ADVERTISEMENT

ಪಿ.ಜಿ. ಲೈಫ್: ಇದು ಎಂಥ ಲೋಕವಯ್ಯ!

ಪವಿತ್ರ ಮೊತ್ತಹಳ್ಳಿ
Published 16 ಡಿಸೆಂಬರ್ 2011, 19:30 IST
Last Updated 16 ಡಿಸೆಂಬರ್ 2011, 19:30 IST

ಓದು ಬೇಡ?... ಎಷ್ಟೇ ಓದಿದರೂ ಒಲೆ ಉರಿಸುವುದು ತಪ್ಪುವುದಿಲ್ಲ ಅಲ್ವ? ಎಂಬ ವಾಕ್ಯವನ್ನು ನನ್ನ ಹಳ್ಳಿಯಲ್ಲಿ ನಿತ್ಯ ಕೇಳುತ್ತಾ ಕೇಳುತ್ತಾ ಸ್ನಾತಕೋತ್ತರ ಪದವಿ ಮುಗಿಯಿತು.

ಪದವಿ ಮುಗಿಸಿ ಕೆಲಸಕ್ಕಾಗಿ ಸಿಲಿಕಾನ್ ಸಿಟಿಗೆ ಪಾದಾರ್ಪಣೆ ಮಾಡಿದ್ದು. ಕೆಲಸವೇನೊ ಸಿಕ್ಕಿತ್ತು, ಆದರೆ ಈ ಮಹಾನಗರದಲ್ಲಿ ಉಳಿಯುವುದು ಎಲ್ಲಿ ಎಂಬ ಗೊಂದಲ ಕೊರೆಯುತ್ತಲೇ ಇತ್ತು. ಕಂಪ್ಯೂಟರ್ ತರಗತಿಯಲ್ಲಿ  ಪರಿಚಯವಿದ್ದ ಭಾಗ್ಯಳಿಗೆ ಫೋನಾಯಿಸಿ ಪಿಜಿಗೆ ಬರುವುದಾಗಿ ತಿಳಿಸಿದೆ. ಅದಕ್ಕೆ ಆಕೆ ಸಂತೋಷದಿಂದಲೇ ಬಾ... ಅಂತ ಅಂದಳು.

ಬೆಪ್ಪು ತಕ್ಕಡಿಯಂತೆ ಲಗೇಜ್ ತೆಗೆದುಕೊಂಡು ಹೋದೆ. ಔಪಚಾರಿಕವಾಗಿ ಭಾಗ್ಯ ಪಿಜಿ ಮಾಲೀಕರ ಪರಿಚಯ ಮಾಡಿಸಿದಳು. ಒಂದು ರೂಮಿನಲ್ಲಿ 8 ಜನ ಎಂದರು! 

`ಆದರೇನಂತೆ ನಮ್ಮಂತೆ ಅವರೂ ಉದ್ಯೋಗಕ್ಕಾಗಿ ಓದಿಗಾಗಿ ಬಂದಿರುವವರು ಅಲ್ವಾ...~ ಎಂದುಕೊಂಡು ನನ್ನನ್ನೇ ನಾನು ಸಮಾಧಾನಿಸಿಕೊಂಡೆ.

ಆಂಟಿ ಮೊದಲೇ ಹೇಳಿದ್ದರು - `ಈ ರೂಮಿನಲ್ಲಿ ಇರುವವರೆಲ್ಲಾ ತುಂಬಾ ಒಳ್ಳೆಯ ಹುಡುಗಿಯರು. ಯಾರೂ ಜಗಳವಾಡುವುದಿಲ್ಲ~. ಪಿಜಿಯಲ್ಲಿ ಜೀವನ ಶುರು ಮಾಡಿದ ಮೇಲೆಯೇ ಬದುಕಿನ ವಿವಿಧ ಮುಖಗಳ ಅನಾವರಣ ಆದದ್ದು.

ಪಿಜಿಯಿಂದ ಆಫೀಸ್‌ಗೆ ಬರಬೇಕಾದರೆ ಯಾವ ಬಸ್ ಹೋಗುತ್ತದೆ ಎಂದು ಕೇಳಲು ಹೋದರೂ ಅದಕ್ಕೆ  ಸಹಕಾರದ ಮಾತಿಲ್ಲದ ಜನ. `ಏನಪ್ಪಾ ಇದು ಎಂತಹ ಊರು~ ಎಂದು ಹಳಹಳಿಸುತ್ತಲೇ ಇಂತಹ ಸಣ್ಣ ಸಣ್ಣ ತೊಂದರೆಗಳ ಬಗ್ಗೆ ಅಣ್ಣನಿಗೆ  ಫೋನ್ ಮಾಡಿದ್ದೆ.  ನನ್ನ ಅಳುವಿನ ಭಾವನೆಗಳನ್ನು ಅರಿತ ಅಣ್ಣ `ಅದು ನಮ್ಮ ಮಂಡ್ಯ ಅಲ್ಲ ತಂಗೀ... ಸುಧಾರಿಸಿಕೊಂಡು ಅರ್ಥ ಮಾಡಿಕೊಂಡು ನಡೆ~ ಎಂದ್ದ್ದಿದ.

ಸ್ನಾನ ನಿಗದಿ ಸಮಯ ನಾನು ಮೊದಲು, ಆಮೇಲೆ ಈಕೆ ಎಂಬ ಪಾಳಿ ಫಿಕ್ಸ್! ಇತ್ತೀಚಿಗೆ ಬಂದವರು ಕೊನೆಯಲ್ಲಿ. ಬಟ್ಟೆ ತೆಗೆಯಲು ಸೂಟ್‌ಕೇಸ್ ತೆಗೆದರೆ `ನನ್ನ ನಿದ್ದೆಗೆ ತೊಂದರೆ ಆಯಿತು, ನನಗೆ ನಿದ್ದೆ ಬೆಳಿಗ್ಗೆ ಬರುತ್ತದೆ~ ಎಂದು ಅಬ್ಬರಿಸಿದಳು ಗೆಳತಿ ಗೀತಾ!...
ಮೊಬೈಲ್ ಛಾರ್ಜ್ ಮಾಡಲು ಮತ್ತೊಂದು ತಗಾದೆ.  `ಅಬ್ಬಾ ಎಂತಹ ಲೋಕವಯ್ಯ ಇದು ಎಂತಹ ಲೋಕವಯ್ಯ~ ಎನಿಸಿತ್ತು.

ಊಟ ಮಾಡಲು ಹೋದರೆ ಅಲ್ಲೊಂದು ಲೋಕ. ಅಡುಗೆ ಆಂಟಿಗೆ ಕೆಲವರು ಬಹಳ ಹಿತವರು. ಅವರು ಬಂದಾಗ ಅವರು ಧಾರಾಳಿ. ಅವರ ಬಿಟ್ಟು ಬೇರೆಯವರಿಗೆ ವರ್ತಿಸುತ್ತಿದ್ದ ರೀತಿ ಮಾತ್ರ ವಿಭಿನ್ನ. ಮುಖ ಸಿಂಡರಿಸಿಕೊಂಡು ಕೆಲವರಿಗೆ ಯಾವಾಗಲೂ ರೇಗುತ್ತಿದ್ದುದು ಮನಸ್ಸಿಗೆ ತುಂಬ ದುಃಖವಾಗುತ್ತಿತ್ತು. ವಾರ್ತೆಯನ್ನು ನೋಡಲು ಹೋದರೆ ಅಲ್ಲಿ ಧಾರಾವಾಹಿ ಹೊನಲ ಬೆಳಕು. ಎಂದೂ ನಮ್ಮ ಕೈಗೆ ಸಿಗದ ರಿಮೊಟ್. ಓದಲು ಪುಸ್ತಕ ಹಿಡಿದರೆ ರೂಮಿನಲ್ಲಿ ಟಿ.ವಿ. ಸುದ್ದಿಗಳ ಹರಟೆ.

ಸಾಕು, ಸಾಕಾಯಿತು ಅನುಭವದ ಪಾಠ!... ಎಂದು ನನ್ನ ಸ್ನೇಹಿತೆಗೆ ಫೋನಾಯಿಸಿದಾಗ ಅವಳ ಸಮಾಧಾನದ ಮಾತುಗಳಲ್ಲಿ  ಪಡೆದಿದ್ದು ಒಂದಿಷ್ಟು ಸಾಂತ್ವನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.