹಂಚುವುದು, ಬಾಣಂತಿ-ಮಗುವಿಗೆ ಬಟ್ಟೆ-ಬೆಡ್‌ಶೀಟ್ ಕೊಡುವುದು, ಬಸುರಿಗೆ ಬಾಗಿನ ಕೊಡುವಂಥ ತೋರುಗಾಣಿಕೆಯ ಕಾಳಜಿಯಲ್ಲಿ ಸರ್ಕಾರ ಮುಳುಗಿದೆ. ವಿಶಾಲ ಸಮುದಾಯವನ್ನು ಏಕಕಾಲಕ್ಕೆ ಸುಲಭವಾಗಿ ತಲುಪಬಲ್ಲ ಮಾಧ್ಯಮಗಳು, ಅದರಲ್ಲೂ ಅನಕ್ಷರಸ್ಥರನ್ನೂ ತಲುಪಬಲ್ಲ ಟಿ.ವಿ ಮಾಧ್ಯಮ ಸನಾತನ ಮೌಲ್ಯಗಳನ್ನು ಬಿಂಬಿಸುವಂಥ ನಿರುಪಯೋಗಿ ಕಾರ್ಯಕ್ರಮಗಳನ್ನೇ ಹೆಚ್ಚಾಗಿ ಪ್ರಸಾರ ಮಾಡುತ್ತಿದೆ. 
ಬಹುತೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ಆರೋಗ್ಯದ ಅರಿವು-ಮಾಹಿತಿ ನೀಡುವುದಕ್ಕಿಂತ ಎಚ್‌ಐವಿಯಂತಹ ಆರ್ಥಿಕವಾಗಿ ಫಲವತ್ತಾದ ಕ್ಷೇತ್ರಗಳ ಕಡೆಗೇ ಹೆಚ್ಚು ಆಸಕ್ತಿ ಇರುವಂತಿದೆ. ಹೀಗಿರುವಾಗ ಮುಜುಗರವಿಲ್ಲದೇ ಈ ವಿಷಯದ ಬಗೆಗೆ ಮುಕ್ತವಾಗಿ ಮಾತನಾಡಲು ಸಾಧ್ಯವಿರುವ ವೈದ್ಯರು, ಸಲಹೆಗಾಗಿ ತಮ್ಮ ಬಳಿ ಬಂದವರು ಒಪ್ಪುವರೋ ಬಿಡುವರೋ, ವೈಜ್ಞಾನಿಕ ನಿಲುವನ್ನು ತಿಳಿಸಿ ಹೇಳಿ ಅವರಲ್ಲಿ ಜಾಗೃತಿಯ ಓನಾಮ ಹಾಕಬೇಕು. 
ಹೊಸ ಹೊಸ ಹೆಸರು, ಯೋಜನೆಗಳ ಅಡಿಯಲ್ಲಿ ನೂರಾರು ಆರೋಗ್ಯ ಕಾರ್ಯಕರ್ತರನ್ನು ನೇಮಿಸಿಕೊಳ್ಳುವ ಆರೋಗ್ಯ ಇಲಾಖೆ ಅಂಥವರಿಗೆ ತರಬೇತಿ ನೀಡಿ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಾಧ್ಯಮಗಳು ಮೂಢನಂಬಿಕೆ ಬಿತ್ತುವುದನ್ನು ಕೈಬಿಟ್ಟು, ಒಟ್ಟಾರೆ ಜನಸಮುದಾಯ ಆರೋಗ್ಯಕರ ಅಭಿಪ್ರಾಯ ಹೊಂದುವ, ವಿಚಕ್ಷಣೆಯಿಂದ ಚರ್ಚಿಸುವ ವೇದಿಕೆಯನ್ನು ಹುಟ್ಟುಹಾಕಬೇಕು.
 
ವಿದ್ಯಾವಂತರು ವೈಜ್ಞಾನಿಕ ಮನೋಭಾವ ಹೊಂದಿ ತಮ್ಮ ಅರಿವನ್ನು ಇತರ ಸೋದರಿಯರಿಗೂ ದಾಟಿಸಬೇಕು. ಆಗ ಮಾತ್ರ ಮಾನವ ಸಮಾಜವನ್ನು ಕಾಡುವ ಇಂತಹ ಸಮಸ್ಯೆಗಳಿಗೆ ತಕ್ಕ ಪರಿಹಾರ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.