ADVERTISEMENT

ಒಡನಾಟದಲ್ಲಿನ ಸಂತೋಷಗಳು...

ಛಾಯಾ .ಮಠ್
Published 4 ಮೇ 2018, 19:30 IST
Last Updated 4 ಮೇ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಕಾಲದೊಂದಿಗೆ ಆದಂಥ ಬದಲಾವಣೆಯಿಂದ ಮನುಷ್ಯ ತನ್ನ ನೈಜತೆಯಿಂದ ದೂರವಾಗುತ್ತಿದ್ದಾನೆ. ಬದುಕಿನ ಹೋರಾಟದಲ್ಲಿ ತನ್ನ ಗುರಿಗಳನ್ನು ತಲುಪಲು ಅಗತ್ಯವಾಗಿರುವ ಅಂಶಗಳತ್ತ ಗಮನ ನೀಡುತ್ತ ಸಂಬಂಧಗಳಿಗೆ ಆದ್ಯತೆ ನೀಡದಂತಹ ಪರಿಸ್ಥಿತಿಯನ್ನು ತಲುಪಿದ್ದಾನೆ. ಮನುಷ್ಯ ಸಂಬಂಧಗಳಲ್ಲಿ ಆಳ–ಅಗಲ ಕಡಿಮೆಯಾಗುತ್ತಿದೆ ಎಂದಮೇಲೆ ಬಂಧುಗಳು ನಮ್ಮ ಮನೆಗೆ ಬರುವುದು, ನಾವು ಅವರುಗಳ ಮನೆಗೆ ಹೋಗುವುದು ಕಡಿಮೆಯಾಗಿದೆಯೆಂದೇ ಹೇಳಬಹುದು. ಈಗ ಅಸ್ತಿತ್ವದಲ್ಲಿರುವುದು ವಿಭಕ್ತ ಕುಟುಂಬಗಳು.

ಹಿಂದೆಲ್ಲ ಮದುವೆ, ಮುಂಜಿ, ಹಬ್ಬ-ಹರಿದಿನ ಮುಂತಾದ ಶುಭಕಾರ್ಯಕ್ರಮಗಳಿಗೆ ಬಂಧುಗಳು ಮನೆಗೆ ಬರುವುದು, ನಾವು ಅವರ ಮನೆಗೆ ಹೋಗಲೇಬೇಕೆನ್ನುವ ಸಾಮಾಜಿಕ ಒತ್ತಡವಿತ್ತು. ಅಕ್ಕಪಕ್ಕದವರು, ನೆಂಟರು, ಸಂಬಂಧಿಕರು ಏನಾದರೂ ಅಂದುಕೊಳ್ಳುತ್ತಾರೆನ್ನುವ ಹೆದರಿಕೆಯಿಂದಾದರೂ ಬರುತ್ತಿದ್ದರು. ಹೀಗೆ ಒಟ್ಟಾಗಿ ಕಲೆತಾಗ ಒಂಟಿತನ, ಬೇಸರ, ಖಿನ್ನತೆಗಳು ದೂರವಾಗುತ್ತಿತ್ತು; ಬಂಧುಬಾಂಧವರ ಒಡನಾಟ, ಸಂಪರ್ಕದಿಂದಾಗಿ ಸಂತೋಷ, ಉತ್ಸಾಹಗಳು ಆವರಿಸುತ್ತಿತ್ತು. ಆ ಮೂಲಕ ಅನುಬಂಧವೂ ಹೆಚ್ಚಾಗುತ್ತಿತ್ತು. ಸಂಬಂಧಗಳ ಅರಿವು, ಮಹತ್ವ, ತನ್ನವರ ಮೇಲಿನ ಅಭಿಮಾನ ಹಾಗೂ ಅಂತಃಕರಣದ ಅರಿವಾಗುತ್ತಿತ್ತು. ಮಕ್ಕಳಿಗೂ ಎಲ್ಲರೊಡನೆ ಬೆರೆತು ನಡೆಯುವಂತಹ ಗುಣ ತಾನೇ ತಾನಾಗಿ ಬರುತ್ತಿತ್ತು.

ಆಗ ನಾನಿನ್ನೂ ಚಿಕ್ಕವಳು. ಪ್ರತಿ ವರ್ಷ ದಸರಾಹಬ್ಬಕ್ಕೆ ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವ ಹಾಗೂ ಅವರ ಮಕ್ಕಳು ಎಲ್ಲರೂ ಬರುತ್ತಿದ್ದರು. ಮಕ್ಕಳಿಗೆ ರಜೆ ಇರುತ್ತಿದ್ದವಾದ್ದರಿಂದ ಒಂಬತ್ತು–ಹತ್ತು ದಿನಗಳ ಹಬ್ಬ ನಮ್ಮಲ್ಲಿಯೇ ಆಗುತಿತ್ತು. ಅವರೆಲ್ಲ ಬರುವ ಎರಡು ದಿನ ಮುಂಚೆಯೇ ಅಜ್ಜಿ, ಅಮ್ಮ ಜೊತೆಗೂಡಿ ಎಷ್ಟೆಲ್ಲಾ ತಿಂಡಿ ಮಾಡ್ತಿದ್ರು? ಉಂಡಿ, ಚಕ್ಕಲಿ, ಮೈಸೂರು ಪಾಕ್, ಶಂಕರ್‍ಪೋಳಿ, ಅವಲಕ್ಕಿ ಚೂಡಾ – ಎಲ್ಲ ದೊಡ್ಡ ದೊಡ್ಡ ಡಬ್ಬಿ ತುಂಬಿರುತ್ತಿದ್ದವು. ಎಲ್ಲರೂ ಕಲೆತಾಗ ಉಂಡಿ, ಚಕ್ಕಲಿಗಳನ್ನು ಸ್ಪರ್ಧೆಯ ಮೇಲೆ ತಿನ್ನುತ್ತಿದ್ದೆವು. ಊಟದ ಕಡೆ ಮುಖವೇ ಮಾಡುತ್ತಿರಲಿಲ್ಲ.

ADVERTISEMENT

ಆಗ ನಾವಾಡುತ್ತಿದ್ದ ಕುಂಟಬಿಲ್ಲೆ, ಲಗೊರಿ, ಐಸ್‍ಪೈಸ್, ಚಾರಪತ್ತಾರ್, ಚೌಕಾಬಾರಾ, ಗೊಟಗೋಣಿ ಮುಂತಾದ ಆಟಗಳ ಹೆಸರನ್ನು ಬಹುಶಃ ಈಗಿನ ಮಕ್ಕಳು ಕೇಳಿರಲಿಕ್ಕಿಲ್ಲ. ಆಟದ ಸಮಯದಲ್ಲಿ ಏನಾದರೂ ಜಗಳ ಮಾಡಿಕೊಡರೆ ಅಮ್ಮನೋ, ಅತ್ತೆಯೋ ಬಂದು ಸಮಜಾಯಿಸಿ ನಮ್ಮನ್ನು ಒಂದು ಮಾಡುತ್ತಿದ್ದರು. ಕತ್ತಲಾಗುತ್ತಿದ್ದಂತೆ ನಾವೆಲ್ಲ ಅಜ್ಜಿಯ ಬಳಿ ಹೋಗಿ ಕಥೆ ಹೇಳೆಂದು ಪೀಡಿಸುತ್ತಿದ್ದೆವು. ಅಜ್ಜಿ ಹೇಳುತ್ತಿದ್ದ ನೀತಿಯ ಕಥೆಗಳು ಮುಗ್ಧ ಹೃದಯವನ್ನು ತಟ್ಟುತ್ತಿದ್ದವು. ಅಜ್ಜಿ ಹೇಳುತ್ತಿದ್ದ ಪುಣ್ಯಕೋಟಿಯ ಕಥೆಯನ್ನು ಕೇಳುವಾಗ ಕಣ್ಣೀರು ತಾನಾಗೆ ಬರುತ್ತಿತ್ತು.

ರಾತ್ರಿಯಾಗುತ್ತಿದ್ದಂತೆ ಅಮ್ಮ ಎಲ್ಲ ಮಕ್ಕಳನ್ನೂ ಕರೆದು ಕೈತುತ್ತು ಹಾಕುತ್ತಿದ್ದಳು. ಅಮ್ಮನ ಕೈತುತ್ತಿನಲ್ಲಿ ಅದ್ಯಾವ ರುಚಿಯಿರುತ್ತಿತ್ತೋ, ಎಲ್ಲರೂ ಎರಡು ತುತ್ತು ಜಾಸ್ತಿಯೇ ಊಟ ಮಾಡುತ್ತಿದ್ದೆವು. ಊಟ ಮಾಡಿ ನಾವೆಲ್ಲ ನಮ್ಮ ಶಾಲೆಯ ಬಗ್ಗೆ, ಗೆಳೆತಿಯರ ಬಗ್ಗೆ, ಮಾತನಾಡುತ್ತ ಅದ್ಯಾವಾಗ ನಿದ್ರೆಗೆ ಜಾರುತ್ತಿದ್ದೆವೋ?

ಅಮ್ಮ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ ಅವರೆಲ್ಲ ತಮ್ಮ ತಮ್ಮ ಸಂಸಾರದ ಕಷ್ಟ–ಸುಖಗಳ ಬಗ್ಗೆ ಮಾತಾಡುತ್ತ ಒಬ್ಬೊರಿಗೊಬ್ಬರು ಸಮಾಧಾನ ಹೇಳಿಕೊಳ್ಳುತ್ತ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಊರಿಗೆ ಹೊರಟು ನಿಂತಾಗ ನಮಗರಿವಿಲ್ಲದಂತೆ ಎಲ್ಲರ ಕಣ್ಗಳೂ ತೇವಗೊಳ್ಳುತ್ತಿದ್ದವು.

ಎಲ್ಲ ಹಿರಿಯ ಅಂತಃಕರಣದ ಜೀವಿಗಳನ್ನು ಕಾಲವು ತನ್ನ ತೋಳ್ತೆಕ್ಕೆಗೆ ತೆಗೆದುಕೊಂಡು ವರ್ಷಗಳೇ ಉರುಳಿವೆ. ಈಗ ಆ ಪರಿಪಾಠವೂ ಇಲ್ಲವಾಗಿದೆ. ಎಲ್ಲವೂ ಕಾಲವೇ ತಂದ ಬದಲಾವಣೆ ಎನ್ನೋಣವೇ? ಆ ದಿನಗಳು ಮತ್ತೇ ಬರುವಂತಿದ್ದರೆ....! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.