ಸಾಂದರ್ಭಿಕ ಚಿತ್ರ
‘ಈಗ ನಾನು ಯಾರಿಗೂ ಬೇಡದವಳಾಗಿದ್ದೇನೆ. ನನ್ನನ್ನು ಕಂಡರೆ ಯಾರಿಗೂ ಇಷ್ಟವಿಲ್ಲ. ನಾನು ಸಾಯಬೇಕು ಸಾರ್. ನಾನು ಸಾಯಬೇಕು..’ ಹೀಗಂತ ಫೋನ್ ಮಾಡಿ, ಅಳುತ್ತ ಹೇಳಿದರು ಮಮತಾ.
ಬಹಳ ವರ್ಷಗಳಿಂದ ಪರಿಚಯವಿದ್ದ ಮಮತಾ ಹೀಗೆ ಅತ್ತಿದ್ದಾಗಲಿ, ಸಾವಿನ ಕುರಿತು ಮಾತನಾಡಿದ್ದಾಗಲಿ ಇದೇ ಮೊದಲು. ಆಕೆಯ ಮಾತಿನಿಂದ ಸ್ವಲ್ಪ ಗಾಬರಿಯಾದರೂ, ತೋರಗೊಡದೆ ‘ಹಾಗೆಲ್ಲ ಮಾತನಾಡಬೇಡಿ; ಏನಾಯ್ತೀಗ? ಎಲ್ಲಿದ್ದೀರಾ’ ಎಂದು ಕೇಳಿದೆ.
ಆಕೆಯ ಅಳು ಜೋರಾಗುತ್ತಾ ಹೋಯಿತು. ಅಳುತ್ತಾ ಅಳುತ್ತಾ ಮಮತಾ ಹೇಳಿದಿಷ್ಟು. ‘ತಪ್ಪು ಮಾಡಿದ್ದೀನಿ ಸಾರ್. ಅಲ್ಲಲ್ಲ, ನಾನು ಮಾಡಿದ್ದೆಲ್ಲವೂ ತಪ್ಪು. ನನಗೆ ಈಗ ಯಾರೂ ಇಲ್ಲ. ನಾನು ಸತ್ತರೆ ಮಾತ್ರ ಎಲ್ಲರಿಗೂ ಸಮಾಧಾನವಾಗುತ್ತದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತವೆ. ನನ್ನ ಗಂಡ ಯಾವಾಗಲೂ ಹಂಗಿಸ್ತಾರೆ. ‘ ವೇಸ್ಟ್ ಬಾಡಿ’ ಅಂತಾರೆ. ಮಕ್ಕಳಿಬ್ಬರು ದೊಡ್ಡವರಾಗಿದ್ದಾರೆ. ಮಗನಿಗೆ ಇನ್ನೂ ಜವಾಬ್ದಾರಿ ಬಂದಿಲ್ಲ. ಚಿಕ್ಕ ಕೆಲಸನೂ ಮಾಡುವುದಿಲ್ಲ. ಮಗಳಿಗೆ ಕೆಲಸ ಸಿಕ್ಕಿದೆ. ಅವಳಿಗೆ ಬೇಕಾಗುವಷ್ಟು ಸಂಪಾದನೆ ಮಾಡುತ್ತಾಳೆ. ಆದರೆ, ನನ್ನ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಅಗತ್ಯ ಮುಗಿದಿದೆ ಅನ್ನುವ ಹಾಗೆ ನೋಡುತ್ತಾರೆ. ಯಾಕೆ ಬದುಕಬೇಕು? ಮತ್ತು ಯಾರಿಗಾಗಿ ಬದುಕಬೇಕು. ಸತ್ತರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ ಅಲ್ವಾ ಸರ್’ ಎಂದು ಪ್ರಶ್ನೆನೂ ಕೇಳಿದರು.
ಮಮತಾ ಮೇಲ್ಮಧ್ಯಮ ವರ್ಗದ ಮರ್ಯಾದಸ್ತ ಮಹಿಳೆ. ಗಂಡ ಆರಂಕಿ ಸಂಬಳ ತರುವ ಎಂಜಿನಿಯರ್. ಹಣದ ವ್ಯಾಮೋಹ ಇಟ್ಟುಕೊಂಡ ಗಂಡ, ಎಂಜಿನಿಯರಿಂಗ್ ಪದವಿ ಪಡೆದುಕೊಂಡು ಆರೇಳು ವರ್ಷವಾದರೂ ಕೆಲಸ ಮಾಡದೆ, ಅಪ್ಪನ ವಶೀಲಿಯಿಂದ ಆರಂಕಿಯ ಸಂಬಳಕ್ಕೆ ಕಾಯುತ್ತಿರುವ ಮಗ. ಇವರ ನಡುವೆ ಇದ್ದಿದ್ದರಲ್ಲಿ ಸಂತೋಷಪಡುವ ಗೃಹಿಣಿ ಮಮತಾ.
ಸಾವಿನ ಆಲೋಚನೆಯಿಂದ ಹೊರತರುವುದು ಹೇಗೆ?
ಒಂದೇ ಸಮ ದುಃಖ ತೋಡಿಕೊಳ್ಳುತ್ತಿದ್ದ ಮಮತಾರ ಪ್ರತಿ ವಾಕ್ಯ ಕೊನೆಯಾಗುತ್ತಿದ್ದದ್ದು ‘ಸಾಯಬೇಕು‘ ಎಂಬ ಮಾತಿನಿಂದ. ಅಲ್ಲಿಂದ ಅವರನ್ನು ಹೊರತರುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ‘ನಾನು ಸತ್ತರೆ ನನ್ನ ಹೆಸರಿನಲ್ಲಿರುವ ಆಸ್ತಿ ಯಾರಿಗೆ ಹೋಗುತ್ತದೆ ಹೇಳಿ ಸಾರ್’ ಎಂಬ ಪ್ರಶ್ನೆ ತೂರಿಬಿಟ್ಟರು. ‘ಸಾಮಾನ್ಯ ಬಿಳಿ ಕಾಗದದಲ್ಲಿ ಆಸ್ತಿ ಯಾರಿಗೆ ಸೇರಬೇಕು ಎಂದು ಬರೆದಿಟ್ಟರೆ ಸಾಕಾಗುತ್ತೆ ಅಲ್ವಾ ಸಾರ್’ ಎಂದೂ ಕೇಳಿದರು.
ಈಗ ಇವರನ್ನು ಮಾತಿಗೆಳೆಯಬೇಕು. ಇಲ್ಲವಾದರೆ ಸಾಯುವ ಆಲೋಚನೆ ಕಾರ್ಯರೂಪಕ್ಕೆ ಬರಬಹುದು ಎನಿಸಿತು. ದೀರ್ಘವಾಗಿ ಉಸಿರಾಡಿ. ಸ್ವಲ್ಪ ನೀರು ಕುಡಿಯಿರಿ ಎಂದು ತಾಕೀತು ಮಾಡಿದೆ. ‘ನಿಮ್ಮ ಹೆಸರಿನಲ್ಲಿರುವ ಆಸ್ತಿ ಯಾರಿಗೆ ಸೇರಬೇಕು ಅಂತ ನಿಮ್ಮ ಆಸೆ’ ಅಂತನೂ ಕೇಳಿದೆ.
‘ನನ್ನ ಗಂಡನಿಗೆ ಸಿಗಬಾರದು ಸಾರ್’ ಅಂದರು. ಹಾಗಾದರೆ ಅನಾಥಾಶ್ರಮಕ್ಕೋ, ಮಠಕ್ಕೋ ಬರೆದುಕೊಡ್ತೀರಾ ಅಂತನೂ ಕೇಳಿದೆ. ‘ಇಬ್ಬರು ಮಕ್ಕಳಿದ್ದಾರಲ್ಲ. ನನ್ನ ಆಸ್ತಿಗೆ ಅವರೇ ವಾರಸುದಾರರು. ಅವರ ಹೆಸರಿಗೆ ಬರೀತಿನಿ’ ಅಂದರು.
ಸಾಯಬೇಕು ಎಂದು ನಿರ್ಧರಿಸಿದ ವ್ಯಕ್ತಿಯೊಂದಿಗೆ ಕೆಲವು ನಿಮಿಷಗಳವರೆಗೆ ಬೇರೆ ವಿಷಯದತ್ತ ಅದರಲ್ಲೂ ವ್ಯವಹಾರಿಕವಾಗಿ ಮಾತಿಗೆಳೆಯುವುದರಿಂದ ಸಾಯುವ ನಿರ್ಧಾರ ಬದಲಾಗಬಹುದು.
ನಿಮಗೆ ತವರು ಮನೆಯಿಂದ ಆಸ್ತಿ ಬಂದಿದೆಯೇ? ಎನ್ನುವ ಪ್ರಶ್ನೆಯಿಟ್ಟೆ. ‘ನನಗೆ ಆಸ್ತಿ ಇದೆ ಅಂತಲೇ ನನ್ನನ್ನು ಮದುವೆ ಮಾಡಿಕೊಂಡಿರೋದು’ ಅಂದರು. ಈಗ ಇದ್ದಕ್ಕಿದ್ದ ಹಾಗೆ ಸಾಯುವ ಯೋಚನೆ ಯಾಕೆ? ಎಂದೆ. ‘ಇದ್ದಕ್ಕಿದ್ದ ಹಾಗೆ ಅಲ್ಲ. ಇವರ ಜತೆ ಏಗುವಷ್ಟು ಶಕ್ತಿ ಕಳೆದುಕೊಂಡಿದ್ದೀನಿ. ಮಕ್ಕಳು ಮಾತು ಕೇಳದಿರುವುದಕ್ಕೆ ನಾನೇ ಕಾರಣವಂತೆ. ಮಗ ಹಾಳಾಗುವುದಕ್ಕೆ ನಾನೇ ಕಾರಣವಂತೆ’ ಹೀಗೆ ಹೇಳುತ್ತಾ ಹೋದರು. ಅವರ ಮಾತು ಜಾಸ್ತಿಯಾಗುತ್ತಲೇ ಇತ್ತು. ಆಕೆಯ ತಾಯಿ-ತಂದೆಯರ ಬಗ್ಗೆ ಕೇಳಿದೆ. ಆಕೆಯ ಸಂಬಂಧಿಕರ ಬಗ್ಗೆ ಕೇಳಿದೆ. ಹೀಗೆಯೇ ಕೆಲವು ನಿಮಿಷಗಳ ತನಕ ಮಾತಾಡಿದೆ. ಅಷ್ಟಾಗುವಷ್ಟರಲ್ಲಿ ಆತ್ಮಹತ್ಯೆಯ ಆಲೋಚನೆ ದೂರ ಸರಿದು, ಬದುಕಿನ ಬಗ್ಗೆ ವ್ಯಾಮೋಹ ಆವರಿಸಿದ್ದು ಮಮತಾರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
ಆಸ್ತಿಯನ್ನು ಯಾರ ಹೆಸರಿಗೆ ಬರೆದಿಡಬೇಕು? ಎಂದು ಮತ್ತೆ ಕೇಳಿದರು. ಮಕ್ಕಳ ಹೆಸರಿನಲ್ಲಿ ಉಯಿಲು ಬರೆಸಿಡಿ ಅಂದೆ. ಬರೆಸಲಿಕ್ಕೆ ಸಹಾಯ ಮಾಡಿ ಅಂದರು. ಎರಡು ದಿನ ಬಿಟ್ಟು ಕಚೇರಿಗೆ ಬನ್ನಿ. ವ್ಯವಸ್ಥೆ ಮಾಡುತ್ತೇನೆ ಎಂದೆ. ಅಷ್ಟರಲ್ಲಿ ಅವರ ಮಗಳ ಮಾತು ಕೇಳಿತು.ಸಾಯಲು ನಿರ್ಧರಿಸುವ ತೀವ್ರ ಗಳಿಗೆಯಿಂದ ಮಮತಾ ಹೊರಬಂದಿದ್ದು, ತುಸು ಸಮಾಧಾನ ತಂತು. ಎರಡು ದಿನಗಳ ನಂತರ ಬಂದು, ಅರ್ಧ ಗಂಟೆ ಮಾತನಾಡಿ ಹೋದರು. ಆಸ್ತಿಯನ್ನು ಉಯಿಲು ಮಾಡಿಸುವ ಬಗ್ಗೆ ಅವರಾಗಲಿ, ನಾನಾಗಲಿ ಮಾತನಾಡಲಿಲ್ಲ.
– ಲೇಖಕರು ಆಪ್ತಸಮಾಲೋಚಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.