ADVERTISEMENT

ಭಾವನೆಗಳಿಗೆ ಬೆಲೆ ಕೊಡದ ಮಡದಿ!

ಸುನೀತಾ ರಾವ್
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST
ಭಾವನೆಗಳಿಗೆ ಬೆಲೆ ಕೊಡದ ಮಡದಿ!
ಭಾವನೆಗಳಿಗೆ ಬೆಲೆ ಕೊಡದ ಮಡದಿ!   

1. ನನಗೆ 32 ವರ್ಷ, ಮದುವೆ ಆಗಿ ಮೂರು ವರ್ಷವಾಗಿದೆ. ನನ್ನ ಹೆಂಡತಿಗೆ ಜವಾಬ್ದಾರಿ ಎನ್ನುವುದೇ ಇಲ್ಲ. ಯಾವ ಕೆಲಸವನ್ನೂ ಸರಿಯಾಗಿ ಮಾಡುವುದಿಲ್ಲ. ನನ್ನ ಅನಿಸಿಕೆ, ಭಾವನೆಗಳನ್ನು ಅವಳು ಅರ್ಥ ಮಾಡಿಕೊಳ್ಳುವುದು ಇಲ್ಲ. ಇದರಿಂದ ನನಗೆ ಜೀವನದಲ್ಲಿ ಜುಗುಪ್ಸೆ ಬಂದಿದೆ. ಜೀವನವೇ ಬೇಡ ಅನ್ನಿಸುತ್ತಿದೆ. ಅವಳ ಮನೆಯವರು ಅವಳಿಗೆ ಬುದ್ಧಿ ಹೇಳುವುದಿಲ್ಲ. ನಾನು ಏನು ಮಾಡಲಿ?

ಚಿತ್ತಯ್ಯ, ಊರು ಬೇಡ

ಮದುವೆ ಎನ್ನುವುದು ಗಂಡು ಹಾಗೂ ಹೆಣ್ಣು – ಇಬ್ಬರ ಜೀವನಶೈಲಿಯಲ್ಲೂ ಕೆಲವೊಂದು ಬದಲಾವಣೆಯನ್ನು ತರುತ್ತದೆ. ಇದೊಂದು ದೊಡ್ಡ ಜವಾಬ್ದಾರಿ ಹಾಗೂ ಇದನ್ನು ಇಬ್ಬರೂ ಸೇರಿ ನಿಭಾಯಿಸಬೇಕು. ಸಮಯ ಸರಿದಂತೆ ಸಂಬಂಧವೂ ಸುಂದರವಾಗುತ್ತದೆ. ಬದ್ಧತೆ, ಹೊಂದಾಣಿಕೆ ಹಾಗೂ ಪ್ರೀತಿಯೊಂದಿಗೆ ಇದು ಜೀವನದ ಭಾಗ ಎಂಬುದನ್ನು ಒಪ್ಪಿಕೊಳ್ಳಿ. ಮದುವೆಯ ನಂತರದ ಜೀವನವು ಅನೇಕರಿಗೆ ಚಾಲೆಂಜ್ ಆಗಿರುತ್ತದೆ. ಹೊಸದೊಂದು ಸಂಸಾರದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವುದು, ಅರ್ಥಮಾಡಿಕೊಳ್ಳುವುದು ಹಾಗೂ ಹೊಂದಾಣಿಕೆಯೊಂದಿಗೆ ಸಾಗುವುದು ಆರಂಭದ ದಿನಗಳಲ್ಲಿ ಕಷ್ಟ ಎನ್ನಿಸಬಹುದು. ಆದರೆ ಕಾಲ ಸರಿದಂತೆ ಇಬ್ಬರ ನಡುವೆ ಒಂದು ಬಂಧ ಏರ್ಪಡುತ್ತದೆ. ಮದುವೆ ಎನ್ನುವುದು ಗಂಡು–ಹೆಣ್ಣು ಇಬ್ಬರಲ್ಲೂ ಕೆಲವೊಂದು ನಿರೀಕ್ಷೆಯನ್ನು ಹುಟ್ಟು ಹಾಕುತ್ತದೆ. ನೀವಿಲ್ಲಿ ನಿಮ್ಮ ನಿರೀಕ್ಷೆಗಳನ್ನಷ್ಟೆ ಹಂಚಿಕೊಳ್ಳುತ್ತಿದ್ದೀರಿ.

ADVERTISEMENT

ಅದರಂತೆ ನಿಮ್ಮ ಹೆಂಡತಿಯಲ್ಲೂ ಕೆಲವೊಂದು ನಿರೀಕ್ಷೆಗಳಿರಬಹುದು. ಆದರೆ ಅದನ್ನು ನೀವು ಸಮರ್ಥವಾಗಿ ನಿರ್ವಹಿಸಲು ಇರುವ ಒಂದೇ ಒಂದು ದಾರಿಯೆಂದರೆ ಆರೋಗ್ಯಕರ ಸಂವಹನ. ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಅವರೊಂದಿಗೆ ಮಾತನಾಡಿ. ನಿಮ್ಮ ಸಂಬಂಧದಲ್ಲಿ ಅವರು ಏನನ್ನು ಎದುರು ನೋಡುತ್ತಿದ್ದಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ ಮತ್ತು ನೀವಿಬ್ಬರೂ ಸೇರಿ ಸಂದರ್ಭವನ್ನು ಹೇಗೆ ನಿಭಾಯಿಸಬಹುದು ಎಂಬುದರ ಬಗ್ಗೆ ಸಮಾಲೋಚಿಸಿ. ನೆನಪಿಡಿ, ನೀವು ಒಬ್ಬರಿಗೊಬ್ಬರು ಗೌರವ ನೀಡುವುದನ್ನು ಕಲಿತರೆ ಇದನ್ನು ಸುಲಭವಾಗಿ ನಿರ್ವಹಿಸಬಹುದು. ಒಬ್ಬರು ಮತ್ತೊಬ್ಬರನ್ನು ತೆಗಳುವುದು, ಅವಮಾನ ಮಾಡುವುದು – ಇಂಥವುಗಳನ್ನು ಮಾಡದೆ ಸಮಯವನ್ನು ಒಟ್ಟಾಗಿ ಕಳೆಯಿರಿ. ಬೆಳಗಿನ ನಡಿಗೆಯನ್ನೋ ಮನೆಗೆಲಸವನ್ನೋ ಒಟ್ಟಿಗೆ ಮಾಡುವುದರಿಂದ ಹೀಗೆ ಜೊತೆಯಾಗಿರಬಹುದು. ಇದರಿಂದ ನಿಮ್ಮ ನಡುವೆ ಒಂದು ಬಲವಾದ ಬಾಂಧವ್ಯ ವೃದ್ಧಿಯಾಗಬಹುದು. ನಿಮಗೇ ತಿಳಿಯದಂತೆ ನಿಮ್ಮ ಸಂಬಂಧದಲ್ಲಿ ಆಗ ಸಾಮರಸ್ಯ ಉಂಟಾಗಬಹುದು.

2. ನನಗೆ ಏನಾದರೂ ಸಾಧಿಸಬೇಕೆಂಬ ಹಂಬಲ ಇದೆ. ಆದರೆ ಯಾಕೋ ನನಗೆ ಕಾಲ ಕೂಡಿ ಬರುತ್ತಿಲ್ಲ ಎಂದೆನಿಸುತ್ತಿದೆ. ತುಂಬಾ ಓದಬೇಕು ಎಂದುಕೊಂಡು ಹಟ ಹಿಡಿದು ಕೂರುತ್ತೇನೆ. ಆದರೆ ಅದು 3ರಿಂದ 4 ದಿನ ಮಾತ್ರ. ಎಷ್ಟೇ ಪ್ರಯತ್ನಪಟ್ಟರೂ ಮುಂದೆ ಓದಲು ಸಾಧ್ಯವಾಗುತ್ತಿಲ್ಲ. ಓದಿನ ಮೇಲೆ ಗಮನ ಕೇಂದ್ರಿಕರಿಸಲು ಏನು ಮಾಡಬೇಕು? ಸಾಧನೆಯ ಕನಸನ್ನು ನನಸು ಮಾಡಿಕೊಳ್ಳಲು ನನಗೆ ಸಹಾಯ ಮಾಡಿ.

ಸಂತೋಷ ಮಂಟೂರ, ಧಾರಾವಾಡ

ನೀವು ಏನು ಓದುತ್ತಿದ್ದೀರಿ ಎಂಬುದನ್ನು ಇಲ್ಲಿ ತಿಳಿಸಿಲ್ಲ. ಜೊತೆಗೆ ನಿಮ್ಮ ಗುರಿ ಏನು, ಏನನ್ನು ಸಾಧಿಸಲು ಬಯಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಬರೆದಿಲ್ಲ. ಜೀವನದಲ್ಲಿ ನಾನು ಏನಾದರೂ ಮಾಡಬೇಕು ಎಂದು ಯೋಚಿಸಿದರೆ ಸಾಕಾಗದು; ಏನು ಮಾಡಬೇಕು ಎಂಬುದರ ಸ್ಪಷ್ಟ ಅರಿವು ಕೂಡ ಇರಬೇಕು. ಏನು ಮಾಡಬೇಕು ಎಂಬುದನ್ನು ತಿಳಿದುಕೊಂಡು ಅದನ್ನು ಸಾಧಿಸಲು ನಿಮ್ಮ ಮುಂದೆ ಒಂದು ಟಾರ್ಗೆಟ್ ಇರಲಿ. ಬೇರೆಯವರು ನಿಮ್ಮಿಂದ ಏನನ್ನು ಬಯಸುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಬೇಡ. ನಿಮ್ಮದಾದ ಗುರಿಯನ್ನು ಇರಿಸಿಕೊಳ್ಳಿ. ಯಾವಾಗ ನಿಮ್ಮ ಗುರಿ ಅರ್ಥಪೂರ್ಣವಾಗಿರುತ್ತದೋ, ಆಗ ನೀವು ತುಂಬಾ ಇಷ್ಟಪಟ್ಟು ಅದನ್ನು ಮುಟ್ಟಲು ಪ್ರಯತ್ನಿಸುತ್ತೀರಿ.

ನಿಮ್ಮ ಗುರಿಯ ಪ್ರಾಶಸ್ತ್ಯವನ್ನು ಗುರುತಿಸಿ ಅದನ್ನು ತಲಪುವತ್ತ ಕ್ರಿಯಾಶೀಲರಾಗಿ. ನೀವು ಏನನ್ನು ಸಾಧಿಸಲು ಹೊರಟಿದ್ದೀರಿ ಎಂಬುದನ್ನು ವಾಸ್ತವದೃಷ್ಟಿಯಿಂದ ಯೋಚಿಸಿ. ಆಮೇಲೆ ನಿಶ್ಚಿತರಾಗಿರಿ, ಸ್ಪಷ್ಟವಾಗಿರಿ ಮತ್ತು ಗುರಿಯನ್ನು ಮುಟ್ಟಲು ಡೆಡ್‌ಲೈನ್‌ ಇರಿಸಿಕೊಳ್ಳಿ. ಸಾಧಿಸಲು ಹೊರಟ ಅಂಶಗಳನ್ನು  ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ, ನೀವು ಬರೆದ ಪಟ್ಟಿಯನ್ನು ಆಗಾಗ ನೋಡಿಕೊಳ್ಳಲು ಸಾಧ್ಯವಿರುವ ಜಾಗದಲ್ಲಿ ಇರಿಸಿ. ಡೆಡ್‌ಲೈನ್ – ಗಡುವು – ತುಂಬ ಮುಖ್ಯ. ನಾವೆಲ್ಲರೂ ಸಹಜವಾಗಿಯೇ ನಮ್ಮ ಕೆಲಸಗಳನ್ನು ಮುಂದೂಡುತ್ತಿರುತ್ತೇವೆ.

ಇದು ಮನುಷ್ಯನಲ್ಲಿರುವ ಸಾಮಾನ್ಯಗುಣವೂ ಹೌದು. ಆದರೆ ಯಾವಾಗ ಡೆಡ್‌ಲೈನ್ ನಿಮ್ಮನ್ನು ಪ್ರೇರೆಪಿಸುತ್ತದೋ ಆಗ ನಿಮ್ಮ ಗುರಿಯನ್ನು ಮುಟ್ಟಲು ಶ್ರಮ ವಹಿಸುತ್ತೀರಿ. ನಿಮ್ಮ ಗುರಿಯ ವಿವರಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಅವರು ಕೂಡ ನಿಮಗೆ ಗುರಿ ತಲುಪಲು ಸಹಾಯ ಮಾಡಬಹುದು. ಅವರು ಮಾನಸಿಕ ಬೆಂಬಲವನ್ನೂ ನೀಡಬಹುದು. ನೀವು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಿ. ಪ್ರತಿದಿನ ಯೋಗ ಮಾಡಿ; ಪೌಷ್ಟಿಕ ಆಹಾರವನ್ನು ಸೇವಿಸಿ. ಯಾವಾಗಲೂ ಮನಸ್ಸನ್ನು ಉಲ್ಲಾಸವಾಗಿಟ್ಟುಕೊಳ್ಳಿ. ಗುರಿ ಯಾವುದೇ ಇರಲಿ, ಸಮಪರ್ಣಾ ಮನೋಭಾವ ತುಂಬಾ ಮುಖ್ಯ. ಆಗ ಖಂಡಿತ ನಿಮ್ಮ ಗುರಿ ಸಾಧನೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.