ADVERTISEMENT

ಮೇಕಪ್ ಕಣ್ಣು ಕಾಪಾಡಿ

ಸುಧಾ ಎಚ್‌.ಎಸ್.
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಹೆಣ್ಣಿನ ಅಂದವಿರುವುದು ಅವಳ ಕಣ್ಣಿನಲ್ಲಿದೆ. ಇದನ್ನರಿತ ಮಾನಿನಿಯರು ಮೊದಲು ಕಣ್ಣಿನ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮೇಕಪ್ ಮಾಡಿಕೊಂಡು ಕಣ್ಣಿನ ಚೆಂದ ಹೆಚ್ಚಿಸಿಕೊಳ್ಳುವು­ದೇನೊ ಸುಲಭ. ಆದರೆ ರಾತ್ರಿ ಮಲಗುವ ಮುನ್ನ ಈ ಮೇಕಪ್ ತೆಗೆಯುವುದನ್ನು ಮರೆತರೆ ಹಲವು ಸಮಸ್ಯೆಗಳಿಗೆ ಆಹ್ವಾನವಿತ್ತಂತೆಯೇ.

ಹೌದು, ಮೇಕಪ್ ಮಾಡುವುದು ಮಾತ್ರ ಮುಖ್ಯವಲ್ಲ, ಅದನ್ನು ಬಳಸುವ ಮತ್ತು ತೆಗೆಯುವ ರೀತಿಯೂ ಅಷ್ಟೇ ಮಹತ್ವದ್ದಾಗಿರುತ್ತದೆ. ಕಣ್ಣು ಉರಿ, ಅಲರ್ಜಿ ಮತ್ತಿತರ ತೊಂದರೆಗಳಿಂದ ತಪ್ಪಿಕೊಳ್ಳಲು ಹಾಗೂ ಕಣ್ಣಿನ ಅಂದದೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಹಾಸಿಗೆಗೆ ಹೋಗುವ ಮುನ್ನ ಮೇಕಪ್ ತೆಗೆಯಲು ಈ ಕ್ರಮಗಳನ್ನು ಅನುಸರಿಸಿ–

* ಮುಖದ ಮೇಕಪ್ ತೆಗೆಯಲು ಕ್ಲೆನ್ಸರ್ ಬಳಸಬಹುದು. ಆದರೆ ಕಣ್ಣಿನ ಮೇಕಪ್ ತೆಗೆಯಲು ಕ್ಲೆನ್ಸರ್ ಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಒಂದು ವೇಳೆ ಕ್ಲೆನ್ಸರ್ ಅಗತ್ಯ ಕಂಡುಬಂದರೆ ಸೌಮ್ಯವಾದ, ಕಡಿಮೆ ಕೆಮಿಕಲ್ ಇರುವ ಉತ್ಪನ್ನವನ್ನು ಆಯ್ದುಕೊಳ್ಳಿ.

* ಸಾಮಾನ್ಯವಾಗಿ ಮನೆಯಲ್ಲಿ ಇರುವ ಕೊಬ್ಬರಿ ಎಣ್ಣೆ, ಮಕ್ಕಳ ತೈಲ, ಹಾಲಿನ ಕೆನೆ ಬಳಸಿ ಹತ್ತಿಯಿಂದ ಕಣ್ಣಿನ ಮೇಕಪನ್ನು ಒರೆಸಿ ತೆಗೆಯಬಹುದು.  ನಂತರ ಮಸ್ಕಾರ, ಐ ಶ್ಯಾಡೊ ಮತ್ತು ಐ ಲೈನರ್ ಹೋಗುವವರೆಗೂ ಕಣ್ಣನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

* ಮೇಕಪ್ ತೆಗೆದ ನಂತರ  ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ ಮಾಶ್ಚರೈಸ್ ನೀಡಲು ಮರೆಯಬೇಡಿ. ಇಡೀ ಮುಖಕ್ಕೆ ಹಾಲು ಅಥವಾ ಮೊಸರು ಹಚ್ಚಿ ಕೆಲ ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯುವುದು ಉತ್ತಮ. ನಿಮ್ಮ ಮುಖಕ್ಕೆ ಹೊಂದುವ ಮಾಯಿಶ್ಚರೈಸರ್ ಹಚ್ಚಿಕೊಂಡರೂ ಆಗುವುದು.

* ಅಗತ್ಯವಿಲ್ಲದೇ ಇದ್ದಾಗ ಕಣ್ಣಿಗೆ ಜಲನಿರೋಧಕ ಮೇಕಪ್ ಬಳಸಲೇ­ಬೇಡಿ. ಇದನ್ನು ತೆಗೆಯಲು ಅತೀ ಹೆಚ್ಚು ಕೆಮಿಕಲ್ ಇರುವ ಮೇಕಪ್ ರಿಮೂವರ್ ಅನ್ನು ಬಳಸಬೇಕಾಗುವುದು. ಇದರಿಂದ ಕಣ್ಣೀರು ಪೊರೆಯ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು.

* ಕಣ್ಣ ರೆಪ್ಪೆಗಳ ಸುತ್ತ "ಸ್ಕ್ರಬ್" ಕಣಗಳು ಇರುವ ಕ್ಲೆನ್ಸರ್ ಅನ್ನು ಬಳಸುವುದು ಬೇಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.