ADVERTISEMENT

ನನ್ನ ಅಪ್ಪ–ಶಾಂತರಸ

ನಿನ್ನಂಥ ಅಪ್ಪ ಇಲ್ಲ

ಭಾರತಿ ಮೋಹನ ಕೋಟಿ
Published 13 ಮೇ 2016, 19:30 IST
Last Updated 13 ಮೇ 2016, 19:30 IST
ಭಾರತಿ ಮೋಹನ್‌ ಕೋಟಿ
ಭಾರತಿ ಮೋಹನ್‌ ಕೋಟಿ   

ಮಕ್ಕಳನ್ನು ಕೂಡಿಸಿಕೊಂಡು ದಿನಾ ರಾತ್ರಿ ಅರೇಬಿಯನ್‌ ನೈಟ್‌್ಸ, ಶರಣರ ವಚನ, ಜೀವನ ಚರಿತ್ರಾ ಕತೆ ಹೇಳುತ್ತಾ, ಅವರು ಕೇಳುವ ಹಲವು ಪ್ರಶ್ನೆಗಳಿಗೆ  ತಾಳ್ಮೆಯಿಂದ, ಪ್ರೀತಿಯಿಂದ ಉತ್ತರಿಸುತ್ತಿದ್ದ ಕವಿ ಶಾಂತರಸ  ಮಕ್ಕಳೊಂದಿಗೆ  ಮಕ್ಕಳಾಗಿ ಗೋಲಿ, ಬುಗರಿ, ಗಿಲ್ಲಿ ದಾಂಡು, ಕೇರಂ ಆಡತಿದ್ದರು. ತಂದೆಯೊಂದಿಗಿನ ನೆನಪುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ ಭಾರತಿ ಮೋಹನ್‌ ಕೋಟಿ.

ನನ್ನ ಅಪ್ಪ ಓಹ್‌! ಆತನ ಬಗೆಗೆ ಹೇಳೂದಂದ್ರೆ ನಾನು ಚಿಕ್ಕವಳಿದ್ದಾಗ ಆಡಲು... ಬುದ್ಧಿ ತಿಳಿದಮೇಲೆ  ನನ್ನ ಪ್ರಶ್ನೆಗಳಿಗೆ ಉತ್ತರಿಸಲು... ಮತ್ತ ಹದಿಹರಯದ ಹಸಿಬಿಸಿ ವಿಚಾರಗಳ ವಯೋಮಾನದಲ್ಲಿ ಮನಸ್ಸಿನಗೆ ನೂರೆಂಟು ಗೊಂದಲಗಳಿಗೆ ಉತ್ತರ ಹೇಳಲು ಪಕ್ಕದಲ್ಲಿ ಅಪ್ಪನಿದ್ದ.

ಅಷ್ಟೇ ಅಲ್ಲ ಬೆಳೆದು ದೊಡ್ಡವಳಾಗಿ ನೌಕರಿ, ಸಂಸಾರ ಜಂಜಾಟದಾಗ ಇದ್ದಾಗೂ ಕೌಟುಂಬಿಕ, ಆರೋಗ್ಯ, ವೈಯಕ್ತಿಕ, ಸಾಹಿತ್ಯಿಕ ಯಾವುದೇ ವಿಷಯಗಳ ಬಗ್ಗೆ  ಚರ್ಚಿಸಲು, ಸಾಂತ್ವನ ಹೇಳಲು ಅಪ್ಪ ಸದಾ ಜೊತೆಯಲ್ಲಿ ಇದ್ದ. ನನಗೆ ಆತ ಅಪ್ಪ ಅಷ್ಟೇ ಅಲ್ಲ ತೀರ ಆತ್ಮೀಯ ಸ್ನೇಹಿತ.  ನನ್ನ ಆತನ ನಡುವೆ ಯಾವುದೇ ಗುಟ್ಟುಗಳಿರಲಿಲ್ಲ. ಗೊಂದಲಗೊಂಡಾಗ ಒಮ್ಮೆಮ್ಮೊ ಆತನೇ ನನ್ನ ಸಲಹೆ ಕೇಳುತಲಿದ್ದ. ಆಗ ಆತನದು ಮಗುವಿನ ಮುಗ್ಧತೆ.

ನನ್ನ ಅಪ್ಪ ಅಮ್ಮನ ಅತ್ಯಂತ ಆದರ್ಶ  ಗುಣ ಅಂದ್ರೆ ಅವ್ರು ಯಾವತ್ತೂ ಮಕ್ಕಳ ನಡುವೆ ತಾರತಮ್ಯ ಮಾಡಲಿಲ್ಲ. ಅಪ್ಪ ಅಂತೂ ಗಂಡು ಹೆಣ್ಣು  ಅಂತ ಯಾವ ಭೇದಭಾವ ಮಾಡದೆಯೇ ನಮ್ಮನ್ನ ಬೆಳೆಸಿದರು.

ನಮ್ಮನ್ನೆಲ್ಲ ಕೂಡಿಸಿಕೊಂಡು ದಿನಾ ರಾತ್ರಿ ಅರೇಬಿಯನ್‌ ನೈಟ್‌್ಸ, ಶರಣರ ವಚನ ಜೀವನ ಚರಿತ್ರಾ ಕತೆ ಹೇಳುತ್ತಿದ್ದರು. ನಾವು ಕೇಳುವ ಹಲವು ಪ್ರಶ್ನೆಗಳಿಗೆ  ತಾಳ್ಮೆಯಿಂದ ಪ್ರೀತಿಯಿಂದ ಉತ್ತರಿಸ್ತಿದ್ದ. ಊಟ, ಉಡಿಗಿ ತೊಡಿಗಿ, ವಿದ್ಯಾಭ್ಯಾಸ ಯಾವುದರಲ್ಲೂ  ನಮ್ಮ ನಡುವೆ ತಾರತಮ್ಯ ಮಾಡಲಿಲ್ಲ. ನಮ್ಮ ಜೊತಿ ಗೋಲಿ, ಬುಗರಿ, ಗಿಲ್ಲಿ ದಾಂಡು, ಕೇರಂ ಆಡತಿದ್ದ. ಅಪ್ಪ ಯಾವುದೇ ಊರಿಗೆ ಹೋದ್ರೂ ಹೊರೆಯಷ್ಟು  ಕಥಿ ಪುಸ್ತಕ ತರ್ತಿದ್ದ.

ಮತ್ತ ಅವನ್ನ ಓದಿದ ಮ್ಯಾಲೆ ಅವುಗಳ ಬಗ್ಗೆ ನಮ್ಮ ಜೊತೆ ಚರ್ಚಿಸುತ್ತಿದ್ರು. ಭಾಳ ಅಂದ್ರ ಭಾಳ ಪ್ರೀತಿ ಮಾಡತಿದ್ದ. ಯಾವತ್ತೂ ನಮ್ಮನ್ನ ಗದರಿಸಿ ಜಬರಿಸಿ ಮಾತಾಡ್ಸಿಲ್ಲ. ಹೊಡಿಯೂದಂತೂ ದೂರವೇ ಉಳೀತು. 

ಸಣ್ಣ ಅಣ್ಣ ಸೆಕೆಂಡ್‌ ಪಿಯುಸಿ ಒಂದ ಪೇಪರ್‌ ಫೇಲ್‌ ಆಗಿದ್ದ. ಅಪ್ಪ ಆತನ ಕೈಯಾಗ ರೊಕ್ಕ ಕೊಟ್ಟು ‘ಹೋಗು ಎಲರೆ ನಾಲ್ಕು ದಿನ ಊರು ಅಡ್ಡಾಡಿ ಬಾ ಆಮ್ಯಾಲೆ ಮತ್ತೆ ಪರೀಕ್ಷೆ ಬರೆದು  ಪಾಸು ಮಾಡ್ಕೊ’ ಅಂತ ಕಳಿಸಿದ. ಓದವ  ವಿಷಯಕ್ಕ ಸ್ಟ್ರಿಕ್‌್ಟ ಇದ್ದ, ಆದ್ರ  ಒತ್ತಡ ಹೇರತಿರಲಿಲ್ಲ.

ಅಪ್ಪ ನಮ್ಮನ್ನ ಸಾಲೀ ಕಾಲಸೂದ್ರಾಗ ಯಾವದು ತಾರತಮ್ಯ ಮಾಡಲಿಲ್ಲ. ಏನ ಓದತೀವಿ ಅದನ್ನೇ ಓದಿಸಿದರು. ಅಪ್ಪ ಅಮ್ಮನ ಗುರಿ ನಮ್ಮನ್ನು ಓದಿಸಿ, ನೌಕರಿಗೆ ಹಚ್ಚಬೇಕು ಅಂತಿತ್ತು. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಆತ್ಮಗೌರವದಿಂದ ಬದುಕಬೇಕು ಅನ್ನೂದು ಅವರ ಉದ್ದೇಶವಾಗಿತ್ತು.  

ಅವರ ಆ ಸ್ವಾಂತಂತ್ರ್ಯ ಜವಾಬ್ದಾರಿ ಎರಡನ್ನೂ ಒಟ್ಟೊಟ್ಟಿಗೆ ನೀಡಿದರು ಎಂದೇ ನಾವೆಲ್ಲ ಇವೊತ್ತು ಆತ್ಮಾಭಿಮಾನದಿಂದ ಬದುಕುವಂತಾಗಿದೆ. ನಮ್ಮ ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಅವರ ಸರಳತನವೇ ಹೆಚ್ಚು ಸಹಾಯಕವಾಯಿತು.

ಅವರ ಜನಪ್ರಿಯತೆಯ ನೆರಳಿನಲ್ಲಿ ನಾವ್ಯಾರೂ ಬೆಳೆಯದಂಥ ಎಚ್ಚರ ವಹಿಸಿದ್ದರು. ಸಾಹಿತ್ಯ, ಸಂಗೀತ ಕಲೆಗಳ ಬಗ್ಗೆ ಪ್ರೀತಿ ಬೆಳೆಸಿದ ಅಪ್ಪನ್ನ ಎಷ್ಟು ಸ್ಮರಿಸಿದರೂ ಸಾಲದು. ನಮ್ಮನ್ನ ಓದಿಸಬೇಕೆಂಬ ಹಟಕ್ಕೆ ಬಿದ್ದಿದ್ದರಿಂದಲೂ ಅವರು ಯಾವತ್ತೂ ಐಷಾರಾಮಿ ಜೀವನ ಆಡಲಿಲ್ಲ.  ಒಂದು ಸ್ವಂತ ಮನೀನೂ ಕಟ್ಟಿಕೊಳ್ಳಲಿಲ್ಲ. ಆದ್ರೆ ನಾವು ನಾಲ್ಕು ಜನ ಮಕ್ಕಳು ಮನೆ ಕಟ್ಟಿಕೊಳ್ಳುವಂತೆ  ಮಾಡಿದರು.

ಶಾಲಾ ಕಾಲೇಜುಗಳಲ್ಲಿ ಸರಳತನದ ಪಾಠ ತಾವು ಬದುಕುವ ಮೂಲಕವೇ ತಿಳಿಸಿಕೊಟ್ಟರು. ಸ್ಪರ್ಧೆ ಉಡುಗೆ ತೊಡುಗೆಗಳಲ್ಲಿ ಅಲ್ಲ, ಓದು ಬರೆಯುವುದರಲ್ಲಿರಬೇಕು. ಒಮ್ಮೆ ಶಾಲೆಯಲ್ಲಿ ಮುಂದಿದ್ದರೆ ಜಾಣ್ಮೆಯ ಮುಂದೆ ಎಲ್ಲವೂ ನಗಣ್ಯವಾಗುತ್ತದೆ ಎನ್ನುವುದು ಅವರ ಅನಿಸಿಕೆಯಾಗಿತ್ತು. 

ನಾನು ಐದು–ಆರನೇಯ ತರಗತಿಯಲ್ಲಿದ್ದಾಗಿನಿಂದ ಅಪ್ಪನ ಪುಸ್ತಕಗಳ ಪ್ರೂಫು ತಿದ್ದುವುದು ಕಲಿತೆ . ‘ಉಮ್ರಾವ್‌ ಜಾನ್‌ ಅದಾ’ ಉರ್ದು ಕಾದಂಬರಿ ಅಪ್ಪ ಕನ್ನಡಕ್ಕೆ ಭಾಷಾಂತರಿಸಿದ್ದರ ಹಸ್ತಪ್ರತಿಯನ್ನು ನಾನು ನನ್ನ ಸಣ್ಣ ಅಣ್ಣ ಅಪ್ಪನ ಜೊತೆ ಸೇರಿ 2 ತಿಂಗಳು ಪ್ರೂಫು ನೋಡಿದ್ದೆವು. ಅಕ್ಕ ಅದನ್ನ ಫೇರ್‌ ಬರೆದಿದ್ಲು.   ಚಿಕ್ಕಂದಿನಿಂದಲೇ ಪುಸ್ತಕದ ಹಸ್ತಪ್ರತಿ, ಪ್ರೂಫು ತಿದ್ದುವುದು ಭಾಷಾಜ್ಞಾನ ಪ್ರಕಟಣೆ ಇವುಗಳ ಪರಿಚಯವಾಯಿತು. ಒಂದು ಪುಸ್ತಕ ಹೊರತರುವ ಕಷ್ಟ ಸುಖಗಳ ಅನುಭವವೂ ಆಯಿತು.

ಅಪ್ಪ ತಾನು ಬರೆದ ಕಥೆ, ಕವನ ಏನೇ ಇರಲಿ ಮೊದಲು ನಮ್ಮೆದುರು ಓದುತ್ತಿದ್ದ. ನಮ್ಮ ಸಲಹೆಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದ. ಅದರಿಂದ ನಮಗೊಂದು ವ್ಯಕ್ತಿತ್ವವಿದೆ. ನಮ್ಮ ಮಾತಿಗೆ ಮನ್ನಣೆ ಇದೆ ಎಂಬ ಭಾವ ಬಿತ್ತಿದರು.

ಅಪ್ಪನ ಜೊತೆ ಮಾತಾಡುವುದೇ ಒಂದು ಸೊಗಸು. ನೂರಾರು ವಿಷಯಗಳ ಚರ್ಚೆ, ಹರಟೆ, ಜೋಕ್‌್ಸ ಎಲ್ಲ ನಡೀತಿತ್ತು. ಅಪ್ಪನ ಜೀವನೋತ್ಸಾಹ ಮೆಚ್ಚುವಂಥದು.

ಪ್ರವಾಸ ಹೋದರಂತೂ, ಹರಟೆ, ತಮಾಷೆ, ಚರ್ಚೆ ನಡು ನಡುವೆ ಚಹಾ ಬ್ರೇಕ್‌... ಓಹ್‌ ಅವಿಸ್ಮರಣೀಯ ಘಳಿಗೆಗಳು.
ಅಪ್ಪ, ಅಮ್ಮ ನಮ್ಮ ಧಾರ್ಮಿಕ ನಿಲುವು,  ಬಾಳಸಂಗಾತಿಯ ಆಯ್ಕೆ ಇವುಗಳಲ್ಲಿ ಕೂಡ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನಮ್ಮ ಮೇಲೆ ತಮ್ಮ ನಿರ್ಧಾರಗಳನ್ನು ಎಂದೂ ಹೇರಲಿಲ್ಲ. ಬಹಳ ‘ಡೆಮೊಕ್ರಟಿಕ್‌’ ನಿಲುವು ಅವರದು.

ಕಿರಿಯ ಮಗಳು ಅಂತ ಅಪ್ಪನಿಗೆ ನನ್ನ ಮೇಲೆ ಹೆಚ್ಚೇ ಪ್ರೀತಿ ಎನ್ನಬಹುದು. ಅಪ್ಪ ನನ್ನ ಮನೆಯಲ್ಲಿಯೇ ಹೆಚ್ಚು ದಿನ ಕಳೆದಿರುವುದು ನನ್ನ ಹೆಮ್ಮೆಯೂ ಹೌದು.   ಅಮ್ಮ ಇರುವವರೆಗೆ ಅಮ್ಮನೇ ಅಪ್ಪನ ಬರವಣಿಗೆ ಫೇರ್‌ ಮಾಡುವುದು ಪ್ರೂಫ್‌ ನೋಡುವುದು ಮಾಡತಿದ್ಲು.

ಅಮ್ಮ ಹೋದ ಮೇಲೆ ನಾನೇ ಅಪ್ಪನ ಪರ್ಸನಲ್‌ ಸೆಕ್ರೆಟರಿ ಆದೆ. ‘ಸಿದ್ಧರಾಮ ಜಂಬಲದಿನ್ನಿ ಅವರ ಜೀವನ ಚರಿತ್ರೆ’, ‘ಮದಿರೆ ಮತ್ತು ಯೌವನ’, ‘ಗಝಲ್‌ ದ್ವಿಪದಿಗಳ ಸಂಕಲನ’ ಇಲ್ಲಿ ಗದುಗಿನ ನಮ್ಮ ಮನೆಯಲ್ಲಿ ಒಂದು ಸ್ವರೂಪ ಕಂಡಿದ್ದು. ನಾನೇ ಅಪ್ಪ ಹೇಳಿದಂತೆಲ್ಲ ಬರೆದು ಪ್ರಕಟಣೆಗೆ ಸಿದ್ಧ ಮಾಡಿದ್ದು, ಇವೆಲ್ಲ ನನ್ನ ಜೀವನದ ಅಮೃತ ಘಳಿಗೆ.

ಅಪ್ಪನಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ. ಆಸ್ಪತ್ರೆಗೆ ಹೋಗುವುದೆಂದರೆ  ಅವರಿಗೆ ಇಷ್ಟದ ಕೆಲಸವಾಗಿತ್ತು.   ಯಾವುದೋ ಸಮಾರಂಭಕ್ಕೆ ಹೋಗುವಂತೆ ಡಾಕ್ಟರ್‌ ಭೇಟಿಗೆ ಶಿಸ್ತಾಗುತ್ತಿದ್ದರು.  ಎಲ್ಲಿಯೇ ಹೋದರೂ ಬಣ್ಣ ಬಣ್ಣದ ಜುಬ್ಬಾ ಹಾಕ್ಕೊಂಡು ಛಂದಗೆ ತಯಾರಾಗುತ್ತಿದ್ದರು.

ಅಪ್ಪ ಸುಂದರಾಂಗ, ಗ್ರೀಕ್‌ ಶಿಲ್ಪದಂತೆ ಮೂಗು, ಗುಲಾಬಿ ವರ್ಣದ ತುಂಬುತುಟಿ, ಪ್ರೀತಿ ತುಂಬಿದ ಬಟ್ಟಲುಗಣ್ಣು, ಆ ಹೊಳೆವ ಬೆಳ್ಳಿ ಕೂದಲು... ನಾವು ಅಪ್ಪನಿಗೆ ‘ನಿನಗs ಯಾರರೇ ಲೈನ ಹೊಡಿತಾರ?’ ಅಂತ ಕೇಳ್ತಿದ್ವಿ ಅಷ್ಟು ಸಲುಗೆ... ಅಷ್ಟು ಆಪ್ತ ಸ್ನೇಹಿತನಂಥ ಭಾವ ಕೊಟ್ಟಿದ್ದರು ಅಪ್ಪ.

‘ತೆರೆದ ಹೃದಯ ಶಾಸ್ತ್ರಚಿಕಿತ್ಸೆ’ ಒಂದು ಸ್ವಲ್ಪವೂ ಹೆದರಿಕೆ ಇಲ್ಲದೇ ಅಳುಕಿಲ್ಲದೇ ಮಾಡಿಸಿಕೊಂಡರು. 1997ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆದ ಮ್ಯಾಲ 11 ವರುಷ ಅಪ್ಪ ಆರೋಗ್ಯಕರ ಹೃದಯದ ಜೊತೆಗೆ ಜೀವನ ನಡೆಸಿದ.

ಗ್ಯಾಸ್ಟ್ರಿಕ್‌ ಸಮಸ್ಯೆ ಕಾರಣ ಅಪ್ಪ ಸುಮಾರು 25 ವರುಷಗಳ ಕಾಲ ಖಾರ, ಹುಳಿ ಇಲ್ಲದ ಸಪ್ಪನೆಯ ಊಟ ಮಾಡತಿದ್ದ. ಅಪ್ಪನಿಗಂತಲೆ ನಾನು ಸಪ್ಪನ ಪಲ್ಯೆ, ಬಿಸಿ ರೊಟ್ಟಿ ಮಾಡಿ ಕೊಡತಿದ್ದೆ. 25 ವರ್ಷ ಆತನ ಬೆಳಗಿನ ನಾಷ್ಟಾ ಅಂದ್ರ ‘ಉಪ್ಪಿಟ್ಟು’ ಅದೂ ಖಾರ ಇಲ್ದ ಇದ್ದದ್ದು.

ಆತನ ಜೊತೆಗೆ ನಾವು ಮೃಷ್ಠಾನ್ನ ಭೋಜನ ಉಂಡರೂ ಅಪ್ಪ ಆ ಕಡಿ ಹೊಳ್ಳಿ ನೋಡದೆ ತನ್ನ ಪಥ್ಯದ ಊಟವನ್ನೇ ಸೇವಿಸುತ್ತಿದ್ದ. ‘ಮನುಷ್ಯಾನ ಜನ್ಮ ಭಾಳ ಪುಣ್ಯದಿಂದ ಪಡಕೊಂಡು ಬಂದದ್ದು. ಇದನ್ನ ಜತನದಿಂದ ಕಾಪಾಡಿಕೊಂಡು ಏನಾದ್ರೂ ಸಾಧನಾ ಮಾಡಿ ಹೋಗಬೇಕಮ್ಮಾ’ ಅಂತಿದ್ದ.

ಕವಿ, ಕಥೆಗಾರ, ಲೇಖಕ,  ಪ್ರಕಾಶಕ, ಸಹೃದಯ ಓದುಗ, ಕೇಳುಗ– ಹೀಗೆ ಅಪ್ಪ ವೈವಿಧ್ಯಮಯ ವ್ಯಕ್ತಿತ್ವದವ. ಆತನ ಜೀವನೋತ್ಸಾಹ, ಜೀವನ ಪ್ರೀತಿ  ಅನುಕರಣೀಯ. ಬದಲಾದ ಜಗತ್ತು, ಪರಿಸ್ಥಿತಿಗೆ ಹೊಂದಿಕೊಂಡು ಭಾಳ ಖುಷಿಯಿಂದ ಇರ್‍ತಿದ್ದ. ‘ಬೇಸರ’ ಅನ್ನೂ ಶಬ್ದ ಆತನ ಬಾಯಾಗ ಯಾವತ್ತು ಬಂದಿಲ್ಲ.

ಅಪ್ಪ ಅಮ್ಮ ಇಬ್ಬರೂ ಶೋಷಣೆ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಾನ, ದನಿ ಎತ್ತತಾನ ಬದುಕಿದ್ರು. ಶಾಂತರಸ ಖರೆ– ಆದ್ರೆ ಆತ ಅನ್ಯಾಯದೆದುರು ಲಾವಾರಸ  ಆಗ್ತಿದ್ದ.

ಅಪ್ಪನ ಸ್ವಭಾವ ಕಮಲಪತ್ರದ ಮ್ಯಾಲಿನ ನೀರ ಹನಿಯಂಗ ಅನಾವಶ್ಯಕ ಯಾವುದರಾಗೂ ಮೂಗು ತೂರಿಸುವುದು ಆತನ ಜಾಯಮಾನ ಅಲ್ಲ. ತಾನಾಯಿತು, ತನ್ನ ಬರವಣಿಗೆ, ಟಿವಿ ವೀಕ್ಷಣೆ, ಪತ್ರ ವ್ಯವಹಾರ ಇವುಗಳಲ್ಲಿಯೇ ಆತ ವ್ಯಸ್ತ. ನನ್ನ ಮನೆಯಲ್ಲಿ ಸುಮಾರು 10 ವರುಷಗಳ ಇದ್ದ ಆ ಸಾಂಗತ್ಯ ನನ್ನ  ಜೀವನದ ಸುವರ್ಣಾಕ್ಷರಗಳಲ್ಲಿ ಬರೆದಿರುವಂಥ ಕಾಲ.

ನಾನು ಆತನ ಊಟ, ಉಪಚಾರ, ದವಾಖಾನೆ, ಆರೋಗ್ಯ, ಸೇವೆ ಬಹಳ ಪ್ರೀತಿಯಿಂದ ಮಾಡಿದೆ ಎನ್ನುವ ಹೆಮ್ಮೆ ನನಗಿದೆ. ಹೆಣ್ಣುಮಕ್ಕಳ ಮನೇಲಿ ಇರಬಾರದು ಎನ್ನುವ  ಗೊಡ್ಡು ಸಂಪ್ರದಾಯಕ್ಕೆ ಅಪ್ಪ ಅಮ್ಮ ಜೋತು ಬೀಳಲಿಲ್ಲ. ಅಮ್ಮನೂ ತನ್ನ ಕೊನೆಯ ದಿನಗಳನ್ನು ನನ್ನ ಮನೆಯಲ್ಲಿಯೇ ಕಳೆದು ಚಿರನಿದ್ರೆಗೆ ಜಾರಿದಳು.

ಅಣ್ಣನ ಮನ್ಯಾಗ 4–6 ತಿಂಗಳು ಇದ್ದು ಬೇಸಿಗೆಯ ವಾಸ್ತವ್ಯಕ್ಕ ಗದುಗಿಗೆ ಪುಸ್ತಕಗಳ ಹೊರೆಯ ಜೊತೆಗೆ ಬರುತಿದ್ದ. ಆಗ ನನಗೆ, ಮೋಹನ್‌ಗೆ, ಮಕ್ಕಳು– ಶಿಲ್ಪಾ ಶ್ವೇತಾರಿಗೆ ಹುಗ್ಗಿ ಹೋಳಿಗಿ ಸಿಕ್ಕಂಗ ಆಗತಿತ್ತು. 2007ರ ಡಿಸೆಂಬರನ್ಯಾಗ ಅಪ್ಪ ಅಣ್ಣನ ಹತ್ರ ಗುಲ್ಬರ್ಗಕ್ಕ ಹೋದ. ‘ಭಾರವ್ವಾ ಬ್ಯಾಸಿಗೀಗೆ ಎಪ್ರಿಲದಾಗ ಬರತೀನಿ’ ಅಂತ ಹೇಳಿ ಹೋದ,

ಆದ್ರ ದುರ್ವಿಧಿಯ ಸಂಚು ಬ್ಯಾರೇನ ಇತ್ತು. 2008ರ ಮಾರ್ಚ್‌ನ್ಯಾಗ ಅಪ್ಪಗ ಅನಾರೋಗ್ಯ ಶುರು ಆಯ್ತು. ಏಪ್ರಿಲ್‌ನಲ್ಲಿ  ಇನ್ನೂ ಹೆಚ್ಚಾಯಿತು.   ನಾನು ನನ್ನ ಸಣ್ಣ ಮಗಳು ಶ್ವೇತಾ ಗುಲ್ಬರ್ಗಕ್ಕ ಹೋಗಿದ್ವಿ. ಏಪ್ರಿಲ್‌ 13, 2008 ನನ್ನ ಜೀವನದ ವಿಷ ಘಳಿಗೆ. ಐಸಿಡಬ್ಲ್ಯೂನಾಗ ನಾನು ಶ್ವೇತಾ ಇಬ್ಬರೇ ಅಪ್ಪನ ಕೈಹಿಡಕೊಂಡು ಕೂತಿದ್ವಿ.

ಬೆಳಗಿನಿಂದಲೂ ಅಪ್ಪನ ಕೈ ಬಿಡದೇ ಕುಳಿತಿದ್ದೆ. ಅದ್ಯಾಕೋ ಕೈ ಬಿಟ್ಟರೆ... ಮುಗಿಯಿತೇ ಎಂಬ ಆತಂಕವಿತ್ತೇ ಮನಸಿನಲ್ಲಿ... ಗೊತ್ತಿಲ್ಲ. ಸಂಜೆ ಆರು ಗಂಟೆಗೆ ಅಪ್ಪ ನನ್ನ ಕೈಯಾಗ ಕೈ ಇಟ್ಟಂತೆಯೇ ಕೊನೆಯುಸಿರೆಳೆದ.

ನನಗೆ ಅಪ್ಪನ ಕಳೆದುಕೊಂಡ ಆ ಕ್ಷಣ, ಸಣ್ಣ ಕೂಸಿನ ಕಳಕೊಂಡ ತಾಯೀ ಸ್ಥಿತಿ ಆದಂತೆಯೇ ಆಗಿತ್ತು.  ಆನಂತರದ ಎಲ್ಲ ಬೇಸಿಗೆಗಳಲ್ಲೂ ಬರೀ ರಣಬಿಸಿಲಿನಿಂದ ಕಂಗೆಟ್ಟಿಲ್ಲ...  ಜೊತೆಗೆ ಅಪ್ಪನ ಗೈರು ಹಾಜರಿ ಎದಿ ಸುಡುವಂತೆ ಸುಟ್ಟಿದೆ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.