ADVERTISEMENT

ಮೂಳೆಜಾರುವಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 18:30 IST
Last Updated 11 ಫೆಬ್ರುವರಿ 2011, 18:30 IST


ಮೂಳೆ ಮುರಿತ, ಮೂಳೆ ಜಾರುವಿಕೆ, ಇವೆಲ್ಲಾ ಇಂದು ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತಿರುವ ಅಸ್ಥಿ ಸಂಬಂಧಿ ಬೇನೆಗಳು .ಇದಕ್ಕೆ ಅಜಾಗರೂಕತೆಯೇ ಮುಖ್ಯ. ನವಜಾತ ಶಿಶುವಿನಲ್ಲಿ  ಮುನ್ನೂರಷ್ಟಿರುವ ಮೂಳೆಗಳು ಕ್ರಮೇಣ ಬೆಳೆದು ದೊಡ್ಡವರಾದಂತೆ ಒಂದು ಇನ್ನೊಂದ ರೊಂದಿಗೆ ಬೆಸೆದುಕೊಂಡು ಸುಮಾರು ಇನ್ನೂರ ಹತ್ತರಷ್ಟಾಗುತ್ತದೆ.

ಮೂಳೆರೋಗ ತಜ್ಞ ಡಾ.ವಿನೋದ್ ಕುಮಾರ್ ಹೇಳುವಂತೆ, ಎಲುಬುಗಳು ಒಂದು ಇನ್ನೊಂದರ ಜತೆಗೆ ಮೂಳೆಕಟ್ಟು ಗಳೆಂಬ ಪಟ್ಟಿಗಳಿಂದ ಜೋಡಿ ಸಲ್ಪಟ್ಟಿದ್ದು ಒಂದು ಮೂಳೆಯು ಇನ್ನೊಂದು ಮೂಳೆಯನ್ನು ಸಂಧಿಸುವ ಸ್ಥಳವನ್ನು ಕೀಲು (ಜಾಯಿಂಟ್)ಎಂದು ಕರೆಯಲಾಗುತ್ತದೆ.

ಇಂತಹ ಕೀಲುಗಳು ನೂರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿದ್ದು ತೀವ್ರ ತರದ ಬಲ ಪ್ರಯೋಗವಾದಾಗ ಜೋಡಿಸಲ್ಪಟ್ಟಂತಹ ಮೂಳೆಯ ತುದಿಗಳು ಕೀಲುಗಳಿಂದ ಬೇರ್ಪಡುತ್ತದೆ. ಇದುವೇ ಕೀಲು ತಪ್ಪುವುದು ಅಥವಾ ಡಿಸ್ಲೋಕೇಶನ್.

ಊದಿಕೊಳ್ಳುವುದು, ವಿಪರೀತವಾದ ನೋವು, ಸಿಡಿತ,  ಪೆಟ್ಟು ತಗುಲಿದ ಭಾಗವು ನೀಲಿ ಬಣ್ಣಕ್ಕೆ ತಿರುಗುವುದು ಮತ್ತು ಚಲನೆ ಸಾಧ್ಯವಾಗದೇ ಇರುವುದು ಇವು ಮೂಳೆಗಳು ಸ್ಥಳಾಂತರಗೊಂಡಿ ರುವುದರ ಲಕ್ಷಣಗಳು. ಕೆಲವು ಪ್ರಕರಣಗಳಲ್ಲಿ ಇದು ಬರಿಗಣ್ಣಿಗೆ ಕಾಣಿಸುವಂತಿರುತ್ತದೆ. ಉಳಿದ ಸಂದರ್ಭಗಳಲ್ಲಿ  ಕ್ಷ-ಕಿರಣದ ಮೂಲಕವಷ್ಟೇ ಪತ್ತೆ ಹಚ್ಚಬೇಕಾಗುತ್ತದೆ.

ಬೆರಳುಗಳು,  ಮೊಣ ಕೈ, ಭುಜಾಸ್ಥಿ  ಹಾಗೂ ಸೊಂಟದ ಭಾಗದ ಕೀಲುಗಳ ಮೂಳೆ ಗಳು ಸಾಮಾನ್ಯವಾಗಿ ಜಾರುವಿಕೆಗೆ ಒಳಗಾಗುವಂತಹ ಭಾಗಗಳಾಗಿವೆ. ಕೆಲವೊಮ್ಮೆ ಮೂಳೆಗಳು ಸ್ಥಾನಪಲ್ಲಟ ಗೊಳ್ಳುವುದರ ಜೊತೆಗೆ ಮುರಿತಕ್ಕೆ ಒಳಗಾಗುವ ಅಪಾಯವೂ ಇಲ್ಲದ್ದಿಲ್ಲ ಭುಜದ ಮತ್ತು ಸೊಂಟದ ಭಾಗದಲ್ಲಿನ ಕೀಲನ್ನು ‘ಬಾಲ್ ಅಂಡ್ ಸಾಕೆಟ್ ಜಾಯಿಂಟ್’ ಎಂಬುವುದಾಗಿ ಕರೆಯಲಾಗುತ್ತದೆ.

ಇಲ್ಲಿ ಮೂಳೆಯ ಒಂದು ತುದಿಯು ಚೆಂಡಿನ ಆಕಾರ ದಲ್ಲಿದ್ದು ಬಟ್ಟಲಿನಂತಿರುವ ಇನ್ನೊಂದು ಮೂಳೆಯ ತುದಿಯೊಳಗೆ ಅಡಗಿರುತ್ತದೆ. ಭುಜದ ಭಾಗಕ್ಕೆ ಅಪಘಾತ ಸಂಭವಿಸಿದಾಗ ಭುಜಾಸ್ಥಿಯು ಅಲ್ಲಿರುವ ಕುಳಿಯಿಂದ ಹೊರಗೆ ನೂಕಲ್ಪಡುತ್ತದೆ.

ನರ್ಸ್‌ಮೇಯ್ಡ್ಸಿ ಎಲ್ಬೋ

( Nursemaid~s elbow) - ಇದು ಒಂದರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಂಭವಿಸುವಂತಹುದಾಗಿದ್ದು, ಮಕ್ಕಳ ತೋಳುಗಳನ್ನು ಬಲವಾಗಿ ಎಳೆಯುವುದರಿಂದ ಅಥವಾ ಮಗುವಿನ ಕೈಯ ರಟ್ಟೆಯನ್ನೇ ಆಧಾರವಾಗಿರಿಸಿ ಕೊಂಡು (ಒಂದೇ ಕೈಯಲ್ಲಿ) ಮೇಲಕ್ಕೆ ಎತ್ತಿಕೊಳ್ಳುವುದರಿಂದ ಹೀಗಾಗುತ್ತದೆ. ನುರಿತ ವೈದ್ಯರು ಹೀಗೆ ಜಾರಿಕೊಂಡ ಭುಜಾಸ್ಥಿಯನ್ನು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಪುನಃ ಮೊದಲಿ ನಂತೆಯೇ ಕೂರಿಸುತ್ತಾರೆ.

ಆದರೆ ಭವಿಷ್ಯದಲ್ಲೇನಾದರೂ ಇದು ಎರಡು ಮೂರು ಬಾರಿ ಪುನರಾವರ್ತನೆಯಾದರೆ ಆಗ ಅಂತಿಮವಾಗಿ ಶಸ್ತ್ರ ಚಿಕಿತ್ಸೆಯನ್ನೇ ಮೊರೆಹೋಗ ಬೇಕಾಗುತ್ತದೆ.

ಕಾರಣಗಳು
-ಕೈ,  ಕಾಲುಗಳನ್ನು ಸಿಟ್ಟಿನಿಂದ ಮೇಜು, ಬಾಗಿಲುಗಳಿಗೆ ಬಲವಾಗಿ ಬಡಿಯುವುದರಿಂದ.

-ಫುಟ್‌ಬಾಲ್, ಬಾಸ್ಕೇಟ್‌ಬಾಲ್ ಮೊದಲಾದವುಗಳಲ್ಲಿ ಸರಿಯಾದ ನಿಯಮಗಳನ್ನು,ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೇ ಇರುವುದು. ಎತ್ತರವಾದ ಪ್ರದೇಶಗಳಿಂದ ಹಾರುವುದು,  ವಿದ್ಯುತ್ ಇನ್ನಿತರ ಅಪಘಾತಗಳು

ಪ್ರಥಮ ಚಿಕಿತ್ಸೆ

-ಮಂಜುಗಡ್ಡೆಯನ್ನು ರಬ್ಬರ್ ಅಥವಾ ಪ್ಲಾಸ್ಟಿಕ್ ಚೀಲದೊಳಗಿಟ್ಟು ಏಟು ತಗುಲಿದ ಭಾಗದಲ್ಲಿ ಇಟ್ಟುಕೊಳ್ಳುವು ದರಿಂದ ಊದಿಕೊಂಡ ಬಾವು ಹಾಗೂ ನೋವು ಸ್ವಲ್ಪ ಮಟ್ಟಿಗೆ ಶಮನಗೊಳ್ಳುತ್ತದೆ.

-ಗಾಯವಾಗಿದ್ದರೆ ಮೊದಲು ಶುದ್ಧ ನೀರಿನಿಂದ ತೊಳೆದು  ಸೈರಾಯಿಲ್ ಪ್ಯಾಡ್‌ನಿಂದ  ಇಲ್ಲವೇ ಶುಭ್ರವಾದ ಬಟ್ಟೆಯಿಂದ ಅತೀ ಬಿಗಿಯೂ, ಅತೀ ಸಡಿಲವೂ ಆಗದಂತೆ ಗಾಯಕ್ಕೆ ಪಟ್ಟಿ ಹಾಕಬೇಕು.

-ಬರಿಯ ನೋವು ನಿವಾರಕಗಳನ್ನು ನುಂಗಿ ತಾತ್ಕಾಲಿಕ ಉಪಶಮನ ಪಡೆದುಕೊಳ್ಳುವುದಕ್ಕಿಂತ ನೋವು ಮರುಕಳಿಸದಂತೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

-ಬೇರ್ಪಟ್ಟ ಮೂಳೆಗಳು ಮಾಂಸದೊಳಗೆ ಸಿಕ್ಕಿಕೊಂಡಿದ್ದರೆ ಅಥವಾ ಇನ್ನಿತರ ಕಾರಣಗಳಿಂದ ಕೆಲವೊಮ್ಮೆ ಶಸ್ತ್ರಕ್ರಿಯೆ ಅನಿವಾರ್ಯ.

 ಆಗ ಕೆ-ವಯರ್‌ನ್ನು (ರಾಡ್) ತೂರಿಬಿಡಲಾಗುತ್ತದೆ. ಕೆಲವು ದಿನಗಳ ಬಳಿಕ ಯಾವುದೇ ನೋವಿಲ್ಲದೇ ಅದನ್ನು ಹೊರ ತೆಗೆಯ ಲಾಗುತ್ತದೆ. ಸಂಪೂರ್ಣ ಗುಣಮುಖರಾಗಲು ತೆಗೆದುಕೊಳ್ಳುವ ಸಮಯವು ಕೀಲುತಪ್ಪುವಿಕೆಯು ಯಾವ ಭಾಗದಲ್ಲಾಗಿದೆ ಎಂಬುವುದನ್ನು ಅವಲಂಬಿಸಿರುತ್ತದೆ. ಮೂಳೆಯು ಜಾರಿಕೊಂಡ ತಕ್ಷಣ ಸರಿಯಾದ ಚಿಕಿತ್ಸೆ, ಶುಶ್ರೂಷೆ ನೀಡಿದರೆ ಪುನಃ ಮೊದಲಿನಂತೆಯೇ ಸರಿಯಾಗಿ ಒಂದಕ್ಕೊಂದು ಕೂಡಿಕೊಂಡು  ತೊಂದರೆಗಳಿಲ್ಲದೇ ಸುಗಮವಾಗಿ ಕಾರ್ಯ ನಿರ್ವಹಿಸಬಹುದು.
                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT