ADVERTISEMENT

ಗುಂಡಮ್ಮಜ್ಜಿಯ ಜೀವನ ಪಾಠ

ಸತ್ಯನಾರಾಯಣರಾವ್ ಅಣತಿ
Published 22 ಮಾರ್ಚ್ 2013, 19:59 IST
Last Updated 22 ಮಾರ್ಚ್ 2013, 19:59 IST

ನಾನು ಈಗ ಬರೆಯುತ್ತಿರುವುದು, ದೇಶಕ್ಕೆ ಸ್ವಾತಂತ್ರ್ಯ ಬಂದು 10-15 ವರ್ಷವಾಗಿದ್ದ ಸಂದರ್ಭದಲ್ಲಿ ನನಗಾದ ಒಂದು ಅನುಭವವನ್ನು. ಹೊನ್ನಾವರದಲ್ಲಿ ಮೂರು ವರ್ಷ ಸಮಾಜ ಕಲ್ಯಾಣ ಯೋಜನೆಯೊಂದರಲ್ಲಿ ಲೆಕ್ಕಪತ್ರ ಕಾರಕೂನನಾಗಿ ಕೆಲಸ ಮಾಡುತ್ತಿದ್ದೆ. ಹಳೆಯ ಮೈಸೂರು ಪ್ರಾಂತ್ಯದಿಂದ ಕೆಲಸಕ್ಕಾಗಿ ಬಂದ ನಾವು ಕುಮಾರಯ್ಯ, ವೆಂಕಟ ರಮಣಯ್ಯ, ಬಸಪ್ಪ ಮತ್ತು ಶಿರಸಿ ಕಡೆಯವನಾದ ಭಜಗುಳ್ಳಿ ಸ್ನೇಹಿತರು. ಇವರಲ್ಲಿ ಭಜಗುಳ್ಳಿ ದಲಿತ ಕುಟುಂಬದಿಂದ ಬಂದವ. ನನ್ನನ್ನು ಬಿಟ್ಟು ಉಳಿದ ನಾಲ್ಕು ಮಂದಿ ಬಿ.ಡಿ.ಒ ಆಫೀಸ್ ನೌಕರರು ಒಂದೇ ಖೋಲಿಯಲ್ಲಿ ವಾಸಿಸುತ್ತಿದ್ದರು. ನಾನು ಮಾತ್ರ ಬೇರೆ ಖೋಲಿಯಲ್ಲಿದ್ದೆ.

ನಾವು ಐವರೂ ಸಾಮಾನ್ಯವಾಗಿ ದಿನನಿತ್ಯ ಎರಡು ಹೊತ್ತೂ ಸೇರುತ್ತಿದ್ದ ಸ್ಥಳ ಗುಂಡಮ್ಮಜ್ಜಿ ಖಾನಾವಳಿ. ಕೆಲವು ದಿನ ರಾತ್ರಿ ಊಟಕ್ಕೆ ನಾನು ಚಕ್ಕರ್ ಹೊಡೆಯುತ್ತಿದ್ದೆ. ಯಾಕೆಂದರೆ ಒಂದು ಕೊಂಕಣಿ ಟೀ ಶಾಪ್‌ನ ಮನೆಯವರಿಂದ ನನಗೆ ಬಾಂಗಡೆ ಮೀನಿನ ಊಟ ಬರುತ್ತಿತ್ತು. ಅವರು ನಾಲ್ವರೂ ಒಂದೊಂದು ದಿನ ಬಾಂಗಡೆ ಮೀನೂಟಕ್ಕೆ ಬೇರೆ ಖಾನಾವಳಿಗೆ ಹೋಗುತ್ತಿದ್ದರು. ಆಗಲೇ ನಮಗೆಲ್ಲ ಜಾತ್ಯತೀತ ಗುಂಡಮ್ಮಜ್ಜಿಯ ದೊಡ್ಡತನ ಅನುಭವಕ್ಕೆ  ಬಂದದ್ದು.

ಗುಂಡಮ್ಮಜ್ಜಿ ಸುಮಾರು 75-80 ವರ್ಷದ ವಿಧವೆ. 50ರ ಆಸುಪಾಸಿನ ಮಗಳು ಮಾಂಕಾಳಿಯೂ ವಿಧವೆ. ಶಾಲೆಗೆ ಹೋಗುತ್ತಿದ್ದ ಮಾಂಕಾಳಿಯ ಮೊಮ್ಮಗ ಅವರ ಜೊತೆಯಲ್ಲಿ ಇದ್ದ. ಹವ್ಯಕ ಬ್ರಾಹ್ಮಣತಿ ಗುಂಡಮ್ಮ ಮತ್ತು ಮಾಂಕಾಳಿ ಕುಪ್ಪಸವಿಲ್ಲದೆ ಕೆಂಪು ಸೀರೆ ಉಡುತ್ತಿದ್ದರು. ತಲೆ ಕೂದಲು ತೆಗೆಸಿದ್ದರು. ಇಬ್ಬರೂ ಸೇರಿ 20 ವರ್ಷಗಳಿಂದ ಖಾನಾವಳಿ ನಡೆಸುತ್ತಾ, ಸ್ವತಂತ್ರವಾಗಿ ಜೀವನ ನಡೆಸಲು ಶ್ರಮಿಸುತ್ತಿದ್ದರು.

ಯಾಕೆಂದರೆ ಬ್ರಾಹ್ಮಣ ವಿಧವೆಯರು ತಮ್ಮ ಮನೆಗಳಲ್ಲಿ ಅನುಭವಿಸಬೇಕಾದ ಕ್ರೌರ್ಯ ಎಲ್ಲರಿಗೂ ತಿಳಿದಿರುವಂಥದ್ದೇ. ಆ ಕ್ರೌರ್ಯದಿಂದ ದೂರವಾಗಿರಲು ಅವರು ಸ್ವತಂತ್ರವಾದ ಜೀವನದ ದಾರಿಯನ್ನು ಕಂಡುಕೊಂಡಿದ್ದರು. ಆಗಿನ್ನೂ ಗಾಂಧೀಜೀಯವರ ಸಾಮಾಜಿಕ ಚಿಂತನೆಗಳು ಜನಮನದಲ್ಲಿ ಹರಿದಾಡುತ್ತಿದ್ದ ಕಾಲ.

ಕೆಲಸ ಕಾರ‌್ಯಗಳಿಗೆಂದು ದಿನ ನಿತ್ಯ ಹೊನ್ನಾವರಕ್ಕೆ ಬರುತ್ತಿದ್ದ ಸುತ್ತಮುತ್ತಲ ಬ್ರಾಹ್ಮಣರೆಲ್ಲ ಮಧ್ಯಾಹ್ನದ ಊಟಕ್ಕೆ ಗುಂಡಮ್ಮಜ್ಜಿಯ ಖಾನಾವಳಿಗೆ ಬರುತ್ತಿದ್ದರು. ಅವರೆಲ್ಲ ಬ್ರಾಹ್ಮಣಿಕೆ ತೋರಿಸಲು ಶರಟು ಬಿಚ್ಚಿ ಕೂತೇ ಊಟ ಮಾಡುತ್ತಿದ್ದರು. ಇವರ ನಡುವೆ ನಮ್ಮ ಜಾತ್ಯತೀತ ಗುಂಪೂ ಆಫೀಸ್ ಡ್ರೆಸ್ ಆದ ಪ್ಯಾಂಟು ಶರಟಿನಲ್ಲಿ ಊಟಕ್ಕೆ ಕೂರುತ್ತಿತ್ತು. ಕುಮಾರಯ್ಯ ಮಾತ್ರ ಪಂಚೆ ಉಟ್ಟಿರುತ್ತಿದ್ದ.ಗುಂಡಮ್ಮಜ್ಜಿಗೆ ನಮ್ಮನ್ನು ಕಂಡರೆ ಅದೇನೋ ಪ್ರೀತಿ. ನನ್ನನ್ನು `ರಾವು' ಎಂದು ಅಕ್ಕರೆಯಿಂದ ಕರೆಯುತ್ತಿತ್ತು. ಒಂದು ದಿನ ಊಟಕ್ಕೆ ತಪ್ಪಿಸಿದರೂ `ನಿಮಗಾಗಿ ಮಾಡಿದ್ದೆಲ್ಲ ದಂಡವಾಗುತ್ತೆ, ಅಲ್ದೆ ಹಾಗೆಲ್ಲ ಚಂಗಲು ಹೋಗಬಾರದು' ಅಂತ ಎಚ್ಚರಿಸುತ್ತಿತ್ತು.

ಮೊದಲನೇ ಸಲ ಗಣಪತಿ ಹಬ್ಬದ ದಿನ ಉದ್ದಿನ ವಡೆ, ಪಾಯಸದ ಊಟ ಮಾಡಿದಾಗ ಹುಬ್ಬು ಹಾರಿಸಿ, ಮುಜುಗರ ಪಟ್ಟಿದ್ದೆವು. ಅಲ್ಲಿ ಹವ್ಯಕರಲ್ಲಿ ಅದು ಪದ್ಧತಿ. ಹಳೆ ಮೈಸೂರು ಕಡೆ ಬ್ರಾಹ್ಮಣರ ಮನೆಯಲ್ಲಿ ವಡೆ ಊಟ ತಿಥಿ ದಿನ ಮಾತ್ರ. ಉಳಿದಂತೆ ನಿಷಿದ್ಧ. ಗಣಪತಿ ಹಬ್ಬದ ದಿನ ವಡೆ ಊಟ ಮಾಡಿದ್ದು ನಮ್ಮಮ್ಮನಿಗೆ ಹೇಳಿದಾಗ `ಎಲ್ಲಾದ್ರೂ ಉಂಟೆ, ಹೀಗೆ ಮಾಡಬಹುದೇ, ನೀನು ಅದಷ್ಟು ಜಾಗ್ರತೆ ಟ್ರಾನ್ಸ್‌ಫರ್ ಮಾಡಿಸ್ಕೊಂಡು ಬಾ' ಅಂತ ಹೇಳಿದ್ದರು. ಆದರೆ ಗುಂಡಮ್ಮಜ್ಜಿ ಖಾನಾವಳಿಯಲ್ಲಿ ಪ್ರತಿ ಹಬ್ಬದಲ್ಲೂ, ದ್ರೌಪದಿ ಇಲ್ಲದ ಈ ಪಾಂಡವರ ಗುಂಪಿಗೆ ವಿಶೇಷ ಹಬ್ಬದೂಟ ಇದ್ದೇ ಇರುತ್ತಿತ್ತು.

ಅಜ್ಜಿ ಕೈಯ ಊಟದಿಂದ ನಾವು ದುಂಡದುಂಡಗೆ ಇದ್ದೆವು. ಮನೆ ಊಟ ಇಲ್ಲವೆಂದು ನಮಗೆ ಎಂದೂ ಅನ್ನಿಸಿರಲಿಲ್ಲ. ಅಷ್ಟೇ ಅಲ್ಲ ಶೀತ, ಜ್ವರ ಬಂದರೆ ಬಿಸಿನೀರು ಸ್ನಾನ, ಅಜ್ಜಿ ಕೈಯ ಪಥ್ಯದ ಊಟ, ಕಷಾಯದಿಂದಲೇ ಗುಣಮುಖರಾಗುತ್ತಿದ್ದೆವು. ಕೆಲವು ಭಾನುವಾರ ನಮಗೆಂದೇ ವಿಶೇಷವಾದ ತಿಂಡಿಯೂ ಇರುತ್ತಿತ್ತು. ಚಪಾತಿ, ಇಡ್ಲಿ, ದೋಸೆ, ಚಟ್ನಿ, ಹಣ್ಣಿನ ರಸಾಯನ, ಜೊತೆಗೆ ಬೆಣ್ಣೆ ಮುದ್ದೆ. ಇಷ್ಟೆಲ್ಲ ಸೇರಿ ಒಂದು ಊಟಕ್ಕೆ ನಾವು ಹೋದ ಮೊದಲಿಗೆ 6 ಆಣೆ ಇತ್ತು. ನಂತರದ ದಿನಗಳಲ್ಲಿ 9 ಆಣೆಗೆ ಏರಿತು. ತಿಂಡಿಗೆ ಮೂರು/ ನಾಲ್ಕಾಣೆ.
***
ಇಂಥ ವಾತ್ಸಲ್ಯದ ಸಂದರ್ಭವನ್ನು ಕಲುಷಿತಗೊಳಿಸಿದ ಒಂದು ಘಟನೆ ಕೆಲ ದಿನಗಳಲ್ಲೇ ನಡೆಯಿತು .ಖಾನಾವಳಿಗೆ ನಿತ್ಯ ಬರುತ್ತಿದ್ದ ಹವ್ಯಕ ಬ್ರಾಹ್ಮಣ ಪುರುಷರೆಲ್ಲ ಸೇರಿ ಗುಂಡಮ್ಮಜ್ಜಿ ಮನೆ ಊಟ ಬಹಿಷ್ಕರಿಸಲು ನಿರ್ಧರಿಸಿದರು. ಯಾಕೆಂದರೆ ನಮ್ಮ ಗೆಳೆಯ ದಲಿತ ಭಜಗುಳ್ಳಿಗೆ ಬ್ರಾಹ್ಮಣರ ಪಂಕ್ತಿಯಲ್ಲಿ ಊಟ ಹಾಕಬಾರದೆಂದೂ, ಹೊರಗಡೆ ತೊಟ್ಟಿಯಲ್ಲಿ ಅವನು ಊಟ ಮಾಡಿದರೆ ಅಡ್ಡಿಯಿಲ್ಲ ಎಂದೂ ಬೇಡಿಕೆ ಇಟ್ಟರು. ಬ್ರಾಹ್ಮಣತಿಯಾದ ಗುಂಡಮ್ಮಜ್ಜಿ ದಲಿತನ ಜೊತೆಯಲ್ಲಿ ನಮಗೂ ಊಟ ಹಾಕುವುದು ಬ್ರಾಹ್ಮಣಿಕೆಗೆ ಅಪಚಾರ ಎಸಗಿದಂತೆ ಎಂದೆಲ್ಲ ಧಮಕಿ ಹಾಕಿದರು.

ADVERTISEMENT

ನಮಗೆ ಪೀಕಲಾಟಕ್ಕೆ ಇಟ್ಟುಕೊಂಡಿತು. ಗುಂಡಮ್ಮಜ್ಜಿ ಬ್ರಾಹ್ಮಣ ಗಿರಾಕಿಗಳು ಒತ್ತಾಯಿಸಿದಂತೆ ಮಾಡಿದರೆ, ಅದು ಸ್ನೇಹಿತರಾದ ನಮ್ಮ ಐವರಿಗೂ ಅನ್ವಯಿಸಿದಂತೆ ಆಗುತ್ತದೆ. ಆ ಊರಿನಲ್ಲಿ ಬೇರೆಲ್ಲೂ ಒಳ್ಳೆ ಊಟ ದೊರೆಯುತ್ತಿರಲಿಲ್ಲ. ಅಷ್ಟರಲ್ಲಿ ನಮ್ಮಲ್ಲಿ ಒಬ್ಬರಾದ ವೆಂಕಟರಮಣಯ್ಯ ಅವರಿಗೆ ಮಾತ್ರ ಸಂಸಾರ ಬಂತು. ಇಂಥ ಸ್ಥಿತಿಯಲ್ಲಿ ಏನು ಮಾಡುವುದೆಂಬ ಸಂದಿಗ್ಧದಲ್ಲಿ ಇದ್ದೆವು. ಒಂದು ನಾಲ್ಕಾರು ದಿನ ಬ್ರಾಹ್ಮಣರು ಯಾರೂ ಊಟಕ್ಕೆ ಬರಲಿಲ್ಲ. ನಮಗೆ ಮಾತ್ರ ಊಟ ಸಾಗುತ್ತಲೇ ಇತ್ತು. ಅಜ್ಜಿಯ ನಿರ್ಣಯಕ್ಕಾಗಿ ನಾಲ್ಕಾರು ದಿನ ಕಾದ ಬ್ರಾಹ್ಮಣರು ಒಂದು ದಿನ ಬಂದು `ಎಂತ ಮಾಡ್ತಿ ಗುಂಡಮ್ಮ' ಎಂದು ಗದರಿಸಿದರು. ನಮಗೋ ಢವ ಢವ. ಅಜ್ಜಿ ಘೋಷಿಸಿದ್ದೇನು ಗೊತ್ತೇ? `ನೀವೇ ಎಂತದಾರ ಮಾಡ್ಕಳ್ಳಿ, ನಾನು ಭಜಗುಳ್ಳಿಗೂ ನಿಮ್ಮ ಪಂಕ್ತಿಲೇ ಊಟ ಹಾಕೋಳೇ. ನನಗೆ ನೀವು ಅವನು ಎಲ್ಲ ಒಂದೇ, ನನ್ನ ಖಾನಾವಳೀಲಿ ಜಾತಿ ಪಾತಿ ಎಂತದೂ ಇಲ್ಲೆ' ಎಂದು ಹೇಳಿದ್ದೇ ಬ್ರಾಹ್ಮಣರೆಲ್ಲ ಪರಾರಿಯಾಗಿಬಿಟ್ಟರು. ನಮಗೇನೋ ನಿರಾಳವಾಯ್ತು.

ಆದರೆ ಪಾಪ ಅಜ್ಜಿಗೆ ಏನು ಮಾಡುತ್ತಾರೋ ಈ ಬ್ರಾಹ್ಮಣರು ಎಂಬ ಹೆದರಿಕೆಯಲ್ಲಿದ್ದೆವು. ಅಜ್ಜಿ ನಮಗೆ ಹೇಳಿದ್ದು: `ನೀವ್ಯಾರೂ ಹೆದರ‌್ಕಾಬೇಡಿ. ನೀವು ನಾಲ್ಕೇ ಜನ ಬನ್ನಿ ನಾನು ಊಟ ಹಾಕ್ತೀನಿ. ಈ ಬ್ರಾಹ್ಮಣ ದಿಕ್ಕಗಳ ಬೆದರಿಕೆಗೆ ನಾನು ಜಗ್ಗಲ್ಲ', ಎಂದು ಹೇಳಿ ನಮ್ಮನ್ನು ಸಂತೈಸಿದ ಅಜ್ಜಿಯ ನಿರ್ಮಲ ಮನಸ್ಸಿಗೆ ನಾವು ವಂದಿಸಿದೆವು.

ಮತ್ತೆ ನಾಲ್ಕು ದಿನ ಕಳೆದ ಮೇಲೆ ಬ್ರಾಹ್ಮಣರು ಒಬ್ಬೊಬ್ಬರಾಗಿ ಊಟಕ್ಕೆ ಬರಲು ಶುರು ಮಾಡಿದರು. ಮಾಮೂಲಿನಂತೆ ಅಜ್ಜಿ ಅವರಿಗೂ ಉಣಬಡಿಸಿದಳು. ಅವರು ತಣ್ಣಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದರು. ಸಂಜೆ ಹೊತ್ತು ನಾವು ಗೆಳೆಯರು ಮಾತ್ರ. ಕೆಲವು ದಿನ ಇನ್ನೊಂದು ನಾಲ್ಕು ಮಂದಿ ಬರುತ್ತಿದ್ದರು. ಆಗ ನಡೆಯುತ್ತಿದ್ದ ಲೋಕಾಭಿರಾಮದ ಮಾತುಕತೆ ಅಜ್ಜಿಯ ಆಧುನಿಕ ಪ್ರಗತಿಗಾಮಿ ಮನಸ್ಸನ್ನು ಪರಿಚಯಿಸುತ್ತಿತ್ತು. ಅಜ್ಜಿಯ ಧೈರ್ಯ, ಜಾತಿ ಗೀತಿ ಒಂದೂ ಇಲ್ಲದ ನಿರ್ಮಲ ಮನಸ್ಸಿನ ನಡವಳಿಕೆ ನಮಗೆ ದೊಡ್ಡ ಪಾಠ ಕಲಿಸಿತು.

ಈ ಘಟನೆ ನಡೆದು ಐವತ್ತು ವರ್ಷಗಳೇ ಕಳೆದಿವೆ. ಈಗ ಬದುಕಿಲ್ಲದ ಗುಂಡಮ್ಮಜ್ಜಿಯ ಅಂತಃಕರಣವನ್ನು ನೆನೆದಾಗೆಲ್ಲ ಕಣ್ಣು ತೇವವಾಗುತ್ತದೆ. ಗುಂಡಮ್ಮಜ್ಜಿಯ ಜಾತಿ ಮೀರಿದ ಮನಸ್ಸು, ಇಂದಿಗೂ ಪಂಕ್ತಿಭೇದ ಮಾಡುತ್ತಿರುವ ದೇವಾಲಯಗಳು ಮತ್ತು ಮಠಾಧೀಶರಿಗೆ ಬಂದಿಲ್ಲ ಯಾಕೆ...?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.