ADVERTISEMENT

ಚಿಗುರೆಲೆಯ ಬೆರಳಿಗೆ, ತಿಳಿ ಗುಲಾಬಿ ಉಗುರು...

ಸ್ವಾಸ್ಥ್ಯ ಸೌಂದರ್ಯ

ಡಾ.ಚೈತ್ರ ವಿ.ಆನಂದ
Published 16 ಮೇ 2014, 19:30 IST
Last Updated 16 ಮೇ 2014, 19:30 IST

ಸಹಜ ಮತ್ತು ಸರಳ ಸೌಂದರ್ಯ ಯಾವತ್ತಿದ್ದರೂ ಗಮನಸೆಳೆಯುತ್ತದೆ. ಉಗುರು ಬಣ್ಣ ಲೇಪಿತ ಕೈಗಳಿಗಿಂತಲೂ ತಿಳಿಗೆಂಪಿನ, ಸಹಜ ಬಣ್ಣದ ಪರಿಶುದ್ಧ ಹಸ್ತದ ಸ್ಪರ್ಶ ಯಾವತ್ತಿಗೂ ಆತ್ಮೀಯ ಭಾವ ಮೂಡಿಸುತ್ತದೆ.

ಮಗುವಿಗೆ ಭದ್ರತೆಯ ಭಾವ ನೀಡುವ ತೋರುಬೆರಳಿರಲಿ, ಇನಿಯನಿಗೆ ಒಪ್ಪಿಗೆಯ ಮುದ್ರೆಯಾಗಿ ನೀಡುವ ಉಂಗುರು ಬೆರಳಿರಲಿ, ಕುತೂಹಲಕ್ಕೆಂದು ಗದ್ದಕ್ಕೆ ಆಧಾರವಾಗಿರುವ ಹೆಬ್ಬೆರಳಿರಲಿ... ಎಲ್ಲವೂ ಪರಿಶುದ್ಧವಾಗಿದ್ದಷ್ಟೂ ಚಂದ. ಸರಳ ವ್ಯಕ್ತಿತ್ವದ ಸೂಚಕ ಅವು.

ಉಗುರಿನ ಸೌಂದರ್ಯಕ್ಕಾಗಿ ಮೊದಲ ನಿಯಮವೆಂದರೆ ನೈರ್ಮಲ್ಯ ಕಾಪಾಡುವುದು. ಬಟ್ಟೆ ಒಗೆಯುವಾಗ, ಡಿಟರ್ಜಂಟ್‌ನಿಂದಾಗಿ ಕೈಗಳು ಶುಷ್ಕವಾಗಬಹುದು. ಪಾತ್ರೆ, ಬಟ್ಟೆ ತೊಳೆಯುವಾಗ ಗ್ಲೌಸ್‌ ಧರಿಸಿ. ಸ್ಟ್ರಾಂಗ್ ಆಗಿರುವ ಸೋಪು ಮತ್ತು ಡಿಟರ್ಜಂಟ್‌ ಬಳಸಬೇಡಿ.

ಉಗುರು ಬಣ್ಣವನ್ನು ಬಳಸುತ್ತಿದ್ದರೆ ಆಗಾಗ ಬದಲಿಸುತ್ತಿರಿ. ನಡುನಡುವೆ ವಿರಾಮ ನೀಡುವುದು ಒಳಿತು. ಉಗುರು ಬಣ್ಣ ತೆಗೆಯಲು ರೇಜರ್‌ಗಳನ್ನು ಬಳಸಬಾರದು. ಉಗುರು ಘಾಸಿಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಸಡೆಟೋನ್‌ ನೇಲ್‌ ಪಾಲಿಶ್‌ ರಿಮೂವರ್‌ ಬದಲಿಗೆ ಮಾಯಿಶ್ಚರೈಸರ್‌ ಅಂಶವಿರುವ ರಿಮೂವರ್‌ ಬಳಸುವುದು ಒಳಿತು.

ಉಗುರ ಸಂದಿಗಳನ್ನು ಆಗಾಗ ಶುದ್ಧಗೊಳಿಸುವುದು ಒಳಿತು. ಆದರೆ ಮೇಲಿಂದ ಮೇಲೆ ಮತ್ತು ಹೆಚ್ಚು ಒತ್ತಡ ಹಾಕಿ ಸ್ವಚ್ಛಗೊಳಿಸಬಾರದು. ಮೆನಿಕ್ಯೂರ್‌ ಕಿಟ್‌ನಲ್ಲಿ ಸಿಗುವ ಬ್ರಶ್‌ನಿಂದ ಉಗುರು ಸಂದಿಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಮನೆಯಲ್ಲಿಯೇ ಮೆನಿಕ್ಯೂರ್‌ ಮಾಡಿಕೊಳ್ಳುವಂತಿದ್ದರೆ ಉಗುರಂಚಿನ ಚರ್ಮವನ್ನು ಬಲವಂತದಿಂದ ಹಿನ್ನುಗ್ಗಿಸುವುದು ಬೇಡ. ಅದು ಘಾಸಿಗೊಳ್ಳಬಹುದು.

ಉಗುರು ಕಚ್ಚುವ ಅಭ್ಯಾಸ ಕೈಬಿಡಬೇಕು. ಉಗುರಿನಿಂದ ಸಿಬಿರು ಎದ್ದಿದ್ದರೆ ಅದನ್ನು ಕೈಯಿಂದ ಕಿತ್ತುವುದು, ಹಲ್ಲಿನಿಂದ ಎಳೆಯುವುದು ಮಾಡಬಾರದು. ನೇಲ್‌ ಕಟರ್‌ನಿಂದ ಕತ್ತರಿಸುವುದು ಒಳಿತು.

ಚಂದಗಾಣಲು ಕೃತಕ ಉಗುರುಗಳನ್ನು ಸಾವಧಾನವಾಗಿ ತೆಗೆಯಬೇಕು. ಉತ್ಪಾದಕರು ನೀಡುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು. ಅಗತ್ಯ ತೀರಿದೊಡನೆ ಮೇಕಪ್‌ ತೆಗೆದಂತೆಯೇ ಈ ಉಗುರುಗಳನ್ನೂ ತೆಗೆದಿಡುವುದು ಉತ್ತಮ ಅಭ್ಯಾಸವಾಗಿದೆ.

ಕೈ ತೊಳೆದ ನಂತರ ಆಗಾಗ ಮಾಯಿಶ್ಚರೈಸರ್‌ ಲೇಪಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಮುಂಗೈಗಳಿಗೆ ಮಾಯಿಶ್ಚರೈಸರ್‌ ಲೇಪಿಸಿಕೊಳ್ಳುವಾಗ, ಉಗುರು, ಉಗುರು ಸಂದಿ, ಉಗುರಿನ ಮೇಲ್ಪದರಿಗೆ ಬೆಳೆಯುವ ಚರ್ಮಕ್ಕೂ ಲೇಪಿಸುವುದನ್ನು ಮರೆಯದಿರಿ.

ಆ ಚರ್ಮ ಶುಷ್ಕವಾದರೆ ಗಾಯವಾಗಿ ನೋವಾಗುವ ಸಾಧರ್ಯತೆಗಳು ಹೆಚ್ಚಾಗಿರುತ್ತವೆ.  ಉಗುರು ಒಣವಾಗಿದ್ದರೆ, ಅಂಗೈ ಬೆವರುತ್ತಿದ್ದರೆ, ಉಗುರುಗಳಲ್ಲಿ ಬಿರುಕು ಕಾಣುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಸೋಂಕುಗಳಿಂದ ದೂರ ಇರಲು, ಪ್ರತ್ಯೇಕ ಕರವಸ್ತ್ರ, ಅಂಗವಸ್ತ್ರ ಹಾಗೂ ಟವಲ್‌ಗಳನ್ನು ಬಳಸುವ ರೂಢಿ ಬೆಳೆಸಿಕೊಳ್ಳಿ.

ಸ್ನಾನದ ನಂತರ, ಬಟ್ಟೆ ಒಗೆದ ಬಂತರ ಮುಂಗಾಲನ್ನೂ ಅಂಗಾಲನ್ನೂ ಶುದ್ಧವಾದ ಬಟ್ಟೆಯಿಂದ ಒರೆಸಿಕೊಳ್ಳಬೇಕು. ವಿಶೇಷವಾಗಿ ಬೆರಳ ನಡುವಿನ ಸಂದಿಗಳು ಒಣಗಿರುವಂತೆ ಕಾಳಜಿ ವಹಿಸಬೇಕು.
(ಮಾಹಿತಿಗೆ: 7676757575)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT