ADVERTISEMENT

ಬದುಕು–ಬರಹ–ಚಿತ್ರ...

ಅನಿತಾ ಎಚ್.
Published 13 ಜೂನ್ 2014, 19:30 IST
Last Updated 13 ಜೂನ್ 2014, 19:30 IST

ಬರೆಯೋದು, ಹರಿಯೋದು... ಅನಿಸಿದ್ದೆಲ್ಲವನ್ನೂ ಬರೆಯೋದು.. ಬರೆದು ಮುಗಿಸಿದ ನಂತರ ಹರಿದು ಹಾಕೋದು... ಅದಷ್ಟೇ ಗೊತ್ತಿದ್ದಂತೆ ಮಾಡುತ್ತಿದ್ದೆ. ಅದ್ಯಾವ ಗಳಿಗೆಯಲ್ಲಿಯೋ ಈ ವಿಷಯ ಜಿ.ಪಿ. ರಾಜರತ್ನಂ ಅವರಿಗೆ ತಿಳಿಯಿತು. ‘ಅನಿಸಿದ್ದೆಲ್ಲ ಬರೀಬೇಕು. ಬರೆದಿದ್ದೆಲ್ಲ ಹರಿಯಬೇಡ. ಈ ಕಸದ ರಾಶಿಯಲ್ಲಿ ಒಂದಲ್ಲ ಒಂದು ದಿನ ರತ್ನ ಸಿಕ್ಕೇ ಸಿಗುತ್ತದೆ. ಸದ್ಯಕ್ಕೆ ನನ್ನ ರತ್ನ ನನಗೆ ಸಿಕ್ಕಂತೆ’. ಈ ಮಾತು ಪ್ರೇರಣೆಯಾಗಿದ್ದು ನುಗ್ಗೇಹಳ್ಳಿ ಪಂಕಜ ಅವರಿಗೆ.

‘ಚಂದ್ರಗಿರಿಯ ತೀರದಲ್ಲಿ’ ಪ್ರಕಟವಾದ ಹೊಸತು. ಮುಸ್ಲಿಂ ಜನಾಂಗದ ಮಹಿಳೆಯರ ತಲ್ಲಣಗಳು ಅನಾವರಣಗೊಂಡ ಕೃತಿ ಅದು. ಸಾಹಿತ್ಯವಲಯದಲ್ಲಿ ಮುಕ್ತ ಅಭಿವ್ಯಕ್ತಿಯ ಚರ್ಚೆಯಾಗುತ್ತಿದ್ದರೆ ಧಾರ್ಮಿಕ ವಲಯದಲ್ಲಿ ದಾಳಿ ಇಡುವ ಮಟ್ಟಕ್ಕೆ ಚರ್ಚೆಯಾಗಿತ್ತು. ಇದೆಲ್ಲವೂ ಬರಹದ ಬಗ್ಗೆ ಪ್ರೀತಿಯನ್ನೇ ಮೂಡಿಸಿತ್ತು... ಹೀಗೆಂದದ್ದು ಸಾರಾ ಅಬೂಬ್ಕರ್‌.

ಲೇಖಕಿಯರ ಲೋಕದ ಒಳಸುಳಿಗಳನ್ನು ಬಿಚ್ಚಿಟ್ಟಿದ್ದು ಅವರ ಬದುಕನ್ನು ತೆರೆದಿಡುವ ಸಾಕ್ಷ್ಯ ಚಿತ್ರದಲ್ಲಿ.  ಕರ್ನಾಟಕ ಲೇಖಕಿಯರ ಸಂಘವು ಅನುಪಮಾ ನಿರಂಜನ ಪ್ರಶಸ್ತಿ ಪಡೆದಿರುವ ಲೇಖಕಿಯರ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಮಾಡಿದೆ.

ಮಹಿಳೆಯ ವರ್ತಮಾನದ ಸ್ಥಿತಿಗೆ ಚರಿತ್ರೆಯಲ್ಲಿ ಕಾರಣ ಹುಡುಕುತ್ತಾ, ಆ ಮೂಲಕ ಬದಲಾವಣೆಗೆ ಸ್ಪಂದಿಸುವ ಅಗತ್ಯವನ್ನು ಪ್ರತಿಪಾದಿಸುತ್ತಾ ಬಂದ ವಿಜಯಾ ದಬ್ಬೆ, ಸ್ತ್ರೀಶೋಷಣೆ, ಸಮಾಜದಲ್ಲಿನ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿಯಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರೇಮಾ ಭಟ್‌ ಅವರ ಮನುಷ್ಯನಲ್ಲಿನ ಮೌಢ್ಯ ಹಾಗೂ ಸಣ್ಣತನವನ್ನು ಖಂಡಿಸುವ ಬರಹಗಳು, ವೈಯಕ್ತಿಕ ಬದುಕಿನ ಹಲವು ಏಳುಬೀಳುಗಳ ನಡುವೆಯೂ ಪತ್ರಿಕೆ, ರಂಗಭೂಮಿ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಿಗೆ ದುಡಿದ ಡಾ.ವಿಜಯಾ ಅವರು ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ‘ಚಿತ್ರಾ’ ರಂಗಸಂಸ್ಥೆ ಕಟ್ಟಿ, ಆ ಮೂಲಕ ರಂಗಭೂಮಿಗೇ ಹೊಸ ಪ್ರಕಾರವಾದ ‘ಬೀದಿನಾಟಕ’ವನ್ನು ಪರಿಚಯಿಸಿದ ಯಶೋಗಾಥೆಯ ವಿವರಗಳಿವೆ.

ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಪತಿಯೊಂದಿಗೆ ಹಲವಾರು ವರ್ಷಗಳು ಇರಬೇಕಾಗಿ ಬಂದರೂ ಹುಟ್ಟಿದ ನೆಲದ ಪರಿಮಳ ಬೀರುವ ಕೃತಿಗಳನ್ನು ರಚಿಸಿದ ಸುನಂದಾ ಬೆಳಗಾಂವ್‌ಕರ್‌,   ಪ್ರತಿಭಾ ನಂದಕುಮಾರ್‌ ಅವರ ಬಗ್ಗೆ ಡಾ.ಯು.ಆರ್‌.ಅನಂತಮೂರ್ತಿ, ಎಚ್‌.ಎಸ್‌.ರಾಘವೇಂದ್ರರಾವ್‌ ಅವರ ಅನಿಸಿಕೆಗಳು,  ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯೂ ಆದ ಎಚ್‌.ಎಸ್‌.ಪಾರ್ವತಿ ಅವರ ಬದುಕಿನ ಹಿನ್ನೆಲೆಗಳು ಸಾಕ್ಷ್ಯಚಿತ್ರ ದಲ್ಲಿ ದಾಖಲಾಗಿವೆ.

ಮಹಿಳೆ, ದಲಿತ, ರೈತ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಲೋಹಿಯಾ ಅಧ್ಯಯನ ವೃತ್ತ, ವಿಚಾರವಾದಿ ವೇದಿಕೆ, ಸರಳ ವಿವಾಹ ವೇದಿಕೆಗಳನ್ನು ಹುಟ್ಟಿ ಹಾಕಿ ಸಾಮಾಜಿಕ, ರಾಜಕೀಯ ಎಚ್ಚರವನ್ನು ಮೂಡಿಸಿದ ಬಿ.ಎನ್‌. ಸುಮಿತ್ರಾ ಬಾಯಿ, ಜಾನಕಿ ಶ್ರೀನಿವಾಸಮೂರ್ತಿ ಅವರು ವೈದೇಹಿಯಾದ ಬಗೆ, ಮಗಳ ಅಂಗವೈಕಲ್ಯದಿಂದ ಆಗಿದ್ದ ಮಾನಸಿಕ ಒತ್ತಡವನ್ನು ‘ಮೂಕರಾಗ’, ‘ಅನುರಾಧ’ ಕಾದಂಬರಿಗಳನ್ನು ರಚಿಸಿ ನೊಂದ ಜೀವಗಳಿಗೆ ಸಾಂತ್ವನ ಹೇಳಲು ಯತ್ನಿಸಿದ ನೀಳಾದೇವಿ,  ಬಾಲ್ಯದಲ್ಲಿ ಎದುರಾದ ಅವಮಾನಗಳನ್ನೇ ಸವಾಲಾಗಿ ಸ್ವೀಕರಿಸಿದ ಡಾ.ಕಮಲಾ ಹಂಪನ ಅವರು ಉನ್ನತ ಶಿಕ್ಷಣ ಪೂರೈಸಿ ಅಂಕಪಟ್ಟಿ ಪಡೆಯಲೆಂದು ವಿಶ್ವವಿದ್ಯಾಲಯಕ್ಕೆ ತೆರಳಿದ್ದಾಗ, ವಿವಿಯು ಅಂಕಪಟ್ಟಿ ಬದಲಿಗೆ ನೇಮಕಾತಿ ಪತ್ರವನ್ನೇ ನೀಡಿ ಗೌರವಿಸಿದಂತಹ ಸಂಗತಿಗಳಿವೆ.

ಇದುವರೆಗೆ 22 ಲೇಖಕಿಯರು ಈ ಪ್ರಶಸ್ತಿ ಪಡೆದುಕೊಂಡಿದ್ದು, ಅವರಲ್ಲಿ ಈಗ ನಮ್ಮೊಂದಿಗಿರುವ ವೀಣಾ ಶಾಂತೇಶ್ವರ, ವೈದೇಹಿ, ಸಾರಾ ಅಬೂಬಕ್ಕರ್‌, ಸುನಂದಾ ಬೆಳಗಾಂವ್ಕರ್‌, ವಿಜಯಾ ದಬ್ಬೆ, ಪ್ರೇಮಾ ಭಟ್‌, ಎಚ್‌.ಎಸ್‌.ಪಾರ್ವತಿ, ಡಾ.ಕಮಲಾ ಹಂಪನಾ, ಗೀತಾ ನಾಗಭೂಷಣ, ನುಗ್ಗೆಹಳ್ಳಿ ಪಂಕಜ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ನೀಳಾದೇವಿ, ಡಾ.ವಿಜಯಾ, ಡಾ.ಬಿ.ಎನ್‌.ಸುಮಿತ್ರಾಬಾಯಿ, ಪ್ರತಿಭಾ ನಂದಕುಮಾರ್‌ ಅವರುಗಳ ಬದುಕು, ಬರಹ, ಕುಟುಂಬ, ಸಮಾಜದ ಓರೆಕೋರೆಗಳ ವಿರುದ್ಧ ಹೋರಾಡಿದ ಯಶೋಗಾಥೆಯ ಸಾಕ್ಷ್ಯಚಿತ್ರವನ್ನು  ಡಿ.ಎಸ್‌.ಸುರೇಶ್‌ (ಚಿಕ್ಕ ಸುರೇಶ್‌) ಅವರು ನಿರ್ದೇಶಿಸಿದ್ದಾರೆ.

ಈ ಎಲ್ಲ ಲೇಖಕಿಯರ ಸಾಕ್ಷ್ಯಚಿತ್ರಕ್ಕೆ ಸ್ಕ್ರಿಪ್ಟ್‌ ರಚಿಸಿದವರು ಮತ್ತು ಹಿನ್ನೆಲೆ ಧ್ವನಿ ನೀಡಿರುವವರು ಲೇಖಕಿಯರ ಸಂಘದ ಸದಸ್ಯರೇ. ಸಾಹಿತ್ಯ, ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ನೂರೈವತ್ತಕ್ಕೂ ಹೆಚ್ಚು ದಿಗ್ಗಜರು, ಲೇಖಕಿಯರ ಕುಟುಂಬ ಸದಸ್ಯರು, ಸ್ನೇಹಿತರು ಸಾಕ್ಷ್ಯಚಿತ್ರದಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿದ್ದು, ಲೇಖಕಿಯರು ಹುಟ್ಟಿ ಬೆಳೆದ ಪರಿಸರದಲ್ಲಿಯೇ ಸಾಕ್ಷ್ಯಚಿತ್ರ ಚಿತ್ರೀಕರಿಸಲಾಗಿದೆ. ಸ್ಥಾನೀಯ ಸ್ಪರ್ಶ ನೀಡಲಾಗಿದೆ.


ಕನಸಿನ ಯೋಜನೆ...

‘ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾದ ಬಳಿಕ ಅನುಪಮಾ ಪ್ರಶಸ್ತಿ ಪುರಸ್ಕೃತರು, ಮಹಿಳಾ ಸಾಹಿತ್ಯ ಚರಿತ್ರೆ ಹಾಗೂ ಲೇಖಕಿಯರ ಸಂಘ ನಡೆದು ಬಂದ ದಾರಿ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸುವ ಯೋಜನೆ ಹಾಕಿಕೊಂಡಿದ್ದೆ.   ಅನುಪಮಾ ನಿರಂಜನ ಅವರ 80ನೇ ಸಂಸ್ಮರಣೆ ಅಂಗವಾಗಿ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಒಟ್ಟು ₨ 18 ಲಕ್ಷ ವೆಚ್ಚ ಆಗಿದ್ದು, ಸರ್ಕಾರದಿಂದ ಕ್ರಿಯಾ ಯೋಜನೆ ಅಡಿ ₨ 8 ಲಕ್ಷ ಬಿಡುಗಡೆಯಾಗಿದೆ. ಮಿಕ್ಕ ಹಣವನ್ನು ಹೊಂದಿಸುವ ಪ್ರಯತ್ನ ನಡೆದಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೂ ಇದನ್ನು ತಲುಪಿಸುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಟಿ.ವಿ ವಾಹಿನಿ ಮೂಲಕ ಜನರಿಗೆ ತಲುಪಿಸುವ ಯೋಜನೆ ಇದೆ’
–ಡಾ.ವಸುಂಧರಾ ಭೂಪತಿ, ಅಧ್ಯಕ್ಷೆ, ಕರ್ನಾಟಕ ಲೇಖಕಿಯರ ಸಂಘ

 

ADVERTISEMENT


ಉನ್ನತ ಕೊಡುಗೆ

‘ಲೇಖಕಿಯರ ಸಂಘವು ನನಗೆ ಸಾಕ್ಷ್ಯಚಿತ್ರ ನಿರ್ದೇಶನದ ಜವಾಬ್ದಾರಿ ನೀಡಿದ್ದರಿಂದ ಮೂರು ತಲೆಮಾರಿನ ಲೇಖಕಿಯರನ್ನು ಭೇಟಿ ಮಾಡುವ ಸದವಕಾಶ ಸಿಕ್ಕಂತಾಯಿತು.

ಏಕಕಾಲದಲ್ಲಿ 15 ಸಾಕ್ಷ್ಯಚಿತ್ರಗಳನ್ನು ಒಟ್ಟಿಗೆ ಬಿಡುಗಡೆ ಮಾಡಿದ ಉದಾಹರಣೆ ಇದುವರೆಗೆ ಇಲ್ಲ. ಕಳೆದ ಒಂದು ವರ್ಷದಿಂದ ನಡೆದ ಚಿತ್ರೀಕರಣಕ್ಕೆ ಸುಮಾರು 225ಕ್ಕೂ ಹೆಚ್ಚು ಜನರು ಕೆಲಸ ನಿರ್ವಹಿಸಿದ್ದಾರೆ. ವಿವಿಧ ಕ್ಷೇತ್ರಗಳ 170ಕ್ಕೂ ಹೆಚ್ಚು ದಿಗ್ಗಜರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದು, ಇದು ಮುಂದಿನ ಪೀಳಿಗೆಗೆ ಉನ್ನತ ಕೊಡುಗೆಯಾಗಿದೆ’
-ಡಿ.ಎಸ್‌.ಸುರೇಶ್‌ (ಚಿಕ್ಕ ಸುರೇಶ್‌), ನಿರ್ದೇಶಕ

ಇಂದು ಬಿಡುಗಡೆ
ಇಂದು ಬೆಳಿಗ್ಗೆ 10.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮವಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸುವರು. ಆಂಧ್ರಪ್ರದೇಶದ ಲೇಖಕಿ ವೋಲ್ಗಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 15 ಲೇಖಕಿಯರ ತಲಾ ಅರ್ಧ ಗಂಟೆಯ ಸಾಕ್ಷ್ಯಚಿತ್ರವನ್ನು ಒಳಗೊಂಡ ಪ್ಯಾಕ್‌ನ ಬೆಲೆ ₨ 1500. ಆದರೆ ಇಂದು ₨ 1000 ರಿಯಾಯಿತಿ ದರಕ್ಕೆ ಸಿಗಲಿದೆ. ಮುಂಗಡವಾಗಿ ಕಾಯ್ದಿರಿಸುವವರಿಗೆ ₨1000 ಕ್ಕೆ ಲಭ್ಯವಿರಲಿದೆ. ಇದೇ ಸಂದರ್ಭದಲ್ಲಿ   ನಾಯಕ್‌ ಅವರಿಗೆ 2014ನೇ ಸಾಲಿನ ‘ಅನುಪಮಾ ಪ್ರಶಸ್ತಿ’ ಪ್ರದಾನ ನಡೆಯಲಿದೆ.
(ಮಾಹಿತಿಗೆ: 99868 40477 lekhakiyarasangha.org)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.