ADVERTISEMENT

ಸಾವಯವ ಬೇಬಿ ಫುಡ್‌

ಪವಿತ್ರಾ ರಾಘವೇಂದ್ರ ಶೆಟ್ಟಿ
Published 5 ಜುಲೈ 2019, 19:30 IST
Last Updated 5 ಜುಲೈ 2019, 19:30 IST
mother with spoon porridge feeding sweet baby in messy bib
mother with spoon porridge feeding sweet baby in messy bib   

ಮಗುವಿಗೆ ಆರು ತಿಂಗಳಾಗುತ್ತಿದ್ದಂತೆ ತಾಯಿಯಾದವಳ ಮನಸ್ಸಿನಲ್ಲಿ ಹುಟ್ಟುವ ಮೊದಲ ಪ್ರಶ್ನೆಯೆಂದರೆ ನನ್ನ ಮಗುವಿನ ಮೊದಲ ಆಹಾರ ಯಾವುದಿರಲಿ ಎಂಬುದು? ಮಳಿಗೆಗಳಲ್ಲಿ ಸಿಗುವ ಬಹುತೇಕ ಎಲ್ಲಾ ಆಹಾರಗಳು ರಾಸಾಯನಿಕಯುಕ್ತವಾದವು, ಕೃತಕ ಬಣ್ಣ, ಸಕ್ಕರೆ ಮತ್ತಿತರ ಅಂಶಗಳನ್ನು ಸೇರಿಸಿಕೊಂಡವು. ಬೆಳೆಯುವ ಮಗುವಿನ ಹೊಟ್ಟೆಗೆ ಈಗಲೇ ಇದೆಲ್ಲಾ ಸೇರಬೇಕೇ? ರುಚಿಯಾಗಿದೆ, ಸಕ್ಕರೆ ಅಂಶ ಹೆಚ್ಚಿದೆ ಎಂಬ ಕಾರಣಕ್ಕೆ ಮಕ್ಕಳೇನೋ ಅಹಾರವನ್ನು ಗಬಗಬನೆ ನುಂಗುತ್ತವೆ. ಆದರೆ ಅದರ ಮುಂದಿನ ಪರಿಣಾಮ ಮಕ್ಕಳ ಆರೋಗ್ಯದ ಮೇಲಾಗದೇ ಎಂಬ ಚಿಂತೆ ಅಮ್ಮನಾದವಳಿಗೆ ಸಹಜವಾಗಿಯೇ ಕಾಡುತ್ತದೆ.

ಹಾಗೆಂದ ಮಾತ್ರಕ್ಕೆ 30 ವರ್ಷಗಳ ಹಿಂದೆ ಅಮ್ಮ ತಯಾರಿಸಿ ಕೊಡುತ್ತಿದ್ದ ಬಿಲ್ಲೆಗಳನ್ನು ತಯಾರಿಸಲು ಇಂದು ಯಾರಿಗೂ ಸರಿಯಾದ ತರಬೇತಿ ಇಲ್ಲ, ಅಷ್ಟು ಸಮಯವೂ ಇಲ್ಲ. ಇನ್ನು ಗೂಗಲ್, ಯುಟ್ಯೂಬ್ ತಡಕಾಡಿ ಏನೇನೋ ಸರ್ಕಸ್ ಮಾಡಿ ಒಂದಷ್ಟು ಬೇಳೆ, ಮೊಳಕೆ ಬರಿಸಿದ ಕಾಳು ಪುಡಿ ಮಾಡಿ ಮಗುವಿಗೆ ಕೊಟ್ಟಾಗ ಅದು ಉಗಿದು ಬಿಟ್ಟರೆ ಮಾಡಿದ ಶ್ರಮವೆಲ್ಲಾ ವ್ಯರ್ಥವಾದ ಬೇಸರದೊಂದಿಗೆ ಮತ್ತೆ ನಾಳೆಗೇನು ಎಂಬ ಚಿಂತೆಯೂ ಕಾಡಲು ಆರಂಭವಾಗುತ್ತದೆ. ಇನ್ನು ತನಗಿಂತ ಮೊದಲು ಹೆತ್ತ ಗೆಳತಿಯರ ಬಳಿ ಕೇಳಿದರೂ ಸಿಗುವುದು ಒಬ್ಬಬ್ಬರದ್ದು ಒಂದೊಂದು ಬಗೆಯ ಆಹಾರ ಪದ್ಧತಿ.

ಸೂಪರ್ ಮಾರ್ಕೆಟ್‌ನತ್ತ ಕಾಲು ಎಳೆದುಕೊಂಡು ಹೋಗಿ ಯಾವುದಾದರೂ ಕೆಮಿಕಲ್ ಮುಕ್ತ ಆಹಾರವಿದೆಯೇ ಎಂದು ನೋಡಿದರೆ ಅಲ್ಲೂ ನಿರಾಸೆ. ಇದ್ದದ್ದರಲ್ಲಿಯೇ ಯಾವುದೋ ಒಂದನ್ನು ತಂದು ಮಗುವಿಗೆ ತಿನ್ನಿಸಿ ಸಮಾಧಾನಪಡಬೇಕಷ್ಟೆ. ಇದು ಸಾಮಾನ್ಯವಾಗಿ ಪ್ರತಿಯೊಂದು ತಾಯಿ ತನ್ನ ಮಗುವಿಗೆ ದ್ರವ ಆಹಾರದಿಂದ ಘನ ಆಹಾರ ಕೊಡುವ ಆರಂಭದ ದಿನಗಳಲ್ಲಿ ಎದುರಿಸುವ ಸವಾಲುಗಳು.

ADVERTISEMENT

ಇನ್ನು ಮಕ್ಕಳಿಗೆ ಶಾಲೆ ಶುರುವಾದರಂತೂ ಕೇಳುವುದೇ ಬೇಡ. ಸ್ಯಾಕ್ಸ್ ಡಬ್ಬಕ್ಕೆ ಬೇಕರಿ ತಿನಿಸುಗಳನ್ನು ಹಾಕಬೇಡಿ ಎಂದು ಸ್ಕೂಲ್ ಡೈರಿ ಬುಕ್‌ನಲ್ಲಿರುವ ಸಾಲು ಮತ್ತೆ ಅವಳನ್ನು ಕಂಗಾಲು ಮಾಡುವುದಕ್ಕೆ ಶುರುಮಾಡುತ್ತದೆ. ದಿನಾ ಹಣ್ಣು, ಡ್ರೈ ಫ್ರೂಟ್ಸ್ ಬೇಡ ಅಮ್ಮಾ ಎಂದು ಮಕ್ಕಳು ಬೆಳಿಗ್ಗೆ ಸುಪ್ರಭಾತ ಶುರುಮಾಡಿಟ್ಟುಕೊಳ್ಳುತ್ತಾರೆ. ಬಿಸ್ಕತ್‌ ತಿಂದರೆ ಊಟ ಮಾಡುವುದಿಲ್ಲ. ಕರಿದ ತಿಂಡಿ ತಿಂದರೆ ಆರೋಗ್ಯ ಕೆಡುತ್ತೆ ಹೀಗೆ ನೂರೆಂಟು ಯೋಚನೆಗಳು ತಾಯಿಯಾದವಳಿಗೆ.

ಅಮ್ಮಂದಿರ ಕಳವಳ, ಆತಂಕವನ್ನು ತಾವೂ ಎದುರಿಸಿ ಅದನ್ನೇ ಸವಾಲಾಗಿ ಸ್ವೀಕರಿಸಿ ಪ್ರಿಯಾಂಕಾ ಶೆಟ್ಟಿ ಶ್ರೀಧರ್ ಅವರು ಮಿಮ್ಮೋ ಆರ್ಗ್ಯಾನಿಕ್ ಎಂಬ ರಾಸಾಯನಿಕ ಮುಕ್ತ ಆಹಾರವನ್ನು ಪರಿಚಯಿಸಿದ್ದಾರೆ. ಈಗಾಗಲೇ ಸಾಕಷ್ಟು ತಾಯಂದಿರ ಮೆಚ್ಚುಗೆ ಗಳಿಸಿದ ಇವರು ತಯಾರಿಸಿದ ಆಹಾರ ವೈವಿಧ್ಯಗಳನ್ನು ಹಸುಗೂಸಿನಿಂದ ಹಿಡಿದು ಚಿಕ್ಕಮಕ್ಕಳವರೆಗೆ ಎಲ್ಲರೂ ಸೇವಿಸಬಹುದು,

ಎರಡು ವರ್ಷದ ಮಗುವಿನ ತಾಯಿಯಾಗಿರುವ ಪ್ರಿಯಾಂಕಾ ಒಂದು ಬಾರಿ ಮಗುವಿನೊಂದಿಗೆ ಅಂತರರಾಷ್ಟ್ರೀಯ ವಿಮಾನಯಾನ ಕೈಗೊಳ್ಳಬೇಕಾಗಿ ಬಂದಾಗ ತಮ್ಮ ಮಗುವಿಗೆ ಕೊಡಲು ಸರಿಯಾದ ಆಹಾರ ಸಿಗದೆ ಒದ್ದಾಡಿದರು. ಶಿಶುಗಳಿಗಾಗಿಯೇ ಸಿದ್ಧಪಡಿಸಿದ ಆಹಾರ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ್ದನ್ನು ಕಂಡುಕೊಂಡರು. ಇದನ್ನೇ ಸವಾಲಾಗಿ ಸ್ವೀಕರಿಸಿ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಒಂದು ಆರ್ಗ್ಯಾನಿಕ್ ಬೇಬಿ ಫುಡ್ ಕಂಪನಿ (ಸಾವಯವ ಬೇಬಿ ಆಹಾರ ಕಂಪನಿ)ಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಸಿಡ್ನಿಯಲ್ಲಿರುವ ಮ್ಯಾಕ್ಕ್ವಾರಿ ವಿಶ್ವವಿದ್ಯಾಲಯದಿಂದ ಬಯೋ-ಟೆಕ್ ಮತ್ತು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಎರಡು ಪದವಿಗಳನ್ನು ಪಡೆದಿರುವ ಪ್ರಿಯಾಂಕಾ ಶೆಟ್ಟಿ ಶ್ರೀಧರ್ ಅವರು ಶಿಶು ಮತ್ತು ಮಕ್ಕಳ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿದ್ದಾರೆ.

ಬೆಳೆಯುವ ಮಕ್ಕಳಿಗೆ ಮೈದಾ, ಸಕ್ಕರೆ ಅಂಶವಿರುವ ಬಿಸ್ಕತ್‌ ಕೊಡುತ್ತಾ ಹೋದರೆ ಅವರ ಬೆಳವಣಿಗೆಯಿದ ಹಿಡಿದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಯಾವುದೇ ರಾಸಾಯನಿಕಗಳನ್ನು ಬಳಸದೇ ಧಾನ್ಯ ಮತ್ತು ತರಕಾರಿ, ಹಣ್ಣುಗಳನ್ನು ಬಳಸಿ ಒಂದಷ್ಟು ಬಗೆಯ ಆಹಾರವನ್ನು ಪರಿಚಯಿಸಿದ್ದಾರೆ. ಈ ತರಕಾರಿ, ಹಣ್ಣುಗಳು ಕೂಡ ಸಾವಯವ. ಆರು ತಿಂಗಳ ಮಗುವಿನಿಂದ ಹಿಡಿದು ಶಾಲೆಗೆ ಹೋಗುವ ಮಗುವಿನ ಸ್ನ್ಯಾಕ್ಸ್ ಡಬ್ಬದವರೆಗೂ ಈ ಆಹಾರವನ್ನು ಹಾಕಿಕೊಡಬಹುದು. ಆ ತರಕಾರಿ ತಿನ್ನಲ್ಲ, ಈ ಧಾನ್ಯ ತಿನ್ನಲ್ಲ ಎಂಬ ಗೋಳು ಅಮ್ಮಂದಿರಿಗೆ ತಪ್ಪುತ್ತದೆ ಎನ್ನುತ್ತಾರೆ ಪ್ರಿಯಾಂಕ.

ಮಕ್ಕಳಿಗೆ ಕೊಡುವ ಆಹಾರವನ್ನು ವಿವಿಧ ವಿನ್ಯಾಸ, ಆಕಾರದಲ್ಲಿ ಮಾಡಿಕೊಟ್ಟರೆ ಅವು ಖುಷಿಯಿಂದ ತಿನ್ನುತ್ತವೆ. ದಿನಾ ಒಂದೇ ರೀತಿ ಇದ್ದರೆ ಅವುಗಳಿಗೂ ಇಷ್ಟವಾಗುವುದಿಲ್ಲ. ಆಹಾರ ಪೌಷ್ಟಿಕಾಂಶಗಳ ಜತೆಗೆ ಆಕರ್ಷಕವಾಗಿಯೂ ಕಾಣಬೇಕು ಆಗ ಮಕ್ಕಳು ಇಷ್ಟ ಪಡುತ್ತಾರೆ ಎಂಬುದು ಪ್ರಿಯಾಂಕಾ ಅವರ ಅಭಿಪ್ರಾಯ. ಹೀಗಾಗಿ ಅವರು ತರಕಾರಿ, ಧಾನ್ಯಗಳನ್ನೆಲ್ಲಾ ಉಪಯೋಗಿಸಿ ವಿವಿಧ ವಿನ್ಯಾಸ, ಆಕಾರದ ಪಾಸ್ತಾಗಳನ್ನು ತಯಾರಿಸಿದ್ದಾರೆ. ಇದು ಮಕ್ಕಳಿಗೆ ಇಷ್ಟವಾಗುತ್ತದೆ ಎಂಬುದು ಅವರ ನಂಬಿಕೆ.

**
‘ಯಾವುದೇ ಸೂಪರ್ ಮಾರ್ಕೆಟ್‌ಗೆ ಹೋದರೂ ಕೆಮಿಕಲ್ ಇಲ್ಲದ ಆಹಾರವನ್ನು ಹುಡುಕುವುದು ಕಷ್ಟ. ಇದ್ದದರಲ್ಲೇ ಕಡಿಮೆ ಪ್ರಮಾಣದ ಕೆಮಿಕಲ್ ಇರುವ ವಸ್ತುವನ್ನು ತಂದು ಮಗುವಿಗೆ ಕೊಡುತ್ತೇವೆ. ಬೆಳೆಯುವ ಮಗುವಿಗೆ ಉತ್ತಮ ಪೋಷಕಾಂಶದ ಆಹಾರ ಕೊಟ್ಟರೆ ಮಾತ್ರ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತೆ. ನನ್ನ ಮಗುವಿಗೆ ಘನ ಆಹಾರ ಪರಿಚಯಿಸುವಾಗ ಎದುರಿಸಿದ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ನಾನು ಬೇಬಿ ಫುಡ್‌ ಶುರುಮಾಡಿಕೊಂಡೆ. ಇವಾಗಲೇ ಒಂದು ಒಳ್ಳೆಯ ಆಹಾರ ಪದ್ಧತಿ ಮಗುವಿಗೆ ಪರಿಚಯಿಸಿದತರೆ ಅದು ಆರೋಗ್ಯಯುತವಾಗಿ ಬೆಳೆದು ಒಂದು ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದು ಅಲ್ಲದೇ ದೂರದ ಪ್ರಯಾಣ ಮಾಡುವಾಗ ಸಹ ಇದು ಸಹಕಾರಿಯಾಗಲಿದೆ.ನನ್ನ ಈ ಶ್ರಮಕ್ಕೆ ಮನೆಯವರ ಸಹಕಾರ ತುಂಬಾ ಇದೆ.

- ಪ್ರಿಯಾಂಕಾ ಶೆಟ್ಟಿ ಶ್ರೀಧರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.