ADVERTISEMENT

ವೃತ್ತಿ– ಕುಟುಂಬದ ನಡುವೆ..

ವಿನೋದಾ ಪ್ರಭಾಕರ್
Published 22 ಮಾರ್ಚ್ 2019, 19:45 IST
Last Updated 22 ಮಾರ್ಚ್ 2019, 19:45 IST
job and family
job and family   

ಹಲವು ದಶಕಗಳ ಹಿಂದಿನ ಬದುಕನ್ನು ನೆನಪಿಸಿಕೊಳ್ಳಿ. ಅವಿಭಕ್ತ ಕುಟುಂಬಗಳು, ಮನೆಗೆ ಮಾತ್ರ ಸೀಮಿತವಾಗಿದ್ದ ಹೆಣ್ಣುಮಕ್ಕಳು, ಹೆಚ್ಚಿಗೆ ಓದಿದರೆ ಗಂಡು ತರುವುದು ಕಷ್ಟವಾಗುವುದು ಎಂದು ನಂಬಿದ್ದ ಸಮಾಜ. ಹೆಣ್ಣುಮಕ್ಕಳು ಎಸ್ಎಸ್ಎಲ್‌ಸಿ ಓದಿದ ನಂತರ ಮದುವೆ ಮಾಡಿಕೊಟ್ಟರೆ ಸಾಕು; ಬೆಳೆದ ಹೆಣ್ಣುಮಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಕೆಂಡ ಸೆರಗಿಗೆ ಕಟ್ಟಿಕೊಂಡಂತೆ ಅಂದುಕೊಳ್ಳುತ್ತಿದ್ದ ಅಮ್ಮ; ಹೊರಗೆ ಹೋಗಬೇಕೆಂದರೆ ಅಣ್ಣ ತಮ್ಮಂದಿರ ಕಣ್ಗಾವಲಲ್ಲಿ ಹೋಗುತ್ತಿದ್ದ ಪರಿ ಇವೆಲ್ಲವೂ ಹೆಣ್ಣಿನ ಭದ್ರತೆಯ ಬಗ್ಗೆಯೋ ಅಥವಾ ಸಾಮಾಜಿಕವಾಗಿ ಅವಳನ್ನು ರಕ್ಷಣೆ ಮಾಡುವ ಭರದಲ್ಲಿ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದದಂತಹ ನಿಯಮಗಳೋ! ಅವತ್ತಿನ ಕಾಲಕ್ಕೆ ಅವು ಪ್ರಸ್ತುತಿಯಾಗಿದ್ದವು ಮತ್ತು ಅದಕ್ಕೆ ಇಂಬು ಕೊಟ್ಟಂತೆ ಅವಿಭಕ್ತ ಕುಟುಂಬಗಳು ಹೆಣ್ಣುಮಕ್ಕಳಿಗೆ ಬದುಕಿಗೆ ಬೇಕಾದ ಸಂಸ್ಕಾರ ಮತ್ತು ಜವಾಬ್ದಾರಿಯನ್ನು ನಿರ್ವಹಿಸುವ ಬಗ್ಗೆ ಹಿರಿಯರು ತಮ್ಮ ನಡವಳಿಕೆಗಳ ಮೂಲಕ ಅನುಭವ ಪಾಠವನ್ನು ಕಟ್ಟಿಕೊಡುತ್ತಿದ್ದರು.

ತದನಂತರದ ದಿನಗಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಕಲೆ, ಸಂಸ್ಕೃತಿ, ಸಾಮಾಜಿಕ, ರಾಜಕೀಯ, ವಿಜ್ಣಾನ, ಕ್ರೀಡೆ, ಆರ್ಥಿಕ ನೆಲೆಗಟ್ಟಿನಲ್ಲಿ ಹೆಣ್ಣು ಬೆಳೆದ ಪರಿ ಒಂದು ಸೋಜಿಗ. ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಗೆ ತಲುಪಿದ, ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ ದಿಟ್ಟ ಮಹಿಳೆಯರು ಇಂದು ನಮ್ಮ ನಿಮ್ಮ ನಡುವೆ ಅನೇಕರಿದ್ದಾರೆ. ಇದು ಕೇವಲ ಹಣ, ಅಧಿಕಾರ, ಅಂತಸ್ತು, ಖ್ಯಾತಿಗೆ ಸಂಬಂಧಿಸಿದ ವಿಷಯವಲ್ಲ, ಇದೆಲ್ಲವನ್ನು ಮೀರಿದ ಮತ್ತು ತಾನು ಏನನ್ನಾದರೂ ಸಾಧಿಸಬಲ್ಲೆ ಎನ್ನುವ ಒಂದು ಸಂದೇಶ ಜಗತ್ತಿಗೆ ನೀಡುವ ರೀತಿ. ಅದು ಪುರುಷ ಪ್ರಧಾನ ಸಮಾಜದಲ್ಲಿ ಒಂದು ಶ್ರಮದಾಯಕ ಸಾಧನೆಯೇ ಸರಿ.

ಇಂದು ಬಹುತೇಕ ಹೆಣ್ಣುಮಕ್ಕಳು ಯಾವುದಾದರೂ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ, ಹಣ ಗಳಿಸುವ ಅನಿವಾರ್ಯತೆಯೋ ಅಥವಾ ಕ್ರಿಯಾಶೀಲವಾಗಿರಬೇಕೆಂಬ ಅಭಿಯಲಾಷೆಯೋ, ಒಟ್ಟಾರೆ ಸದಾ ಚಟುವಟಿಕೆಯ ಪ್ರತಿಬಿಂಬವಾಗಿರುವ ಹಲವು ಹೆಣ್ಣು ಮಕ್ಕಳು ತಮ್ಮ ಕುಟುಂಬಕ್ಕೆ ಆಧಾರವೂ ಆಗಿದ್ದಾರೆ! ಇಂತಿಪ್ಪ ದುಡಿಯುವ ಮಹಿಳೆ ಇಂದು ಸಂಸಾರವನ್ನೂ, ವೃತ್ತಿಬದುಕನ್ನೂ ಒಟ್ಟಿಗೆ ನಿಭಾಯಿಸುವ ಅನಿವಾರ್ಯತೆಯೂ ಇದೆ, ಎರಡನ್ನೂ ಸಮತೋಲನ ಮಾಡುವ ಚಾಕಚಕ್ಯತೆ ಇಲ್ಲವಾದರೆ ಬದುಕು ಹಳಿ ತಪ್ಪಿಬಿಡುತ್ತದೆ!

ADVERTISEMENT

ಸವಾಲುಗಳು

ನಗರ ಜೀವನದಂತಹ ಯಾಂತ್ರಿಕ ಬದುಕಲ್ಲಿ ಬೆಳಿಗ್ಗೆ ಗಡಿಬಿಡಿಯಿಂದ ಶುರುವಾಗುವ ದಿನದ ಬೆಳಗು ಉಸ್ಸಪ್ಪಾ ಎನ್ನುವುದರಿಂದ ಮುಗಿಯುವುದನ್ನು ನಾವು ಗಮನಿಸುತ್ತೇವೆ. ಅದರಲ್ಲೂ ಅವಿವಾಹಿತ ಹುಡುಗಿಯ ಸಮತೋಲನದ ಪರಿ ಮದುವೆಯಾದ ಕೂಡಲೇ ಹೋರಾಟವಾಗಿ ಬದಲಾಗುತ್ತದೆ. ಇಂದು ಬಹುತೇಕ ಕುಟುಂಬಗಳು ಗಂಡ ಹೆಂಡತಿ, ಮಗು ಇರುವಂತಹ ವಿಭಕ್ತ ಕುಟುಂಬಗಳಾಗಿರುವುದರಿಂದ ಇಂತಹ ಸವಾಲುಗಳು ಇನ್ನೂ ಹೆಚ್ಚು!

ಕೌಟುಂಬಿಕ ಬದುಕಿಗೆ ಕೊಡಬೇಕಾದ ಪ್ರಾಮುಖ್ಯತೆ ಕೊಟ್ಟಾಗ ಮಾತ್ರ ಗಂಡ ಮಕ್ಕಳು ಮತ್ತು ಸುಖೀ ಕುಟುಂಬದ ನಿರೀಕ್ಷೆಗಳು ಮಕ್ಕಳ ಲಾಲನೆ, ಪೋಷಣೆ, ಬೆಳವಣಿಗೆ ಸಾಧ್ಯ! ಇದರ ನಡುವೆ ದಾಂಪತ್ಯದ ನಡುವೆ ಅಂತರವಾಗದೆ, ಇತರೆ ಕುಟುಂಬ ಸದಸ್ಯರ ನಡುವೆ ಸಮರವಾಗದೆ ನಿರ್ವಹಿಸುವ ಕಲೆ ತಿಳಿದಿರಲೇ ಬೇಕು! ಇಲ್ಲವಾದರೆ ಕುಟುಂಬದ ಸೋಲು ಬದುಕಿನ ಸೋಲಾಗಿಬಿಡುವ ಸಾಧ್ಯತೆ ಇರುತ್ತದೆ, ಈ ಹಂತದಲ್ಲಿ ಮಹಿಳೆ ನಿರ್ವಹಣಾ ಕೌಶಲ್ಯ ಹೊಂದಿರಲೇಬೇಕು!

ಇನ್ನು ವೃತ್ತಿಯ ವಿಷಯಕ್ಕೆ ಬಂದರೆ ತಾನು ಉದ್ಯೋಗ ಮಾಡುವ ವಾತಾವರಣದಲ್ಲಿ ಎಲ್ಲವೂ ಸುಗಮ ಎನ್ನಲು ಸಾಧ್ಯವಿರುವುದಿಲ್ಲ, ವೃತ್ತಿ ಮತ್ಸರವೋ, ವಿನಾ ಕಾರಣ ಕಿರುಕುಳ ಕೊಡುವ ಸಹೋದ್ಯೋಗಿಗಳೋ, ವೃತ್ತಿಯಲ್ಲಿ ಒತ್ತಡ ಹೇರುವ ವ್ಯವಸ್ಥೆಯೋ ಇರುವ ಕಡೆ ಮಹಿಳೆ ಸ್ವಲ್ಪ ಎಡವಿದರೂ ಸಹ ಅದು ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ, ಈ ರೀತಿಯ ವಾತಾವರಣ ಇದ್ದರೆ ಅದೊಂದು ರೀತಿ ಕತ್ತಿಯ ಅಲಗಿನ ಮೇಲೆ ನಡೆದಂತೆ!

ಬ್ಯಾಲನ್ಸ್ ಮಾಡುವುದು ಹೇಗೆ?
* ಯಾವುದು ಮುಖ್ಯ ಎಂದು ಪಟ್ಟಿ ಮಾಡಿ ಆ ಕಡೆ ನಿಗಾ ವಹಿಸಿ.
* ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಇದ್ದರೆ ಒಳಿತು.
* ಸಮಸ್ಯೆ ಇದ್ದರೆ ಕಚೇರಿಯ ಮುಖ್ಯಸ್ಥರು, ಸಹೋದ್ಯೋಗಿಗಳ ಜೊತೆ ಮಾತನಾಡಿ.
* ಹೆಚ್ಚುವರಿ ಕೆಲಸ ಬಿದ್ದರೆ ಕೂಡಲೇ ಒಪ್ಪಿಕೊಂಡು ಬಿಡಬೇಡಿ. ಇದು ನಿಮ್ಮ ಮೇಲೆ ಹೆಚ್ಚು ಒತ್ತಡ ಹೇರುತ್ತದೆ.
* ಕಚೇರಿಯಲ್ಲಿ ಹೊಸ ವಿಷಯಗಳು, ತಂತ್ರಜ್ಞಾನಗಳನ್ನು ಕಲಿಯಿರಿ. ಇದು ನಿಮ್ಮ ಹೊರೆಯನ್ನು ಖಂಡಿತ ಕಡಿಮೆ ಮಾಡುತ್ತದೆ.
* ಕುಟುಂಬದ ಸದಸ್ಯರ ಸಹಕಾರ ಕೋರಿ.
* ಮನೆಯಲ್ಲಿ ನಡೆಯುವ ಪ್ರತಿ ಅವಘಡಕ್ಕೂ ನೀನೆ ಕಾರಣ ಎಂದು ಆಪಾದಿಸಲು ಕಾದು ಕುಳಿತಿರುವ ಮನೆಯ ಇತರೆ ಕುಟುಂಬ ಸದಸ್ಯರು ಇವರೆಡೆ ಒಂದು ಉದಾಸೀನದ ನೋಟ ಸದಾ ಇರಲಿ.
* ಮೂದಲಿಸುವವರಿಗೊಂದು ಸಣ್ಣ ನಗು, ಕಿಚಾಯಿಸುವವರಿಗೊಂದು ತಣ್ಣನೆ ಉತ್ತರ ಕೊಡುವ ಶೈಲಿಯಲ್ಲಿ ರೂಢಿಸಿಕೊಳ್ಳಬೇಕು.
* ಎಲ್ಲದಕ್ಕೂ ನಾವು ಓವರ್ ರಿಯಾಕ್ಟ್ ಮಾಡುತ್ತಾ ಹೋದರೆ ಬದುಕು ಪೂರಾ ಪ್ರತಿಕ್ರಿಯಿಸುವುದರಲ್ಲೇ ಮುಗಿದು ಹೋಗುತ್ತದೆ
* ನಮ್ಮ ವ್ಯಕ್ತಿತ್ವವನ್ನು ಆಗಾಗ್ಗೆ ಫೈನ್ ಟ್ಯೂನ್ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.