ADVERTISEMENT

ಮಾನಿನಿಯರೇ ಹೀಗಿರಲಿ ನಿಮ್ಮ ಚಳಿಗಾಲ

ರೂಪ ಗುರುರಾಜ್
Published 16 ನವೆಂಬರ್ 2018, 19:30 IST
Last Updated 16 ನವೆಂಬರ್ 2018, 19:30 IST
ಅ
   

ಚಳಿಗಾಲ ಬಂತು ಅಂದ್ರೆ ಬೆಳಿಗ್ಗೆ ಏಳೋಕೂ ಸೋಮಾರಿತನ... ಮಲಗಿದಲ್ಲಿಗೇ ಯಾರಾದ್ರೂ ಬಿಸಿ ಬಿಸಿಯಾಗಿ ಕಾಫಿ ಮಾಡಿ ತಂದುಕೊಟ್ಟರೆ ಸ್ವರ್ಗವೇ ಧರೆಗಿಳಿದ ಅನುಭವ. ಅದ್ರಲ್ಲೂ ಸೂರ್ಯನ ಎಳೇ ಬಿಸಿಲು ಮೈ ಸೋಕಿದ್ರಂತೂ ಅಬ್ಬಬ್ಬಾ! ಆ ಮಜಾನೇ ಬೇರೆ. ಸ್ವಲ್ಪ ಥಂಡಿ ಗಾಳಿ, ಸೂರ್ಯನ ಬೆಚ್ಚನೆ ಕಿರಣ ಕಚಗುಳಿ ಇಡ್ತಾ ಇದ್ದರೆ ‘ಆಹಾ! ಏನ್ ಚೆಂದ!’ ಆದ್ರೆ ಇದರ ಜೊತೆಗೆ ನಮ್ಮ ದೈನಂದಿನ ಜೀವನಕ್ಕೂ ನಾವು ಹೋಗ್ಲೇಬೇಕಲ್ವಾ…?

ಚಳಿಗಾಲದಲ್ಲಿ ಹಾಸಿಗೆ ಬಿಟ್ಟು ಇರೋದೆ ಕಷ್ಟ. ಅಂತೂ ಇಂತೂ ಎದ್ದು ಆಫೀಸು ಅಂತ ನೆನಪಾದ ಕೂಡಲೇ ಫಟಾರನೇ ಏನೋ ಕೈಗೆ ಸಿಕ್ಕಿದ್ದು ಹಾಕ್ಕೊಂಡು ತಯಾರಾಗಿ ಹೊರಟುಬಿಡ್ತೀವಿ. ಸ್ವಲ್ಪ ಟೈಂ ಇದೆ, ಡ್ರೆಸ್ ಮಾಡ್ಕೊಳ್ಳೋಣ ಅಂದ್ರೂ ಡಿಸೈನರ್ ವೇರ್, ಸ್ಲೀವ್ ಲೆಸ್ ಹಾಕ್ಕೊಂಡು ಹೊರಗಡೆ ಹೋಗೋಕೆ ಚಳಿಯ ಭಯ ಹಿಮ್ಮೆಟ್ಟಿಸಿಬಿಡುತ್ತೆ. ಯಾವುದೇ ಡ್ರೆಸ್ ಹಾಕಿದ್ರೂ ಅದರ ಮೇಲೆ ಸ್ಟಾಲೋ ಸ್ವೆಟರ್ರೋ ಜಾಕೆಟ್ಟೋ ಹಾಕ್ಕೊಂಡು ಹೋಗ್ಬೇಕಾದ ಅನಿವಾರ್ಯತೆ. ಆದ್ರೆ ಇದನ್ನ ಹಾಕಿದ್ರೆ ನಮ್ಮಿಷ್ಟದ ಬಟ್ಟೆಯ ಅಂದವೆಲ್ಲಾ ಸ್ವೆಟರ್‌ ನೊಳಗೆ ಹುದುಗಿಹೋಗಿಬಿಡುತ್ತೆ. ಚಳಿಗಾಲ ಫ್ಯಾಶನ್‌ಗೆ ಕಾಲ ಅಲ್ಲ ಎಂಬಂಥ ಮೈಂಡ್ ಸೆಟ್ ಕೂಡ ಬೆಳೆದುಬಿಟ್ಟಿದೆ. ಆದರೆ ಈಗ ಹಾಗಲ್ಲ, ಋತುಮಾನಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳುವ ಅವಕಾಶಗಳು ಸಾಕಷ್ಟು ಇದೆ. ಕಾಲಕ್ಕೆ ತಕ್ಕಂತೆ ಡಿಸೈನರ್ ಡ್ರೆಸ್‌ಗಳನ್ನು ಆಯ್ದುಕೊಳ್ಳುವ ಜಾಣತನ ಇದ್ದರೆ ನಮ್ಮ ಸ್ಟೈಲ್ ಸ್ಟೇಟ್‌ಮೆಂಟಿನಿಂದ ನೋಡಿದವರ ಹುಬ್ಬೇರುವಂತೆ ಮಾಡಬಹುದು.

ಕೆಲವರಿಗೆ ಈ ಸ್ವೆಟರ್ ಹಾಕಿಕೊಳ್ಳೋಕೆ ಇಷ್ಟ ಇರೋದಿಲ್ಲ. ಉಣ್ಣೆ ಮೈ ತುಂಬಾ ಉರಿಯುತ್ತೆ ಅಂತ ಕಂಪ್ಲೇಂಟ್ ಮಾಡುವವರ ಸಂಖ್ಯೆನೂ ಕಡಿಮೆ ಏನಲ್ಲ. ಫುಲ್ ಸ್ಲೀವ್ಸ್ ಹಾಕಿ ಮ್ಯಾನೇಜ್ ಮಾಡ್ತೀವಿ, ಆದರೆ ಸ್ವೆಟರ್ ಸಹವಾಸ ಬೇಡ ಅನ್ನುವವರ ಸಂಖ್ಯೆನೇ ಜಾಸ್ತಿ. ಆದ್ರೆ ಮಾರುಕಟ್ಟೆಗೆ ಹೊಸದಾಗಿ ಬಂದಿರುವಂತಹ ಸ್ವೆಟರ್‌ಗಳು, ಜಾಕೆಟ್‌ಗಳು, ಸ್ಟಾಲ್‌ಗಳು ಎಂಥವ್ರಿಗೂ ಹೊಂದಿಕೆ ಆಗುತ್ತೆ, ಟ್ರೆಂಡಿಯಾಗೂ ಇದೆ. ಯಾವುದನ್ನ ಯಾವಾಗ ಹೇಗೆ ಹಾಕೋಬೇಕು ಅನ್ನೋ ಸಣ್ಣ ಜಾಣತನ ಉಪಯೋಗಿಸಿದ್ರೆ ಸಾಕು.

ADVERTISEMENT

ಮನಸೆಳೆಯುವ ಕೋಟ್‌ಗಳು

ಈಗಂತೂ ಬ್ರಾಂಡೆಡ್ ಸೇರಿದಂತೆ ಎಲ್ಲಾ ಅಂಗಡಿಗಳಲ್ಲಿ, ಟ್ರೆಂಡಿ ಕೋಟ್ ಸಿಗ್ತಾ ಇದೆ. ಈ ಕೋಟ್‌ಗಳು ಕಾಟನ್ ಮತ್ತಿತರ ಮೆಟೀರಿಯಲ್‌ಗಳಲ್ಲೂ ಲಭ್ಯವಿದೆ. ಫ್ಯಾಷನ್‌ ಮತ್ತು ಸೈಜ್ ತಕ್ಕಂತೆ ಸಿಗುವುದರಿಂದ ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದಂತಹ ಉಡುಪು. ನೀವಿದನ್ನ ಸ್ಲೀವ್‌ಲೆಸ್‌ ಸೆಲ್ವಾರ್ ಕಮೀಜ್, ಜೀನ್ಸ್ ಪ್ಯಾಂಟ್‌, ಟೀ ಶರ್ಟ್ ಹಾಗೂ ಸ್ಕರ್ಟ್ಸ್ ಜೊತೆಗೆ ಮ್ಯಾಚ್ ಮಾಡಿಕೊಳ್ಳಬಹುದು. ಕಾಂಟ್ರಾಸ್ಟ್ ಕಲರ್ಸ್ ಹಾಕಿಕೊಂಡ್ರೆ ಕಲರ್‌ಫುಲ್ ಆಗಿರ್ತೀವಿ. ಚಳಿಗಾಲದಲ್ಲಿ ಹಾಗೇನೇ ಸ್ವಲ್ಪ ಸೋಮಾರಿತನ, ಬೇಸರ, ಮೋಡದ ವಾತಾವರಣ ಎಲ್ಲಾ ಇರೋದ್ರಿಂದ ಸ್ವಲ್ಪ ಮೂಡ್ ಸ್ವಿಂಗ್ ಅನ್ನಿಸ್ತಾ ಇರುತ್ತೆ. ಮಂಕಾಗಿರುತ್ತೇವೆ. ಆದರೆ ಈ ರೀತಿಯ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸೋದ್ರಿಂದ ನಿಮ್ಮ ದಿನ, ನಿಮ್ಮ ಮೂಡ್ – ಎರಡೂ ಅದ್ಭುತವಾಗಿರುತ್ತೆ.

ಎಲ್ಲಾ ಕಾಲಕ್ಕೂ ಸಲ್ಲುವ ಸ್ಕರ್ಟ್‌ಗಳು

ಲಾಂಗ್ ಸ್ಕರ್ಟ್ಸ್, ಪೆನ್ಸಿಲ್ ಸ್ಕರ್ಟ್ಸ್, ವ್ರ್ಯಾಪ್ ಅರೌಂಡ್ ಸ್ಕರ್ಟ್ಸ್, ಗೌನ್ಸ್ – ಇವೆಲ್ಲಾ ಚಳಿಗಾಲಕ್ಕೆ ಹೇಳಿ ಮಾಡಿಸಿದಂಥಾ ಡ್ರೆಸ್‌ಗಳು. ಇವು ಮೇಲಿಂದ ಕಾಲಿನವರೆಗೂ ಮೈ ಮುಚ್ಚುತ್ತವೆ. ಅಲ್ಲದೇ, ಚಳಿಗೆ ಕೈ ಕಾಲು ಒಡೆಯದೇ ಇರುವ ಹಾಗೂ ನೋಡಿಕೊಳ್ಳುತ್ತವೆ. ಹಾಗೇ ಇದನ್ನು ಟ್ರೆಂಡಿ ಆಗಿ ಕೂಡ ಉಪಯೋಗಿಸಿಕೊಳ್ಳಬಹುದು. ಈ ರೀತಿ ಸ್ಕರ್ಟ್‌ಗಳನ್ನು ಮ್ಯಾಚಿಂಗ್ ಸ್ಕಾರ್ಫ್ ಜೊತೆಗೆ ಹಾಕಿಕೊಂಡರೆ ಇನ್ನೂ ಚೆನ್ನಾಗಿ ಕಾಣುತ್ತೆ. ಇದರ ಜೊತೆಗೆ ಆಕ್ಸೆಸ್ಸರೀಸ್ ಅಂದ್ರೆ, ಜ್ಯುವೆಲ್ಲರಿ, ಜಂಕ್ ಜ್ಯುವೆಲ್ಲರಿ, ಆಕ್ಸಡೈಸ್ ಜ್ಯುವೆಲ್ಲರಿಗಳನ್ನು ಮ್ಯಾಚ್ ಮಾಡಿ ಹಾಕಿದಾಗ ಅದಿನ್ನೂ ಮಾಡ್ರನ್ ಲುಕ್ ಕೊಡುತ್ತದೆ.

ಈಗೀಗ ಉಣ್ಣೆ ಸೇರಿದಂತೆ ಇತರ ಮೆಟೀರಿಯಲ್‌ನಿಂದಾದ ಉಡುಪುಗಳು ಫ್ಯಾಷನ್‌ಗೆ ಹೊಸ ಭಾಷ್ಯ ಬರೆಯುತ್ತಿವೆ. ಈ ಡ್ರೆಸ್‌ಗಳು ಚಳಿಗಾಲದ ಪಾರ್ಟಿಗಳಿಗೆ ಹೇಳಿಮಾಡಿಸಿದಂತಿರುತ್ತವೆ. ಸಂಜೆ ಹೊತ್ತು ನೀವೆಲ್ಲಾದರೂ ಹೊರಗೆ ಹೋಗುತ್ತಿದ್ದೀರಿ ಅಂದ್ರೆ ಫುಲ್ ಆರ್ಮ್ ಡ್ರೆಸ್‌ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ. ಆಗ ಸ್ವೆಟರ್ ಅಥವಾ ಕೋಟ್ ಹಾಕೋ ಗೋಜು ಇರುವುದಿಲ್ಲ. ಸ್ವಲ್ಪ ಚಳಿ ಅನ್ನಿಸಿದರೆ ಟ್ರೆಂಡಿ ಸ್ಟಾಲ್ ಅಥವಾ ಸ್ಕಾರ್ಫ್ ಹಿಡಿದುಕೊಂಡಿರಿ. ಅಗತ್ಯ ಬಿದ್ದಾಗ, ತೀರಾ ಚಳಿ ಆದಾಗ ಅದನ್ನು ಕುತ್ತಿಗೆ ಸುತ್ತ ಸುತ್ತಿಕೊಂಡರೆ ನಿಮಗೆ ಬೆಚ್ಚಗಿನ ಅನುಭವ ಆಗೋದು ಗ್ಯಾರೆಂಟಿ.

ಇನ್ನು ಚಳಿಗಾಲಕ್ಕೆ ಯಾವ ರೀತಿಯ ಬಣ್ಣ ಸೂಕ್ತ ಎಂಬ ಪ್ರಶ್ನೆ ಸರ್ವೇ ಸಾಮಾನ್ಯ. ಬೇಸಿಗೆಯಲ್ಲಿ ತೆಳುವರ್ಣದ ಬಟ್ಟೆಗಳನ್ನು ಹಾಕಿಕೊಳ್ಳುವಂತೆಯೇ ಚಳಿಗಾಲದಲ್ಲಿ ಗಾಢವರ್ಣದ ಬಟ್ಟೆಗಳನ್ನು ಹಾಕಿಕೊಳ್ಳುವುದು ಉತ್ತಮ. ಗಾಢವರ್ಣಗಳು ನಮ್ಮ ಬಿಸಿಲನ್ನು ಬೇಗನೇ ಹೀರಿಕೊಂಡು ದೇಹವನ್ನು ಬೆಚ್ಚಗೆ ಇರಿಸೋದಲ್ಲದೇ ದೇಹದ ಶಾಖ ಹೊರಗೆ ಹೋಗದಿರುವಂತೆ ಮಾಡುತ್ತವೆ. ಹಾಗೇ ಕಾಟನ್ ಬಟ್ಟೆಗಳು, ಉಣ್ಣೆಯ ಬಟ್ಟೆಗಳು, ದಪ್ಪವಾದ ಲೆನಿನ್ ಬಟ್ಟೆಗಳನ್ನು ಧರಿಸೋದ್ರಿಂದ ದೇಹ ಕೂಡ ಬೆಚ್ಚಗಾಗಿರುತ್ತೆ. ನಮ್ಮ ಚಟುವಟಿಕೆ ಕೂಡ ಆಕ್ಟೀವ್ ಆಗಿರುತ್ತೆ ಅಂತ ಹೇಳಬಹುದು.

ಕೂದಲ ಪೋಷಣೆ

ಚಳಿಗಾಲದಲ್ಲಿ ವಾತಾವರಣ ತುಂಬಾ ಶುಷ್ಕವಾಗಿರುವುದರಿಂದ ಕೂದಲನ್ನು ಕಟ್ಟಿಕೊಂಡೇ ಇರಬೇಕಾಗಿರುತ್ತದೆ. ಇಲ್ಲದಿದ್ದರೆ ಕೂದಲು ಬೇಗ ಗಂಟಾಗಿ ಒರಟಾಗಿ ಉದುರುವ ಸಾಧ್ಯತೆ ಹೆಚ್ಚು. ಅಕಸ್ಮಾತ್ ನೀವು ಕೂದಲನ್ನು ತುಂಬಾ ಹೊತ್ತು ಬಿಟ್ಟಿದ್ದರೆ ಮನೆಗೆ ಬಂದ ಕೂಡಲೇ ಅದಕ್ಕೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಆಮೇಲೆ ತಲೆಗೆ ಸ್ನಾನ ಮಾಡುವುದರಿಂದ ಕೂದಲಿಗೆ ಒಳ್ಳೇ ಕಂಡೀಷನಿಂಗ್ ಆಗುತ್ತೆ. ಆದಷ್ಟು ಮನೆಯಲ್ಲಿದ್ದಾಗ ಕೂದಲನ್ನು ಕಟ್ಟಿಡಿ, ಬೆಚ್ಚಗಿಡಿ ಮತ್ತೆ ಮನೆಯಿಂದ ಹೊರಗಡೆ ಹೋಗಬೇಕಾದ್ರೆ ಚೆನ್ನಾಗಿ ತಲೆಗೆ ಕಂಡೀಷನರ್ ಹಾಕಿ ಕಂಡೀಷನಿಂಗ್ ಮಾಡಿಕೊಂಡು ಹೋಗಿ. ಆಗ ಕೂದಲು ಬೌನ್ಸಿ ಮತ್ತು ಫ್ರೆಶ್ ಆಗಿ ಕಾಣಿಸುತ್ತದೆ. ಯಾವುದೇ ಸ್ಟೈಲ್ ಮಾಡಿದರೂ ಕೂದಲಿಗೆ ಆ ಸ್ಟೈಲ್ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಚಳಿಗಾಲದ ಬಣ್ಣಗಳು ಮತ್ತು ಪಾದರಕ್ಷೆಗಳು

ಯಾವುದೇ ಕಾಲಕ್ಕಾದರೂ ಸರಿ. ಕಪ್ಪು–ಬಿಳುಪು ಬಣ್ಣಗಳು ಔಟ್‌ಡೇಟ್‌ ಆಗುವುದೇ ಇಲ್ಲ. ಅಲ್ಲದೇ ಈ ಬಣ್ಣಗಳು ಯಾವುದೇ ವರ್ಣದ ಚರ್ಮಕ್ಕಾದರೂ ಹೊಂದಿಕೊಳ್ಳುತ್ತವೆ. ಸ್ವಲ್ಪ ದಪ್ಪ ಇರುವವರು ಸಣ್ಣ ವಿನ್ಯಾಸದ ಬಟ್ಟೆಗಳನ್ನು ಧರಿಸಿದರೆ ಸ್ವಲ್ಪ ತೆಳ್ಳಗೆ ಕಾಣಿಸುತ್ತಾರೆ. ಹಾಗೆಯೇ ತೆಳ್ಳಗಿರುವವರು ದಪ್ಪ ವಿನ್ಯಾಸದ ಬಟ್ಟೆ ಧರಿಸೋದು ಸೂಕ್ತ.

ಚಳಿಗಾಲಕ್ಕೆ ಕ್ಲೋಸ್ಡ್‌ ಶೂಸ್ ಧರಿಸಬಹುದು. ಕಾಲು ಪೂರ್ತಿ ಕವರ್ ಆಗುವುದರಿಂದ ಕಾಲು ಒಡೆಯುವ ಸಾಧ್ಯತೆ ಕಡಿಮೆ. ಆರೋಗ್ಯದ ಕಡೆ ತುಂಬಾ ಗಮನ ಕೊಡುವವರಾದರೆ ಸಾಕ್ಸ್ ಧರಿಸಬಹುದು. ಇನ್ನು ಹೊರಗಡೆ ಹೋಗ್ತಿದ್ದೀರಿ ಅಂದ್ರೆ ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿ ಹೊರಡಿ… ಇದರಲ್ಲೂ ನೀವು ನಿಮಗೆ ಹೊಂದುವಂಥ ಫ್ಯಾಷನಬಲ್ ಟೋಪಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ನಮ್ಮ ಉಡುಗೆ–ತೊಡುಗೆ ನಮ್ಮ ನಿಲುವನ್ನು ಬಿಂಬಿಸುವುದರಿಂದ ಅವು ಸದಾ ನಮ್ಮ ದೇಹಕ್ಕೆ ಅನುಗುಣವಾಗಿರಬೇಕು. ನಿಮ್ಮ ಡ್ರೆಸ್ ನಿಮ್ಮ ಆತ್ಮವಿಶ್ವಾಸ ಮತ್ತು ಜೀವನಪ್ರೀತಿಯನ್ನು ಸಾರುವಂತಿರಲಿ. ಚೆಂದ ಕಾಣಿಸಿ, ಬದುಕನ್ನು ಸಂಭ್ರಮಿಸಿ.

ಚಳಿಗಾಲಕ್ಕೆ ಮೇಕಪ್ ಟಿಪ್ಸ್

ಚಳಿಗಾಲದಲ್ಲಿ ಚರ್ಮ ತುಂಬಾ ಒಣಗಿಹೋಗಿರುತ್ತದೆ. ಚರ್ಮಕ್ಕೆ ಒಳ್ಳೇ ಮಾಯಿಶ್ಚರೈಜೇಶನ್‌ ಬೇಕು. ಹೀಗಾಗಿ ಆದಷ್ಟು ಮಾಯಿಶ್ಚರೈಸಿಂಗ್ ಎಫೆಕ್ಟ್‌ ಮೂಲಕ ಮೇಕಪ್ ಮಾಡಿಕೊಂಡರೆ ತುಂಬಾ ಚೆನ್ನಾಗಿರುತ್ತದೆ. ಆದಷ್ಟು ಎಣ್ಣೆ ಸ್ನಾನ, ಅಭ್ಯಂಜನ ಇವೆಲ್ಲವೂ ಕೂಡ ಚಳಿಗಾಲದಲ್ಲಿ ಒಳ್ಳೆಯದು. ರಾತ್ರಿ ಮಲಗುವ ಮುನ್ನ ಮುಖ, ಕೈ, ಕಾಲು ಚೆನ್ನಾಗಿ ತೊಳೆದು ಒಳ್ಳೇ ಮಾಯಿಶ್ಚರೈಸರ್ ಅಥವಾ ಕೋಲ್ಡ್ ಕ್ರೀಮ್ ಅನ್ನು ಪಾದಕ್ಕೆ, ಅಂಗೈಗಳಿಗೆ, ಮುಖಕ್ಕೆ ಚೆನ್ನಾಗಿ ಹಚ್ಚಿ ಒಂದೆರಡು ನಿಮಿಷ ಮಸಾಜ್ ಮಾಡಿಕೊಂಡರೆ ಬೆಳಿಗ್ಗೆ ಹೊತ್ತಿಗೆ ಚರ್ಮ ಮೃದುವಾಗಿ ರೀಜನರೇಟ್ ಆಗಿರುತ್ತೆ. ಎಲ್ಲಿಗಾದರೂ ಹೋಗುವಾಗ ಮೇಕಪ್ ಮಾಡುವುದಕ್ಕೂ ಮುಂಚೆ ಮಾಯಿಶ್ಚರೈಸರ್ ಹಚ್ಚಿ ಆಮೇಲೆ ಮೇಕಪ್ ಮಾಡಿ. ಆಗ ಮುಖ ತುಂಬಾ ಹೊತ್ತು ಫ್ರೆಶ್ ಆಗಿ ಕಾಣಿಸುತ್ತದೆ. ಜೊತೆಗೆ ಒಣಗಿದ ಮುಖ ಕೂಡ ಇರೋದಿಲ್ಲ. ಮೇಕಪ್ ನ್ಯಾಚುರಲ್ ಆಗಿ ಕಾಣೋದ್ರಿಂದ ಮುಖ ಚೆನ್ನಾಗಿ ಕಾಣುತ್ತದೆ.

ಇನ್ನು ಲಿಪ್‌ಸ್ಟಿಕ್‌. ಚಳಿಗಾಲದಲ್ಲಿ ಡಾರ್ಕ್ ಕಲರ್ ಲಿಪ್‌ಸ್ಟಿಕ್ಸ್ ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಯಾವುದೇ ಡಾರ್ಕ್ ಕಲರ್ ಲಿಪ್‌ಸ್ಟಿಕ್ ಅನ್ನು ತುಂಬಾ ಧೈರ್ಯವಾಗಿ ನೀವು ಉಪಯೋಗಿಸಬಹುದು. ಗಾಢವಾದ ಪಿಂಕ್ ಲಿಪ್‌ಸ್ಟಿಕ್, ರೆಡ್ ಲಿಪ್‌ಸ್ಟಿಕ್, ನೀವು ಸ್ವಲ್ಪ ಟ್ರೆಂಡಿ ಅಂತಾದರೆ ಪರ್ಪಲ್, ವೈಲೆಟ್ ಕಲರ್ ಲಿಪ್‌ಸ್ಟಿಕ್, ಡಾರ್ಕ್ ಬ್ರೌನ್ ಕಲರ್ ಲಿಪ್‌ಸ್ಟಿಕ್ ಕೂಡ ಈ ಸೀಸನ್‌ನಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತೆ. ಐ ಶ್ಯಾಡೋಸ್ ಒಂದು ಲೇಯರ್‌ನಲ್ಲಿ ಡಾರ್ಕ್ ಆಗಿಯೇ ಬಳಸಿ.

ಚಳಿಗಾಲಕ್ಕೆ ಬೆಚ್ಚನೆ ಸ್ವೆಟರ್‌ಗಳು

ತೆಳುಬಣ್ಣದ ವಿನೆಕ್ ಸ್ವೆಟರ್‌ಗಳು ತುಂಬಾ ಚೆನ್ನಾಗಿರುತ್ತೆ. ತೆಳುವಾಗಿರುವಂಥ ಉಣ್ಣೆಯಿಂದ ತಯಾರಿಸಲಾದ ಸ್ವೆಟರ್‌ಗಳು ಕೂಡ ನಮಗೆ ಸಿಗುತ್ತೆ. ಇದರಲ್ಲೂ ಸ್ಲೀವ್ ಲೆಸ್, ಫುಲ್ ಸ್ಲೀವ್ಸ್‌ನಂತಹ ಟ್ರೆಂಡಿ, ವೆರೈಟಿ ಲಭ್ಯವಿದೆ. ಶಾಲ್ ರೂಪದಲ್ಲೂ ಸಿಗುತ್ತೆ. ಒಂದು ಒಳ್ಳೇ ಟೀ ಶರ್ಟ್ ಮೇಲೆ ಈ ರೀತಿ ಸ್ವೆಟರ್ಸ್ ಹಾಕಿಕೊಳ್ಳೋದರಿಂದ ಮೈ ಕೂಡ ಉರಿಯುವುದಿಲ್ಲ. ಅಲ್ಲದೇ, ಸ್ವೆಟರ್ ತುಂಬಾ ಟ್ರೆಂಡಿ ಆಗಿರೋದ್ರಿಂದ ಜೀನ್ಸ್ ಪ್ಯಾಂಟ್ ಜೊತೆಗೂ ಮ್ಯಾಚ್ ಮಾಡಿಕೊಳ್ಳಬಹುದು. ಅದಿಲ್ಲದಿದ್ದರೆ ಪಲಾಜೋ ಅಥವಾ ಸ್ಕರ್ಟ್ಸ್ ಜೊತೆಗೆ ಹಾಕಿಕೊಳ್ಳಬಹುದು. ಈ ರೀತಿಯ ಉಡುಗೆಯನ್ನು ಧರಿಸಿ ನೀವು ಕಾಲೇಜ್‌ಗೋ ಆಫೀಸ್‌ಗೋ ಹೋದಾಗ ಇದು ಫಾರ್ಮಲ್ ಆಗೂ ಇರುತ್ತೆ, ಟ್ರೆಂಡಿನೂ ಆಗಿರುತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.