ADVERTISEMENT

ಬದ್ಧತೆಯಿಂದ ಬಲ ಗಳಿಸಿ...

ಪ್ರಜಾವಾಣಿ ವಿಶೇಷ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST
ಬದ್ಧತೆಯಿಂದ ಬಲ ಗಳಿಸಿ...
ಬದ್ಧತೆಯಿಂದ ಬಲ ಗಳಿಸಿ...   

ಯಾಂತ್ರಿಕ ದಿನಚರಿ ಅನುಸರಿಸುವುದು ನಿಮಗೆ ಸ್ಥಿರತೆ ನೀಡುತ್ತದೆ. ಸೃಜನಶೀಲವಾದುದ್ದನ್ನು ಮಾಡುವುದು ನಿಮ್ಮಲ್ಲಿ ಆಸಕ್ತಿ ಕೆರಳಿಸುತ್ತದೆ. ನಿಮ್ಮನ್ನು ಬೆಳೆಸುತ್ತದೆ.ಶಿಸ್ತುಬದ್ಧ ಜೀವನ ನಮ್ಮನ್ನು ಹೇಗೆ ಚಟುವಟಿಕೆಯಿಂದ, ಆರೋಗ್ಯದಿಂದ ಇಡುತ್ತದೆ ಎಂಬುದು ಅಚ್ಚರಿ ಹುಟ್ಟಿಸುತ್ತದೆ.

ನೈಜವಾದ ಕಥೆಯ ಸಾರಾಂಶ ಇಲ್ಲಿದೆ. ವ್ಯಕ್ತಿಯೊಬ್ಬರು ತಪ್ಪದೇ ದಿನಚರಿ ಪಾಲಿಸುತ್ತಿದ್ದರು. ಬೆಳಗಿನ ನಡಿಗೆಯನ್ನಂತೂ ಅವರು ತಪ್ಪಿಸುತ್ತಲೇ ಇರಲಿಲ್ಲ. ಹಾಗೆ ಒಂದು ದಿನ ಆ ವ್ಯಕ್ತಿ ಪಾರ್ಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದೆ ನೋವಿನಿಂದ ಕುಸಿದು ಬಿದ್ದರು.
 
ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆ ವ್ಯಕ್ತಿ ಕೋಮಾಗೆ ಜಾರಿದರು.
ಹಾಗೆಯೇ ದಿನಗಳು ಉರುಳಿದವು. ಅವರ ಆರೋಗ್ಯ ಇನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದರು. ಒಂದು ದಿನ ಬೆಳಿಗ್ಗೆ 4.45ಕ್ಕೆ ಅವರ ಪತ್ನಿ ತನ್ನ ಆರು ಮಕ್ಕಳನ್ನು ಕರೆದುಕೊಂಡು `ಐಸಿಯು~ಗೆ ನಡೆದರು.

ವೈದ್ಯರು, ನರ್ಸ್‌ಗಳ ಎಚ್ಚರಿಕೆಯ ಮಾತನ್ನು ಕೇಳಿಸಿಕೊಳ್ಳದೇ ಆ ತಾಯಿ, ಮಕ್ಕಳು ಬೆಳಗಿನ ಪ್ರಾರ್ಥನೆ ಹೇಳತೊಡಗಿದರು. ಆ ವ್ಯಕ್ತಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಇದೇ ಮಂತ್ರ ಜಪಿಸುತ್ತಿದ್ದರು. 15 ನಿಮಿಷ ಕಳೆಯಿತು, ಸ್ಪಂದನೆ ಕಾಣಲಿಲ್ಲ. ಮತ್ತೈದು ನಿಮಿಷ ಉರುಳಿದವು. ವ್ಯಕ್ತಿಯ ತುಟಿಯಲ್ಲಿ ಚಲನೆ ಕಾಣಿಸಿತು. ಅವರು ಪ್ರಾರ್ಥನೆ ಹೇಳತೊಡಗಿದರು.

ತಾಯಿ ಮತ್ತು ಮಕ್ಕಳು ಅವರು ಕುಳಿತುಕೊಳ್ಳಲು ಅನುವಾಗುವಂತೆ ಹಾಸಿಗೆಯನ್ನು ಮೇಲಕ್ಕೆ ಎತ್ತರಿಸಿದರು. ಪ್ರಾರ್ಥನೆ ಮುಂದುವರಿಸಿದರು. ನಿಧಾನವಾಗಿ ಕಣ್ಣು ತೆರೆದು ಹಾಸಿಗೆಯಲ್ಲೇ ಎದ್ದು ಕುಳಿತ ಆ ವ್ಯಕ್ತಿ ಗಡಿಯಾರದತ್ತ ನೋಡಿದರು.

ಅದಾಗಲೇ ಗಂಟೆ 5.30. ನನ್ನನ್ನು ಏಕೆ ಮೊದಲೇ ಏಳಿಸಲಿಲ್ಲ ಎಂದು ಪತ್ನಿಯನ್ನು ಪ್ರಶ್ನಿಸಿದರು.

ತಮ್ಮ ದಿನಚರಿಗೆ ಅವರು ಎಷ್ಟು ಬದ್ಧರಾಗಿದ್ದರು ಎಂಬುದನ್ನು ಈ ಘಟನೆ ವಿವರಿಸುತ್ತದೆ. ಕೋಮಾದಿಂದ ಅವರನ್ನು ಹೊರಕ್ಕೆ ತರಲು ಅವರ ಪತ್ನಿ ಈ ದಿನಚರಿಯನ್ನು ಬಳಸಿಕೊಂಡರು.

ಯಾವುದೋ ದಿನಚರಿಗೆ, ವಿಚಾರಕ್ಕೆ ಬದ್ಧರಾಗಿರುವುದು ನಮಗೆ ಅಂತಹ ಬಲ ಕೊಡುತ್ತದೆ. ಸ್ವಯಂ ನಿಯಂತ್ರಣ, ಸ್ವಯಂ ಶುದ್ಧೀಕರಣ, ಸ್ವಯಂ ಉತ್ತೇಜನ, ಉತ್ಸಾಹಕ್ಕೆ ಕಾರಣವಾಗುತ್ತದೆ.

ಯಾವುದಕ್ಕೂ ಬದ್ಧವಾಗಿ ಇರದ ಕೆಲಸವಿಲ್ಲದ ಮನಸ್ಸು ವಿನಾಕಾರಣ ಕೊರಗುತ್ತದೆ. ಇಲ್ಲಸಲ್ಲದ ಸಂಗತಿಗಳನ್ನು ಊಹಿಸಿಕೊಳ್ಳುತ್ತದೆ. ಭಯ, ಸ್ವಯಂ ಮರುಕದ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ. ಆದರೆ, ಯಾವುದೋ ಕೆಲಸಕ್ಕೆ ಬದ್ಧರಾಗಿರುವುದು ಇಂತಹ ಕಪೋಲಕಲ್ಪಿತ ಭಯಗಳನ್ನು ದೂರ ಮಾಡುತ್ತದೆ.
 
ಉಪಯುಕ್ತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತದೆ. ಮನಸ್ಸಿಗೊಂದು ಘನತೆ ನೀಡುತ್ತದೆ. ಅದರ ಬುದ್ಧಿವಂತಿಕೆ, ಚೈತನ್ಯ ಹಾಗೂ ಶಕ್ತಿಯನ್ನು ತೊಡಗಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ.

ಯಾವುದೋ ಒಂದರಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂಬುದೇ ನಮಗೆ ಶಕ್ತಿ ನೀಡುತ್ತದೆ. ಅಧ್ಯಯನ ಮಾಡುವ ಟೇಬಲ್, ಧ್ಯಾನ ಮಾಡುವ ಕೋಣೆ, ಸೈಕ್ಲಿಂಗ್ ಮಾಡುವ ಮೂಲೆ ಎಲ್ಲವೂ ನಿಮ್ಮಲ್ಲಿ ಉತ್ಸಾಹ ಮೂಡಿಸುತ್ತದೆ. ನೀವು ಆಯ್ದುಕೊಂಡ ಹವ್ಯಾಸ, ಚಟುವಟಿಕೆಗೆ ನಿಮ್ಮ ಬದ್ಧತೆಯೇ ಶಕ್ತಿ ಮೂಲವಾಗುತ್ತದೆ.

ಅದನ್ನು ನಿಮ್ಮ ಮೇಲೆ ಹೇರಲಾಗಿದೆ ಎಂದು ಅಂದುಕೊಳ್ಳುವುದಕ್ಕಿಂತ ಈ ದಿನಚರಿ ನನಗೆ ಋಣಾತ್ಮಕ ಸಂಗತಿಗಳಿಂದ ಸ್ವಾತಂತ್ರ್ಯ ನೀಡುತ್ತದೆ ಎಂದುಕೊಂಡಾಗ ನಿಮ್ಮಲ್ಲಿ ಚೈತನ್ಯ ಪುಟಿದೇಳುತ್ತದೆ. ಮನಸ್ಸು ಆತ್ಮದಷ್ಟು ಕ್ರಿಯಾಶೀಲವಲ್ಲ. ಮನಸ್ಸಿಗೆ ಸದಾ ಭರವಸೆ ದೊರೆಯುತ್ತಿರಬೇಕು. ಮಾರ್ಗದರ್ಶನ, ಬದ್ಧತೆ, ಒಂದು ನಿರ್ದಿಷ್ಟ ದಿನಚರಿ ಬೇಕು.

ನಿಮ್ಮ ದಿನಚರಿಯಲ್ಲಿ ಎರಡು ಭಾಗಗಳಿರಲಿ. ಒಂದು ನಿತ್ಯ ವ್ಯಾಯಾಮ ಮಾಡುವ, ಧ್ಯಾನ ಮಾಡುವ, ಮಂತ್ರ ಪಠಿಸುವ, ಅಡುಗೆ ಮಾಡುವ, ಬಟ್ಟೆ ತೊಳೆಯುವ, ಬಿಲ್ ಪಾವತಿಸುವ, ಫೋನ್ ಕರೆಗಳಿಗೆ ಉತ್ತರಿಸುವ ಯಾಂತ್ರಿಕ ದಿನಚರಿ.

ಇನ್ನೊಂದು ಮತ್ತಷ್ಟು ಸೃಜನಶೀಲವಾದ, ಪ್ರಗತಿಪರವಾದ ದಿನಚರಿ. ನಿತ್ಯ ಹೊಸ ಹಾಡು ಕಲಿಯುವುದು, ಪುಸ್ತಕ ಓದುವುದು, ಪೇಂಟ್ ಮಾಡುವುದು, ನಿಮಗಿಷ್ಟವಾದ ಆಧ್ಯಾತ್ಮಿಕ ಪುಸ್ತಕದ ಸಾಲುಗಳನ್ನು ಬರೆದಿಟ್ಟುಕೊಳ್ಳುವುದು ಇತ್ಯಾದಿ.

ನನ್ನ ವಿದ್ಯಾರ್ಥಿಯೊಬ್ಬಳಿಗೆ ಆಕೆಗೆ ಪ್ರಿಯವಾದ  `ಎಕಾರ್ಟ್ ಟೊಲೆ~ಯ  `ಪವರ್ ಆಫ್ ನೌ~ ಪುಸ್ತಕದ ಸಾಲುಗಳನ್ನು ಬರೆಯುವಂತೆ ಸೂಚಿಸಿದೆ. ಬರೆಯುತ್ತ, ಬರೆಯುತ್ತ ಆಕೆಯಲ್ಲಿ ಉತ್ಸಾಹ ಮೂಡಿತು. ಆಕೆ ತನ್ನದೇ ವಿಚಾರಗಳನ್ನು ಡೈರಿಯಲ್ಲಿ ಮೂಡಿಸತೊಡಗಿದಳು.

ಆಕೆಯ ಮೊಣಕಾಲ ನೋವು ಪವಾಡ ನಡೆದಂತೆ ಮಾಯವಾಯಿತು. ಆಕೆಯಲ್ಲಿ ಶಾಂತಿ ಮೂಡಿತು. ಆಕೆ ಆರೋಗ್ಯವಂತಳಾದಳು.ಯಾಂತ್ರಿಕ ದಿನಚರಿ ಅನುಸರಿಸುವುದು ನಿಮಗೆ ಸ್ಥಿರತೆ ನೀಡುತ್ತದೆ. ಸೃಜನಶೀಲವಾದುದ್ದನ್ನು ಮಾಡುವುದು ನಿಮ್ಮಲ್ಲಿ ಆಸಕ್ತಿ ಕೆರಳಿಸುತ್ತದೆ. ನಿಮ್ಮನ್ನು ಬೆಳೆಸುತ್ತದೆ.

ಪ್ರತಿ ಕ್ಷಣವನ್ನೂ ದೈವಿಕ ಉಡುಗೊರೆ ಎಂಬಂತೆ ಸ್ವೀಕರಿಸಿ. ಟೀಕಿಸುವ ಗುಣದ ಬದಲಾಗಿ ಪ್ರೀತಿಸುವ ಗುಣ ಬೆಳೆಸಿಕೊಳ್ಳಿ. ಜಗತ್ತಿನಲ್ಲಿ ನಡೆಯುವ ದುರಂತದ ಬಗ್ಗೆ ಚಿಂತಿಸಬೇಡಿ. ನಿಮ್ಮ ಮನದಲ್ಲಿ ಪುಟ್ಟ ಸ್ವರ್ಗವೊಂದನ್ನು ಸೃಷ್ಟಿಸಿಕೊಂಡು ಶಾಂತಿಯಿಂದ ಇರಿ.

ನೀವೊಂದು ಆ ಅಗಾಧ ದೈವಿಕ ಶಕ್ತಿಯ ಸಲಕರಣೆ ಎಂದುಕೊಳ್ಳಿ. ಆ ಭಾವ ನಿಮ್ಮಲ್ಲಿ ಸಮಾಧಾನ, ಯಶಸ್ಸಿಗೆ ಕಾರಣವಾಗುತ್ತದೆ. ನಿಮ್ಮ ಮನಸ್ಸಿಗೆ ಸಕಾರಾತ್ಮಕ ಸಂಗತಿ, ಭಾವನೆಗಳನ್ನೇ ನೀಡಿ. ಆ ಸಂಗತಿಗಳನ್ನು ಅದು ಒಳಗೆ ಎಳೆದುಕೊಂಡು ಋಣಾತ್ಮಕ, ಸಿನಿಕ ಭಾವನೆಗಳನ್ನೆಲ್ಲ ಹೊರ ಹಾಕಲಿ.

ನಿರಾಸೆಯ ಒಂದೇ ಒಂದು ಚಿಕ್ಕ ನೆರಳು ನಿಮ್ಮ ಮೇಲೆ ಬೀಳದಿರಲಿ. ನಿಮಗೆ ಅನಾನುಕುಲವಾದ ಒಂದು ವಿಚಾರದ ಮೇಲೆ ಗಮನ ಕೇಂದ್ರೀಕರಿಸುವ ಬದಲು, ನಿಮ್ಮ ಪರವಾಗಿರುವ ಹಲವು ವಿಚಾರಗಳನ್ನು ನೆನಪಿಸಿಕೊಳ್ಳಿ.

ಇಂತಹ ಅದ್ಭುತ ದಿನಚರಿ, ಚಟುವಟಿಕೆಗಳಿಂದ ನಾನು ಯಾವಾಗಲೂ ಸಂತಸದಿಂದ ಇರುತ್ತೇನೆ. ಆರೋಗ್ಯಕರವಾಗಿ ಇರುತ್ತೇನೆ. ದಿನ ಕಳೆದಂತೆ ಬದುಕು ಸುಂದರವಾಗುತ್ತ ಹೋಗುತ್ತದೆ ಎಂದುಕೊಳ್ಳಿ. ಅದು ಹಾಗೆಯೇ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.