ADVERTISEMENT

ಗಾಡಿಯೋಡಿಸುವ‌ ಹುಡುಗಿಯರೆಂದರೆ...

​ಪ್ರಜಾವಾಣಿ ವಾರ್ತೆ
Published 9 ಮೇ 2025, 23:43 IST
Last Updated 9 ಮೇ 2025, 23:43 IST
   

ಬೀದಿಗಳಲ್ಲಿ ವಾಹನ ಚಲಾಯಿಸುವವರು ಬಹುತೇಕರು ಪುರುಷರೇ. ಚಿಕ್ಕವಳಿದ್ದಾಗಿನಿಂದಲೂ ಇದನ್ನು ಗಮನಿಸಿದ್ದೇನೆ. ಈಗಲೂ ಅದರ ಚಿತ್ರಣ ಹೆಚ್ಚೇನೂ ಬದಲಾದಂತೆ ಅನಿಸುವುದಿಲ್ಲ. ಮೊದಲ ಬಾರಿಗೆ ಅಣ್ಣ ಸೈಕಲ್‌ ಓಡಿಸಲು ಪ್ರಯತ್ನಿಸಿದಾಗ, ಬಿದ್ದ ಅವನು ಅಳುತ್ತಾ ಮನೆಗೆ ಓಡಿ ಬಂದಿದ್ದ. ಆಗ ಅಪ್ಪ, ‘ ಬೀಳುವವನೇ ಏಳುವವನು. ಬಿದ್ದರೆ ತಾನೇ ಮುಂದೆ ಓಡಿಸಲಿಕ್ಕೆ ಆಗುವುದು’ ಎಂದು ಸಮಾಧಾನ ಹೇಳಿದ್ದರು.

ಆದರೆ, ಮೊದಲ ಬಾರಿಗೆ ಅಕ್ಕ ಸೈಕಲ್‌ ಹಿಡಿದಾಗ ಅದರ ಬಗ್ಗೆ ಅಮ್ಮ ಹೇಳಿದ್ದ ಮಾತೇ ಬೇರೆಯಾಗಿತ್ತು. ‘ಜಾಗ್ರತೆ. ಬಿದ್ದರೆ, ಮೂಳೆ ಮುರಿದು ಹೋಗುತ್ತದೆ. ನಿಧಾನವಾಗಿ ಓಡಿಸು. ಬೀಳದಂತೆ ಓಡಿಸು, ಈಗ ಇದರ ಅಗತ್ಯವಾದರೂ ಏನು?’ ಹೀಗೆ ಕಳಕಳಿಯ ಬಾಣಗಳು ಅಕ್ಕನ ಸೈಕಲ್ ಓಡಿಸುವ ಆಸೆಯನ್ನೇ ಚಿವುಟಿ ಹಾಕಿದ್ದವು. ಬಿದ್ದರೆ ಏನಾಗುತ್ತದೋ ಎನ್ನುವ ಭಯದಿಂದ ಆಕೆ ಸೈಕಲ್‌ ತುಳಿಯುವ ಸಾಹಸವನ್ನೇ ಬಿಟ್ಟಳು.

ಇದು ಕೇವಲ ಅವಳ ಕಥೆಯಲ್ಲ. ಅನೇಕ ಹೆಣ್ಣುಮಕ್ಕಳ ಕಥೆ. ಇಂಥ ಸವಾಲುಗಳನ್ನೆಲ್ಲ ಮೀರಿಯೂ ಹೆಣ್ಣುಮಕ್ಕಳು ಗಾಡಿ ಓಡಿಸಲು ಕಲಿತರೆ ಅವರತ್ತ ಕುಹಕದ ನಗೆ ಬೀರಲಾಗುತ್ತದೆ. ಕಲಿತ ತಕ್ಷಣ ಅವಳೆಡೆಗೆ ತೂರಿ ಬರುವ ಪ್ರಶ್ನೆಗಳೆಂದರೆ ‘ ಸರಿಯಾಗಿ ಓಡಿಸೋದಕ್ಕೆ ಬರುತ್ತೆ ತಾನೇ?’, ‘ಎಲ್ಲಿಯೂ ಬಿದ್ದಿಲ್ಲವಲ್ಲ?’, ‘ ನನಗೆ ಜೀವದ ಮೇಲೆ ಆಸೆ ಇದೆ. ನಿಜ್ಜಾ ಹೇಳು ನಿನ್ನ ಕೈಲಿ ಆಗುತ್ತಾ’ ಹೀಗೆ ಕೇಳುತ್ತಲೇ ಅವಳ ಆತ್ಮವಿಶ್ವಾಸವನ್ನು ಕುಗ್ಗಿಸಲಾಗುತ್ತದೆ. ಹೆಣ್ಣುಮಕ್ಕಳ ವಾಹನ ಚಾಲನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ಮೀಮ್ಸ್‌ಗಳು ಸಿಗುತ್ತವೆ. ಅದೊಂದು ನಗೆಪಾಟಲಿನ ವಸ್ತುವೂ ಆಗಿ ಇದೆ.

ADVERTISEMENT

ಗಾಡಿ ಕಲಿಕೆಯೂ ಹೆಣ್ಣಿನ ಸ್ವಾತಂತ್ರ್ಯವನ್ನು ಬಿಂಬಿಸುವ ಒಂದು ದಾರಿ. ಅಪ್ಪ–ಅಮ್ಮನಿಂದ ಉಡುಗೊರೆಯಾಗಿ ಪಡೆಯುವ ‘ವಾಹನ’ದಲ್ಲಿ ಗಂಡುಮಕ್ಕಳು ಖುಷಿಯಿಂದ ಕಾಲೇಜುಗಳಿಗೆ ಬರುತ್ತಾರೆ. ಆದರೆ, ಹುಡುಗಿಯರಿಗೆ ಈ ರೀತಿಯ ಉಡುಗೊರೆ ಬರುವುದೇ ಕಡಿಮೆ. ಅವರೇನಿದ್ದರೂ, ಅಪ್ಪ, ಅಣ್ಣ, ತಮ್ಮ ಅಥವಾ ಗಂಡ ಇಲ್ಲವಾದರೆ ಸಾರ್ವಜನಿಕ ಸಾರಿಗೆಗಾಗಿ ಕಾಯಬೇಕು. ಹೀಗೆ ಕಾಯುತ್ತ ಅವರ ಸಮಯವೂ ಇಷ್ಟಿಷ್ಟೆ ಸವೆದೂ ಹೋಗುತ್ತದೆ. ಮಹಿಳೆಯರು ಸಾರ್ವಜನಿಕ ಸಾರಿಗೆಗಳಲ್ಲಿ ಓಡಾಡುವಾಗ, ಸಾರ್ವಜನಿಕ ಸಾರಿಗೆಗಾಗಿ ಕಾಯುವಾಗ ಲೈಂಗಿಕ ಕಿರುಕುಳಗಳನ್ನು ಎದುರಿಸುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ. ಇನ್ನು ಈ ಉಡುಗೊರೆಯ ವಿಚಾರಕ್ಕೆ ಬಂದರೆ, ಇಂಥ ವಾಹನಗಳ ಉಡುಗೊರೆಗಳೆಲ್ಲ ಸಿಗುವುದು ಗಂಡಸರಿಗೆ ಮಾತ್ರ (ಹುಟ್ಟುಹಬ್ಬಕ್ಕಿರಲಿ, ಮದುವೆಯ ಸಂದರ್ಭದಲ್ಲಿ ‘ಉಡುಗೊರೆಯ’ ರೂಪದಲ್ಲಿಯೇ ಇರಲಿ). ಹೆಣ್ಣುಮಕ್ಕಳಿಗೆ ವಾಹನಗಳು ಉಡುಗೊರೆಯಾಗಿ ದೊರಕುವುದು ಅಪರೂಪದ ಸಂಗತಿ. ಹೆಣ್ಣುಮಕ್ಕಳ ಹೆಸರಿನಲ್ಲಿರುವ ವಾಹನಗಳಿಗೆ ಸಾಮಾನ್ಯವಾಗಿ ಆ ಮನೆಯ ಗಂಡಸರೇ ಅಧಿಪತಿಗಳಾಗಿರುತ್ತಾರೆ. ಮಹಿಳೆಯರೇನಿದ್ದರೂ ಸಹಪ್ರಯಾಣಿಕರು ಅಥವಾ ಪಿಲ್ಲಿಯನ್‌ ರೈಡರ್‌ಗಳು. ಚಾಲನ ಪರವಾನಗಿ ವಿಷಯದಲ್ಲಿಯೂ

ಶೇ 92.3ರಷ್ಟು ಪರವಾನಗಿಗಳನ್ನು ಗಂಡಸರು ಹೊಂದಿದ್ದರೆ, ಕೇವಲ ಶೇ 7.7ರಷ್ಟು ಪರವಾನಗಿಯನ್ನು ಮಹಿಳೆಯರು ಹೊಂದಿದ್ದಾರೆ. ಈ ಪರವಾನಗಿ ಪಡೆದ ಹೆಣ್ಣುಮಕ್ಕಳಲ್ಲಿ ನಿಯಮಿತವಾಗಿ ವಾಹನ ಓಡಿಸುವವರೆಷ್ಟೋ!.

ವಾಹನ ಚಲಾಯಿಸುವುದು ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಒಂದು ಭಾಗವೇ ಆಗಿದೆ. ಪರಾವಲಂಬನೆಯನ್ನು ಮೀರಿ ನಿಲ್ಲಲು ಇದು ಅತ್ಯುತ್ತಮ ಆಯ್ಕೆಯೇ ಸರಿ. ಅಷ್ಟೆ ಅಲ್ಲ ಚಾಲನೆಯನ್ನೇ ಉದ್ಯೋಗವನ್ನಾಗಿಯೂ ರೂಪಿಸಿಕೊಂಡು ಬದುಕು ಕಟ್ಟಿಕೊಳ್ಳಬಹುದು. ಊಬರ್‌, ಓಲಾ, ಸ್ವಿಗ್ವಿ ಡೆಲಿವರಿ ಪಾರ್ಟ್ನರ್‌ ಹೀಗೆ ಹಲವು ಅವಕಾಶಗಳಿವೆ. ಅಸ್ಮಿತೆಯನ್ನು ಅರಿತು ಆತ್ಮವಿಶ್ವಾಸದ ದಾರಿಯಲ್ಲಿ ಸಾಗಲು ‘ಗುಡ್‌ ರೈಡರ್‌’ ಆಗುವುದು ಒಳ್ಳೆಯದೇ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.