ADVERTISEMENT

ಭಾರತದ ಸಂವಿಧಾನದ ಮಹತ್ವ

ನಿಮಗಿದು ತಿಳಿದಿರಲಿ

ಡಾ.ಗೀತಾ ಕೃಷ್ಣಮೂರ್ತಿ ನ್ಯಾಯವಾದಿ
Published 18 ಡಿಸೆಂಬರ್ 2015, 19:53 IST
Last Updated 18 ಡಿಸೆಂಬರ್ 2015, 19:53 IST

ನವೆಂಬರ್ 26ಅನ್ನು ಭಾರತದ ಸಂವಿಧಾನ ದಿನವೆಂದು ಆಚರಿಸಬೇಕೆಂದು ಪ್ರಧಾನ ಮಂತ್ರಿಯವರು ಕರೆ ಕೊಟ್ಟಿದ್ದಾರೆ. ಆ ದಿನ ನಮ್ಮ ಸಂವಿಧಾನದ ಪ್ರಸ್ತಾವನೆಯನ್ನು ಪಠಿಸಬೇಕೆಂದು ಸೂಚಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೆಲವು ಖಾಸಗಿ ದೂರದರ್ಶನ ವಾಹಿನಿಗಳು ಜನ ಸಾಮಾನ್ಯರನ್ನು, ವಿದ್ಯಾರ್ಥಿಗಳನ್ನು, ವಿವಿಧ ವೃತ್ತಿನಿರತರನ್ನು ಹಾಗೂ ಜನ ಪ್ರತಿನಿಧಿಗಳನ್ನು ಸಂದರ್ಶಿಸಿ ಸಂವಿಧಾನದ ಬಗ್ಗೆ ಕೆಲವು ಪ್ರಾಥಮಿಕ ಪ್ರಶ್ನೆಗಳನ್ನು ಕೇಳಿದರು.

ಇದರ ಉದ್ದೇಶ ನಮ್ಮ ಸಂವಿಧಾನದ ಬಗ್ಗೆ ನಮಗೆ ಎಷ್ಟು ಅರಿವು ಇದೆ ಎಂಬುದರ ಮೌಲ್ಯ ಮಾಪನವಾಗಿತ್ತು. ಆದರೆ ಪ್ರಶ್ನೆಗಳಿಗೆ ಉತ್ತರಿಸುವಾಗ ವ್ಯಕ್ತವಾದ ಅವರ ಅಜ್ಞಾನ ಮಾತ್ರ ಬೆಚ್ಚಿ ಬೀಳಿಸುವಂತಿತ್ತು. ಈ ಹಿನ್ನೆಲೆಯಲ್ಲಿ ಇಂಥದೊಂದು ದಿನದ ಆಚರಣೆಯ ಮಹತ್ವ ನಮಗೆ ಮನವರಿಕೆಯಾಗಬೇಕು. ನಮ್ಮ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮತ್ತು ಎಲ್ಲ ಕಾನೂನುಗಳ ಮೂಲ ಸ್ರೋತ ನಮ್ಮ ಸಂವಿಧಾನ.

ಅಮೆರಿಕಾ, ಐರಿಷ್, ಕೆನಡಾ, ಆಸ್ಟ್ರೇಲಿಯಾ ಮತ್ತು ಸೋವಿಯತ್ ಸಂವಿಧಾನಗಲ್ಲಿ ಇರುವ ಅನೇಕ ಅಂಶಗಳನ್ನು ಮತ್ತು ಸಿದ್ಧಾಂತಗಳನ್ನು ಎರವಲು ಪಡೆದು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಜನತೆ ಸಮಾನತೆಯ ಹಕ್ಕುಗಳಿಂದ, ಸ್ವಾತಂತ್ರ್ಯದ ಹಕ್ಕುಗಳಿಂದ ವಂಚಿತರಾಗಿದ್ದರು. ಆದರೆ, ಸ್ವಾತಂತ್ರ್ಯದ ಹೋರಾಟ ಹಾಗೂ ಸಾಮಾಜಿಕ ಹಾಗೂ ಸಿವಿಲ್ ಹಕ್ಕುಗಳಿಗಾಗಿ ನಡೆದ ಹೋರಾಟಗಳಿಂದಾಗಿ ಭಾರತದ ಜನತೆಗೆ ಈ ಹಕ್ಕುಗಳನ್ನು ಪಡೆಯುವುದು ಸಾಧ್ಯವಾಯಿತು ಈ ಹೋರಾಟಗಳೇ ಮುಂದೆ ಸಂವಿಧಾನ ಸಭೆಯ ರಚನೆಗೂ ಕಾರಣವಾಯಿತು.

ಸಂವಿಧಾನ ರಚನಾ ಸಭೆ 1947ರ ಡಿಸೆಂಬರ್ 9ರಂದು ಕಾರ್ಯಾರಂಭ ಮಾಡಿತು. ಈ ಸಭೆಯಲ್ಲಿ ವಿವಿಧ ಕೋಮುಗಳಿಗೆ ಸೇರಿದ, ವಿವಿಧ ಪ್ರದೇಶಗಳಿಗೆ ಸೇರಿದ ಸದಸ್ಯರಿದ್ದರು, ವಿವಿಧ ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ಸದಸ್ಯರಿದ್ದರು. ಜವಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಬಾಯ್ ಪಟೇಲ್, ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಮತ್ತು ಶಾಮ್ ಪ್ರಕಾಶ್ ಮುಖರ್ಜಿ ಅವರುಗಳು ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಅನೇಕಾನೇಕ ಶಿಕ್ಷಣವೇತ್ತರು, ಪ್ರಾಜ್ಞರು, ಮುತ್ಸದ್ದಿಗಳು, ಜನ ಪ್ರತಿನಿಧಿಗಳು, ಮಹಿಳಾ ಸದಸ್ಯರಾಗಿ ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಅವರು ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು. ಡಾ. ಅಂಬೇಡ್ಕರ್ ಅವರು ಸಂವಿಧಾನ ಪ್ರಾರೂಪಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಸಂವಿಧಾನ ಸಭೆ ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳು ನಡೆಯಿತು ಈ ಅವಧಿಯಲ್ಲಿ 166 ದಿನಗಳ ಕಾಲ ಸಭೆ ಸೇರಿತ್ತು. ಅಲ್ಲಿಯ ಚರ್ಚೆಗಳಲ್ಲಿ ಪತ್ರಕರ್ತರಿಗೆ ಹಾಗೂ ಜನತೆಗೆ ಮುಕ್ತ ಪ್ರವೇಶಾವಕಾಶವಿತ್ತು.

ಸಂವಿಧಾನ ಸಭೆ ಸಂವಿಧಾನ ರಚನೆಯನ್ನು ಪೂರ್ಣಗೊಳಿಸಿ 1949ರ ನವೆಂಬರ್ ನಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿಕೊಂಡಿತು, 1950ರ ಜನವರಿ 26 ರಂದು ಭಾರತದ ಸಂವಿಧಾನ ಜಾರಿಗೆ ಬಂತು.  ಸಂವಿಧಾನ ಜನತೆಯ ಹಕ್ಕುಗಳ ಮೂಲವಾಯಿತು. ವಿಶ್ವದಲ್ಲೆ ಅತ್ಯಧಿಕ ಹಕ್ಕುಗಳನ್ನು ಆಧರಿಸಿ ರಚನೆಯಾದಂಥ ಅತಿ ದೀರ್ಘವಾದ ಲಿಖಿತ ಸಂವಿಧಾನ ಎಂಬ ಗರಿಮೆಗೆ ಪಾತ್ರವಾಗಿದೆ ನಮ್ಮ ಸಂವಿಧಾನ.

ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಮೂರು ಹಂತದ ಆಡಳಿತ(ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳು) ವ್ಯವಸ್ಥೆ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಂಸದೀಯ ವ್ಯವಸ್ಥೆ, ಜಾತ್ಯತೀತ ನಿಲುವು, ಏಕ ನಾಗರಿಕತ್ವ ವ್ಯವಸ್ಥೆ, ಪ್ರಾಪ್ತ ವಯಸ್ಕರ ಮತದಾನದ ಹಕ್ಕು ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡಲು ಇರುವ ಅವಕಾಶ-ಈ ಎಲ್ಲ ಅಂಶಗಳು ನಮ್ಮ ಸಂವಿಧಾನದ ಅತಿ ಪ್ರಮುಖ ಗುಣಲಕ್ಷಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.