ADVERTISEMENT

ತಾಯಿಯ ನಿರ್ಧಾರ ಗೌರವಿಸಲಿ...

ಅನ್ನಪೂರ್ಣ ವೆಂಕಟನಂಜಪ್ಪ
Published 23 ಅಕ್ಟೋಬರ್ 2015, 19:30 IST
Last Updated 23 ಅಕ್ಟೋಬರ್ 2015, 19:30 IST

ಚಿಕ್ಕಂದಿನಲ್ಲಿ ಸಂಪ್ರದಾಯಸ್ಥ ಕುಟುಂಬದ ಮಗಳಾಗಿ ತಂದೆ ತಾಯಿಯ ಇಚ್ಛೆಯಂತೆ ಮದುವೆಯಾಗಿ ಸೇರಿದ ಮನೆಯ ಕರ್ತವ್ಯವನ್ನು ನೆರವೇರಿಸುತ್ತಾ ‘ಸಿಕ್ಕ ಜೀವನವನ್ನೇ’ ಪ್ರೀತಿಸುತ್ತಿದ್ದ ನನ್ನ ಆಪ್ತವಲಯದ ಮಧ್ಯಮ ವಯಸ್ಕಳೊಬ್ಬಳಿಗೆ ಇದೀಗ ‘ವಿಧವೆ’ ಪಟ್ಟ.  ಬದುಕಿನ ಅನಿರೀಕ್ಷಿತ ಅವಗಢಗಳಿಗೆ ಸಿಕ್ಕಿದರೂ ಧೈರ್ಯವಾಗಿ ಏಕೈಕ ಪುತ್ರಿಗೆ ವಿದ್ಯಾಭ್ಯಾಸ ಕೊಡಿಸಿ ಅವಳೀಗ ಉದ್ಯೋಗಸ್ಥೆಯಾಗಿ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳುವತ್ತ ಸಾಗಿದ್ದಾಳೆ.

ವಿಭಿನ್ನ ಸಂಸ್ಕೃತಿಯ ತನ್ನ ಸಹೋ ದ್ಯೋಗಿಯನ್ನು ವರಿಸಿ ವಿದೇಶದಲ್ಲಿ ನೆಲಸುವ ಪ್ರಯತ್ನದಲ್ಲಿದ್ದಾಳೆ. ಈವರೆಗೆ ನೆರವು ನೀಡುತ್ತಿದ್ದ ಅವಳ ಅಜ್ಜ ಅಜ್ಜಿ ವಯಸ್ಸಿನ ಸಮಸ್ಯೆಯಿಂದ ಉದ್ಭವವಾದ ಕಷ್ಟದಲ್ಲಿದ್ದಾರೆ.

ಮಗಳು ದೂರ ಹೋಗುತ್ತಿರುವ ತವಕ, ಅಪ್ಪ ಅಮ್ಮ ನೀಡಿದ್ದ ನೈತಿಕ ಶಕ್ತಿಯ ಕುಸಿತದಿಂದ ನೊಂದ ನನ್ನ ಆಪ್ತೆ ಇದೀಗ ದೂರದ ಬಂಧುವೂ ಆಗಿರುವ ವಿಚ್ಛೇದಿತ ವ್ಯಕ್ತಿಯೊಂದಿಗ ವೈವಾಹಿಕ ಸಂಬಂಧಕ್ಕೊಳಗಾಗಿ ಒಂಟಿತನಕ್ಕೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದಾಳೆ.

ತನ್ನ ಕರ್ತವ್ಯವನ್ನೆಲ್ಲಾ ನಿಭಾಯಿಸಿ, ತನ್ನ ಕಷ್ಟ ಸುಖಗಳಿಗೆ ಸ್ಪಂದಿಸುವ ಜೊತೆಗಾರನನ್ನು ಹುಡುಕಿಕೊಂಡಿರುವ ಅವಳ ನಿರ್ಧಾರವನ್ನು ತಪ್ಪೆಂದು ಹೇಳುವ ಶಕ್ತಿ ಯಾವ ಬಂಧುಗಳಿಗೂ, ಸುತ್ತಮುತ್ತಲಿನವರಿಗೂ ಇಲ್ಲ.  ಮಗಳು ವಿದ್ಯಾವಂತೆ ಬುದ್ಧಿವಂತೆಯಾಗಿ ತನ್ನ ತಾಯಿಯ ನಿರ್ಧಾರವನ್ನು ಗೌರವಿಸಬೇಕು. ಸಾಕಷ್ಟು ನೊಂದಿರುವ ಅವಳಿಗೆ ತನ್ನ ಸಾಂತ್ವನ ನೀಡಿ ಸಹಕರಿಸಬೇಕು. 

ಮುಖ್ಯವಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪರಸ್ಪರ ಆಸರೆ ನೀಡಿದರೆ ಈ ವಿಶಾಲ ವಿಶ್ವದಲ್ಲಿ ಒಂಟಿತನದ ಕಾರ್ಪಣ್ಯಗಳನ್ನು ದೂರಮಾಡಿ ಎಲ್ಲರೂ ನೆಮ್ಮದಿಯಿಂದಿರಲು ಸಾಧ್ಯ.  ಬದುಕು ನಾವು ಇಷ್ಟಪಟ್ಟಂತೇ ಬರುವುದಿಲ್ಲ  ಅದು ಬಂದಂತೆ ಸ್ವೀಕರಿಸಬಲ್ಲ ಮನೋದಾರ್ಢ್ಯವನ್ನು ಸರ್ವರೂ ಬೆಳೆಸಿಕೊಳ್ಳಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.